ಬುಧವಾರ, ಸೆಪ್ಟೆಂಬರ್ 22, 2021
21 °C
ಸಂವಾದಲ್ಲಿ ಉದ್ಯಮಿಗಳಿಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸಲಹೆ

ಎಲೆಕ್ಟ್ರಾನಿಕ್ ಉತ್ಪನ್ನ ತಯಾರಿಕೆಗೆ ಒತ್ತು ನೀಡಿ: ರಾಜೀವ್ ಚಂದ್ರಶೇಖರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕೆಯುತ್ತ ಹುಬ್ಬಳ್ಳಿ–ಧಾರವಾಡದ ಉದ್ಯಮಿಗಳು ಗಮನ ಹರಿಸಬೇಕು. ಲ್ಯಾಪ್‌ಟಾಪ್, ಕಂಪ್ಯೂಟರ್, ಮೊಬೈಲ್ ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ ಉಪಕರಣಗಳ ಬಿಡಿ ಭಾಗಗಳನ್ನು ತಯಾರಿಸುವ ಕಂಪನಿಗಳು ಇಲ್ಲಿಗೆ ಬಂದರೆ, ಈ ಭಾಗದಲ್ಲಿ ಮಹತ್ತರ ಬದಲಾವಣೆಯಾಗಲಿದೆ’ ಎಂದು ಕೇಂದ್ರ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಕೌಶಲಾಭಿವೃದ್ದಿ ಹಾಗೂ ಉದ್ದಮಶೀಲತೆ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಸಲಹೆ ನೀಡಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು ಭಾನುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘2014ರಲ್ಲಿ ₹1.17 ಲಕ್ಷ ಕೋಟಿ ಇದ್ದ ಈ ಉದ್ಯಮದ ವಹಿವಾಟು, 2020ರಲ್ಲಿ ₹5.33 ಲಕ್ಷ ಕೋಟಿಗೆ ಏರಿಕೆಯಾಗಿದೆ. ದೇಶದಲ್ಲಿ ದೆಹಲಿಯ ಗುರುಗ್ರಾಮ, ಪುಣೆ, ಚೆನ್ನೈ ಹಾಗೂ ಕೋಲಾರದಲ್ಲಿ ಎಲೆಕ್ಟ್ರಾನಿಕ್‌ ಉಪಕರಣಗಳ ತಯಾರಿಕೆ ಕಂಪನಿಗಳು ನೆಲೆಸಿವೆ’ ಎಂದರು.

‘ಅಗತ್ಯ ಮೂಲಸೌಕರ್ಯ ಹೊಂದಿರುವ ಹುಬ್ಬಳ್ಳಿ ಮತ್ತು ಧಾರವಾಡ, ಎಲೆಕ್ಟ್ರಾನಿಕ್ಸ್ ಉತ್ಪನ್ನ ತಯಾರಿಕೆಯತ್ತ ಗಮನ ಹರಿಸಿದರೆ ದೇಶದ ಐದನೇ ನಗರಗಳಾಗಲಿವೆ. ಇಲ್ಲಿಗೆ ಬೇಕಾದ ವಿಶ್ವದರ್ಜೆಯ ಅಂತರ್ಜಾಲ ಸೇವೆ ಒದಗಿಸಲು ಬದ್ಧ. ತರಬೇತಿ ಮತ್ತು ಕೌಶಲ ತಂತ್ರಜ್ಞಾನ ಕೇಂದ್ರವನ್ನು ಇಲ್ಲಿ ಸ್ಥಾಪನೆಗೆ ಒತ್ತು ನೀಡಲಾಗುವುದು. ಅಂಗವಿಕಲರಿಗೂ ಕೌಶಲ ತರಬೇತಿ ನೀಡುವ ಕುರಿತು ಚಿಂತನೆ ನಡೆಸಲಾಗಿದೆ’ ಎಂದು ತಿಳಿಸಿದರು.

‘ಕೋವಿಡ್ ನಂತರ ಐಟಿ–ಬಿಟಿ ಕಂಪನಿಗಳ ಕಾರ್ಯಶೈಲಿಯಲ್ಲಿ ಬದಲಾಗಿದೆ. ದೊಡ್ಡ ದೊಡ್ಡ ಕಟ್ಟಡಗಳ ಐಟಿ ಪಾರ್ಕ್‌ಗಳ ಬದಲಿಗೆ, ವರ್ಕ್ ಫ್ರಂ ಹೋಂ (ಮನೆಯಲ್ಲೇ ಕೆಲಸ ಮಾಡುವುದು) ಎಂಬ ರಿಮೋಟ್ ವರ್ಕಿಂಗ್ ಶೈಲಿಗೆ ಉದ್ಯಮ ಹೊರಳಿದೆ. ಮುಂದೆ ಇದು ಯಾವ ರೀತಿಯ ಬದಲಾವಣೆಗಳಿಗೆ ತೆರೆದುಕೊಳ್ಳುವುದೋ ಕಾದು ನೋಡಬೇಕಿದೆ’ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಮಾತನಾಡಿ, ‘ಅಭಿವೃದ್ದಿ ವಿಷಯದಲ್ಲಿ ಅವಳಿನಗರದಲ್ಲಿ ಈಗಾಗಲೇ ಮಹತ್ತರ ಬದಲಾವಣೆಗಳಾಗಿವೆ. ಆದರೂ,  ಮತ್ತಷ್ಟು ಕೈಗಾರಿಕೆಗಳು ಇಲ್ಲಿಗೆ ಬರಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಕೌಶಲಾಭಿವೃದ್ದಿ ಕೇಂದ್ರ ಸ್ಥಾಪಿಸಿ: ಶಾಸಕ ಜಗದೀಶ ಶೆಟ್ಟರ್, ‘ರಾಜೀವ್ ಅವರು ಐಟಿ- ಬಿಟಿ ಕ್ಷೇತ್ರಕ್ಕೆ ಸಂಬಂಧಿಸಿದ ಕೌಶಲಾಭಿವೃದ್ಧಿ ಕೇಂದ್ರವನ್ನು ಇಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರದಿಂದ ಅಗತ್ಯ ನೆರವು ಒದಗಿಸಲಾಗುವುದು’ ಎಂದರು. 

ರಾಜೀವ್ ಚಂದ್ರಶೇಖರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಅವರನ್ನು ಸನ್ಮಾನಿಸಲಾಯಿತು. ‘ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್’ ಕುರಿತು ಉದ್ಯಮಿ ವಿವೇಕ ಪವಾರ ಮಾತನಾಡಿದರು.‌ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ, ರಾಜೀವ್ ಅವರಿಗೆ ಕೆಸಿಸಿಐನಿಂದ ಮನವಿ ಸಲ್ಲಿಸಲಾಯಿತು. ಶಾಸಕ ಅರವಿಂದ ಬೆಲ್ಲದ, ಸಂಸ್ಥೆಯ ಅಧ್ಯಕ್ಷ ಮಹೇಂದ್ರ ಲದ್ದಡ, ಶಂಕರಣ್ಣ ಮುನವಳ್ಳಿ, ಉಮೇಶ ಗಡ್ಡದ ಹಾಗೂ ಪದಾಧಿಕಾರಿಗಳು ಇದ್ದರು.

ಮಠಕ್ಕೆ ಭೇಟಿ: ಮೂರುಸಾವಿರ ಮಠಕ್ಕೆ ಭೇಟಿ ನೀಡಿ ಗುರುಸಿದ್ದೇಶ್ವರರ ಗದ್ದುಗೆಯ ದರ್ಶನ ಪಡೆದ ರಾಜೀವ್ ಚಂದ್ರಶೇಖರ್, ಬಳಿಕ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಬಿಜೆಪಿ ಮುಖಂಡರಾದ ಮಹೇಶ ಟೆಂಗಿನಕಾಯಿ, ಅಶೋಕ ಕಾಟವೆ, ಲಿಂಗರಾಜ ಪಾಟೀಲ, ಬಸವರಾಜ ಕುಂದಗೋಳಮಠ ಮುಂತಾದವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು