ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ನುಸುಳುಕೋರರಿಂದ ಭಯೋತ್ಪಾದನೆ ಹೆಚ್ಚಳ

ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಂಸದ ಪ್ರಹ್ಲಾದ ಜೋಶಿ
Last Updated 17 ಫೆಬ್ರುವರಿ 2019, 11:56 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಭಯೋತ್ಪಾದನಾ ಚಟುವಟಿಕೆ ಹೆಚ್ಚಾಗಲು ಬಾಂಗ್ಲಾ ದೇಶದ ರೊಹಿಂಗ್ಯಾಗಳು ಹಾಗೂ ಪಾಕಿಸ್ತಾನಿ ನುಸುಳುಕೋರರೇ ಕಾರಣ’ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.

ನಗರದ ಮಿನಿವಿಧಾನಸೌಧದ ಎದುರು ಬಿಜೆಪಿ ಏರ್ಪಡಿಸಿದ್ದ ಭಯೋತ್ಪಾದಕರ ವಿರುದ್ಧ ಪ್ರತಿಭಟನೆ ಹಾಗೂ ಮೃತ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಾಕಿಸ್ತಾನದ ಸೇನಾ ಆಸ್ಪತ್ರೆಯಿಂದ ಜೈಷ್‌ ಎ ಮೊಹಮ್ಮದ್‌ ಮುಖ್ಯಸ್ಥ ಮಸೂದ್‌ ಅಜರ್‌ ಪುಲ್ವಾಮ ದಾಳಿಯ ಸಂಚು ಹೆಣೆದಿರುವುದು ಗೊತ್ತಾಗಿದೆ ಎಂದರು.

‘ನಾಲ್ಕೂವರೆ ವರ್ಷಗಳಲ್ಲಿ ಗಡಿಭಾಗವನ್ನು ಹೊರತುಪಡಿಸಿ ದೇಶದ ಒಳಗಡೆ ಯಾವುದೇ ಭಯೋತ್ಪಾದಕ ದಾಳಿಗಳು ನಡೆದಿಲ್ಲ. ಅತಿ ಹೆಚ್ಚು ಉಗ್ರರನ್ನು ಸೇನೆ ಈ ಅವಧಿಯಲ್ಲಿ ಕೊಂದು ಹಾಕಿದೆ. ಇದಕ್ಕಾಗಿಯೇ ಭಯೋತ್ಪಾದಕರಿಗೆ ನಮ್ಮ ಮೇಲೆ ಸಿಟ್ಟಿದೆ. ಪ್ರಧಾನಿ ಮೋದಿ ಅವರು ಪುಲ್ವಾಮ ದಾಳಿಗೆ ಪ್ರತೀಕಾರ ತೆಗೆದುಕೊಳ್ಳಲು ಸೇನೆಗೆ ಮುಕ್ತ ಅವಕಾಶ ನೀಡಿದ್ದಾರೆ’ ಎಂದರು.

‘ಹುಬ್ಬಳ್ಳಿ, ಬೆಂಗಳೂರಿನ ಮಲ್ಲೇಶ್ವರ, ಹೈದರಾಬಾದ್‌ನ ಲುಂಬಿಣಿ ಪಾರ್ಕ್, ಪುಣೆಯ ಬೆಸ್ಟ್‌ ಬೇಕರಿ, ಅಹ್ಮದಾಬಾದ್‌ನ ಅಕ್ಷರಧಾಮ ದೇವಸ್ಥಾನದ ಬಳಿ ಬಾಂಬ್‌ ಸ್ಫೋಟಗಳು ನಡೆದಿದ್ದವು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭಯೋತ್ಪಾದಕ ಚಟುವಟಿಕೆಗಳನ್ನು ಹತ್ತಿಕ್ಕಲಾಗಿದೆ. ವೀರ ಯೋಧರನ್ನು ಕಳೆದುಕೊಂಡು ಈ ಹೊತ್ತಿನಲ್ಲಿ ರಾಜಕೀಯವನ್ನು ಬಿಟ್ಟು ನಾವೆಲ್ಲರೂ ಒಂದಾಗಬೇಕಿದೆ’ ಎಂದು ಹೇಳಿದರು.

‘ಜಮ್ಮು, ಲೇಹ್‌, ಲಡಾಕ್‌ಗಳನ್ನು ಹೊರತುಪಡಿಸಿ ಕಾಶ್ಮೀರದ ಪ್ರತಿಯೊಂದು ಮನೆಯಲ್ಲಿಯೂ ಒಬ್ಬ ಭಯೋತ್ಪಾದಕ ಅಥವಾ ಭಯೋತ್ಪಾದಕರ ಬಗ್ಗೆ ಅನುಕಂಪ ಇರುವವರು ಸಿಕ್ಕೇ ಸಿಗುತ್ತಾರೆ’ ಎಂದು ಗಂಭೀರ ಆರೋಪ ಮಾಡಿದರು.

ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ ಮಾತನಾಡಿ, ‘ನೇರವಾಗಿ ಯುದ್ಧ ಮಾಡಿದರೆ ಸೋಲುವುದು ಖಚಿತ ಎಂದು ಗೊತ್ತಿದ್ದ ಪಾಕಿಸ್ತಾನ ಪರೋಕ್ಷವಾಗಿ ದೇಶದ ಪಠಾಣ್‌ಕೋಟ್‌, ಜಮ್ಮುವಿನ ಸೇನಾ ನೆಲೆ ಹಾಗೂ ಅಮರನಾಥ ಯಾತ್ರಿಕರ ಮೇಲೆ ದಾಳಿ ನಡೆಸಿತು. ಭಯೋತ್ಪಾದಕರಿಗೆ ಭಾರತ ತಕ್ಕ ಉತ್ತರ ನೀಡಲಿದೆ’ ಎಂದು ಹೇಳಿದರು.

ಮೇಯರ್‌ ಸುಧೀರ ಸರಾಫ, ಪಾಲಿಕೆ ಸದಸ್ಯರಾದ ಶಿವಾನಂದ ಮುತ್ತಣ್ಣವರ, ಶಿವು ಮೆಣಸಿನಕಾಯಿ, ಮುಖಂಡರಾದ ರಾಘವೇಂದ್ರ ರಾಮದುರ್ಗ, ಸತೀಶ ಶೇಜವಾಡಕರ, ರಂಗಾ ಬದ್ದಿ, ಮಹೇಂದ್ರ ಕೌತಾಳ, ಶ್ರೀನಿವಾಸ ಶಾಸ್ತ್ರಿ ಹಾಗೂ ಮಹಿಳಾ ಮೋರ್ಚಾದ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT