ಮಂಗಳವಾರ, ನವೆಂಬರ್ 24, 2020
24 °C
ಡಿಸಿಸಿ ಬ್ಯಾಂಕ್‌ ಚುನಾವಣೆಯ ಚರ್ಚೆ

ಬೆಳಗಾವಿ ಲೋಕಸಭಾ ಟಿಕೆಟ್‌: ಬಿಜೆಪಿ ನಾಯಕರ ಜೊತೆ ಕಟೀಲ್‌ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಡಿಸಿಸಿ) ಚುನಾವಣೆ ಮತ್ತು ಸುರೇಶ ಅಂಗಡಿ ನಿಧನದಿಂದ ತೆರವಾಗಿರುವ ಲೋಕಸಭಾ ಕ್ಷೇತ್ರದ ಟಿಕೆಟ್‌ ಅಂತಿಮಗೊಳಿಸುವ ಸಂಬಂಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ ಕುಮಾರ್ ಕಟೀಲ್‌ ಅವರು ನಗರದ ಡೆನಿಸನ್‌ ಹೋಟೆಲ್‌ನಲ್ಲಿ ಮಂಗಳವಾರ ತಡರಾತ್ರಿವರೆಗೂ ಸಭೆ ನಡೆಸಿದರು.

ಸುಮಾರು ನಾಲ್ಕು ಗಂಟೆ ನಡೆದ ಸಭೆಯಲ್ಲಿ ಧಾರವಾಡ, ಬೆಳಗಾವಿ ಮತ್ತು ಕೊಪ್ಪಳ ಜಿಲ್ಲೆಯ ಬಿಜೆಪಿಯ ಪ್ರಮುಖರು ಪಾಲ್ಗೊಂಡಿದ್ದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಸಂಗಣ್ಣ ಕರಡಿ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವರಾದ ಜಗದೀಶ ಶೆಟ್ಟರ್‌, ರಮೇಶ ಜಾರಕಿಹೊಳಿ, ಶಾಸಕ ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಆನಂದ ಮಾಮನಿ, ರಮೇಶ ಕತ್ತಿ, ಮಹಾಂತೇಶ ಕವಟಗಿಮಠ, ಪ್ರತಾಪಗೌಡ ಪಾಟೀಲ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಸೇರಿದಂತೆ ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯಿಂದ ಹೊರಬಂದ ಬಳಿಕ ಉಮೇಶ ಕತ್ತಿ ಮತ್ತು ರಮೇಶ ಕತ್ತಿ ಪ್ರತಿಕ್ರಿಯೆ ನೀಡಲಿಲ್ಲ. ಆನಂದ ಮಾಮನಿ ‘‌ಪಕ್ಷದ ಪ್ರಮುಖರನ್ನು ಭೇಟಿಯಾಗಿ, ಕೈಗಾರಿಕೆಗಳನ್ನು ಉತ್ತರ ಕರ್ನಾಟಕಕ್ಕೆ ತರುವಂತೆ ಕೇಳಲು ಬಂದಿದ್ದೆವು’ ಎಂದರು.

‘ಡಿಸಿಸಿ ಬ್ಯಾಂಕ್‌ ಚುನಾವಣೆಯ ವಿಷಯಕ್ಕೆ ಹಿಂದೆಯೂ ಅನೇಕ ಬಾರಿ ಗದ್ದಲಗಳಾಗಿವೆ. ಅದು ಪಕ್ಷದ ಮೇಲೆ ದೊಡ್ಡ ಪರಿಣಾಮ ಬೀರಿದ್ದು, ಈ ಸಲ ಅದಕ್ಕೆ ಅವಕಾಶ ಕೊಡಬಾರದು. ಚರ್ಚೆಯ ಮೂಲಕ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ಬೆಳಗಾವಿ ಜಿಲ್ಲೆಯ ಕೆಲ ಶಾಸಕರು ಒತ್ತಾಯಿಸಿದರು. ಜಿಲ್ಲೆಯ ವಿಷಯದಲ್ಲಿ ಯಾರೂ ಪ್ರತಿಷ್ಠೆ ತೋರಿಸಬಾರದು ಎಂದರು. ಬಹಳಷ್ಟು ಹೊತ್ತಿನ ಚರ್ಚೆಯ ಬಳಿಕವೂ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ’ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.

ಲೋಕಸಭಾ ಟಿಕೆಟ್‌ ಬಗ್ಗೆ ಕೆಲ ಹೊತ್ತು ಚರ್ಚೆ ನಡೆದಿದ್ದು, ಜಿಲ್ಲೆಯ ಪ್ರಮುಖರ ಅಭಿಪ್ರಾಯಗಳನ್ನು ಪಡೆಯಲಾಗಿದೆ ಎಂದು ಗೊತ್ತಾಗಿದೆ.

ಆರ್‌ಎಸ್‌ಎಸ್‌ ಸೂಚನೆಯಂತೆ ಸಭೆ: ಡಿಸಿಸಿ ಬ್ಯಾಂಕ್ ಚುನಾವಣೆ ವಿಷಯದಲ್ಲಿ, ಈಗಾಗಲೇ ಉನ್ನತ ಹುದ್ದೆಯಲ್ಲಿ ಇರುವವರು ತ್ಯಾಗ ಮಾಡಿದರೆ ಒಳ್ಳೆಯದು ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಲಕ್ಷ್ಮಣ ಸವದಿಗೆ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದರು. ಮುಖಂಡರೆಲ್ಲರೂ ಸೇರಿ ಚರ್ಚಿಸಿ ನಿರ್ಧಾರಕ್ಕೆ ಬರುವಂತೆ ಆರ್‌ಎಸ್‌ಎಸ್‌ನವರು ಸಲಹೆ ನೀಡಿದ್ದಾರೆ ಎಂದೂ ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಕಟೀಲ್‌ ಹುಬ್ಬಳ್ಳಿಗೆ ಭೇಟಿ ನೀಡಿ ಬಿಜೆಪಿ ಪ್ರಮುಖರ ಜೊತೆ ಚರ್ಚಿಸಿದ್ದಾರೆ. ನವೆಂಬರ್‌ 6ರಂದು ಚುನಾವಣೆ ನಿಗದಿಯಾಗಿದೆ.

ಡಿಸಿಸಿ ಬ್ಯಾಂಕ್ ಚುನಾವಣೆಗೆ ಕಾಂಗ್ರೆಸ್‌ನ ಅಂಜಲಿ ನಿಂಬಾಳ್ಕರ್‌ಗೆ ಬೆಂಬಲ ನೀಡುವುದಾಗಿ ಉಮೇಶ ಕತ್ತಿ ಹೇಳಿದ್ದರು. ಇನ್ನೊಂದೆಡೆ ಸುರೇಶ ಅಂಗಡಿ ಕುಟುಂಬದವರಿಗೆ ಟಿಕೆಟ್ ನೀಡಿದರೆ ಬೆಂಬಲಿಸುವುದಾಗಿ ಕಾಂಗ್ರೆಸ್ ಮುಖಂಡ ಪ್ರಕಾಶ ಹುಕ್ಕೇರಿ ಹೇಳಿಕೆ ನೀಡಿದ್ದರು. ಆದ್ದರಿಂದ ಈ ಸಭೆ ಮಹತ್ವ ಪಡೆದುಕೊಂಡಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು