ಶನಿವಾರ, ಫೆಬ್ರವರಿ 27, 2021
30 °C

ಮಧ್ಯವರ್ತಿಗಳಿಲ್ಲದೆ ಹಣ ಬ್ಯಾಂಕ್‌ಗೆ ಜಮೆ: ಜೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೈಗಾರಿಕೆಗಳ ಅಭಿವೃದ್ಧಿಗೆ ಜಮೀನು ನೀಡಿದ ರೈತರಿಗೆ ಸರ್ಕಾರ ಪರಿಹಾರದ ಹಣ ನೀಡಿ ಯಾವುದೇ ಉಪಕಾರ ಮಾಡುತ್ತಿಲ್ಲ. ಬದಲಾಗಿ ರೈತರಿಗೆ ಸಲ್ಲಬೇಕಾದ ಹಣ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ರೈತರ ಬ್ಯಾಂಕುಗಳ ಖಾತೆಗೆ ಜಮೆ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. 

ಗಾಮನಗಟ್ಟಿ ಸರ್ಕಾರಿ ಶಾಲೆಯಲ್ಲಿ ಕೆ.ಐ.ಎ.ಡಿ.ಬಿ.ಗೆ ಜಮೀನು ನೀಡಿದ ರೈತರಿಗೆ ಭೂ ಪರಿಹಾರ ವಿತರಿಸಿ ಮಾತನಾಡಿದ ಅವರು ‘ಅಧಿಕಾರಿಗಳು ಜಮೀನು ನೀಡಿದ ರೈತರಿಂದ ಹಣ ಪಡೆದರೆ ಪಾಪ ತಟ್ಟುತ್ತೆ. ಕೆಲವು ಅಧಿಕಾರಿಗಳು ತಾಂತ್ರಿಕ ದೋಷಗಳನ್ನು ಮುಂದಿಟ್ಟು ಪರಿಹಾರ ನೀಡಲು ಶೇ 6ರಷ್ಟು ಹಣ ಕೇಳಿದ್ದಾರೆ ಎನ್ನುವುದು ಕಿವಿಗೆ ಬಿದ್ದಿದೆ. ಅಂಥ ಅಧಿಕಾರಿಗಳು ಸಿಕ್ಕಿ ಬಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದರು. ಗಾಮನಗಟ್ಟಿ ಸರ್ಕಾರಿ ಶಾಲೆಗೆ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದರು. 

ಬೃಹತ್ ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ ‘ಕೆ.ಐ.ಎ.ಡಿ.ಬಿ ವತಿಯಿಂದ ಗಾಮನಗಟ್ಟಿ ಹಾಗೂ ಇಟಗಟ್ಟಿ ಭಾಗದ ಜಮೀನುಗಳನ್ನು ಅಧಿಸೂಚಿಸಿ ಖರೀದಿಸದೇ ಹಾಗೆ ಬಿಡಲಾಗಿತ್ತು. ಸರ್ಕಾರದಿಂದ ರೈತರಿಗೆ ಹಣ ಪಾವತಿಸಲು ₹279 ಕೋಟಿ ಬಿಡುಗಡೆ ಮಾಡಲಾಗಿದೆ. ಪಾರದರ್ಶಕವಾಗಿ 600 ಎಕರೆ ಜಮೀನು ಖರೀದಿಸಲಾಗಿದೆ’ ಎಂದರು. ಜಮೀನು ನೀಡಿದ ಗಾಮನಗಟ್ಟಿ ಹಾಗೂ ಇಟಗಟ್ಟಿಯ 26 ರೈತರಿಗೆ ₹36.72 ಕೋಟಿ ಹಣ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗಿದೆ.

ಶಾಸಕ ಅರವಿಂದ ಬೆಲ್ಲದ ಮಾತನಾಡಿ ’ಇಟಗಟ್ಟಿ ಹಾಗೂ ಗಾಮನಗಟ್ಟಿ ನೋಟಿಫೈ ಮಾಡಿದ್ದರಿಂದ, ಕೃಷಿ ಸೇರಿದಂತೆ ಇತರೆ ಕಾರ್ಯಗಳಿಗೆ ಅಡಚಣೆ ಆಗಿತ್ತು. ಇದನ್ನು ಪರಿಹರಿಸಿ ಜಮೀನು ಖರೀದಿಸಲಾಗಿದೆ. ಮಧ್ಯವರ್ತಿ ರೈತರನ್ನು ಶೋಷಿಸದಂತೆ ವ್ಯವಹಾರವನ್ನು ಪಾರದರ್ಶಕವಾಗಿ ನಿರ್ವಹಿಸಲಾಗಿದೆ’ ಎಂದರು.

ಹುಡಾ ಅಧ್ಯಕ್ಷ ನಾಗೇಶ್ ಕಲಬುರ್ಗಿ, ಉಪ ವಿಭಾಗಾಧಿಕಾರಿ ಗೋಪಾಲ ಕೃಷ್ಣ, ಕೆ.ಐ.ಡಿ.ಬಿ. ಅಧಿಕಾರಿಗಳಾದ ಮನೋಹರ ವಡ್ಡರ್, ವಸಂತ ಕುಮಾರ್, ತಹಶೀಲ್ದಾರ್‌ ಶಶಿಧರ ಮಾಡ್ಯಾಳ, ಮಾಜಿ ಮೇಯರ್‌ ಮಂಜುಳಾ ಅಕ್ಕೂರ, ಮಾಜಿ ಉಪ ಮೇಯರ್‌ ಚಂದ್ರಶೇಖರ ಮನಗುಂಡಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು