ಮೋದಿ ಹೆಸರಲ್ಲಿ ಮತ ಕೇಳುವುದು ದುರದೃಷ್ಟಕರ: ಎಂ.ಪಿ.ನಾಡಗೌಡ ಟೀಕೆ

ಶುಕ್ರವಾರ, ಏಪ್ರಿಲ್ 19, 2019
31 °C

ಮೋದಿ ಹೆಸರಲ್ಲಿ ಮತ ಕೇಳುವುದು ದುರದೃಷ್ಟಕರ: ಎಂ.ಪಿ.ನಾಡಗೌಡ ಟೀಕೆ

Published:
Updated:
Prajavani

ಹುಬ್ಬಳ್ಳಿ: ಎರಡು–ಮೂರು ಬಾರಿ ಸಂಸದರಾಗಿ ಆಯ್ಕೆಯಾದವರೂ ನರೇಂದ್ರ ಮೋದಿ ಹೆಸರಲ್ಲಿ ವೋಟ್‌ ಕೊಡ್ರಿ ಎಂದು ಕೇಳುತ್ತಿರುವುದು ದುರದೃಷ್ಟಕರ ಎಂದು ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಡಾ.ಎಂ.ಪಿ.ನಾಡಗೌಡ ಟೀಕಿಸಿದರು.

ನಗರದ ಜೆಡಿಯು ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೋದಿ ಹೆಸರಲ್ಲಿ ಮತ ಕೇಳುವುದನ್ನು ನೋಡಿದರೆ ಸಂಸದರು ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂಬುದು ಸಾಬೀತಾಗುತ್ತದೆ. ಮೂರು ಬಾರಿ ಸಂಸದರಾಗಿ ಆಯ್ಕೆಯಾದರೂ ಪ್ರಹ್ಲಾದ ಜೋಶಿ ಅವರು ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಮಹಾಘಟಬಂಧನ್‌ ನಾಯಕರ ತೀರ್ಮಾನದಂತೆ ರಾಜ್ಯದಲ್ಲಿ ಜೆಡಿಎಸ್‌–ಕಾಂಗ್ರೆಸ್ ಅಭ್ಯರ್ಥಿಗಳನ್ನು ಜೆಡಿಯು ಬೆಂಬಲಿಸುತ್ತದೆ. ಕ್ಷೇತ್ರದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ವಿನಯ ಕುಲಕರ್ಣಿ ಪರವಾಗಿ ಮತಯಾಚನೆ ಮಾಡಲಿದ್ದಾರೆ’ ಎಂದರು.

‘ಬಾಲಾಕೋಟ್‌ ದಾಳಿಯ ಬಗ್ಗೆ ಹೆಮ್ಮೆಯಿಂದ ಮಾತನಾಡುವ ಮೋದಿ ಅವರಿಗೆ ತಮ್ಮ ಸರ್ಕಾರದ ಗುಪ್ತಚರ ವೈಫಲ್ಯದಿಂದಾಗಿ ಪುಲ್ವಾಮಾದಲ್ಲಿ 44 ಯೋಧರು ಸಾವಿಗೀಡಾದ ಬಗ್ಗೆ ಜಾಣ ಮರೆವು ಇದ್ದಂತಿದೆ. ಒಂದು ನಾಗರಿಕ ವಾಹನ ಹೋಗಬೇಕೆಂದರೆ ಅಲ್ಲಿ ಹಲವು ಬಗೆಯ ತಪಾಸಣೆಗಳು ನಡೆಯುತ್ತವೆ. ಇಂಥದರಲ್ಲಿ 2 ಸಾವಿರ ಸಿಆರ್‌ಪಿಎಫ್ ಯೋಧರನ್ನು ಕೊಂಡೊಯ್ಯುವಾಗ ಕನಿಷ್ಠ ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಂಡಿಲ್ಲ. ಇದು ಮೋದಿ ಅವರ ವೈಫಲ್ಯ ಅಲ್ಲವೇ’ ಎಂದು ಪ್ರಶ್ನಿಸಿದರು.

‘ಅತ್ಯಂತ ಭದ್ರತೆ ಹೊಂದಿದ ರಸ್ತೆಯಲ್ಲಿ 350 ಕೆ.ಜಿ. ಆರ್‌ಡಿಎಕ್ಸ್ ಕೊಂಡೊಯ್ದು ಯೋಧರ ಹತ್ಯಾಕಾಂಡ ಮಾಡಿದವರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕು. ಇದನ್ನು ಬಿಟ್ಟು ಮೋದಿ ಅವರು ಪಾಕಿಸ್ತಾನದ ನೆಲದ ಮೇಲೆ ಭಾರತೀಯ ವಾಯುಸೇನೆ ಮಾಡಿದ ದಾಳಿಯ ಬಗ್ಗೆಯಷ್ಟೇ ಭಾವಾವೇಶದಿಂದ ಹೇಳುವ ಮೂಲಕ ಜನರನ್ನು ಹಾದಿ ತಪ್ಪಿಸುತ್ತಿದ್ದಾರೆ’ ಎಂದರು.

‘ಮನಮೋಹನ್‌ ಸಿಂಗ್‌ ಅವರ ಆಡಳಿತದ ಓರೆಕೋರೆಗಳನ್ನು ನಾವು ಟೀಕಿಸಿದ್ದೇವೆ. ಆದರೆ, ಆರ್‌ಟಿಐ ಕಾಯ್ದೆ, ಗ್ರಾಮೀಣಾಭಿವೃದ್ಧಿಗೆ ಸಿಂಗ್‌ ಅವರು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದರು. ಆದರೆ, ಮೋದಿ ಅವರು ಅಂತಹ ಶಾಶ್ವತ ಅಭಿವೃದ್ಧಿ ಕಾರ್ಯಗಳನ್ನು ಮಾಡಲೇ ಇಲ್ಲ’ ಎಂದು ವಿಷಾದಿಸಿದರು.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !