ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ಅವಧಿ ವಿಸ್ತರಿಸಲು ಕೇಂದ್ರಕ್ಕೆ ಮನವಿ: ಸಚಿವ ಬೈರತಿ ಬಸವರಾಜ

Last Updated 13 ಜುಲೈ 2021, 6:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಪ್ರಯಾಣಿಕರಿಗೆ ಅನುಕೂಲವಾಗುವಂತೆ ಅತ್ಯಾಧುನಿಕ ನೂತನ ಬಸ್ ನಿಲ್ದಾಣವನ್ನು ₹35.58 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಕಟ್ಟಡ ನಿರ್ಮಾಣ ಕಾಮಗಾರಿ 18 ತಿಂಗಳಲ್ಲಿ ಪೂರ್ಣಗಳ್ಳಲಿದೆ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹೇಳಿದರು.

ಸ್ಮಾರ್ಟ್‌ ಸಿಟಿ ಅನುದಾನದಡಿ ನಗರದಲ್ಲಿ ಮುಕ್ತಾಯಗೊಂಡ ಯೋಜನೆಗಳ ಲೋಕಾರ್ಪಣೆ ಹಾಗೂ ಹಳೇ ಬಸ್ ನಿಲ್ದಾಣದ ಬಳಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸಲಾಗುತ್ತಿರುವ ನೂತನ ಬಸ್ ನಿಲ್ದಾಣದ ಕಾಮಗಾರಿಗೆ ಚಾಲನೆ ಅವರು ಮಾತನಾಡಿದರು.

‘ಗೋಕುಲ ರಸ್ತೆ ಕೈಗಾರಿಕಾ ಪ್ರದೇಶ ರಸ್ತೆಗಳು ಹಾಳಾಗಿದ್ದವು. ಎಲ್ಲ ರಸ್ತೆಗಳನ್ನು ಸ್ಮಾರ್ಟ್‌ಸಿಟಿ ಅನುದಾನದಲ್ಲಿ ಅಭಿವೃದ್ಧಿಗೊಳಿಸಿ, ಲೋಕಾರ್ಪಣೆ ಮಾಡಲಾಗಿದೆ. ಮುಂದಿನ ತಿಂಗಳು ₹150 ಕೋಟಿ ವೆಚ್ಚದ ಕ್ರೀಡಾ ಸಂಕೀರ್ಣದ ಭೂಮಿ ಪೂಜೆ ಮಾಡಲಾಗುವುದು. ಕೋವಿಡ್‌ನಿಂದಾಗಿ ಸ್ಮಾರ್ಟ್‌ಸಿಟಿ ಕಾಮಗಾರಿ ಏಳರಿಂದ ಎಂಟು ತಿಂಗಳು ವಿಳಂಬವಾಗಿದೆ. ಕಾಮಗಾರಿ ಅವಧಿ ವಿಸ್ತರಿಸುವಂತೆ ಕೇಂದ್ರ ನಗರಾಭಿವೃದ್ಧಿ ಸಚಿವರಿಗೆ ಪತ್ರ ಬರೆದಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ತಿಳಿಸಿದರು.

‘ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆಯಾಗುತ್ತದೆ. ಆದರೆ, ಅಭಿವೃದ್ಧಿ ಹೇಗಿರಬೇಕು ಎನ್ನುವ ಕುರಿತು ಯೋಜನೆ ಸಿದ್ಧಪಡಿಸಲು ಅಧಿಕಾರಿಗಳ ಹಾಗೂ ತಾಂತ್ರಿಕ ಪರಿಣತ ಸಿಬ್ಬಂದಿ ಕೊರತೆ ಹುಬ್ಬಳ್ಳಿ–ಧಾರವಾಡದಲ್ಲಿದೆ. ತಿಂಗಳಿಗೊಮ್ಮೆ ಸಭೆ ಕರೆದು ನಿವೇಶನ ಹಂಚಿಕೆ ಮಾಡುವುದಷ್ಟೇ ಹುಡಾ ಕೆಲಸವಾಗಿದೆ. ಭವಿಷ್ಯದಲ್ಲಿ ನಗರ ಹೇಗಿರಬೇಕು, ಅದಕ್ಕೆ ಯಾವೆಲ್ಲ ಯೋಜನೆಗಳು ಕೈಗೊಳ್ಳಬೇಕು ಎನ್ನುವ ಕುರಿತು ಮುಂದಾಲೋಚನೆ ಇರಬೇಕು. ಖಾಲಿಯಿರುವ ಹುದ್ದೆ ಭರ್ತಿ ಮಾಡಿಕೊಳ್ಳುವಾಗ ತಜ್ಞ ಸಿಬ್ಬಂದಿಗೆ ಅವಕಾಶ ನೀಡುವಂತಾಗಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

‘45 ವರ್ಷ ಮೇಲ್ಪಟ್ಟ ಶೇ80 ರಷ್ಟು ಮಂದಿಗೆ ದೇಶದಲ್ಲಿ ಎರಡೂ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ರಾಜ್ಯದ 6.44 ಕೋಟಿ ಜನರಿನಲ್ಲಿ 2.60 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ’ ಎಂದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಪ್ರದೀಪ ಶೆಟ್ಟರ್, ಅರವಿಂದ ಬೆಲ್ಲದ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ್‌, ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಭಾಜಪೇಯಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್‌ ಇದ್ದರು.

‘5 ಸಾವಿರ ಎಕರೆ ಭೂ ಸ್ವಾಧೀನಕ್ಕೆ ನಿರ್ಣಯ’: ‘ಧಾರವಾಡದ ಮಮ್ಮಿಗಟ್ಟಿ ಕೈಗಾರಿಕಾ ಪ್ರದೇಶದ ನಂತರ ರಾಷ್ಟ್ರೀಯ ಹೆದ್ದಾರಿ ಅಕ್ಕ–ಪಕ್ಕದಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಿಸಲು 5 ಸಾವಿರ ಎಕರೆ ಭೂ ಸ್ವಾಧೀನಕ್ಕೆ ನಿರ್ಣಯಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

‘ಕೈಗಾರಿಕಾ ಕಾರಿಡಾರ್‌ಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಬಂಡವಾಳ ಹೂಡಿಕೆಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಿದೆ. ಈ ಕುರಿತು ಕೈಗಾರಿಕೋದ್ಯಮಿಗಳ ಜೊತೆ ಚರ್ಚಿಸಿಲಾಗಿದೆ’ ಎಂದರು.

‘ಗೋಕುಲ ರಸ್ತೆ ಕೈಗಾರಿಕಾ ಪ್ರದೇಶ 500 ಎಕರೆ ವಿಸ್ತೀರ್ಣ ಹೊಂದಿದ್ದು, ಇದನ್ನು ನಗರಾಭಿವೃದ್ಧಿ ಇಲಾಖೆಯು ಟೌನ್‌ಷಿಪ್‌ ಎಂದು ಘೋಷಿಸಬೇಕು. ಇಲ್ಲಿ ಸಂಗ್ರಹವಾಗುವ ತೆರಿಗೆಯಲ್ಲಿ ಶೇ70ರಷ್ಟು ಟೌನ್‌ಷಿಪ್‌ ನಿರ್ವಹಣೆಗೆ ಬಳಕೆ ಮಾಡಿಕೊಂಡರೆ, ಶೇ30 ರಷ್ಟನ್ನು ಪಾಲಿಕೆಗೆ ನೀಡಲಾಗುವುದು. ಕೈಗಾರಿಕೆಗಳಿಗೆ ‌‌‌‌ವಾಣಿಜ್ಯ ಬಳಕೆ ಹೊರತಾಗಿ ಆಸ್ತಿಕರ ನಿಗದಿ ಮಾಡಬೇಕು. ಈ ಕುರಿತು ಬೆಂಗಳೂರಿನಲ್ಲಿ ಜುಲೈ 28ರಂದು ಕರೆಯಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT