ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಲಿಕ ಮಳೆ: ₹96 ಲಕ್ಷ ಮೌಲ್ಯದ ಬೆಳೆ, ಮನೆ ಹಾನಿ

ಹಾನಿಗೊಳಗಾದ ಪ್ರದೇಶಕ್ಕೆ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌ ಭೇಟಿ
Last Updated 22 ಮೇ 2022, 3:01 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ವರದಿ ಪ್ರಕಾರ ಧಾರವಾಡ ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ ₹96 ಲಕ್ಷ ಮೌಲ್ಯದ ಬೆಳೆ ಹಾಗೂ ಮನೆಗಳು ಹಾನಿಯಾಗಿವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌ ತಿಳಿಸಿದರು.

ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಹಾನಿಗೊಳಗಾದ ಇಲ್ಲಿನ ಗಣೇಶನಗರ, ನೇಕಾರ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ‘ಈ ಬಿರು ಬೇಸಿಗೆಯಲ್ಲಿ ಅಕಾಲಿಕ ಮಳೆ ಬರುತ್ತದೆಯೆಂದು ಯಾರಿಗೂ ತಿಳಿದಿರಲಿಲ್ಲ. ಪ್ರಕೃತಿ ವಿಕೋಪದಲ್ಲಿ ಸಮಸ್ಯೆಗಳು ಸಹಜ, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮುಂಜಾಗ್ರತೆ ವಹಿಸಬೇಕು. ಇದು ಸರ್ಕಾರಕ್ಕೆ ಪಾಠವಾಗಿದೆ. ಅನಿರೀಕ್ಷಿತ ಮಳೆಯಿಂದ ಜಿಲ್ಲೆಯಲ್ಲಿ ಸಾಕಷ್ಟು ಮನೆ, ಬೆಳೆ ಹಾನಿಯಾಗಿದ್ದು, ಸಮೀಕ್ಷೆ ನಡೆಸಿ ಶೀಘ್ರ ಪರಿಹಾರ ನೀಡಲಾಗುವುದು’ ಎಂದರು.

‘ಕಳೆದ ಏಪ್ರಿಲ್‌ನಿಂದ ಈವರೆಗೆ ಜಿಲ್ಲೆಯಲ್ಲಿ 433 ಮನೆಗಳು ಕುಸಿದಿವೆ. ಅವುಗಳಲ್ಲಿ ಕಳೆದ 24 ಗಂಟೆಯಲ್ಲಿಯೇ 201 ಮನೆಗಳು ಬಿದ್ದಿವೆ. 18 ಶಾಲೆಗಳ ಕೊಠಡಿಗಳು ಸಹ ಕುಸಿದಿರುವ ವರದಿಯಾಗಿದೆ. 1,044 ವಿದ್ಯುತ್ ಕಂಬಗಳು, 22 ವಿದ್ಯುತ್ ಪರಿವರ್ತಕಗಳು ಹಾಳಾಗಿವೆ. 101 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾದ ತೋಟಗಾರಿಕೆ ಬೆಳೆ ನಾಶವಾಗಿದೆ‌‌. ಅವುಗಳಲ್ಲಿ ಕಳೆದ 24 ಗಂಟೆಯಲ್ಲಿ 74 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. ತುರ್ತು ಸಂದರ್ಭದಲ್ಲಿ ನೆರವಾಗಲು ರೈತ ಸಹಾಯವಾಣಿ ಪ್ರಾರಂಭಿಸಲಾಗಿದೆ’ ಎಂದು ತಿಳಿಸಿದರು.

‘ಗಣೇಶ ನಗರದ ರಸ್ತೆ ಕಾಮಗಾರಿ ಆರಂಭವಾಗಿದ್ದು, ಮಳೆ ಜಾಸ್ತಿಯಾಗಿದ್ದರಿಂದ ಚರಂಡಿ ನೀರು ಹರಿದು ಮನೆಗಳಿಗೆ ನುಗ್ಗಿದೆ. ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಸಮಸ್ಯೆ ಪರಿಹಾರಕ್ಕೆ ಸೂಚನೆ ನೀಡಿದ್ದೇನೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಎಷ್ಟೇ ಹಣ ವೆಚ್ಚ ಮಾಡಿದರೂ ಕೆಲವು ಕಾಮಗಾರಿಗಳಲ್ಲಿ ಸಣ್ಣ ಸಮಸ್ಯೆ ಎದುರಾಗುತ್ತದೆ. ಅಂತಹ ತಪ್ಪುಗಳು ಆಗದಂತೆ ಎಚ್ಚೆತ್ತುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದರು.

ಶಾಸಕ ಪ್ರಸಾದ ಅಬ್ಬಯ್ಯ, ಪಾಲಿಕೆ ಸದಸ್ಯೆ ಸರಸ್ವತಿ ಧೋಂಗಡಿ, ಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ, ತಹಶೀಲ್ದಾರ್‌ ಶಶೀಧರ ಮಾಡ್ಯಾಳ ಇದ್ದರು.

ಸಮಸ್ಯೆ ತೋಡಿಕೊಂಡ ನಿವಾಸಿಗಳು...

‘ಮನೆಯೊಳಗೆ ಮಳೆ ನೀರು ನುಗ್ಗಿದರೆ ಸಮಸ್ಯೆಯಿರಲಿಲ್ಲ, ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಳೆ ಬಂದಾಗ ಚರಂಡಿ ನೀರು ನುಗ್ಗುತ್ತದೆ. ಸಮರ್ಪಕವಾದ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ, ಜೋರು ಮಳೆ ಬಂದಾಗ ಚರಂಡಿ ಬಂದ್‌ ಆಗುತ್ತದೆ. ನೀರು ಸರಾಗವಾಗಿ ಹರಿಯದೆ ಮನೆಯೊಳಗೆ ನುಗ್ಗುತ್ತದೆ. ಪಾಲಿಕೆ ಅಧಿಕಾರಿಗಳಿಗೆ, ಜನ ಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿಗಳನ್ನು ನೀಡಲಾಗಿದೆ. ಭರವಸೆಯಷ್ಟೇ ನೀಡುತ್ತಾರೆ ಹೊರತು ಸಮಸ್ಯೆ ಈಡೇರಿಸುವಲ್ಲಿ ಮುಂದಾಗಿಲ್ಲ’ ಎಂದು ಗಣೇಶನಗರ ನಿವಾಸಿ ಉದಯ ಹೊಸೂರು ಸಚಿವರ ಎದುರು ಸಮಸ್ಯೆ ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT