ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಣಕಲ್‌ ಕೆರೆ ಸ್ವಚ್ಛತೆ ಮರೀಚಿಕೆ

ಹುಬ್ಬಳ್ಳಿ–ಧಾರವಾಡ ಮೆಟ್ರೊ | ನಮ್‌ ಕೆರಿ ಕಥಿ–15
Last Updated 10 ಫೆಬ್ರುವರಿ 2020, 4:25 IST
ಅಕ್ಷರ ಗಾತ್ರ

ವಾಣಿಜ್ಯ ನಗರಿ ಎಂಬ ಖ್ಯಾತಿ ಬರುವ ಮುನ್ನವೇ ಹುಬ್ಬಳ್ಳಿಗೆ ಕುಡಿಯಲು ನೀರನ್ನು ನಳದಲ್ಲಿ ಕೊಟ್ಟಿದ್ದು ಉಣಕಲ್‌ ಕೆರೆ. ಆದರೆ ಈಗ ಆ ಕೆರೆಯಲ್ಲಿ ಕೈಇಟ್ಟ ಮೇಲೆ, ಹೊರ ಬಂದು ಕೈತೊಳೆದುಕೊಳ್ಳಬೇಕಾದ ಪರಿಸ್ಥಿತಿ ಇದೆ. ವಾಣಿಜ್ಯ ನಗರಿಯಾಗಿ ಬೃಹದಾಕಾರದಲ್ಲಿ ಬೆಳೆದ ಹುಬ್ಬಳ್ಳಿ, ತನ್ನೆಲ್ಲ ತ್ಯಾಜ್ಯವನ್ನು ಇಲ್ಲಿಗೇ ಸುರಿಯುತ್ತಿರುವುದು ಈ ಪರಿಸ್ಥಿತಿಗೆ ಕಾರಣ.

ಹುಬ್ಬಳ್ಳಿ ನಗರಕ್ಕೆ 1876ರಲ್ಲಿ ಕುಡಿಯುವ ನೀರು ಒದಗಿಸಲು ಉಣಕಲ್‌ ಕೆರೆಯನ್ನು ನಿರ್ಮಿಸಲಾಯಿತು. ಮುನಿಸಿಪಾಲಿಟಿ, ರೈಲ್ವೆ ಕಂಪನಿ ಜಂಟಿಯಾಗಿ ಕೈಗೊಂಡ ಯೋಜನೆಯಡಿ, 1892ರಲ್ಲಿ ನೀರನ್ನು ಪೂರೈಸಲಾಯಿತು. ಆದರೆ, ಇಂದು ಕೃಷಿ ತ್ಯಾಜ್ಯ, ಗೃಹ ತ್ಯಾಜ್ಯ, ಕಟ್ಟಡ ಅವಶೇಷ, ಎಲೆಕ್ಟ್ರಾನಿಕ್‌ ತ್ಯಾಜ್ಯವನ್ನು ಇಲ್ಲಿ ಸುರಿಯಲಾಗು‌ತ್ತಿದೆ. ಕಸಕ್ಕೆ ಬೆಂಕಿ ಹಚ್ಚಲಾಗುತ್ತದೆ. ಮನೆಗಳು ಹಾಗೂ ಬಡಾವಣೆಗೆ ಶೇ 0.2ರಷ್ಟು ಪ್ರದೇಶ ಒತ್ತುವರಿಯಾಗಿದೆ. ಇಷ್ಟಾದರೂ, ಸಂಜೆ ವೇಳೆ ಜನ ಸೂರ್ಯಾಸ್ತದ ಸೊಬಗು ಸವಿಯಲು ಬರುತ್ತಾರೆ. ದಿನಪೂರ್ತಿ ಯಾವುದಾದರೊಂದು ಮೂಲೆಯಲ್ಲಿ ಮೀನು ಹಿಡಿಯುವವರು ಕಾಣಸಿಗುತ್ತಲೇ ಇರುತ್ತಾರೆ. ಐದು ಮೀಟರ್‌ ಆಳಹೊಂದಿರುವ ಕೆರೆಯಲ್ಲಿ ದ್ವೀಪ ನಿರ್ಮಿಸಿ ವಿವೇಕಾನಂದರ ಪ್ರತಿಮೆಯನ್ನೂ ಸ್ಥಾಪಿಸಲಾಗಿದೆ. ಬೋಟಿಂಗ್‌ ವ್ಯವಸ್ಥೆ ಜನರ ಪ್ರಮುಖ ಆಕರ್ಷಣೆಯೂ ಹೌದು. ಆದರೆ, ವಾಸನೆ–ಕೆರೆಯಲ್ಲಿನ ಕೊಳಕು ಬೇಸರ ಮೂಡಿಸುವುದಂದೂ ದಿಟ.

ಉಣಕಲ್‌ ಕೆರೆಯನ್ನು ಅಭಿವೃದ್ಧಿಗೊಳಿಸಲು, ಶುಚಿಗೊಳಿಸಲು ಸಾಕಷ್ಟು ವೆಚ್ಚ ಮಾಡಲಾಗಿದೆ. ಆದರೆ, ಅದನ್ನು ಸೂಕ್ತವಾಗಿ ನಿರ್ವಹಣೆ ಮಾಡುವ ಕೆಲಸವೇ ಆಗಿಲ್ಲ. ಹುಬ್ಬಳ್ಳಿಗೆ ಒಂದು ಅತ್ಯದ್ಭುತ ಪ್ರವಾಸಿ ತಾಣವಾಗಬಲ್ಲ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಉದ್ಯಾನವೂ ಸೊರಗಿದೆ. ಇದೀಗ ‘ಸ್ಮಾರ್ಟ್‌ ಟಚ್‌’ ನೀಡಲು ಸ್ಮಾರ್ಟ್‌ ಸಿಟಿ ಯೋಜನೆಯಡಿ ₹87 ಕೋಟಿ ವೆಚ್ಚ ಮಾಡಲು ಎಲ್ಲರೂ ಮುಂದಾಗಿದ್ದಾರೆ. ಕೋಟ್ಯಂತರ ವೆಚ್ಚ ಮಾಡಿ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸುವ ಮಾತಾಗುತ್ತಿದೆ. ಆದರೆ, ಅದಕ್ಕರಿಯುವ ಒಳಚರಂಡಿ ನೀರು ತಡೆದು, ಎಸ್‌ಟಿಪಿ ಹಾಕಿ, ಸಂಸ್ಕರಿಸಿ ನೀರು ಹರಿಸಿ, ಬೇಲಿ ಹಾಕಿ ಸಂರಕ್ಷಿಸಿದರೆ ಮುಕ್ಕಾಲು ಪಾಲು ಕೆಲಸ ಮುಗಿದಂತೆ. ಅದಕ್ಕೆ ಯೋಜನೆಯಲ್ಲಿ ಪ್ರಮುಖ ಅವಕಾಶ ಇರುತ್ತದೆಯೇ ಎಂಬುದೇ ಸಂದೇಹ. ಏಕೆಂದರೆ, ಉಣಕಲ್‌ ಕೆರೆಯನ್ನು ₹5 ಕೋಟಿ ವೆಚ್ಚದಲ್ಲಿ ಪ್ರವಾಸೋದ್ಯಮ ತಾಣವನ್ನಾಗಿಸಬಹುದು ಎಂದು 2041ರ ಮಾಸ್ಟರ್‌ ಪ್ಲಾನ್‌ನಲ್ಲಿ ಹೇಳಲಾಗಿದೆ. ಅದೇನಾಯಿತು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಉಣಕಲ್‌ ಕೆರೆ ಎಂದರೆ ಹುಬ್ಬಳ್ಳಿ–ಧಾರವಾಡ ಹೆದ್ದಾರಿಯಲ್ಲಿರುವ ಕೆರೆಯೊಂದೇ ಎಂಬ ಭಾವ ಇದೆ. ಆದರೆ ಉಣಕಲ್‌ ಸರ್ವೆ ನಂಬರ್‌ಗಳಲ್ಲಿ ಅದನ್ನು ಬಿಟ್ಟು ಇನ್ನೂ ಮೂರು ಕೆರೆಗಳಿವೆ. ಹೆಬ್ಬಳ್ಳಿ ರಸ್ತೆ ಉಣಕಲ್‌ ಚಿಕ್ಕ ಕೆರೆ ಅಥವಾ ಚನ್ನಪ್ಪ ಕೆರೆ ಸುತ್ತಲೂ ಬೇಲಿ ಹೊಂದಿದೆ ಎಂಬುದಷ್ಟೇ ಸಮಾಧಾನ. 2.5 ಮೀಟರ್‌ನಷ್ಟು ಆಳ ಹೊಂದಿರುವ ಈ ಕೆರೆ ಶೇ 20ರಷ್ಟು ಒತ್ತುವರಿ ಕಂಡಿದ್ದು, ಒಳಚರಂಡಿ ನೀರು ಹಾಗೂ ತ್ಯಾಜ್ಯ ಮಳೆನೀರಿನ ಚರಂಡಿ ಮೂಲಕ ಹರಿಯುತ್ತದೆ.

ಮುನೇಶ್ವರನಗರದಲ್ಲಿರುವ ಉಣಕಲ್ ಕುಂಟೆ, 2 ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿದ್ದು, ಎರಡು ಮೀಟರ್‌ನಷ್ಟು ಆಳ ಹೊಂದಿದ್ದು ಎರಡು ಭಾಗದಲ್ಲಿ ರಸ್ತೆಯನ್ನು ಹೊಂದಿದೆ. ಶೇ 3ರಷ್ಟು ಪ್ರದೇಶ ಒತ್ತುವರಿಯಾಗಿದ್ದು, ಕೆರೆಯ ಮೇಲ್ಭಾಗದಲ್ಲಿ ಮನೆಗಳಿದ್ದರೂ, ಕೆರೆಯ ಕೆಳಭಾಗ ತಗ್ಗು ಪ್ರದೇಶವಾಗಿರುವುದರಿಂದ ಒಳಚರಂಡಿ ನೀರು ಇಲ್ಲಿಗೆ ಹರಿಯುತ್ತಿಲ್ಲ.

ಉಣಕಲ್‌ನ ಸರ್ವೆ ನಂಬರ್‌ 600ರಲ್ಲಿರುವ ತೋಪಲಗಟ್ಟಿ ಕೆರೆಗೆ ಸಾಕಷ್ಟು ಹಣವನ್ನು ಸುರಿದಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ₹15.57 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕವಾಗಿ ಅಭಿವೃದ್ಧಿ ಮಾಡುವ ಕೆಲಸ ಸಾಗಿದೆ. 23 ಎಕರೆ ಪ್ರದೇಶದಲ್ಲಿರುವ ಈ ಕೆರೆ ತೋಳನಕೆರೆ ಎಂದೇ ಪ್ರಸಿದ್ಧ. 2019ರಲ್ಲಿ ಭಾರಿ ಮಳೆಯಿಂದ ತುಂಬಿ ತುಳುಕಿದ್ದ ಈ ಕೆರೆ, ಕೋಡಿ ಹರಿದಿತ್ತು. ಆಗ, ಲಿಂಗರಾಜನಗರ, ಅಕ್ಷಯ ಕಾಲೊನಿ, ಬನಶಂಕರಿ ಬಡಾವಣೆಯಲ್ಲಿ ಜನರು ಸಾಕಷ್ಟು ಸಮಸ್ಯೆ ಎದುರಿಸಿ, ಮನೆಗೆ ನುಗ್ಗಿದ ಕೊಳಕು ನೀರಿನಲ್ಲಿ ರಾತ್ರಿ ಕಳೆದಿದ್ದರು. ಕೆರೆಗಳ ಮೂಲ ಹಾಗೂ ಮಳೆನೀರ ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಬಡಾವಣೆಗಳು, ವಾಣಿಜ್ಯ ಕಟ್ಟಡಗಳು ನಿರ್ಮಾಣವಾದರೆ ನೀರು ಎಲ್ಲಿದ ಸಾಗಬೇಕು ಹೇಳಿ...

ಕೆರೆಯ ಮೇಲೊಂದು ಮನೆಯ ಮಾಡಿ, ಮಳೆನೀರು ನುಗ್ಗಿದಾಗ ಅಂಜಿದರೆ ಎಂಥಯ್ಯಾ... ಎಂದು ಕೇಳಿಕೊಳ್ಳಬೇಕಷ್ಟೇ. ಇದಕ್ಕೆ ಕಾರಣರಾದವರು ಒಬ್ಬಿಬ್ಬರಲ್ಲ... ಆದರೆ, ಕಷ್ಟ ಅನುಭವಿಸುವುದು ಮಾತ್ರ ನಿವಾಸಿಗಳು. ಪ್ರಾಕೃತಿಕ ಮೂಲವನ್ನು ಸರಿಪಡಿಸಿಕೊಂಡರೆ ಜಲಮೂಲಗಳು ನಮ್ಮನ್ನು ರಕ್ಷಿಸುತ್ತವೆ. ಆರೋಗ್ಯ, ವಾತಾವರಣ ಎಲ್ಲವನ್ನೂ ಕಾಪಾಡುತ್ತವೆ.

ಅಂದು ₹8 ಕೋಟಿ; ಇಂದು ₹87 ಕೋಟಿ

ದರ್ಪಣ್‌ ಜೈನ್‌ ಅವರ ‘ಸೋಲ್‌’ ವರದಿ ಪ್ರಕಾರ, ತೋಳನಕೆರೆ 219 ಎಕರೆ ಪ್ರದೇಶದಲ್ಲಿ ಹುಬ್ಬಳ್ಳಿಯ ಹೃದಯಭಾಗದಲ್ಲಿದೆ. ಒಂದು ಕಾಲದಲ್ಲಿ ಕುಡಿಯುವ ನೀರು ಕೊಡುತ್ತಿದ್ದ ಕೆರೆ ಇಂದು ಅತ್ಯಂತ ದಯನೀಯ ಪರಿಸ್ಥಿತಿಯಲ್ಲಿದೆ. ಒತ್ತುವರಿ, ಒಳಚರಂಡಿ ನೀರು, ಹೂಳು, ತ್ಯಾಜ್ಯದ ಸಂಕಷ್ಟವಿದೆ. ನಗರಾಭಿವೃದ್ಧಿ ಇಲಾಖೆ ಅನುದಾನ, ಗ್ರಾಮೀಣಾಭಿವೃದ್ಧಿ ಇಲಾಖೆಯ ಕೆರೆ ಅಭಿವೃದ್ಧಿ ಯೋಜನೆ ಹಾಗೂ ನಗರಾಭಿವೃದ್ಧಿ ಇಲಾಖೆ ವತಿಯಿಂದ ಒಳಚರಂಡಿ ನೀರು ಸಂಸ್ಕರಣೆಯನ್ನು ₹8 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುವುದು.
ಇದಲ್ಲದೆ, ತೋಳನಕೆರೆ 23 ಎಕರೆಯಲ್ಲಿದ್ದು, ಅತ್ಯಂತ ದೊಡ್ಡ ಪ್ರಮಾಣದ ಒತ್ತುವರಿ, ಹೂಳು ಹಾಗೂ ಒಳಚರಂಡಿ ನೀರಿನಿಂದ ಬಳಲುತ್ತಿದೆ. ಹೂಳು ಎತ್ತುವುದು, ಏರಿ ನಿರ್ಮಾಣ, ವಾಕ್‌ಪಾತ್‌ಗಳ ನಿರ್ಮಾಣವನ್ನು ಪಾಲಿಕೆ ವತಿಯಿಂದ ಕೈಗೊಳ್ಳಲಾಗುತ್ತದೆ. ನಗರಾಭಿವೃದ್ಧಿ ಇಲಾಖೆ ಹಾಗೂ ಶಾಸಕರ ಸ್ಥಳೀಯಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಲ್ಲಿ ಕಾಮಗಾರಿ ನಡೆಸಲಾಗುತ್ತದೆ.
ಆದರೆ ಇಂದು, ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯಡಿ ಉಣಕಲ್‌ ಕೆರೆಯನ್ನು ₹87 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗಿದೆ. ಇದಕ್ಕೆ ಇನ್ನೂ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಮಾಡುವ ಪ್ರಕ್ರಿಯೆ ಆರಂಭಿಕ ಹಂತದಲ್ಲಿದೆ. ಆದರೂ ಕೋಟ್ಯಂತರ ವೆಚ್ಚ ಮಾಡಲು ಈಗಾಗಲೇ ನಿರ್ಧರಿಸಿಯಾಗಿದೆ.

ಕುಸಿಯುತಿದೆ ವ್ಯಾಪ್ತಿ

ಅತ್ಯಂತ ವಿಸ್ತಾರವಾದ ಉಣಕಲ್‌ ಕೆರೆಯ ವ್ಯಾಪ್ತಿ ವರ್ಷಗಳಿಂದ ವರ್ಷಕ್ಕೆ ಸರ್ಕಾರಿ ದಾಖಲೆಗಳಲ್ಲೂ ಕುಸಿತವಾಗುತ್ತಿರುವುದು ಅತ್ಯಂತ ಶೋಚನೀಯ ಸಂಗತಿ. ಎಂಪ್ರಿ ವರದಿ ಪ್ರಕಾರ, ಭೂ ಕಂದಾಯ ಮಾಪನ ಇಲಾಖೆಯ ದಾಖಲೆಯಂತೆ ಉಣಕಲ್ ಕೆರೆ, ಉಣಕಲ್‌ ಸರ್ವೆ ನಂ. 518 ಹಾಗೂ ಭೈರಿದೇವರಕೊಪ್ಪ ಸರ್ವೆ ನಂ. 446ರಲ್ಲಿ 229 ಎಕರೆ 22 ಗುಂಟೆ ಇದೆ. ಆದರೆ, ದರ್ಪಣ್‌ ಜೈನ್‌ ಅವರ ‘ಸೋಲ್‌’ ವರದಿಯಲ್ಲಿ ಈ ಕೆರೆಯ ವ್ಯಾಪ್ತಿ 219 ಎಕರೆ ಎಂದು ನಮೂದಾಗಿದೆ. ಈಗಿನ ಜಿಲ್ಲಾಡಳಿತ ಮಾಹಿತಿ ಪ್ರಕಾರ ಉಣಕಲ್‌ ಕೆರೆ ವ್ಯಾಪ್ತಿ 213 ಎಕರೆ 13 ಗುಂಟೆ ವ್ಯಾಪ್ತಿಯಲ್ಲಿದೆ. ವರ್ಷದಿಂದ ವರ್ಷಕ್ಕೆ ಕೆರೆಯ ವ್ಯಾಪ್ತಿ ಕುಸಿಯುತ್ತಿರುವುದು ಮಾತ್ರ ದುರ್ದೈವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT