ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭದಾಯಕ ಕೃಷಿಗೆ ಆಧುನಿಕ ವಿಧಾನವೇ ಗೊಬ್ಬರ!

Last Updated 11 ಜೂನ್ 2019, 14:46 IST
ಅಕ್ಷರ ಗಾತ್ರ

‘ಆಧುನಿಕ ಕೃಷಿ ಪದ್ಧತಿ, ಯಂತ್ರೋಪಕರಣಗಳ ಬಳಕೆ, ಕೃಷಿಹೊಂಡಗಳ ನಿರ್ಮಾಣ, ಅತಿಯಾದ ರಾಸಾಯನಿಕ ಗೊಬ್ಬರಗಳಿಗೆ ಕಡಿವಾಣ, ಅರಣ್ಯ ಕೃಷಿ, ಮಣ್ಣಿನ ಹದವರಿತು ಮಿಶ್ರಬೆಳೆಯೊಂದಿಗೆ ಕೃಷಿ ಮಾಡಿದಲ್ಲಿ ರೈತ ಹೆಚ್ಚಿನ ಇಳುವರಿಯೊಂದಿಗೆ ಲಾಭದತ್ತ ಮುನ್ನಡೆಯಬಹುದು’ ಎನ್ನುತ್ತಾರೆ ಧಾರವಾಡ ಜಿಲ್ಲೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್‌.ರುದ್ರೇಶಪ್ಪ.

ಹುಬ್ಬಳ್ಳಿ ‘ಪ್ರಜಾವಾಣಿ’ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಫೊನ್‌–ಇನ್‌’ ಕಾರ್ಯಕ್ರಮದಲ್ಲಿ ಕೇಳಿಬಂದ ಕೃಷಿಯಲ್ಲಿನ ಹತ್ತಾರು ಸಮಸ್ಯೆಗಳಿಗೆ ಉತ್ತರಿಸಿದ ಅವರು, ಕೃಷಿ ಇಲಾಖೆಯಿಂದ ಇರುವ ಸೌಲಭ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಅಗತ್ಯವುಳ್ಳ ಕೃಷಿಕರಿಗೆ ಕೆಲವೊಂದಿಷ್ಟು ಸಲಹೆಗಳನ್ನು ನೀಡಿದರು.

‘ವಿಶೇಷವಾಗಿ ಆಳವಾದ ಕಪ್ಪುಮಣ್ಣು ಹೊಂದಿರುವ ಧಾರವಾಡ ಜಿಲ್ಲೆಯ ಕುಂದಗೋಳ, ನವಲಗುಂದ ಭಾಗದ ರೈತರು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡದೇ ನೇರವಾಗಿ ಹಿಂಗಾರಿನಲ್ಲಿಯೇ ಕೃಷಿಗೆ ಇಳಿದಲ್ಲಿ ಇನ್ನಷ್ಟು ಹೆಚ್ಚಿನ ಇಳುವರಿ ಪಡೆಯಬಹುದು’ ಎನ್ನುವ ಅವರು, ‘ಮಣ್ಣಿನ ಗುಣಮಟ್ಟ ಅಭಿವೃದ್ಧಿಪಡಿಸುವ ಬಗ್ಗೆ ಈ ಭಾಗದ ರೈತರು ಇನ್ನೂ ಹೆಚ್ಚಿನ ಗಮನ ಹರಿಸಲಿ’ ಎನ್ನುವ ಕಿವಿಮಾತು ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ಎಲ್ಲೆಡೆ ಅಂತರ್ಜಲದ ಮಟ್ಟದ ಕುಸಿದಿದೆ,ಬೋರ್‌ವೆಲ್‌ಗಳು ಬತ್ತಿವೆ. ಅರಣ್ಯನಾಶದಿಂದ ಮಳೆಯ ಪ್ರಮಾಣ ಕಡಿಮೆಯಾಗಿದೆ. ಬೆಳೆಗಳಿಗೆ ನೀರು ಸಾಲುತ್ತಿಲ್ಲ. ಹೀಗಾಗಿ ರೈತರು ಸಾಂಪ್ರದಾಯಿಕ ವಿಧಾನಗಳ ಬದಲು ಆಧುನಿಕ ಕೃಷಿ ಪದ್ಧತಿ ಅನುಸರಿಸಬೇಕು. ಕೃಷಿ ಇಲಾಖೆ ಸಹಾಯಧನದೊಂದಿಗೆ ತಮ್ಮ ಜಮೀನುಗಳಲ್ಲಿ ಕೃಷಿಹೊಂಡಗಳನ್ನು ನಿರ್ಮಾಣ ಮಾಡಿಕೊಂಡು, ಹೊಲದ ಬದುವುಗಳಲ್ಲಿ ಸಸಿಗಳನ್ನು ಬೆಳೆಸುತ್ತ, ಮಿಶ್ರಬೆಳೆಗಳನ್ನು ಬೆಳೆಯಲು ಮುಂದಾದಲ್ಲಿ ತಕ್ಕಮಟ್ಟಿಗೆ ನಷ್ಟವನ್ನು ತಪ್ಪಿಸಿಕೊಳ್ಳಬಹುದು ಎನ್ನುತ್ತಾರೆ ರುದ್ರೇಶಪ್ಪ. ಕೃಷಿ ಅಧಿಕಾರಿ ಸಿ.ಐ.ಹೂಗಾರ್‌ ಇದ್ದರು.

‘ಫೋನ್‌–ಇನ್‌’ ಕಾರ್ಯಕ್ರಮದಲ್ಲಿ ಕೇಳಿಬಂದ ಪ್ರಶ್ನೋತ್ತರಗಳ ವಿವರ ಇಲ್ಲಿದೆ:

ವೀರೇಶ ಸೊಬರದಮಠ, ನವಲಗುಂದ: ಕೃಷಿಹೊಂಡ ರೈತರಿಗೆ ಪ್ರಯೋಜನಕಾರಿ. ಆದರೆ ಅದರ ಪಕ್ಕದಲ್ಲಿ ಸಸಿಗಳನ್ನು ನೆಟ್ಟುಬೆಳೆಸಬೇಕು ಎನ್ನುವುದನ್ನು ನೀವ್ಯಾಕೆ ಕಡ್ಡಾಯ ಮಾಡುತ್ತಿಲ್ಲ?

ಕೃಷಿಹೊಂಡದ ಬದಿಯಲ್ಲಿ 5–10 ಗಿಡಗಳನ್ನು ನೆಡಬೇಕು ಎನ್ನುವ ಯೋಜನೆ ಕೃಷಿ ಇಲಾಖೆಯದ್ದು. ಅದಕ್ಕಾಗಿ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿದೆ. ಆದರೆ ಜಾಗ ಸಾಲುತ್ತಿಲ್ಲ ಎನ್ನುವುದು ಅನೇಕ ಕೃಷಿಕರ ಅಳಲು.

ಹನುಮಂತಪ್ಪ ಕಂಬಳಿ, ಅಣ್ಣಿಗೇರಿ, ಮಹೇಶ ನವಲಗುಂದ: ಫಸಲ್‌ ಬಿಮಾ ಯೋಜನೆಯಡಿ ನಮಗಿನ್ನೂ ಬೆಳೆ ವಿಮೆ ಸಿಕ್ಕಿಲ್ಲ. ಯಾವಾಗ ಬರ್ತೈತ್ರೀ?

2018–19ನೇ ಸಾಲಿನ ಫಸಲ್ ಬಿಮಾ ಯೋಜನೆ ಸರ್ಕಾರದ ಮಟ್ಟದಲ್ಲಿ ಇನ್ನೂ ಇತ್ಯರ್ಥವಾಗಿಲ್ಲ. ಬೆಳೆನಷ್ಟದ ಸಮೀಕ್ಷೆ ಮಾಡಲಾಗಿದೆ. ‘ಸಂರಕ್ಷಣಾ ತಂತ್ರಾಂಶ’ ರದ್ದಾಗಿದೆ. ಇನ್ನು 15 ದಿನಗಳಲ್ಲಿ ಸರ್ಕಾರ ಹಣ ಬಿಡುಗಡೆ ಆಗಬಹುದು.

ವೆಂಕನಗೌಡ ಹಿರೇಬೂದಿಹಾಳ, ಕುಂದಗೋಳ: ಬಿತ್ತನೆಗಾಗಿ ಶೇಂಗಾ ಎಲ್ಲಿ ಸಿಗ್ತೈತ್ರೀ?

ಹುಬ್ಬಳ್ಳಿ, ಕುಂದಗೋಳದೊಂದಿಗೆ ಹೆಚ್ಚುವರಿಯಾಗಿ ಇನ್ನೂ ಎರಡು ಕೇಂದ್ರಗಳನ್ನು ತೆರೆಯಲಾಗಿದೆ. ಸಂಶಿ ಸೊಸೈಟಿ ಮತ್ತು ಜಿಲ್ಲಾ ಪಂಚಾಯ್ತಿಯ ಎಣ್ಣೆ ಬೆಳೆಗಾರರ ಸಂಘಕ್ಕೆ ಪೂರೈಕೆ ಮಾಡಲಾಗಿದೆ.

ರಾಹುಲ್‌ ಕೋಗಿಲಗೆರೆ, ಧಾರವಾಡ: ಮುಂಗಾರು ಬಿತ್ತನೆ ಬೀಜವನ್ನು ಮೇ ತಿಂಗಳ ಕೊನೆಯ ಬದಲು ಆರಂಭದಲ್ಲಿ ವಿತರಿಸಲು ಸಾಧ್ಯವೆ? ಬೆಳೆ ವಿಮೆ ಸಮರ್ಪಕ ಹಂಚಿಕೆ ಏಕೆ ಆಗುತ್ತಿಲ್ಲ?

ಈ ಬಗ್ಗೆ ಸಾಕಷ್ಟು ಚರ್ಚೆ ನಡೆಸಲಾಗಿದೆ. ಏಕೆಂದರೆ ಭತ್ತವನ್ನು ತಡವಾಗಿ ಕೊಟ್ಟರೂ ನಡೆಯಲಿದೆ. ಆದರೆ ಹೆಸರು, ದ್ವಿದಳ ಧಾನ್ಯಗಳನ್ನು ಜೂನ್‌ ಆರಂಭವಾಗುವುದರೊಳಗೆ ಬಿತ್ತಬೇಕು. ಮಳೆ ತಡವಾಯಿತೆಂದು ತಡವಾಗಿ ಬಿತ್ತಿದರೆ ಇಳುವರಿ ಸಿಗದೆ ನಷ್ಟವಾಗಲಿದೆ.
ಮೇ ತಿಂಗಳ ಆರಂಭದಲ್ಲಿ ಬೀಜ ವಿತರಣೆ ಕಷ್ಟವಾಗಬಹುದು. ಆದ್ದರಿಂದ ಮೇ 15ರ ಹೊತ್ತಿಗೆ ಬೀಜ ಕೊಡಲು ವ್ಯವಸ್ಥೆ ಮಾಡೋಣ. ಬೆಳೆ ವಿಮೆ ಹಂಚಿಕೆಯಲ್ಲಿ ಸಾಕಷ್ಟು ಗೊಂದಲಗಳಿರುವುದು ನಿಜ. ಈ ಬಾರಿ ಸರಿಪಡಿಸಲಾಗುವುದು.

ಸುಭಾಸ ಬೂದಿಹಾಳ, ಕೋಳಿವಾಡ: ಬೆಳೆ ನಷ್ಟಕ್ಕೆ ಸೂಕ್ತವಾಗಿ ಬೆಳೆ ವಿಮೆ ಸಿಗುತ್ತಿಲ್ಲ. ಕೆಲವರಿಗೆ ಅಲ್ಪ ಪ್ರಮಾಣದಲ್ಲಿ ಸಿಕ್ಕರೆ, ಹೆಚ್ಚಿನವರಿಗೆ ಸಿಗುತ್ತಲೇ ಇಲ್ಲ. ಏಕೆ ಹೀಗೆ?

ಈ ಬಗ್ಗೆ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಅವರೊಂದಿಗೆ ಚರ್ಚಿಸಲಾಗಿದೆ. ಗೊಂದಲಗಳಿಗೆ ಕೆಲವು ತಾಂತ್ರಿಕ ಸಮಸ್ಯೆಗಳು ಕಾರಣಗಳಾಗಿವೆ. ವಿಮೆ ಪರಿಹಾರಕ್ಕೆ ನೀಡಬೇಕಾದ ಅಗತ್ಯ ದಾಖಲೆಗಳನ್ನು ಹೆಚ್ಚಿನ ರೈತರು ಒದಗಿಸುತ್ತಿಲ್ಲ. ಅದರಿಂದ ಗೊಂದಲಗಳಾಗುತ್ತಿವೆ. ಸ್ಥಳೀಯ ಗ್ರಾಮ ಪಂಚಾಯ್ತಿ ಹಾಗೂ ಅಟಲ್‌ ಜನಸ್ನೇಹಿ ಕೇಂದ್ರದಲ್ಲಿ ದಾಖಲೆಗಳನ್ನು ಸಲ್ಲಿಸಬಹುದು. ಗೊಂದಲಗಳನ್ನು ಸರಿಪಡಿಸಿ 15 ದಿನಗಳಲ್ಲಿ ವಿಮೆ ಕಂತನ್ನು ಸರಿಯಾಗಿ ನೀಡಲಾಗುವುದು.

ಬಸವರಾಜ ಯೋಗಪ್ಪನವರ, ಗುಡೇನಕಟ್ಟಿ, ಕುಂದಗೋಳ: ಕೃಷಿ ಹೊಂಡದ ಪೇಮೆಂಟ್‌ ಬರದಿದ್ದರಿಂದ ಸಮಸ್ಯೆ ಆಗಿದೆ. ಯಾವಾಗ ಪೇಮೆಂಟ್‌ ಆಗಬಹುದು?

ಹೌದು ಪೆಂಡಿಂಗ್‌ ಆಗಿದೆ. 1,300 ಕೃಷಿ ಹೊಂಡದ ಪೇಮೆಂಟ್‌ ಮಾಡೋದು ಬಾಕಿಯಿವೆ. ಅನುದಾನ ಬಂದ ಕೂಡಲೇ ಕೊಡೋಣ.

ಗಿರೀಶ ಕಮಡೊಳ್ಳಿ, ಕುಂದಗೋಳ ತಾಲ್ಲೂಕು: ಹೆಸರು ಬಿತ್ತಬೇಕೆಂದುಕೊಂಡಿದ್ದೇವೆ, ಬಿತ್ತಬಹುದೆ?

ಬೇಡ; ಎರಡು ದಿನಗಳಲ್ಲಾದರೆ ಬಿತ್ತಬಹುದು. ಅದರ ಮೇಲೆ ಹೆಸರು ಬಿತ್ತನೆ ಮಾಡದಿರಿ. ಆದರೆ ಮಳೆ ಬೀಳದ ಕಾರಣ ಬಿತ್ತನೆ ತಡಮಾಡಿದರೆ ಇಳುವರಿ ಕಡಿಮೆಯಾಗಲಿದೆ. ಜುಲೈ 15ರವರೆಗೂ ಶೇಂಗಾ ಬಿತ್ತಬಹುದು. ಶೇಂಗಾವನ್ನು ಏರು ಮಡಿ ಮಾಡಿ, ಜಿಪ್ಸಂ ಕೊಡಿ. ಇದರಿಂದ ಇಳುವರಿ ಹೆಚ್ಚಲಿದೆ. ಶೇಂಗಾ ಜೊತೆ ಉದ್ದು, ವಟಾಣಿಯನ್ನು ಮಿಶ್ರಬೆಳೆಯಾಗಿಯೂ ಬೆಳೆಸಬಹುದು.

ಬಸುರೆಡ್ಡಿ ಇನಾಮತಿ ಬಲ್ಲರವಾಡ, ಅಣ್ಣಿಗೇರಿ: ಕೃಷಿ ಕೂಲಿ ಕಾರ್ಮಿಕರ ಕೊರತೆಯಿದೆ. ಯಂತ್ರಗಳ ಮೂಲಕ ಕಟಾವು
ಮಾಡುವಂತೆ ಎತ್ತರಕ್ಕೆ ಬೆಳೆಯುವ ಬೀಜಗಳನ್ನು ನಮ್ಮ ರೈತ ಸಂಪರ್ಕ ಕೇಂದ್ರದಲ್ಲಿ ವಿತರಿಸಲು ಸಾಧ್ಯವೆ? ಕಪ್ಪು ಮಣ್ಣಿನಲ್ಲಿ ರಕ್ತಚಂದನ ಬೆಳೆಯಬಹುದೆ?

ಯಂತ್ರಗಳ ಮೂಲಕ ಕಟಾವು ಮಾಡಬೇಕೆಂದರೆ ಗಿಡಗಳು ಎತ್ತರಕ್ಕೆ ಬೆಳೆಯಬೇಕು. ಅಂಥ ಬೀಜಗಳನ್ನು ಉತ್ಪಾದಿಸಲು ಕೃಷಿ ವಿಶ್ವವಿದ್ಯಾಲಯದೊಂದಿಗೆ ಮಾತನಾಡಲಾಗುವುದು. ಕಪ್ಪುಮಣ್ಣಿನಲ್ಲಿ ರಕ್ತ ಚಂದನ ಬೆಳೆಯಬಹುದು. ರಕ್ತ ಚಂದನವನ್ನು ಮೈಕ್ರೋಚಿಪ್‌ನಂತಹ ರಕ್ಷಣಾಕ್ರಮಗಳನ್ನು ಅನುಸರಿಸಿ ಬೆಳೆಯಬೇಕಾಗುತ್ತದೆ. ಆದ್ದರಿಂದ ಬೆಳೆಯುವ ಮೊದಲು ಅರಣ್ಯ ಇಲಾಖೆ ವತಿಯಿಂದ ಮಾಹಿತಿ ಪಡೆದು ಬೆಳೆಯುವುದು ಒಳ್ಳೆಯದು.

ರಮೇಶರೆಡ್ಡಿ, ನವಲಗುಂದ: ಕೃಷಿ ಹೊಂಡ ನಿರ್ಮಾಣಮಾಡಬೇಕಿದೆ, ಸಲಹೆ ನೀಡಿ.

ನಿಮ್ಮ ತಾಲ್ಲೂಕಿನಲ್ಲಿ ಈ ವರ್ಷದ ಗುರಿ ಮುಗಿದಿದೆ. ಬರುವ ಡಿಸೆಂಬರ್‌ನಲ್ಲಿ ಅರ್ಜಿ ಸಲ್ಲಿಸಿ.

ರಾಜಶೇಖರ ಹಿರೇಮಠ, ಅಮರಗೋಳ: ಐದು ಎಕರೆ ಭೂಮಿ ಇದೆ. ಸೋಯಾಬೀನ್ಬಿತ್ತನೆ ಬೀಜ ಸಮರ್ಪಕವಾಗಿ ಪೂರೈಸಿಲ್ಲ. ಕೇವಲನಾಲ್ಕು ಪ್ಯಾಕೆಟ್‌ ನೀಡಲಾಗಿದೆಯಲ್ಲ?

ವೈವಿಧ್ಯಮಯ ಬೆಳೆ ಬೆಳೆಯಲು ಪ್ರೋತ್ಸಾಹ ನೀಡಬೇಕು ಎಂಬುದು ರಾಜ್ಯ ಸರ್ಕಾರದ ನಿರ್ದೇಶನ. ಲಭ್ಯ ಇರುವಬಿತ್ತನೆ ಬೀಜದಲ್ಲಿಯೇ ಎಲ್ಲ ರೈತರಿಗೂ ಪೂರೈಕೆ ಮಾಡಬೇಕಾಗಿದೆ. ಹೀಗಾಗಿಯೇನಿಮಗೆ ಸೋಯಾಬೀನ್ಕಡಿಮೆ ಸಿಕ್ಕಿರಬಹುದು. ನೀವು ಒಂದೇ ಬೆಳೆಗೆ ಅಂಟಿಕೊಳ್ಳದೇ,ಬೇರೆ ಬೆಳೆಯತ್ತಲೂ ಚಿತ್ತ ಹರಿಸಿ. ಒಂದು ಬೆಳೆ ನಷ್ಟವಾದರೆ ಇನ್ನೊಂದು ಬೆಳೆಯಿಂದ ಲಾಭ ಗಳಿಸಬಹುದು. ಮಣ್ಣಿನ ಫಲವತ್ತತೆಯೂ ಉಳಿಯುತ್ತದೆ.

ಮುರುಳಿ, ಶಿವಮೊಗ್ಗ: ಜೋಗದ ಬಳಿ ಜಮೀನಿದೆ. ಒಂದು ಎಕರೆಯಲ್ಲಿ ಶತಾವರಿ, ಅಲೊವೆರಾ, ದೊಣ್ಣ ಮೆಣಸಿನಕಾಯಿ ಬೆಳೆಯಲಾಗಿದೆ. 6 ಎಕರೆಯಲ್ಲಿ ನುಗ್ಗೇಕಾಯಿ ಬೆಳೆದಿದ್ದೇನೆ. ಮುಂದೆ ಔಷಧೀಯ ಬೆಳೆ ಬೆಳೆಯಬೇಕೆಂಬ ಮನಸ್ಸಿದೆ. ಉಪಕ್ರಮವೇನು, ಸರ್ಕಾರದಿಂದ ಸೌಲಭ್ಯಗಳೇನು?

ಔಷಧೀಯ ಬೆಳೆಗಳ ಬಗ್ಗೆ ಕೃಷಿ ಮತ್ತು ತೋಟಗಾರಿಕಾ ವಿ.ವಿ.ಯಿಂದ ಮಾಹಿತಿ ಪಡೆಯಿರಿ. ನಿಮ್ಮ ಬೆಳೆಗಳಿಗೆ ಸಾವಯವ ಕೃಷಿಕರ ಸಂಘದಿಂದ ಪ್ರಮಾಣ ಪತ್ರ ಪಡೆಯಬಹುದಷ್ಟೇ. ತೋಟಗಾರಿಕಾ ಬೆಳೆಗಳಿಗೆ ಇನ್‌ಫುಟ್‌ ಸಬ್ಸಿಡಿ ಸಿಗಲಿದೆ. ಜತೆಗೆ ಹನಿ ನೀರಾವರಿ, ಎರೆಹುಳು ಗೊಬ್ಬರಕ್ಕೂ ಸಬ್ಸಿಡಿ ಕೊಡಲಾಗುವುದು.

ಶಿವಾನಂದ, ಕೂಡಲಸಂಗಮ: 25 ಎಕರೆಯಲ್ಲಿ ಒಣ ಬೇಸಾಯವಿದೆ. ಜಮೀನಿನಲ್ಲಿ ಕೆರೆ ನಿರ್ಮಿಸುವ ಉದ್ದೇಶವಿದ್ದು, ಸಹಾಯಧನ ಸಿಗಲಿದೆಯೇ?

ಇಲಾಖೆಯಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಮಾತ್ರ ಸಬ್ಸಿಡಿ ಸಿಗುತ್ತದೆ. ಬೇರೆ ಬೇರೆ ಇಲಾಖೆಗಳ ನಿಧಿಗಳಡಿ (ಕೃಷಿ ಇಲಾಖೆ ಹೊರತುಪಡಿಸಿ) ಎಸ್ಸಿ/ಎಸ್ಟಿ ರೈತರ ಜತೆಗೂಡಿ ಸಮುದಾಯ ಕೆರೆ ನಿರ್ಮಿಸಬಹುದು.

ಪ್ರವೀಣ್‌, ಹಿರೇ ಅರಕುಣಿ, ಕುಂದಗೋಳ: 30 ಗುಂಟೆ ಜಮೀನಿದ್ದು, ಕೊಳವೆಬಾವಿ ಕೊರೆಸಲು ಸೌಲಭ್ಯವಿದೆಯಾ?

ಕೊಳವೆಬಾವಿ ಕೊರೆಸುವುದು ಇಲಾಖೆ ವ್ಯಾಪ್ತಿಗೆ ಬರಲ್ಲ. ಕೃಷಿ ಹೊಂಡ ನಿರ್ಮಿಸಿದರೆ ಮಾತ್ರ ಸಬ್ಸಿಡಿ ಕೊಡುತ್ತೇವೆ. 30 ಗಂಟೆಯಲ್ಲಿ 10 ಮೀಟರ್‌ ಕೃಷಿ ಹೊಂಡ ನಿರ್ಮಿಸಿ, ಸಣ್ಣ ಪುಟ್ಟ ಬೆಳೆ ಬೆಳೆಯಿರಿ.

ಶೇಖರಪ್ಪ ಶಿವಬಸಪ್ಪ ಅಮ್ಮಿನಬಾವಿ: ಈ ಬಾರಿ ಮುಂಗಾರು ಉತ್ತಮವಾಗಿರಲಿದೆಯೇ?

ಮಳೆ ಮಾಹಿತಿಗೆ ಭಾರತೀಯ ಹವಾಮಾನ ಇಲಾಖೆ, ಸ್ಕೈ ಮೇಟ್‌ ಇದೆ. ಈ ಬಾರಿ ಶೇ 20ರಷ್ಟು ಮಳೆ ಕಡಿಮೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಆದರೆ, ಮುಂಗಾರು ಉತ್ತಮವಾಗಿರುವ ಸೂಚನೆ ಈಗಾಗಲೇ ಸಿಕ್ಕಿದೆ. ಮುಂಗಾರು ಕೇರಳ ಪ್ರವೇಶಿಸಿದ್ದು, ನಮ್ಮಲ್ಲೂ ಉತ್ತಮ ಮಳೆಯಾಗಬಹುದು.

ವಿನ್ಸೆಂಟ್‌ ರೋಡ್ರಿಗಸ್‌, ಹುಬ್ಬಳ್ಳಿ: ಅಂತರ್ಜಲ ಸಂರಕ್ಷಣೆಗೆ ಇಲಾಖೆ ಕೈಗೊಂಡ ಕ್ರಮಗಳೇನು?

ಅಂತರ್ಜಲ ಸಂರಕ್ಷಣೆ ನಮ್ಮ ಇಲಾಖೆಯ ವಾಪ್ತಿಗೆ ಬರಲ್ಲ. ಆದರೂ ಸಮುದಾಯ, ಸಂಘಟನೆಗಳು ಹಾಗೂ ಸರ್ಕಾರ ಒಟ್ಟುಗೂಡಿ ಕೆಲಸ ಮಾಡುವ ಅನಿವಾರ್ಯವಿದೆ. ಪಂಚಾಯ್ತಿವಾರು ಅಂತರ್ಜಲ ಅಭಿವೃದ್ಧಿ ಕ್ರಿಯಾ ಯೋಜನೆ ರೂಪಿಸಬೇಕು. ಈ ಬಗ್ಗೆ ಜಾಗೃತಿ ಮೂಡಿಸುವುದು ಹೆಚ್ಚು ಅಗತ್ಯ. ಮಹಾರಾಷ್ಟ್ರ, ಗುಜರಾತ್‌ನಲ್ಲಿ ಆಗಿರುವ ಜಾಗೃತಿ ಇಲ್ಲೂ ಆಗಬೇಕಿದೆ.

ಮಲ್ಲಿಕಾರ್ಜುನ ಬೆಳಗಲ್‌, ಹುನಗುಂದ: ಕಾಲುವೆ ನೀರಿನಿಂದ ಜವಳು ಭೂಮಿ ಹೆಚ್ಚಾಗುತ್ತಿದೆ. ಸರ್ಕಾರದಿಂದ ಇದಕ್ಕೆ ಪರಿಹಾರ ಸಿಗಲಿದೆಯೇ?

ಕೆನಾಲ್‌ಗೆ ಸಿಮೆಂಟ್‌ ಲೈನಿಂಗ್ ಮಾಡಬೇಕೆಂಬ ಶಿಫಾರಸು ಇದೆ. ಆದರೆ, ಕೆಲ ಮಾರ್ಗೋಪಾಯಗಳ ವೆಚ್ಚ ಅಧಿಕವಾಗಿರುವುದರಿಂದ ಸದ್ಯ ಯಾವುದೇ ಕ್ರಮ ಕೈಗೊಂಡಿಲ್ಲ. ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸಿದರೆ, ಅನುದಾನ ಬಂದಾಗ ಒಟ್ಟು ರೈತರ ಜವಳು ಭೂಮಿಯನ್ನು ಅಂದಾಜು ಮಾಡಿ, ಪರಿಹಾರ ನೀಡಲಾಗುವುದು. ನೇರವಾಗಿ ನೀವೇ ದುರಸ್ತಿ ಕ್ರಮ ಕೈಗೊಂಡರೆ ಪರಿಹಾರ ಸಿಗದು.

ಫೋನ್‌ ಇನ್‌ ನಿರ್ವಹಣೆ: ಬಿ.ಎನ್‌. ಶ್ರೀಧರ, ಆರ್‌. ಮಂಜುನಾಥ್‌, ಬಸವರಾಜ ಹವಾಲ್ದಾರ, ರಾಮಕೃಷ್ಣ ಸಿದ್ರಪಾಲ, ಕೃಷ್ಣಿ ಶಿರೂರು, ರವಿ ಬಳೂಟಗಿ, ಚಂದ್ರಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT