ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿಯಿಂದ ಹೆಸರು ನಾಪತ್ತೆ ಆರೋಪ

ಕಾಂಗ್ರೆಸ್ ಕಾರ್ಯಕರ್ತರ ಧರಣಿ
Last Updated 8 ಡಿಸೆಂಬರ್ 2022, 16:48 IST
ಅಕ್ಷರ ಗಾತ್ರ

ಧಾರವಾಡ: ‘ಹುಬ್ಬಳ್ಳಿ- ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿನ ಸುಮಾರು 20 ಸಾವಿರಕ್ಕೂ ಅಧಿಕ ಹೆಸರುಗಳನ್ನು ಪರಿಷ್ಕರಣೆ ನೆಪದಲ್ಲಿ ಮತದಾರ ಪಟ್ಟಿಯಿಂದ ಅಳಿಸಿ ಹಾಕಲಾಗಿದೆ’ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ಬಸವರಾಜ ಮಲಕಾರಿ ನೇತೃತ್ವದಲ್ಲಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಬುದವಾರ ಪ್ರತಿಭಟನೆ ನಡೆಸಿದರು.

2023ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ನಡೆಯುತ್ತಿದ್ದು, ನೋಂದಣಿ ಸಮಯದಲ್ಲಿ ಬಿಎಲ್‌ಒಗಳು ಅನೇಕ ಹೆಸರುಗಳನ್ನು ಮತದಾರ ಪಟ್ಟಿಯಿಂದ ಅಳಿಸಿ ಹಾಕಿದ್ದಾರೆ. ಅಲ್ಲದೇ ಬೇರೆ ಬೇರೆ ವಾರ್ಡ್‌ಗಳಿಗೆ ಮತದಾರರ ಹೆಸರನ್ನು ವರ್ಗಾಯಿಸಿ, ಅಲ್ಲಿ ಬೇರೆ ಮತದಾರರ ಹೆಸರನ್ನು ಸೇರಿಸಿದ್ದಾರೆ. ಮತದಾರ ಪಟ್ಟಿಯಲ್ಲಿ ಭಾವಚಿತ್ರ ಮತ್ತು ವಿಳಾಸ ಸರಿಯಾಗಿ ನಮೂದಿಸದೇ ಗೊಂದಲ ಸೃಷ್ಟಿಸಿದ್ದಾರೆ ಎಂದು ಪ್ರತಿಭಟನಾಕಾರರು ಆಪಾದಿಸಿದರು.

ಸಾಮಾಜಿಕ ಕಾರ್ಯಕರ್ತರು ಈ ಪಟ್ಟಿಯನ್ನು ಪರಿಶೀಲಿಸಿದಾಗ ಹಿಂದುಳಿದ ವರ್ಗಗಳ ಹಾಗೂ ಅಲ್ಪ ಸಂಖ್ಯಾತರ ಮತದಾರರನ್ನೇ ಗುರಿಯಾಗಿಸಿ ಅಳಿಸಿ ಹಾಕಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅಳಿಸಿ ಹಾಕಿದ ಹೆಸರಿನ ಮತದಾರ ಮನೆ ಮನೆಗೆ ತೆರಳಿ ಪರಿಶೀಲಿಸಿದಾಗ ಅವರೆಲ್ಲರೂ ಅದೇ ವಿಳಾಸದಲ್ಲಿ ಖಾಯಂ ಆಗಿ ವಾಸವಿದ್ದಾರೆ. ಅವರ ಹೆಸರನ್ನು ಪಟ್ಟಿಯಿಂದ ಅಳಿಸಿ ಹಾಕಿರುವುದು ಅವರ ಗಮನಕ್ಕೂ ಬಂದಿಲ್ಲ. ಉದ್ದೇಶ ಪೂರ್ವಕವಾಗಿಯೇ ಹೆಸರುಗಳನ್ನು ಕೈಬಿಡಲಾಗಿದ್ದು, ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಕೈಬಿಟ್ಟಿರುವ ಹೆಸರನ್ನು ಮತ್ತೆ ಸೇರಿಸಬೇಕು ಎಂದು ಒತ್ತಾಯಿಸಿದರು.

ಮತದಾರ ಪಟ್ಟಿ ಮರು ಪರಿಶೀಲನೆಗೆ ಡಿ.8 ಕೊನೆಯ ದಿನವಾಗಿದ್ದು, ನೋಂದಣಿ ಮಾಡಿಕೊಳ್ಳಲು ಈ ಸಮಯಾವಕಾಶ ಸಾಕಾಗುವುದಿಲ್ಲ. ಆದ್ದರಿಂದ ಒಂದು ತಿಂಗಳವರೆಗೆ ನೋಂದಣಿಗೆ ಸಮಯಾವಕಾಶ ಹೆಚ್ಚಿಸಿ, ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದರು.

ಮೋಹಿನ್ ಬಿಡಿವಾಲೆ, ಭರಮಪ್ಪ ಬಂಗಾರಿ, ರಮೇಶ ನಲೋಡಿ, ಸಾಧಿಕ್ ತಾಡಪತ್ರಿ, ಫ್ರಾನ್ಸಿಸ್ಸ್ ಶಕ್ತಿ, ಕೆ.ಎಂ. ಚೌಧರಿ, ಅಬ್ದುಲ್ ಖಾದರ್ ಹಾಲಭಾವಿ, ಮಜೀದ್ ಕೌದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT