ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗೆ ಆತ್ಮಹತ್ಯೆ ಒಂದೇ ಪರಿಹಾರವೇ?

ಹುಬ್ಬಳ್ಳಿ–ಧಾರವಾಡ ಮೆಟ್ರೊ
Last Updated 12 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

‘ನನಗೆ ಯಾರೂ ಇಲ್ಲ, ನನಗೆ ತುಂಬಾ ಬೇಜಾರಾಗಿದೆ, ಏನು ಮಾಡಬೇಕು ತೋಚುತ್ತಿಲ್ಲ, ಓದಿದ್ದು ತಲೆಯಲ್ಲಿ ಹೋಗುತ್ತಿಲ್ಲ. ಜೀವನವೇ ಬೇಡ...’ ಒತ್ತರಿಸಿ ಬಂದ ದುಃಖ ತಡೆಯಲಾಗದೆ ಅವಳು ಅಳತೊಡಗಿದಳು. ಅವಳನ್ನು ಏನೂ ಕೇಳಲಿಲ್ಲ. ಅವಳನ್ನು ಸಂತೈಸಿ, ಸಮಾಧಾನಗೊಂಡ ನಂತರ, ಅವಳ ವಿವರ ಮಾಹಿತಿ ಪಡೆಯಲಾಯಿತು. ಅವಳ ಒಂದೊಂದು ಸಮಸ್ಯೆಗೆ ಅವಳಿಗೆ ಸರಿ ಹೊಂದುವಂತೆ, ಅವಳು ಅರಿಯುವಂತೆ, ಅವಳಾಗಿಯೇ ನಿಭಾಯಿಸುವ ಸಾಮರ್ಥ್ಯವನ್ನು ಅವಳ ಮೂಲಕವೇ ಹುಡುಕಲಾಯಿತು. ಅದರಿಂದ ಅವಳು ತೆಗೆದುಕೊಂಡ ಸಕಾರಾತ್ಮಕ ನಿರ್ಧಾರ ಅವಳ ಜೀವನವನ್ನೇ ಬದಲಾಯಿಸಿತು. ಈಗ ಅವಳ ಮೊಗದಲ್ಲಿ ಮುಗುಳ್ನಗೆ, ಸಾಧಿಸಬೇಕೆನ್ನುವ ಛಲ ಹುಟ್ಟುತ್ತಿದೆ.

ಹೌದು; ಆತ್ಮಹತ್ಯೆಗೆ ಎಷ್ಟೋ ಪ್ರಬಲವಾದ ಕಾರಣಗಳು ಮುಖ್ಯವಾಗಿರುತ್ತವೆ. ಅವುಗಳಲ್ಲಿ ವೈಯಕ್ತಿಕ, ಸಾಮಾಜಿಕ, ಕೌಟುಂಬಿಕ, ವಿದ್ಯಾಭ್ಯಾಸ, ಆರ್ಥಿಕ, ದಾಂಪತ್ಯ ಇನ್ನೂ ಹಲವಾರು ವಿಷಯಗಳಲ್ಲಿನ ಸಮಸ್ಯೆಗಳ ಒತ್ತಡಗಳನ್ನು ನಿಭಾಯಿಸದೆ ಹೋದಾಗ, ಯಾವುದಕ್ಕೂ ದಾರಿ, ಸಲಹೆಗಳು ಸಿಗದೇ ಇದ್ದಾಗ ಆತ್ಮಹತ್ಯೆಗೆ ವ್ಯಕ್ತಿ ಮುಂದಾಗುತ್ತಾನೆ.

ಪ್ರತಿಯೊಂದು ವಸ್ತುವಿಗೂ ಮತ್ತು ಜೀವಿಗೂ ಆದಿ, ಅಂತ್ಯ ಅನ್ನುವುದು ಇದ್ದೇ ಇದೆ. ನಮ್ಮ ಜೀವನದ ಸುತ್ತ ನಿರಾಸೆ, ಹತಾಶೆ ಅನ್ನುವ ಕತ್ತಲು ಆವರಿಸಿ ಏನೂ ತಿಳಿಯದಾದಾಗ ನನ್ನ ಅಂತ್ಯವೇ ಇದಕ್ಕೆ ಸೂಕ್ತ ಎಂಬ ಒಂದು ಬಲವಾದ ಒತ್ತಡ ಆತ್ಮಹತ್ಯೆಗೆ ದಾರಿಯಾಗುತ್ತದೆ. ಒತ್ತಡಗಳನ್ನು ನಿಭಾಯಿಸದೇ ಹೋದಾಗ, ಯಾವುದಕ್ಕೂ ದಾರಿ, ಸಲಹೆಗಳು ಸಿಗದೇ ಇದ್ದಾಗ ಆತ್ಮಹತ್ಯೆಯೆಡೆಗೆ ಮನಸ್ಸು ವಾಲುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿದ್ದೇವೆ. ಹೀಗೆ ಹಲವಾರು ರೀತಿಯ ಸಮಸ್ಯೆಗಳನ್ನು ಹೊಂದಿದವರು ಆತ್ಮಹತ್ಯೆಗೆ ತುತ್ತಾಗುತ್ತಿದ್ದಾರೆ. ಯಾವುದೇ ಒಂದು ಆತ್ಮಹತ್ಯೆಯು ನಾವು ವಾಸಿಸುತ್ತಿರುವಂತಹ ಸುತ್ತಮುತ್ತಲಿನ ಪರಿಸರದ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಗಳ ಮೇಲೆ ಪ್ರಭಾವ ಬೀರುತ್ತದೆ. ಇದೊಂದು ಗಂಭೀರವಾದಂತಹ ಸಾರ್ವಜನಿಕ ಸಮಸ್ಯೆಯಾಗಿದೆ. ಆತ್ಮಹತ್ಯೆಗೆ ಬಡವ, ಶ್ರೀಮಂತ, ಮೇಲು, ಕೀಳು, ಹೆಣ್ಣು, ಗಂಡು, ಅಕ್ಷರಸ್ಥ, ಅನಕ್ಷರಸ್ಥ ಎಂಬ ಯಾವುದೇ ಭೇದಭಾವವಿಲ್ಲ. ವಿದ್ಯಾವಂತ ವಿವೇಕ ಉನ್ನತ ವ್ಯಾಸಂಗ ಮಾಡಿ, ಉದ್ಯೋಗ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ. ನಾವು ಕಲಿತಿದ್ದಕ್ಕೆ ಸರಿಯಾದ ಉದ್ಯೋಗ ಬೇಕೆಂದು ಪ್ರಯತ್ನಪಡಬೇಕು. ಅದು ಬಿಟ್ಟು ತಕ್ಷಣಕ್ಕೆ ಉದ್ಯೋಗ ಸಿಗುವುದಾದರೂ ಎಲ್ಲಿ? ಇದನ್ನು ಅರಿತಿರಬೇಕು. ಅರ್ಹತೆಗೆ ತಕ್ಕಂತೆ ಅನುಭವವು ಬೇಕು. ಅದಕ್ಕೆ ತಕ್ಕಂತೆ ವೇತನ ಸಿಗುತ್ತದೆ. ನಮ್ಮ ಅಪೇಕ್ಷೆಗಳನ್ನು ಕೆಲವೊಮ್ಮೆ ಬಿಡಬೇಕಾಗುತ್ತದೆ. ಹೊಂದಾಣಿಕೆಯಿಂದ ನಿಷ್ಠೆಯಿಂದ ಕೆಲಸ ಮಾಡುತ್ತಿರಬೇಕು.

ಇನ್ನು, ಪ್ರೀತಿಸಿದ ಯುವತಿ ಬೇರೆಯವರನ್ನು ಮದುವೆಯಾದಳೆಂದು, ಅವಳನ್ನು ಮರೆಯಲಾಗದೇ ನಿತ್ಯ ಕುಡಿದು ಆರೋಗ್ಯವನ್ನು ಹಾಳುಮಾಡಿಕೊಂಡು ಅಂತ್ಯ ಮಾಡಿಕೊಳ್ಳುತ್ತಿರುವವರೆಷ್ಟೋ ಜನರಿದ್ದಾರೆ.ಇದು ಸೂಕ್ತವೇ? ನಿಮ್ಮನ್ನು ನೀವುಪ್ರಶ್ನಿಸಿಕೊಳ್ಳಿರಿ. ನಾನು ಚೆನ್ನಾಗಿಲ್ಲ, ಅವಳು ತುಂಬಾ ಸುಂದರಿಯಾಗಿದ್ದಾಳೆ. ನನ್ನನ್ನು ಯಾರೂ ಮದುವೆಯಾಗಲ್ಲ, ನನಗೆ ಜೀವನವೇ ಬೇಡ ಎಂದು ಆತ್ಮಹತ್ಯೆ ಮಾಡಿಕೊಳ್ಳುವವರಿದ್ದಾರೆ. ಬಾಹ್ಯ ಸೌಂದರ್ಯಕ್ಕೆ ಮಾರುಹೋಗದೇ, ನಿಮ್ಮದೇ ಆದಂಥ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿ. ಆಂತರಿಕ ಸೌಂದರ್ಯದಿಂದ ನಿಮ್ಮ ಬಾಹ್ಯ ಸೌಂದರ್ಯ ಇಮ್ಮಡಿಯಾಗುತ್ತದೆ. ಬದುಕನ್ನು ಎದುರಿಸುವ ಛಲ ನಿಮ್ಮಲ್ಲಿ ಬಂದೇ ಬರುತ್ತದೆ. ಮೈತುಂಬಾ ಸಾಲ ಮಾಡಿಕೊಂಡು, ತನ್ನ ಕುಟುಂಬವನ್ನು ನಿಭಾಯಿಸಲು ಸಾಧ್ಯವಾಗದೇ, ಹಲವಾರು ಚಟಗಳಿಗೆ ದಾಸನಾಗಿ, ತನ್ನ ಜೀವನವನ್ನು ಅಂತ್ಯ ಮಾಡಿಕೊಳ್ಳುವ ಹಂತದಲ್ಲಿದ್ದಾಗ, ಕೆಲವೊಮ್ಮೆ ಅವರ ಮನಸ್ಸೇ ಅವರಿಗೆ ದಾರಿದೀಪವಾಗುತ್ತದೆ.

‘ಸಾಲ ಮಾಡಿದವನು ನಾನು, ನಾನೇ ತೀರಿಸಬೇಕಲ್ಲವೇ? ಚಟಗಳಿಗೆ ದಾಸನಾದರೆ ನನ್ನ ಆರೋಗ್ಯವೇ ಹಾಳು. ನನ್ನ ಕುಟುಂಬದ ಭವಿಷ್ಯವೇನು? ಇಲ್ಲ ನಾನು ಸಾಯುವುದಿಲ್ಲ; ಹೇಡಿಯಾಗುವುದಿಲ್ಲ. ನನಗೆ ಶಕ್ತಿ ಇದೆ, ಬುದ್ಧಿ ಇದೆ. ನಾನು ದುಡಿಯುತ್ತೇನೆ. ನನ್ನ ಸಂಸಾರವನ್ನು ಜವಾಬ್ದಾರಿಯಿಂದ ನಿರ್ವಹಿಸುತ್ತೇನೆ. ಸಾಲ ತೀರಿಸಬಹುದು. ಆದರೆ ನನ್ನ ಜೀವ ಹೋದರೆ ನಾನು ಮಾಡಿದ ಸಾಲವನ್ನು ತೀರಿಸುವವರು ಯಾರು? ನನ್ನ ಕುಟುಂಬಕ್ಕೆ ನನ್ನಿಂದಲೇ ತೊಂದರೆಯಾಗುವುದು ಬೇಡ. ನಾನು ಸಮರ್ಥನಿದ್ದೇನೆ. ನಾನು ಎಲ್ಲವನ್ನು ನಿಭಾಯಿಸಬಲ್ಲೇ’ ಎನ್ನುವ ಆತ್ಮವಿಶ್ವಾಸ, ದೃಢನಿರ್ಧಾರವೇ ಆತನ ಮನದಲ್ಲಿ ತುಂಬಿಕೊಂಡಿದ್ದ ಆತ್ಮಹತ್ಯೆಯ ವಿಚಾರಗಳನ್ನು ತಳ್ಳಿಹಾಕಿತು.

ಈಸಬೇಕು, ಇದ್ದುಜೈಸಬೇಕು ಎಂಬ ಮಾತಿನಂತೆ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ. ಹಲವಾರು ಪ್ರತಿಕ್ರಿಯೆಗಳ ಮುಖಾಂತರ ಪರಿಹಾರವನ್ನು ನಮಗನುಕೂಲವಾಗುವಂತೆ ಕಂಡುಕೊಳ್ಳಬೇಕು. ಸಮಸ್ಯೆಯನ್ನು ಹೊಂದಿದ ಯಾವುದೇ ವ್ಯಕ್ತಿಗೆ ಮಾತುಗಳು, ವ್ಯಂಗ್ಯತೋರುವುದು ಸಭ್ಯತೆಯಲ್ಲ. ಅವರು ಸಮಸ್ಯೆಗಳನ್ನು ಹೊತ್ತು ನಮ್ಮಲ್ಲಿ ವಿಶ್ವಾಸದಿಂದ ಬಂದಾಗ, ಆ ಸಮಸ್ಯೆಗಳನ್ನು ಇತರರಲ್ಲಿ ಹೇಳಿಕೊಂಡು ಹಾಸ್ಯಾಸ್ಪದ ಮಾಡುವುದು ವ್ಯಕ್ತಿಗೆ, ವ್ಯಕ್ತಿತ್ವಕ್ಕೆ ಧಕ್ಕೆ ಮಾಡಿದಂತಾಗುವುದು. ಯಾವುದೇ ರೀತಿಯ ನೊಂದ ಜೀವಕ್ಕೆ ಬೇಕು ಅಕ್ಕರೆ ತುಂಬಿದ ಪ್ರೀತಿಯ ಸಹಾನುಭೂತಿಯ ಮಾತುಗಳು. ಸಾಂತ್ವನದ, ಸ್ಫೂರ್ತಿಯ ಮಾತುಗಳು. ವ್ಯಕ್ತಿಯ ಮನದಲ್ಲಿ ವಿಭಿನ್ನ ರೀತಿಯ ಶಕ್ತಿಯನ್ನು ತುಂಬುತ್ತದೆ. ನಕಾರಾತ್ಮಕ ಯೋಚನೆಗಳನ್ನು ಹೊಡೆದೋಡಿಸುತ್ತದೆ. ಮನದಲ್ಲಿ ಕೆಟ್ಟ ಆಲೋಚನೆಗಳಿಗೆ ಸ್ಥಳವೇ ಇರುವುದಿಲ್ಲ. ಸಾಧ್ಯ ಎನ್ನುವ ಮಾತು ಯಾವಾಗಲೂ ನಮ್ಮಲ್ಲಿ ಆತ್ಮವಿಶ್ವಾಸ, ಧೈರ್ಯ ತುಂಬಿರುತ್ತದೆ. ಪ್ರತಿಯೊಬ್ಬರ ಜೀವ ಅಮೂಲ್ಯ, ಕ್ಷಣಿಕ ಸಮಸ್ಯೆ, ತೊಂದರೆಗೆ ಆತ್ಮಹತ್ಯೆ ದಾರಿಯಲ್ಲ ಎಂಬುದನ್ನು ಅರಿತು ಬದುಕಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT