ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದ 48 ಮಂದಿಯನ್ನು ಬಂಧಿಸಿರುವ ಪೊಲೀಸರು, ವ್ಯವಹಾರಕ್ಕೆ ಸಂಬಂಧಿಸಿದ ಕಾಗದ ಪತ್ರ, ಚೆಕ್, ಮೊಬೈಲ್ ಫೋನ್, ಕಾರ್, ಸ್ಕೂಟಿ ಸೇರಿದಂತೆ ₹4 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
'ಕೇಶ್ವಾಪುರ, ವಿದ್ಯಾನಗರ, ಬೆಂಡಿಗೇರಿ, ವಿದ್ಯಾಗಿರಿ, ಧಾರವಾಡ-ಹುಬ್ಬಳ್ಳಿ ಉಪನಗರ, ಕಸಬಾಪೇಟೆ ಸೇರಿದಂತೆ 13 ಠಾಣೆಗಳಲ್ಲಿ 16 ಬಡ್ಡಿ ಕಿರುಕುಳ ಪ್ರಕರಣ ದಾಖಲಾಗಿದ್ದವು. ತನಿಖೆ ಕೈಗೊಂಡು ಪ್ರಕರಣದ ಸತ್ಯಾಸತ್ಯತೆ ಹಾಗೂ ಸಾಕ್ಷ್ಯಾಧಾರ ಕಲೆಹಾಕಿ 23 ಆರೋಪಿಗಳನ್ನು ಬಂಧಿಸಲಾಗಿದೆ. ಆ. 22ರಂದು ಏಳು ಪ್ರಕರಣಗಳಲ್ಲಿ 25 ಮಂದಿಯನ್ನು ಬಂಧಿಸಲಾಗಿತ್ತು' ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದರು.
'ಕಡಿಮೆ ಹಣಕ್ಕೆ ಹೆಚ್ಚು ಬಡ್ಡಿ ವಸೂಲಿ ಮಾಡುವುದು, ಅಸಲು-ಬಡ್ಡಿ ಪಾವತಿಸಿದರೂ, ಮೀಟರ್ ಬಡ್ಡಿ ಹಾಕಿ ಅದನ್ನೂ ಪಾವತಿಸಲು ಮಾನಸಿಕ ಕಿರುಕುಳ ನೀಡುವುದು ಕಾನೂನು ಬಾಹಿರ ಕೃತ್ಯವಾಗಿದೆ. ಕೈಗಡ ಪಡೆದ ಸಾಲಕ್ಕೂ ನಾಲ್ಕು ಪಟ್ಟು ಬಡ್ಡಿ ಹಾಕಿ ಹಿಂಸೆ ನೀಡುವುದು ಸರಿಯಲ್ಲ. ನೊಂದವರು ಧೈರ್ಯವಾಗಿ ಠಾಣೆಗೆ ಬಂದು ದೂರು ನೀಡಬೇಕು. ದೂರು ಇಲ್ಲದೆ ನಾವು ಏನೂ ಮಾಡಲು ಸಾಧ್ಯವಿಲ್ಲ. ಎಂದರು.
'ಬೆಂಗೇರಿಯ ಚೇತನಾ ಕಾಲೊನಿಯಲ್ಲಿ ಮೀಟರ್ ಬಡ್ಡಿ ವ್ಯವಹಾರದಿಂದ ನೊಂದು ಸುಜಿತ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರು ಎಲೆಕ್ಟ್ರಿಕಲ್ ವ್ಯವಹಾರ ಮಾಡುತ್ತಿದ್ದು, ಬ್ಯಾಂಕ್ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಅವರ ಕುಟುಂಬದವರಿಂದ ಮಾಹಿತಿ ಸಂಗ್ರಹಿಸಿದ್ದು, ಏಳೆಂಟು ಮಂದಿ ಜೊತೆ ಹಣಕಾಸಿನ ವ್ಯವಹಾರ ಇಟ್ಟುಕೊಂಡಿರುವುದು ತಿಳಿದು ಬಂದಿದೆ. ತನಿಖೆ ನಡೆಯುತ್ತಿದೆ' ಎಂದು ಕಮಿಷನರ್ ಶಶಿಕುಮಾರ್ ಹೇಳಿದರು.
ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿ.ಆರ್. ಎಸಿಪಿ ಶಿವಪ್ರಕಾಶ ನಾಯ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.