ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ವಿಸ್ತರಣೆ; ಜೂನ್‌ 7ರವರೆಗೆ ಕಾದು ನೋಡಿ: ಜಗದೀಶ್ ಶೆಟ್ಟರ್

Last Updated 30 ಮೇ 2021, 13:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಜಿಲ್ಲೆ ಹಾಗೂ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಕೋವಿಡ್ ಸೋಂಕಿತರ ಖಚಿತತೆ ಪ್ರಮಾಣ ಶೇ 16ರಷ್ಟಿದೆ. ಪಾಸಿಟಿವ್ ದರ ಕಡಿಮೆಯಾದರೆ ರಾಜ್ಯದಲ್ಲಿ ಲಾಕ್‌ಡೌನ್ ತೆರವು ಮಾಡಲು ಸಿದ್ದವಿರುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ‌ ಅವರು ಹೇಳಿದ್ದಾರೆ. ಜೂನ್‌ 7 ರವರೆಗೆ ಕಾದು ನೋಡಿ ಲಾಕ್‌ಡೌನ್ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದು ಎರಡು ವರ್ಷ ತುಂಬಿದ ಹಿನ್ನಲೆಯಲ್ಲಿ, ಕೇಶ್ವಾಪುರ ಮಯೂರಿ ಬಡಾವಣೆ ಉದ್ಯಾನವನವನದಲ್ಲಿ ಆಯೋಜಿಸಲಾಗಿದ್ದ ಸಸಿ ನೆಡುವ ಕಾರ್ಯಕ್ರಮ ಹಾಗೂ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಂದಿನ ದಿನಗಳಲ್ಲಿ ಕೋವಿಡ್ ಪಾಸಿಟಿವ್ ದರ ಇಳಿಮುಖವಾಗುವುದು.‌ ಈಗ ಲಾಕ್‌ಡೌನ್ ಯಶಸ್ವಿಯಾಗಿದೆ. ರಾಜ್ಯದಲ್ಲಿ ಇನ್ನೂ ಎಂಟು ದಿನಗಳ ಕಾಲ ಲಾಕ್ ಡೌನ್ ಮುಂದಿವರಿಯಲಿದೆ. ಈ ಸಮಯದಲ್ಲಿ ಪಾಸಿಟಿವ್ ಪ್ರಮಾಣ ದರ ಕಡಿಮೆಯಾಗಬಹದು ಅಥವಾ ಹೆಚ್ಚಾಗಬಹದು. ಇದು ಯಾರ‌ ಕೈಯಲ್ಲೂ ಇಲ್ಲ. ದೆಹಲಿಯಲ್ಲಿ ಪಾಸಿಟಿವ್ ದರ ಶೇ.2 ಇದ್ದಾಗಲೂ ದೆಹಲಿ ಮುಖ್ಯಮಂತ್ರಿ ಲಾಕ್‌ಡೌನ್ ನಲ್ಲಿ ಸಡಲಿಕೆ ನೀಡಿ ಒಂದು ವಾರಗಳ ಕಾಲ ಲಾಕ್‌‌ಡೌನ್ ಮುಂದುವರಿಸಿದ್ದಾರೆ. ಹಾಗಾಗಿ ಈಗಲೇ ರಾಜ್ಯದಲ್ಲಿ ಲಾಕ್‌ಡೌನ್ ಸಡಲಿಕೆ ಕುರಿತು ಮಾತಾಡುವುದು ಸೂಕ್ತವಲ್ಲ‌ ಎಂದರು.

ಹೋಟೆಲ್ ಪಾರ್ಸಲ್ ಸೇವೆಗೆ ಅವಕಾಶ: ರಾಜ್ಯದ ಇತರೆ ಜಿಲ್ಲೆಗಳಿಗಗಿಂತಲೂ ಕಠಿಣ ಲಾಕ್‌ಡೌನ್ ಧಾರವಾಡದಲ್ಲಿ ಜಾರಿಮಾಡಲಾಗಿದೆ. ಹಲವು ಅಸೋಸಿಯೇಷನ್‌ಗಳು ಲಾಕ್‌ಡೌನ್ ನಿಯಮದಲ್ಲಿ ಕೆಲವು ವಿನಾಯಿತಿ ನೀಡುವಂತೆ ಮನವಿ ಮಾಡಿದ್ದಾರೆ. ಮುಖ್ಯವಾಗಿ ಹೋಟೆಲ್ ಸಂಘದ ವತಿಯಿಂದ ಪಾರ್ಸಲ್ ಸೇವೆ ಆರಂಭಿಸಲು ಅವಕಾಶ ಕೇಳಿದ್ದಾರೆ. ಹೋಟೆಲ್‌ಗಳ ಮೇಲೆ ಅವಲಂಬಿತರಾದವರ ಸಂಖ್ಯೆಯೂ‌ ಹೆಚ್ಚಿದೆ. ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಪಾರ್ಸಲ್ ಸೇವೆಗೆ‌ ಅವಕಾಶ ನೀಡುವಂತೆ ಸೂಕ್ತ ನಿರ್ದೇಶನ ನೀಡಲಾಗುವುದು‌ ಎಂದರು.

ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಮಧ್ಯಾಹ್ನ‌ 12 ವರೆಗೆ ಅವಕಾಶ ಕಲ್ಪಿಸಲಾಗಿದೆ. ಎ.ಪಿ.ಎಂ.ಸಿ ಸದಸ್ಯರು ಬೇರೆಯಡೆಯಿಂದ ಟ್ರಕ್‌ಗಳಲ್ಲಿ ಬರುವ ಕಾಳು ಕಡಿಗಳನ್ನು ಅನ್‌ಲೋಡ್ ಮಾಡಲು ಅವಕಾಶ ನೀಡುವಂತೆ ಕೋರಿದ್ದಾರೆ. ಇವುಗಳ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮೋದಿಯಿಂದ ಉತ್ತಮ ಆಡಳಿತ: ದೇಶದ ಆಡಳಿತದ ಚುಕ್ಕಾಣಿ‌ ಹಿಡಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಏಳು ವರ್ಷಗಳನ್ನು ಪೂರೈಸಿ, ಎಂಟನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಶುಭ ಸಂದರ್ಭದಲ್ಲಿ ದೇಶದ‌ ಜನತೆಯಲ ಮೋದಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ದೇಶದ ಬದಲಾವಣೆ ತರುವಲ್ಲಿ ಮೋದಿಯವರು ಸಫಲರಾಗಿದ್ದಾರೆ. ಆಶ್ವಾಸನೆ ನೀಡಿದ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಜಮ್ಮು ಕಾಶ್ಮೀರ, ರಾಮಮಂದಿರ ನಿರ್ಮಾಣದ ವಿಚಾರ ಮತ್ತು ದೇಶದಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವಲ್ಲಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಬಣ್ಣಿಸಿದರು.

ದೇಶದ ಜನರಿಗೆ ಮೋದಿಯವರ ಆಡಳಿತದಲ್ಲಿ ಸುರಕ್ಷಿತ ಭಾವನೆ ಬಂದಿದೆ. ಹೋರ ದೇಶಗಳಲ್ಲಿ ಕೂಡ ಭಾರತದ ಸಂಸ್ಕೃತಿಗೆ ಬೆಳೆ ನೀಡುವಂತಾಗಿದೆ. ಮೊದಲ ಐದು ವರ್ಷ ನಂತರ ಅಧಿಕಾರಕ್ಕೆ ಬಂದ ಎರೆಡು ವರ್ಷಗಳು ಉತ್ತಮ‌ ಆಡಳಿತವನ್ನು ಮೋದಿಯವರು ನೀಡಿದ್ದಾರೆ. ಅನಿರೀಕ್ಷಿತ ಕೋವಿಡ್ 2 ಅಲೆ ಸಂದರ್ಭದಲ್ಲಿ ಕೂಡ ಜನರ ವಿಶ್ವಾಸ ಮೂಡಿಸಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಐತಿಹಾಸಿಕ ಆಡಳಿತ: ಜೋಶಿ
ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಕಾಂಗ್ರೇಸೇತರ ಪಕ್ಷವೊಂದು ಏಳು ವರ್ಷಗಳ ಕಾಲ ದೇಶವನ್ನು ಮುನ್ನೆಡೆಸಿರುವುದು. ಸ್ವತಂತ್ರ ಭಾರತದಲ್ಲಿ ಐತಿಹಾಸಿಕ ಮೈಲುಗಲ್ಲಾಗಿದೆ. 2014 ರಲ್ಲಿ ಕಾಂಗ್ರೇಸ್ ಪಕ್ಷದ ಆಡಳಿತ ವೈಫಲ್ಯದಿಂದ ಬಿ.ಜೆ.ಪಿ. ಪಕ್ಷ ಅಧಿಕಾರಕ್ಕೆ ಬಂದಿತ್ತು. 2019 ಪಕ್ಷದ ಆಡಳಿತ ವೈಖರಿಯನ್ನು ಮೆಚ್ವಿ ದೇಶದ ಜನರು ಮತ ಚಲಾಯಿಸಿದ್ದಾರೆ ಎಂದರು.

ಈ ಎರಡು ವರ್ಷದ ಅಧಿಕಾರ ಅವಧಿಯ 24 ತಿಂಗಳಿನಲ್ಲಿ 16 ತಿಂಗಳು‌ ಕೋವಿಡ್ ಕರಿಛಾಯೆಯಲ್ಲಿ ಕಳೆದು ಹೋಗಿದೆ. ಬಹಳಷ್ಟು ಜನರು ತಮ್ಮ ಹತ್ತಿರದವರನ್ನು ಕಳೆದುಕೊಂಡಿದ್ದಾರೆ. ಇದರ ನೋವು ನಮಗೂ ಇದೆ. ಸರ್ಕಾರ ಸಾರ್ವಜನಿಕರ ತೊಂದರೆಗಳಿಗೆ ದುಃಖಗಳನ್ನು ಅರಿತು ಸಂವೇದನ ಶೀಲತೆಯಿಂದ ಕೆಲಸ ನಿರ್ವಹಿಸಿದ್ದೇವೆ. ಯುದ್ಧೋಪಾದಿಯಲ್ಲಿ ಕೋವಿಡ್ ಪರಿಹಾರ ಕ್ರಮಗಳನ್ನು ಕೈಗೊಂಡಿದ್ದೇವೆ. ಭಾರತದಲ್ಲಿ ಕೋವಿಡ್‌ನಿಂದ ಗುಣಮುಖರಾಗುವವರ ಪ್ರಮಾಣ ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಹೆಚ್ಚಿದೆ. ಎರಡನೆ ಅಲೆಯ ಆರಂಭದ ಸಂದರ್ಭದಲ್ಲಿ 900 ಟನ್ ಇದ್ದ ವೈದ್ಯಕೀಯ ಆಮ್ಲಜನಕ ಬೇಡಿಕೆ ಈಗ 9000 ಟನ್‌ಗೆ ಏರಿಕೆಯಾಗಿದೆ. ಇದನ್ನು ಸರಿದೂಗಿಸಿ ಎಲ್ಲೆಡೆ ಆಕ್ಸಿಜನ್ ದೊರೆಯುವಂತೆ ಮಾಡಲಾಗಿದೆ ಎಂದು ಹೇಳಿದರು.

ರೆಮಿಡಿಸಿವಿರ್ ಔಷಧವನ್ನು ಮುಕ್ತ ಮಾರುಕಟ್ಟೆಕೊಳ್ಳುಲು ಇದ್ದ ನಿರ್ಬಂಧವನ್ನು ತೆಗೆಯಲಾಗಿದೆ. ಎರಡು ಮೂರು ದಿನಗಳಲ್ಲಿ ಬ್ಲಾಕ್ ಫಂಗಸ್ ಔಷಧವನ್ನು ಸಹ ಎಲ್ಲರಿಗೂ ಸಿಗುವ ಹಾಗೆ ಮಾಡಲಾಗುವುದು‌. ಬರುವ ಸವಾಲುಗಳನ್ನು ಎದುರಿಸಿ‌ ಜನರಿಗೆ ಒಳಿತು ಮಾಡುವ ನಿಟ್ಟಿನಲ್ಲಿ ಮೋದಿ ನೇತೃತ್ವದಲ್ಲಿ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ದೇಶದ ಆಂತರಿಕ ಬಾಹ್ಯ ಸುರಕ್ಷತೆ ವಿಚಾರದಲ್ಲಿ ಬಹುದೊಡ್ಡ ಮೈಲುಗಲ್ಲನ್ನು ಸರ್ಕಾರ ಸಾಧಿಸಿದೆ. ದೇಶದ ಗಡಿ ಹಂಚಿಕೊಂಡಿರುವ ರಾಷ್ಟ್ರಗಳು‌ ತಂಟೆ ತಕರಾರು ಮಾಡುತ್ತಿದ್ದವು. ಭೂ ಪ್ರದೇಶಗಳನ್ನು ಆಕ್ರಮಿಸಲು ನೋಡುತ್ತಿದ್ದವು. ನೆರೆಯ ರಾಷ್ಟ್ರ‌ ಚೈನಾದ ಆಕ್ರಮಣ ನೀತಿಗೆ ಅದರದೇ ಭಾಷೆಯಲ್ಲಿ‌ ಉತ್ತರ ನೀಡಿದ್ದೇವೆ. ಭಯೋತ್ಪಾದನೆಯನ್ನು ನಿಯಂತ್ರಿಸಿದ್ದೇವೆ.

ಆರ್ಥಿಕ ಹಾಗೂ ಆರೋಗ್ಯ ‌ದೃಷ್ಟಿಯಿಂದ ಲಾಕ್‌‌ಡೌನ್ ಮುಂದುವರಿಸುವ ಕುರಿತು ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳುವುದು. ಜೂನ್ 7 ವರೆಗೆ ಕಾಯಬೇಕು. ಈಗಲೇ ಲಾಕ್‌ಡೌನ್ ಕುರಿತು ಭವಿಷ್ಯ ನುಡಿಯುವುದು ತಪ್ಪಾಗುತ್ತದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಸರ್ಕಾರ ಸೂಕ್ತವಾಗಿ ಕೋವಿಡ್ ನಿರ್ವಹಣೆ ಮಾಡುತ್ತಿದೆ. ಲಾಕ್‌ಡೌನ್ ಕುರಿತು ಕೂಡ ಸೂಕ್ತ ನಿರ್ಧಾರ ಕೈಗೊಳ್ಳುವರು ಎಂದು ಹೇಳಿದರು.

ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ಸಾವಕಾರ, ಸಂತೋಷ ಚವ್ಹಾಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT