ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೆಗಿಂತಲೂ ಹೆಚ್ಚು ಮಂದಿ, ಪ್ರಜ್ಞಾವಂತರ ಆಕ್ರೋಶ

Last Updated 28 ಮಾರ್ಚ್ 2020, 9:19 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಲಾಕ್'ಔಟ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತರಕಾರಿಗಳು ಒಂದೆಡೆ ಲಭ್ಯವಾಗುವಂತೆ ನೆಹರೂ, ಈದ್ಗಾ ಮೈದಾನ, ಹಳೇ ಬಸ್‌ ನಿಲ್ದಾಣ ಸೇರಿದಂತೆ ವಿವಿಧೆಡೆ ಶುಕ್ರವಾರ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಮೊದಲ ದಿನವೇ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಖರೀದಿಗೆ ಮುಗಿಬಿದ್ದಿದ್ದು ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಯಿತು.

ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲೆಂದು ಮಹಾನಗರ ಪಾಲಿಕೆಯು ನೆಹರೂ ಮೈದಾನದಲ್ಲಿ ಅವಕಾಶ ಕಲ್ಪಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗುರುತು ಹಾಕಲಾಗಿತ್ತು. ಆದರೆ, ಯಾವೊಬ್ಬ ಗ್ರಾಹಕರು ಅಂತರ ಕಾಯ್ದುಕೊಳ್ಳದೆ ವ್ಯಾಪಾರ ನಡೆಸಿದರು.

ಬೆಳಿಗ್ಗೆ ಆರರಿಂದಲೇ ಸಾರ್ವಜನಿಕರು ತಂಡೋಪ ತಂಡವಾಗಿ ತರಕಾರಿ ಖರೀದಿಸಲು ಬಂದರು. ಮೈದಾನದ ಗ್ಯಾಲರಿ ಕೆಳಭಾಗ ಮಾತ್ರ ವ್ಯಾಪಾರ ನಡೆಸಲು ಅನುಕೂಲ ಮಾಡಿಕೊಡಲಾಗಿತ್ತು. ಆದರೆ, ವ್ಯಾಪಾರಸ್ಥರು ಮೈದಾನದ ಸಿಕ್ಕ ಸಿಕ್ಕ ಜಾಗದಲ್ಲಿ ಕೂತು ವ್ಯಾಪಾರ ನಡೆಸಿದರು. ಜನತಾ ಬಜಾರ್, ಎಂ.ಜಿ. ಮಾರುಕಟ್ಟೆಗೆ ಬರುವವರಿಗಿಂತಲೂ ಹೆಚ್ಚು ಮಂದಿ ಜಮಾಯಿಸಿದ್ದರು.

ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ನಡೆಸಿ ಎಂದು ಪಾಲಿಕೆ, ಪೊಲೀಸ್ ಸಿಬ್ಬಂದಿ ನೂರಾರು ಬಾರಿ ವಿನಂತಿಸಿಕೊಂಡರು. ಯಾರೊಬ್ಬರೂ ಅವರ ಮಾತಿಗೆ ಕಿವಿಗೊಡದೆ ನಿರ್ಲಕ್ಷವಹಿಸಿದ್ದು ಕಂಡು ಬಂದಿತು.

‘ಸಾರ್ವಜನಿಕರು ಹೊರಗೆ ಬರಬಾರದು, ಗುಂಪುಗೂಡಬಾರದು ಎಂದು ಲಾಕ್‌ಡೌನ್‌ ಮಾಡಿ ಕಟ್ಟು ನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ಆದರೆ, ಮಹಾನಗರ ಪಾಲಿಕೆ, ಜಿಲ್ಲಾಡಳಿತ ಮುಂದಾಲೋಚನೆ ಇಲ್ಲದೆ ಎಲ್ಲರೂ ಒಂದೇ ಕಡೆ ಸೇರಿ ಸಂತೆ ನಡೆಸುವ ಹಾಗೆ ಮಾಡಿದೆ. ಇದೊಂದು ಅವೈಜ್ಞಾನಿಕ ನಿರ್ಧಾರ. ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು’ ಎಂದು ದಾಜಿಬಾನ್‌ ಪೇಟೆ ನಿವಾಸಿ ಮಹಾಂತೇಶ ಬೆಂಡಿಗೇರಿ ಆಗ್ರಹಿಸಿದರು.

‘ಗುರುತು ಹಾಕಿದ ಜಾಗದಲ್ಲಿಯೇ ನಿಂತು ವ್ಯಾಪಾರ ನಡೆಸಬೇಕು ಎಂದು ಮಗುವಿಗೆ ಹೇಳಿದ ಹಾಗೆ ಹೇಳುತ್ತಿದ್ದೇವೆ. ಸಂತೆಗೆ ಬಂದವರೆಲ್ಲ ಸುಶಿಕ್ಷಿತರೇ ಆಗಿದ್ದಾರೆ. ಅವರಿಗೆ ಪರಿಸ್ಥಿತಿಯ ಗಂಭೀರತೆ ಇನ್ನೂ ಅರ್ಥವಾಗಿಲ್ಲ’ ಎಂದು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಹೇಳಿದರು.

ಯುವಕರಿಗೆ ಲಾಠಿ ಏಟು

ಕೇಶ್ವಾಪುರ, ದಾಜಿಬಾನ್‌ ಪೇಟೆ, ಮರಾಠಗಲ್ಲಿ ಸುತ್ತಲಿನ ಪ್ರದೇಶಗಳಲ್ಲಿನ ಕಿರಾಣಿ ಅಂಗಡಿಗಳ ಎದುರು ಗ್ರಾಹಕರು ಅಂತರ ಕಾಯ್ದುಕೊಳ್ಳದೆ ಖರೀದಿಯಲ್ಲಿ ತೊಡಗಿಕೊಂಡಿದ್ದರು. ಗಿರಣಿಚಾಳದ ಜಲಮಂಡಳಿ ಕಚೇರಿ ಬಳಿ ಇರುವ ಜಾಗದಲ್ಲಿ ಕ್ರಿಕೆಟ್‌ ಆಡುತ್ತಿದ್ದ ಯುವಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ಗುರುವಾರಕ್ಕೆ ಹೋಲಿಸಿದರೆ ಶುಕ್ರವಾರ ಜನರ ಓಡಾಟ ನಗರ ಪ್ರದೇಶದಲ್ಲಿ ತುಸು ಹೆಚ್ಚಾಗಿತ್ತು.

ಸುತಗಟ್ಟಿ ಗ್ರಾಮಕ್ಕೆ ದಿಗ್ಬಂಧನ

ನವನಗರದ ಸುತಗಟ್ಟಿ ಗ್ರಾಮದ ಹಿರಿಯರು ಹೊರ ಊರಿನಿಂದ ಬರುವವರ ಪ್ರವೇಶ ನಿರ್ಬಂಧಿಸಿ ಜಾಲಿಕಂಟಿಗಳನ್ನು ಹಾಕಿ ರಸ್ತೆ ಬಂದ್‌ ಮಾಡಿದ್ದಾರೆ. ಗ್ರಾಮದಲ್ಲಿನ ಶೇ 50ರಷ್ಟು ರೈತರು ತಾವು ಬೆಳೆದ ದವಸ, ಧಾನ್ಯ ಹಾಗೂ ತರಕಾರಿಗಳನ್ನು ತಮ್ಮಲ್ಲಿಯೇ ವಿನಿಮಯ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಊರಲ್ಲಿಯೇ ಹಾಲಿನ ಡೈರಿ ಇರುವುದರಿಂದ ಹಾಲು ಖರೀದಿಗೂ ಸಮಸ್ಯೆಯಿಲ್ಲವಾಗಿದೆ. ಊರಿನ ಜನರು ಹೊರಗೆ ಹೋಗುವಂತಿಲ್ಲ, ಹೊರಗಿನಿಂದ ಬಂದವರು ಸಹ ಊರಿಗೆ ಬರುವಂತಿಲ್ಲ ಎಂದು ಹಿರಿಯರು, ಪಂಚರು ಮತ್ತು ಯುವಕರು ಸೇರಿ ಈ ನಿರ್ಣಯ ತೆಗೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT