ಭಾನುವಾರ, ಫೆಬ್ರವರಿ 23, 2020
19 °C
ಗರಗ ಮಡಿವಾಳೇಶ್ವರ ಜಾತ್ರೆ ಅಂಗವಾಗಿ ಹೈನುಗಾರಿಕೆಗೆ ಉತ್ತೇಜನ

ಹಾಲು ಹಿಂಡಿ ಬಹುಮಾನ ಪಡೆದ ರೈತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ತಾಲ್ಲೂಕಿನ ಗರಗದ ಗುರು ಮಡಿವಾಳೇಶ್ವರ ಜಾತ್ರೆ ಅಂಗವಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯು ಪ್ರಥಮ ಬಾರಿಗೆ ಆಯೋಜಿಸಿದ್ದ ಹಾಲು ಕರೆಯುವ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡ ಸುತ್ತಮುತ್ತಲಿನ ರೈತರು ಬಹುಮಾನ ಪಡೆದು ಸಂಭ್ರಮಿಸಿದರು.

ಜಗದ್ಗುರು ಮಡಿವಾಳೇಶ್ವರ ಕಲ್ಮಠ ಟ್ರಸ್ಟ್ ಹಾಗೂ ಎಪಿಎಂಸಿ ಸಹಯೋಗದಲ್ಲಿ ಮಂಗಳವಾರ ಮುಂಜಾನೆ ಆರಂಭವಾದ ಸ್ಪರ್ಧೆಯಲ್ಲಿ ತಲ್ಲೂಕಿನ ಗರಗ, ಹಂಗರಕಿ, ತಡಕೋಡ, ಕಬ್ಬೇನೂರ ಸೇರಿದಂತೆ ಸುತ್ತಮುತ್ತಲಿನ ರೈತರು ಪಾಲ್ಗೊಂಡು ಹೊಸಬಗೆಯ ಸ್ಪರ್ಧೆಯಲ್ಲಿ ಪಾಲ್ಗೊಂಡು ನಗದು ಪುರಸ್ಕಾರ ಹಾಗೂ ಪಶು ಆಹಾರವನ್ನು ಪಡೆದರು.

ಎಚ್‌ಎಫ್‌ ಮತ್ತು ಜರ್ಸಿ ಆಕಳುಗಳು, ಮುರ್ರಾ ಮತ್ತು ಸುರ್ತಿ ತಳಿಗಳ ಎಮ್ಮೆಗಳಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಹಾಲು ಹಿಂಡಲು ಪ್ರತಿಯೊಬ್ಬರಿಗೂ 20 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು. ಪಶುವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಇದರ ಮೇಲ್ವಿಚಾರಣೆಗೆ ನೇಮಿಸಲಾಗಿತ್ತು.

ಇಲಾಖೆಯ ಸಹಾಯಕ ನಿರ್ದೇಶಕ ಡಾ. ಜಂಬುನಾಥ ಗದ್ದಿ ಮಾತನಾಡಿ, ‘ಹೈನುಗಾರಿಕೆಯನ್ನು ಪ್ರೋತ್ಸಾಹಿಸುವುದು, ಕೃಷಿಯ ಜತೆಗೆ ಉಪಕಸುಬುಗಳ ಮಹತ್ವ ತಿಳಿಸುವುದು ಮತ್ತು ನಿರುದ್ಯೋಗ ನಿವಾರಣೆಯ ಆಶಯದೊಂದಿಗೆ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಹಾಲು ಹಿಂಡುವ ಸ್ಪರ್ಧೆ ಏರ್ಪಡಿಸಲಾಗಿದೆ. ಜತೆಗೆ ಹೈನುಗಾರರಿಗೆ ಜಾನುವಾರುಗಳ ಪೋಷಣೆಯ ವೈಜ್ಞಾನಿಕ ವಿಧಾನಗಳು, ಸ್ವಚ್ಚತೆ, ಖನಿಜಾಂಶಯುಕ್ತ ಆಹಾರ ನೀಡುವುದರ ಕುರಿತು ತಿಳಿವಳಿಕೆ ನೀಡುವ ಉದ್ದೇಶವಿದೆ’ ಎಂದರು.

ಆಕಳು ವಿಭಾಗದಲ್ಲಿ ಕಬ್ಬೇನೂರು ಗ್ರಾಮದ ಮಹಾಂತೇಶಗೌಡ ಮುದಿಗೌಡ್ರ ಅವರು 13.580 ಕೆ.ಜಿ. ಹಾಲನ್ನು ಕರೆದು ಪ್ರಥಮ ಸ್ಥಾನ ಗಳಿಸಿದರು. ಗರಗದ ಎಚ್‌.ಚಿಕ್ಮಮಠ ದ್ವಿತೀಯ (13.192ಕೆ.ಜಿ.), ಹಂಗರಕಿಯ ಪಾಲಾಕ್ಷಿಗೌಡ ನಾಗನಗೌಡ ತೃತೀಯ (12.416ಕೆ.ಜಿ.), ಇದೇ ಗ್ರಾಮದ ಮಡಿವಾಳಪ್ಪ ಹುಲಗಣ್ಣನವರ ನಾಲ್ಕನೇ ಸ್ಥಾನ (10.573ಕೆ.ಜಿ.) ಹಾಗೂ ಧಾರವಾಡದ ಪ್ರವೀಣ ಘಾಟಗೆ (9.215ಕೆ.ಜಿ.) ಐದನೇ ಸ್ಥಾನ ಪಡೆದರು.

ಎಮ್ಮೆಗಳ ವಿಭಾಗದಲ್ಲಿ ಮುಮ್ಮಿಗಟ್ಟಿಯ ಪ್ರಕಾಶಗೌಡ ಕರೆಕ್ಕನವರ ಅವರು 10.185ಕೆ.ಜಿ. ಹಾಲು ಕರೆದು ಪ್ರಥಮ ಸ್ಥಾನ ಪಡೆದರು. ಗರಗದ ಮಡಿವಾಳೆಪ್ಪ ತುಕರಾರ ದ್ವಿತೀಯ (9.021ಕೆ.ಜಿ.), ಧಾರವಾಡದ ಪ್ರವೀಣ ಘಾಟಗೆ ತೃತೀಯ (8.051ಕೆ.ಜಿ.), ಹಂಗರಕಿಯ ಬಸವನಗೌಡ ನಾಗನಗೌಡರ ನಾಲ್ಕನೇ ಸ್ಥಾನ (7.081ಕೆ.ಜಿ.) ಹಾಗೂ ಹಂಗರಕಿಯ ಮಡಿವವಾಳೆಪ್ಪ ಶಿಗಳ್ಳಿ ಐದನೇ ಸ್ಥಾನ (6.693ಕೆ.ಜಿ.) ಪಡೆದರು.

ಪ್ರಥಮ ಬಹುಮಾನ ಪಡೆದ ವಿಜೇತರಿಗೆ ₹8ಸಾವಿರ ನಗದು, ದ್ವಿತೀಯ ₹6ಸಾವಿರ, ತೃತೀಯ ₹5ಸಾವಿರ, ನಾಲ್ಕನೇ ಬಹುಮಾನ ₹4ಸಾವಿರ, ಐದನೇ ಬಹುಮಾನ ₹3500 ನೀಡಲಾಯಿತು. 6ರಿಂದ 10ನೇ ಸ್ಥಾನ ಪಡೆದವರಿಗೆ ಪಶು 50ಕೆ.ಜಿ. ತೂಕದ ಪಶು ಆಹಾರ ಚೀಲ ಮತ್ತು 5 ಲೀಟರ್ ಕ್ಯಾಲ್ಶಿಯಂ ಟಾನಿಕ್‌ ನೀಡಲಾಯಿತು. ಸ್ಪರ್ಧೆಯಲ್ಲಿ 15 ಆಕಳು ಹಾಗೂ 11 ಎಮ್ಮೆಗಳು ಪಾಲ್ಗೊಂಡಿದ್ದವು. ಪಾಲ್ಗೊಂಡ ಪ್ರತಿಯೊಬ್ಬರಿಗೂ ಇಲಾಖೆ ವತಿಯಿಂದ 10ಕೆ.ಜಿ. ಪಶು ಆಹಾರವನ್ನು ನೀಡಲಾಯಿತು. 

ಸ್ಪರ್ಧೆಯಲ್ಲಿ ಸುಮಾರು 217 ಲೀ. ಹಾಲು ಸಂಗ್ರಹವಾಯಿತು. 180ಲೀ. ನಷ್ಟು ಹಾಲನ್ನು ಮಠಕ್ಕೆ ನೀಡಲಾಯಿತು.

ಇಲಾಖೆಯ ಡಾ.ಸಾಯಿಕುಮಾರ್ ಹಿಳ್ಳಿ, ಡಾ.ರಮೇಶ ಹೆಬ್ಬಳ್ಳಿ, ಡಾ.ಬಾಲನಗೌಡ್ರ, ಡಾ.ಮುತ್ತನಗೌಡ, ಡಾ.ಆನಂದ ತಡೆಪ್ಪನವರ, ಡಾ.ಪ್ರಕಾಶ ಬೆನ್ನೂರ, ಡಾ.ಅಪ್ತಾಭ ಯಲ್ಲಾಪೂರ, ಡಾ.ತಿಪ್ಪಣ್ಣ, ಡಾ.ಶರಣಬಸವ ಸಜ್ಜನ, ಡಾ.ಸುರೇಶ ಅರಕೇರಿ, ಕುಂತಿನಾಥ ಇಜಾರಿ, ಶಿವಲಿಂಗ ಕಾಶಿದಾರ್, ಪ್ರಕಾಶ ಸಂಗೊಳ್ಳಿ, ಮಾತಾಂಡಪ್ಪ ಕತ್ತಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು