ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಗೆ ಹೆಣ್ಮಕ್ಕಳ ಶಾಪ ತಟ್ಟದೇ ಬಿಡೋದಿಲ್ಲ: ಪುಷ್ಪಾ ಅಮರನಾಥ್‌

ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ
Last Updated 19 ಡಿಸೆಂಬರ್ 2018, 15:32 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಹೆಣ್ಣು ಮಕ್ಕಳು ಸಾಸಿವೆ ಡಬ್ಬಿಯಲ್ಲಿ ಕೂಡಿಟ್ಟಿದ್ದ ಹಣಕ್ಕೆ ಪ್ರಧಾನಿ ನರೇಂದ್ರ ಮೋದಿ ನೋಟು ರದ್ದತಿ ಮೂಲಕ ಮೂಲಕ ಸಂಚಕಾರ ತಂದರು. ಹೀಗಾಗಿ, ಮುಂದಿನ ಚುನಾವಣೆಯಲ್ಲಿ ಹೆಣ್ಮಕ್ಕಳ ಶಾಪ ತಟ್ಟದೇ ಬಿಡುವುದಿಲ್ಲ’ ಎಂದು ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಟೀಕಿಸಿದರು.

ಕಾರವಾರ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಬುಧವಾರ ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಅಲ್ಪಸ್ವಲ್ಪ ಕೂಡಿಟ್ಟ ಹಣವನ್ನು ಬದಲಾಯಿಸೋಣ ಎಂದು ಮಹಿಳೆಯರು ಬ್ಯಾಂಕ್‌ ಎದುರು ಹೋದರೆ ಮೈಲುಗಟ್ಟಲೇ ಸಾಲು ಕಂಡು ಹೌಹಾರಿದರು. ಹೀಗಾಗಿ, ಎಷ್ಟೋ ಜನರ ಹಣ ಹಾಗೆಯೇ ಉಳಿಯಿತು. ಸಾಲದೆಂಬಂತೆ ಅಡುಗೆ ಅನಿಲ ಸಿಲಿಂಡರ್‌ ಬೆಲೆ ಈಗ ₹ 1 ಸಾವಿರ ದಾಟಿದೆ. ಹೀಗಾದರೆ, ಬದುಕುವುದು ಹೇಗೆ? ವಾರಾಂತ್ಯದಲ್ಲಿ ಹೋಟೆಲುಗಳಿಗೆ ಹೋಗಿ ಕುಟುಂಬದೊಂದಿಗೆ ಊಟ ಮಾಡೋಣವೆಂದರೆ ಆಹಾರದ ಮೇಲೆ ದುಬಾರಿ ಜಿಎಸ್‌ಟಿ ತೆರಿಗೆ ಹೇರುವ ಮೂಲಕ ಇದ್ದ ಅಲ್ಪಸ್ವಲ್ಪ ಖುಷಿಯನ್ನೂ ಮೋದಿ ಕಸಿದರು. ಈಗ ಹೇಳಿ, ಅವರಿಗೆ ಮತ್ತೆ ವೋಟು ಹಾಕಬೇಕೇ’ ಎಂದು ಪ್ರಶ್ನಿಸಿದರು.

ಅಡುಗೆ ಅನಿಲ ಸಿಲಿಂಡರ್‌ ಬೆಲೆ ಹೆಚ್ಚಳ ಮಾಡಿದ್ದನ್ನು ಖಂಡಿಸಿ ಜನವರಿ ಮೊದಲ ವಾರದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಹಿಳಾ ಕಾಂಗ್ರೆಸ್‌ ವತಿಯಿಂದ ಸರಣಿ ಪ್ರತಿಭಟನೆಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.

ಕೆಲಸ ಮಾಡದ ಅಧ್ಯಕ್ಷರಿಗೆ ಕೊಕ್‌: ಪಕ್ಷಕ್ಕೆ ಮಹಿಳಾ ಕಾರ್ಯಕರ್ತರನ್ನು ಕರೆತರುವ ನಿಟ್ಟಿನಲ್ಲಿ ಕೆಲಸ ಮಾಡದ ಜಿಲ್ಲಾ ಘಟಕಗಳ ಅಧ್ಯಕ್ಷರನ್ನು ಬದಲಾಯಿಸಲು ನಿರ್ಧರಿಸಿದ್ದೇವೆ. ಇದಕ್ಕೆ ಯಾರೂ ಅನ್ಯಥಾ ಭಾವಿಸಬಾರದು. ಹೊಸಬರನ್ನು ಕರೆತಂದು ಪಕ್ಷವನ್ನು ಸಂಘಟಿಸಲು ಈ ಕಠಿಣ ಕ್ರಮ ಅನಿವಾರ್ಯ ಎಂದು ಸುಳಿವು ನೀಡಿದರು.

ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿಗಳಾದ ಸಪ್ನಾ ಹರೀಶ್‌, ಚಂದನಾ ರಾಣಿ, ರಾಜೇಶ್ವರಿ ಪಾಟೀಲ, ಉಪಾಧ್ಯಕ್ಷೆ ದೇವಕಿ ಯೋಗಾನಂದ, ಜಿಲ್ಲಾ ಘಟಕದ ಅಧ್ಯಕ್ಷೆ ಸುನಿತಾ ಹುರಕಡ್ಲಿ, ರೇಣುಕಾ ಕಳ್ಳಿಮನಿ, ಪಕ್ಷದ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಅನಿಲಕುಮಾರ್‌ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT