ಹುಬ್ಬಳ್ಳಿ: ‘ಬೆಣ್ಣೆಹಳ್ಳ ಪ್ರವಾಹ ತಡೆಗೆ ಅಂದಾಜು ₹500 ಕೋಟಿ ವೆಚ್ಚದ ಡಿಪಿಆರ್(ಸಮಗ್ರ ಯೋಜನಾ ವರದಿ) ಸಿದ್ಧಪಡಿಸಲಾಗಿದ್ದು, ಸರ್ಕಾರದ ಅನುಮತಿ ದೊರೆತ ನಂತರ ಹಂತಹಂತವಾಗಿ ಕಾಮಗಾರಿ ನಡೆಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ತಿಳಿಸಿದರು.
ನಿರಂತರ ಸುರಿದ ಮಳೆಗೆ ಕುಂದಗೋಳ ಭಾಗದಲ್ಲಿ ಉಂಟಾದ ಮನೆಗಳ ಹಾಗೂ ಕೃಷಿಭೂಮಿಗಳ ಹಾನಿಯನ್ನು ಅಧಿಕಾರಿಗಳೊಂದಿಗೆ ಶುಕ್ರವಾರ ಪರಿಶೀಲಿಸಿ, ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
‘ಮಳೆಯಿಂದಾಗಿ ಕಲಘಟಗಿ, ನವಲಗುಂದ ಭಾಗದಲ್ಲಿನ ರಸ್ತೆ, ಸೇತುವೆಗಳು ಹಾಳಾಗಿದ್ದು, ಹೊಲಗಳಲ್ಲಿ ನೀರು ನಿಂತಿದೆ. ಕುಂದಗೋಳ ಭಾಗದಲ್ಲಿ ಸಾಕಷ್ಟು ಮನೆಗಳ ಗೋಡೆಗಳು ಕುಸಿದಿವೆ. ಅಧಿಕಾರಿಗಳು ಸ್ಥಳ ಪರಿಶೀಲಿಸಿ ವರದಿ ಸಿದ್ಧಪಡಿಸುತ್ತಿದ್ದಾರೆ. ಎಬಿಸಿ ಪ್ರಕಾರ ಪರಿಹಾರ ನೀಡಲಾಗುವುದು’ ಎಂದರು.
ಶೆರೆವಾಡ ಗ್ರಾಮಕ್ಕೆ ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳು, ‘ಅದರಗುಂಚಿಗೆ ತೆರಳಲು ಸಮರ್ಪಕವಾಗಿ ಬಸ್ ವ್ಯವಸ್ಥೆಯಿಲ್ಲ. ಶಾಲಾ-ಕಾಲೇಜಿಗೆ ಸರಿಯಾದ ಸಮಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ’ ಎಂದು ಸಮಸ್ಯೆ ತೋಡಿಕೊಂಡರು. ಸಾರಿಗೆ ಅಧಿಕಾರಿಗಳ ಜೊತೆ ಮಾತನಾಡಿ, ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.
ಶೆರೆವಾಡ ಗ್ರಾಮದ ಡಾಕ್ಟರ್ ಓಣಿಯ ಹನುಮಂತಪ್ಪ ಮತ್ತಿಗಟ್ಟಿ ಅವರ ಮಣ್ಣಿನ ಮನೆಯ ಗೋಡೆ ಕುಸಿದು ಬಿದ್ದಿರುವುದನ್ನು ಸಚಿವರು ವೀಕ್ಷಿಸಿದರು. ಗ್ರಾಮದ ಮಹಿಳೆಯರು ಕುಸಿಯುವ ಹಂತದಲ್ಲಿರುವ ಮನೆಗಳ ಮಾಹಿತಿ ನೀಡಿ, ಮನೆ ನಿರ್ಮಿಸಿಕೊಡಲು ಮುಂದಾಗಬೇಕು ಎಂದು ವಿನಂತಿಸಿಕೊಂಡರು.
ಪಿಡಿಒಗೆ ಲಾಡ್ ತರಾಟೆ: ಬೆಟದೂರು ಗ್ರಾಮ ಪಂಚಾಯಿತಿಗೆ ದಿಢೀರ ಭೇಟಿ ನೀಡಿದ ಲಾಡ್, ಪಿಡಿಒ ಹನುಮರಡ್ಡಿ ನಾಗಾವಿ ಅವರಿಂದ ನರೇಗಾ ಕಾರ್ಮಿಕರ ಮಾಹಿತಿ ಪಡೆದರು. 1,100 ಕಾರ್ಮಿಕರಿದ್ದು, ಅರ್ಧದಷ್ಟು ಮಂದಿಗೂ ಕೆಲಸ ನೀಡದಿರುವುದನ್ನು ಗಮನಿಸಿ, ತರಾಟೆ ತೆಗೆದುಕೊಂಡರು. ಸಿದ್ಧಪಡಿಸಿರುವ ಕಾರ್ಯಯೋಜನೆ ತೋರಿಸಿ ಎಂದ ಸಚಿವ, ‘ಶೇ 60ರಷ್ಟು ಮಂದಿಗೆ ಕೆಲಸ ನೀಡಿ, ನೆಪ ಹೇಳುವುದನ್ನು ಬಿಡಬೇಕು. ಕೃಷಿಹೊಂಡ, ಕಾಲುವೆ ಹೂಳು ತೆಗೆಯುವ ಹಾಗೂ ರಸ್ತೆ ಕಾಮಗಾರಿ ಕೈಗೊಂಡು ಕಾರ್ಮಿಕರಿಗೆ ಉದ್ಯೋಗ ನೀಡಬೇಕು’ ಎಂದು ಸೂಚಿಸಿದರು.
‘ನರೇಗಾ ಕೆಲಸಕ್ಕೆ ಕಾರ್ಮಿಕರ ಕೊರತೆಯಿದೆ’ ಎನ್ನುವ ಪಿಡಿಒ ಹೇಳಿಕೆಗೆ, ‘ಸ್ಥಳೀಯ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್‌ನವೆರೆಲ್ಲ ಊರು ಬಿಟ್ಟು ಹೋಗಿ. ಪಕ್ಷಾತೀತವಾಗಿ ಊರ ಮಂದಿಗೆ ಕೆಲಸ ಕೊಡಿಸಲು ಮುಂದಾಗಬೇಕು’ ಎಂದರು. ಇದೇ ವೇಳೆ ‘ಗ್ರಾಮದಲ್ಲಿ ಮದ್ಯ ಅಕ್ರಮವಾಗಿ ಮಾರಾಟವಾಗುತ್ತಿದೆ’ ಎಂದು ಗ್ರಾಮಸ್ಥರೊಬ್ಬರು ಸಚಿವ ಗಮನಕ್ಕೆ ತಂದರು. ‘ಯಾರು ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಹಾಗೆಯೇ, ಅಂತವರ ಬಗ್ಗೆ ಮಾಹಿತಿ ನೀಡಿದರೆ ₹5ಸಾವಿರ ಬಹುಮಾನ ನೀಡಲಾಗುವುದು’ ಎಂದು ಘೋಷಿಸಿದರು.
ಸೇತುವೆ ವೀಕ್ಷಣೆ: ಸಂಶಿ ಮತ್ತು ಚಾಕಲಬ್ಬಿ ಮಧ್ಯದಲ್ಲಿ ದುರಸ್ತಿಯಲ್ಲಿದ್ದ ಸೇತುವೆ ವೀಕ್ಷಿಸಿದ ಲಾಡ್, ‘ಸೇತುವೆ ಕೆಳಮಟ್ಟದಲ್ಲಿರುವುದರಿಂದ ಮಳೆಬಂದ ಸಂದರ್ಭದಲ್ಲಿ ಸೇತುವೆ ಮುಳುಗಡೆಯಾಗಿ, ಎರಡೂ ಗ್ರಾಮಗಳ ಸಂಪರ್ಕ ಕಡಿತವಾಗುತ್ತದೆ. ಇನ್ನಷ್ಟು ಎತ್ತರಕ್ಕೆ ಏರಿಸಬೇಕಿದ್ದು, ತುರ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ಶಾಸಕ ಎಂ.ಆರ್. ಪಾಟೀಲ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಉಪವಿಭಾಗಾಧಿಕಾರಿ ಅಶೋಕ ತೇಲಿ, ತಹಶೀಲ್ದಾರ್ ಶೈಲೇಶ ಪರಮಾನಂದ, ಎಂ.ಎಸ್. ಅಕ್ಕಿ, ಕುಸುಮಾವತಿ ಶಿವಳ್ಳಿ, ಅನಿಲಕುಮಾರ ಪಾಟೀಲ, ನಾಗರಾ ಗೌರಿ, ವಸಂತ ಲದ್ವಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.