ಪುತ್ರಿ ಕಣ್ಣೆದುರೇ ಗಿರಣಿಗೆ ಆಹುತಿಯಾದ ತಾಯಿ

7

ಪುತ್ರಿ ಕಣ್ಣೆದುರೇ ಗಿರಣಿಗೆ ಆಹುತಿಯಾದ ತಾಯಿ

Published:
Updated:

ಹುಬ್ಬಳ್ಳಿ: ನಾಲ್ಕು ವರ್ಷದ ಕೂಸಿನ ಕಣ್ಣೇದುರೇ ತಾಯಿಯೊಬ್ಬಳು ಆಕಸ್ಮಿಕವಾಗಿ ಗಿರಣಿಗೆ ಸಿಲುಕಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಹುಬ್ಬಳ್ಳಿಯ ರಾಜನಗರ ಸಮೀಪದ ಬಾಪೂಜಿನಗರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಲಕ್ಷ್ಮವ್ವ ಹರಟಿ (30) ಮೃತಪಟ್ಟವರು. ಪತಿ ಫಕ್ಕೀರಪ್ಪ (ಮುದಿಯಪ್ಪ) ಗಿರಣಿ ಅಂಗಡಿ ಇಟ್ಟುಕೊಂಡಿದ್ದು, ಲಕ್ಷ್ಮವ್ವ ಆಗಾಗ ಅಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ 10ರ ಸುಮಾರಿಗೆ ಪತಿ ಕಾರ್ಯ ನಿಮಿತ್ತ ಹೊರಗೆ ಹೋಗಿದ್ದರು. ಈ ವೇಳೆ ಗಿರಣಿಯಲ್ಲಿ ಕೆಲ ಹೊತ್ತು ಕೆಲಸ ಮಾಡಿರುವ ಅವರು, ಗಿರಣಿ ಯಂತ್ರದ ಸ್ವಿಚ್‌ ಆಫ್ ಮಾಡಲು ಮುಂದಾಗಿದ್ದಾರೆ.

ಆಗ ಅವರ ಬಟ್ಟೆ ಗಿರಣಿ ಬೆಲ್ಟ್‌ ಸೆಳೆತಕ್ಕೆ ಸಿಲುಕಿ, ಒಮ್ಮೆಲೆ ಯಂತ್ರದ ಮಧ್ಯೆ ಸಿಕ್ಕಿ ಹಾಕಿಕೊಂಡಿದ್ದಾರೆ. ಕಣ್ಣೆದುರಿಗೇ ಸಾವು–ಬದುಕಿನ ಮಧ್ಯೆ ತಾಯಿ ನಲುಗುತ್ತಿದ್ದ ದೃಶ್ಯ ಕಂಡು ಬೆಚ್ಚಿಬಿದ್ದ ಪುತ್ರಿ ಗೌತಮಿ, ಜೋರಾಗಿ ಚೀರಿಕೊಂಡು ಹೊರಗೆ ಬಂದು ‘ಅವ್ವ ಗಿರಣಿಗೆ ಸಿಕ್ಕಿಕೊಂಡಿದ್ದಾಳೆ’ ಎಂದು ಕೂಗಿಕೊಂಡಿದ್ದಾಳೆ.

ಬಾಲಕಿಯ ಚೀರಾಟ ಕೇಳಿ ಸ್ಥಳಕ್ಕೆ ಬಂದ ಅಕ್ಕಪಕ್ಕದ ಮನೆಯವರು, ಕೂಡಲೇ ಗಿರಣಿ ಸ್ವಿಚ್ ಆಫ್ ಮಾಡಿದ್ದಾರೆ. ಬಳಿಕ, ಯಂತ್ರದ ಮಧ್ಯೆ ಸಿಲುಕಿ ಗಂಭೀರವಾಗಿ ಗಾಯಗೊಂಡು ರಕ್ತಸಿಕ್ತರಾಗಿದ್ದ ಅವರನ್ನು ಹೊರಗೆಳೆದು, ಆಟೊದಲ್ಲಿ ಕಿಮ್ಸ್‌ಗೆ ಕರೆ ತಂದಿದ್ದಾರೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಕೆಲ ಹೊತ್ತಿನಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದರು. ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಗಿಲು ಮುಟ್ಟಿದ ರೋದನೆ:

ಘಟನೆಯಿಂದಾಗಿ ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು. ಲಕ್ಷ್ಮವ್ವ ಮತ್ತು ಫಕ್ಕೀರಪ್ಪ ದಂಪತಿಗೆ ಒಂದೂವರೆ ವರ್ಷದ ಮಗು ಸೇರಿದಂತೆ, ಮೂವರು ಪುತ್ರಿಯರಿದ್ದಾರೆ. ಈ ಪೈಕಿ ಘಟನೆಯನ್ನು ಕಣ್ಣಾರೆ ಕಂಡ ಎರಡನೇ ಪುತ್ರಿ ಗೌತಮಿ ಇಂದಿಗೂ ಅದರ ಆಘಾತದಿಂದ ಹೊರ ಬಂದಿಲ್ಲ ಎಂದು ಸಂಬಂಧಿಕರು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !