ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಧಾನ್ಯಗಳ ಮೇಲಿನ ತೆರಿಗೆ ವಿರೋಧಿಸಿ ಎಪಿಎಂಸಿ ಬಂದ್‌: ಮಿಶ್ರ ಪ್ರತಿಕ್ರಿಯೆ

ಆಹಾರ ಧಾನ್ಯ ವ್ಯಾಪಾರ ಬಂದ್‌: ಹಣ್ಣು– ತರಕಾರಿ ವ್ಯಾಪಾರ ಅಬಾಧಿತ
Last Updated 15 ಜುಲೈ 2022, 11:27 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆಹಾರ ಧಾನ್ಯಗಳ ಮೇಲಿನ ತೆರಿಗೆ ವಿರೋಧಿಸಿ ಎಪಿಎಂಸಿ ವ್ಯಾಪಾರಸ್ಥರ ಸಂಘ ಮತ್ತು ವರ್ತಕರ ಸಂಘ ಕರೆ ನೀಡಿದ್ದ ಎರಡು ದಿನದ ಬಂದ್‌ಗೆ ಹುಬ್ಬಳ್ಳಿ ಎಪಿಎಂಸಿ ವ್ಯಾಪಾರಸ್ಥರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಕಾಳು, ಕಡಿ ಮಾರುಕಟ್ಟೆ ವ್ಯಾಪಾರಸ್ಥರು ಮಾತ್ರ ಅಂಗಡಿಗಳನ್ನು ತೆರೆಯದೆ ಬಂದ್‌ಗೆ ಬೆಂಬಲಿಸಿದ್ದರು. ಆಲೂಗಡ್ಡೆ, ಕಿರಾಣಿ, ಮೆಣಸು ಇನ್ನಿತರ ಅಂಗಡಿ ವ್ಯಾಪಾರಸ್ಥರು ಬಾಗಿಲಗಳನ್ನು ಅರ್ಧಕ್ಕೆ ತೆರದು ವ್ಯಾಪಾರ ವಹಿವಾಟು ನಡೆಸಿದರು. ಉಳಿದಂತೆ ಎಪಿಎಂಸಿ ಆವರಣದಲ್ಲಿನ ಪ್ರತಿಯೊಂದು ಅಂಗಡಿಗಳ ವ್ಯಾಪಾರಸ್ಥರು ಮುಕ್ತವಾಗಿ ವ್ಯಾಪಾರ ನಡೆಸಿದರು.

ಉಳ್ಳಾಗಡ್ಡೆ ಮತ್ತು ಹಣ್ಣು–ಹಂಪಲ ವರ್ತಕರ ಸಂಘದವರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದರೂ, ಬೆಳಿಗ್ಗೆಯಿಂದಲೇ ವ್ಯಾಪಾರ ವಹಿವಾಟು ಆರಂಭಿಸಿದ್ದರು. ಉಳ್ಳಾಗಡ್ಡೆ ಮಾರುಕಟ್ಟೆ ಪ್ರಾಂಗಣದಲ್ಲಿ ಹರಾಜು ಪ್ರಕ್ರಿಯೆ ಜೋರಾಗಿಯೇ ನಡೆಯಿತು. ಶುಕ್ರವಾರ ಇಪ್ಪತ್ತಕ್ಕೂ ಹೆಚ್ಚು ಲಾರಿ ಉಳ್ಳಾಗಡ್ಡೆ ಪುಣೆಯಿಂದ ಎಪಿಎಂಸಿಗೆ ಬಂದಿತು. ಹಣ್ಣು ಮತ್ತು ಉಳ್ಳಾಗಡ್ಡೆ ಬೇಗ ಹಾಳಾಗುತ್ತದೆ ಎಂದು ಅನಿವಾರ್ಯವಾಗಿ ಅವುಗಳನ್ನು ವ್ಯಾಪಾರ ಮಾಡಿದ್ದೇವೆ ಎಂದು ವರ್ತಕರು ಹೇಳಿದರು.

‘ಆಹಾರ ಧಾನ್ಯಗಳ ಮೇಲೆ ಶೇ 5ರಷ್ಟು ತೆರಿಗೆ ವಿಧಿಸುವ ಪ್ರಸ್ತಾವ ಕೇಂದ್ರ ಮಾಡಿದ್ದು, ಆ ಕುರಿತು ಜುಲೈ 18ರಂದು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ. ಈ ನಿಟ್ಟಿನಲ್ಲಿ ವರ್ತಕರ ಒಮ್ಮತದ ಅಭಿಪ್ರಾಯದ ಮೇರೆಗೆ ಎಪಿಎಂಸಿಯಲ್ಲಿನ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಎರಡು ದಿನ ಬಂದ್‌ ಹಮ್ಮಿಕೊಂಡಿದ್ದೇವೆ. ರಾಜ್ಯದ ಎಲ್ಲ ವರ್ತಕರ ಸಂಘದ ಪದಾಧಿಕಾರಿಗಳು ಜುಲೈ 16 ಮತ್ತು 17ರಂದು ನಗರದ ಡೆನಿಸನ್ಸ್‌ ಹೋಟೆಲ್‌ನಲ್ಲಿ ಸಭೆ ನಡೆಸಲಿದ್ದು, ಅಲ್ಲಿ ಕೂಲಂಕಷವಾಗಿ ಚರ್ಚೆ ನಡೆಯಲಿದೆ. ಕೇಂದ್ರ ಸರ್ಕಾರ ತೆರಿಗೆ ವಿಧಿಸುವ ನಿರ್ಧಾರ ತೆಗೆದುಕೊಂಡಿದ್ದೇ ಆದರೆ, ಎಲ್ಲ ವರ್ತಕರ ಅಭಿಪ್ರಾಯದ ಮೇಲೆ ಮುಂದಿನ ಹೋರಾಟದ ರೂಪರೇಷೆ ಸಿದ್ಧಪಡಿಸಲಾಗುವುದು’ ಎಂದು ಎಪಿಎಂಸಿ ವ್ಯಾಪಾರಸ್ಥರ ಮುಖಂಡ ಬಸವರಾಜ ಎಕಲಾಸಪುರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT