ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್‌ ಕೆರಿ ಕಥಿ: ಹೊಲಸು ತಡೀರಿ, ಹೂಳು ತೆಗೀರಿ, ಬೇಲಿ ಹಾಕಿ

ಹುಬ್ಬಳ್ಳಿ–ಧಾರವಾಡ ಮೆಟ್ರೊ
Last Updated 18 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಕೆರೆ ಅಭಿವೃದ್ಧಿಗೆ ದುಡ್ಡಿಲ್ಲ... ಇದು ಸಾಮಾನ್ಯವಾಗಿ ಅಧಿಕಾರಿಗಳು ಹೇಳುವ ಮಾತು. ಕೆರೆಗಳ ಉಸ್ತುವಾರಿ ಹೊತ್ತಿರುವ ಎಲ್ಲ ಇಲಾಖೆಗಳ ಮುಖ್ಯಸ್ಥರ ಮಾತೂ ಹೌದು. ಜನಪ್ರತಿನಿಧಿಗಳು ಹಾಗೂ ಸಚಿವರೂ ಇದಕ್ಕೆ ಹೊರತೇನಲ್ಲ. ಏಕೆಂದರೆ, ಇವರ ಕಾರ್ಯಪಟ್ಟಿಯಲ್ಲಿ ಕೆರೆಗಳಿಗೆ ಸ್ಥಾನವೇ ಇಲ್ಲ. ಪರಿಸರ ದಿನ ಅಥವಾ ಜಲ ದಿನ ಅಥವಾ ಇನ್ನಾವುದೋ ದಿನಗಳಂದು ವೇದಿಕೆಗಳ ಭಾಷಣಕ್ಕಷ್ಟೇ ಕೆರೆಗಳ ರಕ್ಷಣೆ ಸೀಮಿತವಾಗಿರುತ್ತದೆ. ಆದರೆ ಗೊತ್ತಿರಲಿ, ಕೆರೆಗಳ ಸಂರಕ್ಷಣೆಗೆ ಕೂಡಲೇ ಅಥವಾ ಒಂದೇ ಬಾರಿಗೇ ನೂರಾರು ಕೋಟಿ ವ್ಯಯ ಮಾಡುವ ಅಗತ್ಯವಿಲ್ಲ.

ಧಾರವಾಡ–ಹುಬ್ಬಳ್ಳಿಯಲ್ಲಿ ಕೆರೆಗಳೆಂದರೆ, ಉಣಕಲ್‌, ಸಾಧನಕೆರಿ, ಕೆಲಗೇರಿ, ಕೋಳಿಕೆರೆ, ಕೆಂಪೆಗೆರೆ... ಇವಿಷ್ಟೇ ಹತ್ತು ಮತ್ತೊಂದು ಕೆರೆಗಳನ್ನು ಮಾತ್ರ ಅಧಿಕಾರಿಗಳು, ಜನಪ್ರತಿನಿಧಿಗಳು ಹೆಸರಿಸುತ್ತಾರೆ ಹಾಗೂ ಗಣನೆಯಲ್ಲಿಟ್ಟುಕೊಂಡಿದ್ದಾರೆ. ಹೀಗಾಗಿ, ಧಾರವಾಡ ಜಿಲ್ಲೆಯಲ್ಲಿರುವ 1,261 ಕೆರೆಗಳ ಬಗ್ಗೆ ಕೇಳಿದರೆ, ‘ಅಷ್ಟೊಂದು ಹಣ ನಮ್ಮಲ್ಲಿಲ್ಲ’ ಎಂದೇ ಹೇಳುತ್ತಾರೆ. ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇನ್ನೂ ಜೀವಂತವಾಗಿರುವ 54 ಕೆರೆಗಳ (ರಕ್ಷಣೆ ಆಗಿದ್ದೇ ಆದರೆ, ಈ ಸಂಖ್ಯೆ 65 ಮೀರಬಹುದು) ರಕ್ಷಣೆ ಬಗ್ಗೆ ಮಾತೆತ್ತಿದರೆ, ಮತ್ತೆ ಹತ್ತನ್ನೊಂದಕ್ಕೇ ನಿಂತುಕೊಳ್ಳುತ್ತದೆ. ಆದರೆ, ಇವಕ್ಕೇ ನೂರಾರು ಕೋಟಿ ವ್ಯಯ ಮಾಡಲು ಯೋಜಿಸಲಾಗುತ್ತಿದೆ.

ಉಣಕಲ್‌ ಕೆರೆಗೆ ₹87 ಕೋಟಿ, ತೋಳನಕರೆಗೆ ₹12 ಕೋಟಿ, ಕೆಂಪುಕೆರೆ ₹5 ಕೋಟಿ, ಕೋಳಿಕೆರೆಗೆ ₹5 ಕೋಟಿ, ಸಾಧನಕೆರೆಗೆ ₹3 ಕೋಟಿ, ಕೆಲಗೇರಿಗೆ ₹5 ಕೋಟಿ... ಹೀಗೆ ನೂರಾರು ಕೋಟಿ ವೆಚ್ಚ ಮಾಡುವ ಯೋಜನೆ ಕಾರ್ಯಗತವಾಗಿದೆ. ಆದರೆ, ಐದಾರು ಕೆರೆಗಳಿಗೆ ನೂರಾರು ಕೋಟಿ ವ್ಯಯ ಮಾಡುವ ಬದಲು, ಆ ಹಣವನ್ನೇ ಜೀವಂತವಿರುವ ಎಲ್ಲ ಕೆರೆಗಳ ರಕ್ಷಣೆಗೆ ಬಳಸಿಕೊಂಡರೆ ಬಹಳಷ್ಟು ಕೆರೆಗಳು ಅಸ್ತಿತ್ವ ಕಂಡುಕೊಳ್ಳುತ್ತವೆ. ಅಂದಹಾಗೆ, ಸಾವಿರ ಕೆರೆಗಳ ರಕ್ಷಣೆಗೆ ಸಾವಿರಾರು ಕೋಟಿ ಸದ್ಯಕ್ಕೆ ಬೇಕಿಲ್ಲ. ಅದು ಹೇಗೆ ಎಂದರೆ... ‘ಪ್ರಥಮ ಚಿಕಿತ್ಸೆ’. ಕನಿಷ್ಠ ಅದನ್ನು ಕೊಟ್ಟರೆ ಸಾಕು, ಬಹಳಷ್ಟು ಕೆರೆಗಳು ಉಸಿರಾಡುತ್ತವೆ.

ತುರ್ತು ಹಾಗೂ ದೀರ್ಘಾವಧಿ ಕ್ರಮ

ಕೆರೆಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ ವಿಷಯವಾಗಿ ಎಂಪ್ರಿ, ಒಂದು ವರ್ಷದೊಳಗಿನ, ಎರಡರಿಂದ ಮೂರು ವರ್ಷ ಹಾಗೂ ಮೂರು ವರ್ಷಕ್ಕೂ ಹೆಚ್ಚು ಸಮಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ವಿವರವಾಗಿ ನೀಡಿದೆ. ಹುಬ್ಬಳ್ಳಿ–ಧಾರವಾಡದಲ್ಲಿರುವ 47 ದುರ್ಬಳಕೆ ಕೆರೆಗಳ ವ್ಯಾಪ್ತಿಯನ್ನು ಒತ್ತುವರಿ ಮಾಡಿಕೊಂಡಿರುವವರಿಗೆ ನೋಟಿಸ್ ನೀಡಿ, ಅವುಗಳನ್ನು ತೆರವುಗೊಳಿಸಬೇಕು. ಇವುಗಳನ್ನು ನೀರು ಸಂಗ್ರಹ ತಾಣಗಳನ್ನಾಗಿ ಮರುಸ್ಥಾಪಿಸಬೇಕು. ರಸ್ತೆ ಸೇರಿದಂತೆ ಯಾವುದೇ ರೀತಿಯ ಕಾಮಗಾರಿಗಳನ್ನು ಜಲಮೂಲಗಳ ಒತ್ತುವರಿಯಿಂದ ಮಾಡದಂತೆ ನಿರ್ಣಯಿಸಬೇಕು. ಎಂಪ್ರಿ ಜಲಮೂಲಗಳ ಡೇಟಾಬೇಸ್‌ (ದತ್ತಾಂಶ)ವನ್ನು ದಾಖಲಿಸಿದೆ. ಅದನ್ನು ಬಳಸಿಕೊಂಡು ಜಲಮೂಲಗಳ ಬಗ್ಗೆ ಎಚ್‌ಡಿಎಂಸಿ ಆಸ್ತಿ ರಿಜಿಸ್ಟರ್‌ ರಚಿಸಬೇಕು. ಜೊತೆಗೆ ನೀರಿನ ಕಾಲುವೆಗಳ ಬಗ್ಗೆಯೂ ಮಾಹಿತಿ ದಾಖಲಿಸಬೇಕು. ಕೆರೆ ಮಾಲೀಕತ್ವದ ಬಗ್ಗೆ ಅಧಿಸೂಚನೆ ಮೂಲಕ ತಿಳಿಸಬೇಕು. ಈ ಮೂಲಕ ಒತ್ತುವರಿ, ಮಾಲಿನ್ಯವನ್ನು ತೆರವುಗೊಳಿಸಿ, ನೀರಿನ ಗುಣಮಟ್ಟ ಕಾಯ್ದುಕೊಳ್ಳಬಹುದು. ಕೆರೆ ಹಾಗೂ ನೀರು ಕಾಲುವೆಗಳ ಒತ್ತುವರಿಯನ್ನು ತೆರವುಗೊಳಿಸಿ ಯಾವುದೇ ರೀತಿಯಲ್ಲೂ ಮುಂದೆ ಅದರ ಒತ್ತುವರಿಯಾಗದಂತೆ ಬೇಲಿ, ತಡೆಗೋಡೆ ಹಾಕಬೇಕು. ನಗರಾಭಿವೃದ್ಧಿಯ ಮಾಸ್ಟರ್‌ ಪ್ಲಾನ್‌ನಲ್ಲೂ ಇದರ ಬಗ್ಗೆ ಸ್ಪಷ್ಟ ಸೂಚನೆ ಇರಬೇಕು. ಕೆರೆ ಹಾಗೂ ಅದರ ಅಚ್ಚುಕಟ್ಟು ಪ್ರದೇಶದ ಫಲವಂತಿಕೆ ನಾಶ ಮಾಡುವುದನ್ನು ತಡೆಯಬೇಕು. ಇದಕ್ಕಾಗಿ ಸೂಚಿಸಲಾಗಿರುವ ಬಫರ್‌ ಝೋನ್‌ ಅನ್ನು ಕಟ್ಟುನಿಟ್ಟಾಗಿ ನಿರ್ವಹಣೆ ಮಾಡಬೇಕು.

ಕೆರೆಗಳ ಮಾಲಿನ್ಯ ತಡೆಯ ನಿಟ್ಟಿನಲ್ಲಿ ಪ್ರಥಮವಾಗಿ ಒಳಚರಂಡಿ ನೀರು ಹರಿಯದಂತೆ, ತ್ಯಾಜ್ಯ ವಿಲೇವಾರಿ ಆಗದಂತೆ ತಡೆಯಬೇಕು. ಸಂಸ್ಕರಿಸಿದ ನೀರು ಮಾತ್ರ ಕೆರೆಗೆ ಹರಿಯಲು ಎಸ್‌ಟಿಪಿಗಳನ್ನು ಅಳವಡಿಸಬೇಕು. ನೀರು ಕಾಲುವೆ ಸಂರಕ್ಷಣೆ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ‘ಮಾಲಿನ್ಯದಾರರಿಗೆ ದಂಡ’ ವಿಧಿಸಿ ಅವರ ಹೆಸರುಗಳನ್ನು ಪಾಲಿಕೆ ಕಚೇರಿ ಹಾಗೂ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ವರದಿ ಹೇಳಿದೆ.

ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ. ಅಷ್ಟೊಂದು ಹಣ ಇಲ್ಲ ಎಂದು ಕೆರೆಗಳ ನಿರ್ಲಕ್ಷ್ಯ ಮಾಡುವ ಬದಲು ತುರ್ತಾಗಿ ಆಗುವ ಕೆಲಸವನ್ನು ಮೊದಲು ಮಾಡಿದರೆ ಇರುವುದಾದರೂ ಉಳಿಯುತ್ತದೆ. ಖಾಸಗಿ ಸಹಭಾಗಿತ್ವವೂ ಜೊತೆಗೂಡಿದರೆ ಕೆಲಸ ಸುಲಭ. ಈ ಬಗ್ಗೆ ಎಲ್ಲರೂ ಆಲೋಚಿಸುವಂತಾಗಲಿ ಎಂಬುದೇ ಆಶಯ.

ಕೆರೆಗಳಿಗೆ ‘ಪ್ರಥಮ ಚಿಕಿತ್ಸೆ’

ಕೆರೆಗಳ ಅಭಿವೃದ್ಧಿಗಿಂತ ರಕ್ಷಣೆ ಮೊದಲು ಆಗಬೇಕಿದೆ. ರಕ್ಷಣೆ ಎಂದರೆ, ಈಗ ಜೀವಂತ ಇರುವ ಕೆರೆಗೆ ಒಳಚರಂಡಿ ನೀರು ಹರಿಯುವುದನ್ನು ತಡೆಯಬೇಕು; ಕೊಳಕು, ತ್ಯಾಜ್ಯ, ಹೂಳು ತೆಗೆದು ನೀರಿನ ಸಂಗ್ರಹ ವೃದ್ಧಿಸಬೇಕು; ಕೆರೆ ವ್ಯಾಪ್ತಿಯ ಸರ್ವೆ ಪ್ರಕಾರ ಗಡಿ ಗುರುತಿಸಿ, ಬೇಲಿ ಹಾಕಬೇಕು; ಕೆರೆಗೆ ನೀರು ಹರಿಯುವ ಕಾಲುವೆಗಳನ್ನು ಸುಸ್ಥಿತಿಗೆ ತರಬೇಕು; ರಸ್ತೆ ಹಾಗೂ ಇತರೆ ಬೃಹತ್‌ ನಿರ್ಮಾಣದ ಮೇಲಿನ ಮಳೆ ನೀರೆಲ್ಲ ಕಾಲುವೆ ಮೂಲಕ ಕೆರೆಗೇ ಹೋಗುವಂತೆ ಮಾಡಬೇಕು...

ಕೆರೆಗಳ ವಿಷಯದಲ್ಲಿ ಇಷ್ಟು ಕೆಲಸ ತುರ್ತಾಗಿ ಆಗಬೇಕಿದೆ. ಇದಕ್ಕೆ ಅತಿಯಾದ ಹಣವೇನೂ ವೆಚ್ಚವಾಗುತ್ತಿಲ್ಲ. ಅಭಿವೃದ್ಧಿ ಎಂದು ಡಿಪಿಆರ್‌ (ವಿಸ್ತೃತ ಯೋಜನಾ ವರದಿ) ಮಾಡಲು ವರ್ಷಗಟ್ಟಲೆ ಸಮಯವೂ ವ್ಯಯವಾಗುವುದಿಲ್ಲ. ಹೈಟೆಕ್‌ ಸೌಲಭ್ಯಗಳೆಂದು ಕೋಟ್ಯಂತರ ರೂಪಾಯಿ ವೆಚ್ಚವನ್ನೂ ಮಾಡಬೇಕಿಲ್ಲ. ‘ಪ್ರಥಮ ಚಿಕಿತ್ಸೆ’ಯಂತರ ಐದಂಶದ ಕಾರ್ಯಕ್ರಮವನ್ನು ಜಾರಿ ಮಾಡಿದರೆ ಕಡಿಮೆ ವೆಚ್ಚದಲ್ಲಿ ಕೆರೆಗಳನ್ನು ರಕ್ಷಿಸಬಹುದು. ಇದಾದರೆ ಮುಂದಾಗಬಹುದಾದ ಒತ್ತುವರಿಯನ್ನೂ ತಡೆದಂತಾಗುತ್ತದೆ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಬೇಕಿದೆ. ಗಮನಹರಿದು ಅವರು ಕೆಲಸ ಮಾಡುವಂತಾಗಲು ಪರಿಸರ ಕಾಳಜಿಯ ಜವಾಬ್ದಾರಿ ಹೊಂದಿರುವ ಎಲ್ಲರೂ ಒತ್ತಾಯ ಮಾಡಲೇಬೇಕಿದೆ.

ಕೆರೆ ಒತ್ತುವರಿ ತೆರವಿಗೆ ಸೂಕ್ತ ಕ್ರಮ ಶೀಘ್ರ

ಕೆರೆಗಳ ಸುಪರ್ದಿ ಹಲವು ಇಲಾಖೆಗಳಿಗಿದೆ. ಸರ್ಕಾರದಿಂದ ಎಷ್ಟು ಅನುದಾನ ಬರುತ್ತದೋ ಅದರಲ್ಲಿ ಅವರು ಕೆರೆಗಳ ಅಭಿವೃದ್ಧಿ, ಸಂರಕ್ಷಣೆ ಕಾರ್ಯವನ್ನು ಮಾಡುತ್ತಾರೆ. ಲೋಕೋಪಯೋಗಿ, ಸಣ್ಣ ನೀರಾವರಿ ಇಲಾಖೆ, ಕಂದಾಯ ಇಲಾಖೆಗಳಡಿ ಹಲವು ಕೆರೆಗಳಿವೆ. ಅವರೇ ನಿರ್ವಹಣೆ ಮಾಡುತ್ತಿದ್ದಾರೆ. ಇನ್ನು ನಮ್ಮ ಸಿಟಿಯಲ್ಲಿರುವ ಕೆರೆಗಳನ್ನು ಮಹಾನಗರ ಪಾಲಿಕೆಯವರು ನಿರ್ವಹಣೆ, ಅಭಿವೃದ್ಧಿ ಮಾಡುತ್ತಾರೆ. ಸ್ಮಾರ್ಟ್‌ ಸಿಟಿ, ನಗರಾಭಿವೃದ್ಧಿ ಇಲಾಖೆಗಳ ಅನುದಾನದಿಂದ ಅಭಿವೃದ್ಧಿ ಕಾರ್ಯನಡೆಯುತ್ತಿದೆ. ಎಲ್ಲವನ್ನೂ ಒಂದೇ ಬಾರಿ ಮಾಡಲು ಆಗುವುದಿಲ್ಲ. ನಮ್ಮ ಜನ ಕೂಡ ಕೆರೆಗಳಿಗೆ ಅಷ್ಟೊಂದು ಪ್ರಾಮುಖ್ಯ ನೀಡುತ್ತಿಲ್ಲ. ಉದಾಹರಣೆಗೆ ಕೆಲಗೇರಿ ಕೆರೆ ಸಮೀಪ ತ್ಯಾಜ್ಯ ಹಾಕಲು ಡಬ್ಬಿಗಳನ್ನು ಅಳವಡಿಸಲಾಗಿತ್ತು. ಅದನ್ನು ತೆಗೆದುಕೊಂಡು ಹೋಗಿದ್ದಾರೆ. ಆದರೂ ಕೆಲಗೇರಿ ಮತ್ತೆ ಅಭಿವೃದ್ಧಿ ಮಾಡುತ್ತಿದ್ದೇವೆ. ಇದು ಒಂದು ರೀತಿ ಸತತವಾದ ಪ್ರಕ್ರಿಯೆ. ಒಂದು ಬಾರಿ ಅಭಿವೃದ್ಧಿ ಮಾಡುತ್ತೇವೆ. ಜನ ಅದನ್ನು ಕೆಡಿಸಿದ ಮೇಲೆ ಮತ್ತೆ ಮಾಡಬೇಕು. ಕೆರೆಗೆ ವಾಚ್‌ಮ್ಯಾನ್‌ ಹಾಕಲು ಸಾಧ್ಯ ಇಲ್ಲ ಅಲ್ಲವೇ? ಅದು ಸಾರ್ವಜನಿಕ ಆಸ್ತಿ ಅಲ್ಲವೇ? ಜನರು ಕೆರೆಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಕಸ–ಕಡ್ಡಿಯನ್ನೆಲ್ಲ ಕೆರೆಗೇ ಹಾಕುತ್ತಿದ್ದಾರೆ.ಜನರೂ ಕೆರೆ ರಕ್ಷಿಸಿಕೊಳ್ಳಬೇಕು. ಒಳಚರಂಡಿ ನೀರು ಹರಿಯುವುದನ್ನು ತಡೆಯಲು ಎಸ್‌ಟಿಪಿ ಅಳವಡಿಸಲಾಗುತ್ತಿದೆ. ಉಣಕಲ್‌ ಕೆರೆಗೆ ಹಲವು ಮೂಲಗಳಿಂದ ನೀರು ಬರುತ್ತಿದೆ. ಹೀಗಾಗಿ ಕೆರೆ ಗಡಿ ಗುರುತಿಸಿ, ಎಲ್ಲೆಲ್ಲಿ ನೀರು ಬರುತ್ತಿದೆ ಅದನ್ನು ಒಂದು ಕಡೆ ಹರಿಯುವಂತೆ ಮಾಡಿ, ಸಂಸ್ಕರಿಸಿ ಬಿಡುವ ಯೋಜನೆ ‘ಸ್ಮಾರ್ಟ್ ಸಿಟಿ’ ಯೋಜನೆಯಲ್ಲಾಗುತ್ತಿದೆ. ತೋಳನಕೆರೆ ಕೂಡ ಅಭಿವೃದ್ಧಿಯಾಗುತ್ತಿದೆ. ಕೆಲಗೇರಿಯಲ್ಲೂ ಎಸ್‌ಟಿಪಿ ಅಳವಡಿಸಲು ಯೋಜನೆ ರೂಪಿಸಲಾಗುತ್ತಿದೆ. ಸಾಧನಕೆರೆ ನಾನು ನೋಡಿದಾಗ ಅತ್ಯುತ್ತಮವಾಗಿತ್ತು. ಕುಟುಂಬದೊಂದಿಗೆ ಸಮಯ ಕಳೆದಿದ್ದೆ. ಈಗ ನಿರ್ವಹಣೆ ಇಲ್ಲದೆ ಎಲ್ಲವೂ ಸೊರಗಿದೆ. ಈಗ ಮತ್ತೆ ಅದನ್ನೆಲ್ಲ ಪುನಶ್ಚೇತನ ಮಾಡುತ್ತಿದ್ದೇವೆ. ಕಂದಾಯ ಇಲಾಖೆ ಕೆರೆಗಳ ಸರ್ವೆ ಎಲ್ಲ ಆಗಿದೆ. ಒತ್ತುವರಿ ಇರುವುದನ್ನು ತೆಗೆದಿದ್ದೇವೆ. ಎಲ್ಲೆಲ್ಲಿ ಅನುದಾನ ಲಭ್ಯವಿದೆ ಅಲ್ಲಲ್ಲಿ ಕೆರೆಗಳನ್ನು ಅಭಿವೃದ್ಧಿ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿ ಸಾಕಷ್ಟು ಕೆರೆಗಳ ಒತ್ತುವರಿ ಇದೆ ಎಂಬುದಿದೆ. ಎಲ್ಲೆಲ್ಲಿ ಕೆರೆಗಳ ಒತ್ತುವರಿ ಇದೆ ಅವುಗಳೆಲ್ಲವನ್ನೂ ತೆರವು ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲ ಕೆರೆಗಳ ಸಂಪೂರ್ಣ ಮಾಹಿತಿಯನ್ನು ನಮ್ಮ ಕಚೇರಿಯಲ್ಲಿ ದಾಖಲಿಸಲು ಕ್ರಮ ಕೈಗೊಳ್ಳಲಾಗುತ್ತದೆ.

-ದೀಪಾ ಚೋಳನ್‌, ಜಿಲ್ಲಾಧಿಕಾರಿ, ಧಾರವಾಡ

ಪುನರ್ವಸತಿ ನಂತರ ನಾಲಾ ಒತ್ತುವರಿ ತೆರವು

ನಮ್ಮ ಪಾಲಿಕೆ ವ್ಯಾಪ್ತಿಯಲ್ಲಿ 10 ಕೆರೆಗಳಷ್ಟೇ ಬರುತ್ತವೆ. ಬಾಕಿ ಎಲ್ಲ ಆಯಾ ಇಲಾಖೆಗಳಿಗೆ ಬರುತ್ತವೆ. ನಾವು ಈಗ, ತೋಳನಕೆರೆ ಉಣಕಲ್‌ ಕೆರೆಯನ್ನು ಸ್ಮಾರ್ಟ್‌ ಸಿಟಿ ಯೋಜನೆಯಡಿ ಅಭಿವೃದ್ಧಿ ಮಾಡುತ್ತಿದ್ದೇವೆ. ಕೆಲಗೇರಿ ಕೆರೆಯನ್ನು ಹೂಡಾ, ಪ್ರವಾಸೋದ್ಯಮ ಇಲಾಖೆಯ ಅನುದಾನದಿಂದ ಅಭಿವೃದ್ಧಿ ಮಾಡುತ್ತೇವೆ. ಇದಕ್ಕೆ ಪೂರಕವಾಗಿ, ಕೆರೆಗಳಿಗೆ ಒಳಚರಂಡಿ ನೀರು ಬರಬಾರದೆಂದು ಎಸ್‌ಟಿಪಿ ಯೋಜನೆ ಮಾಡಿದ್ದೇವೆ. 5 ಎಸ್‌ಟಿಪಿಗಳು (ಕೃಷಿ ವಿವಿ ಆವರಣ, ಧಾರವಾಡ; ಕೆಲಗೇರಿ; ತೋಳನಕೆರೆ; ಉಣಕಲ್‌, ರಾಮನಗರ–ಹುಬ್ಬಳ್ಳಿ) ಹಾಗೂ 6 ವೆಟ್‌ ವೆಲ್ಸ್‌ಗಳನ್ನು (ಮನೋಜ್‌ ಪಾರ್ಕ್‌; ನವೀನ್‌ ಪಾರ್ಕ್‌, ಮುರಾರ್ಜಿನಗರ– ಹುಬ್ಬಳ್ಳಿ; ಕೃಷಿ ವಿವಿ, ಕೆಲಗೇರಿ, ನವಲೂರು–ಧಾರವಾಡ) ಅಳವಡಿಸಲು ಯೋಜಿಸಲಾಗಿದೆ. ಇವುಗಳಿಂದ ಪ್ರತಿ ದಿನ 18.25 ದಶಲಕ್ಷ ಲೀಟರ್‌ ನೀರು ಸಂಸ್ಕರಿಸಬಹುದಾಗಿದೆ. ಇದಕ್ಕಾಗಿ ₹4.11 ಕೋಟಿ ವೆಚ್ಚದ ಯೋಜನೆಯಿದೆ. ಇವೆಲ್ಲ ಅನುಷ್ಠಾನವಾದರೆ ಕೆರೆಗಳಿಗೆ ಸಂಸ್ಕರಿಸಿದ ನೀರು ಮಾತ್ರ ಹರಿಯುತ್ತದೆ. ಇನ್ನೂ ಶೇ 40ರಷ್ಟು ಒಳಚರಂಡಿ ನೀರು ಸಂಸ್ಕರಿಸಲು ಅವಕಾಶವಿದೆ. ಅದನ್ನೂ ಸಂಸ್ಕರಿಸಬೇಕಾಗುತ್ತದೆ. ಆದರೆ ಸದ್ಯಕ್ಕೆ ಕೆಲಗೇರಿ, ಉಣಕಲ್‌ಗೆ ಎಸ್‌ಟಿಪಿ ಬರುತ್ತದೆ. ನಂತರ ಕೋಳಿ ಕೆರೆಗೆ ಎಸ್‌ಟಿಪಿ ಬರುತ್ತದೆ. ಇವೆಲ್ಲ ಮಾರ್ಚ್‌ ಅಂತ್ಯಕ್ಕೆ ಮುಗಿಯಲಿವೆ. ಇನ್ನು, ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲೆಡೆಯೂ ಒಳಚರಂಡಿ ವ್ಯವಸ್ಥೆ ಕಲ್ಪಿಸಿ, ಎಲ್ಲ ನೀರನ್ನು ಸಂಸ್ಕರಿಸಲು 9 ಎಸ್‌ಟಿಪಿ ಅಳವಡಿಸಲು ಯೋಜಿಸಲಾಗಿದೆ. ಇದರಿಂದ ಇನ್ನೂ 25 ಎಂಎಲ್‌ಡಿ ಸಂಸ್ಕರಿಸಬಹುದಾಗಿದೆ. ಇದಕ್ಕಾಗಿ ₹430 ಕೋಟಿ ಯೋಜನೆಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ. ಇದೆಲ್ಲ ಆದರೆ, ಪಾಲಿಕೆ ವ್ಯಾಪ್ತಿಯ ಯಾವ ಕೆರೆಗೂ ಒಳಚರಂಡಿ ನೀರು ಕೆರೆಗಳಿಗೆ ಹರಿಯುವುದಿಲ್ಲ. ಒತ್ತುವರಿ ಬಗ್ಗೆ ಹೇಳುವುದಾದರೆ ಕೆಲವು ಕೆರೆಗಳಲ್ಲಿ ಇದೆ. ಉಣಕಲ್‌ ಕೆರೆಯ ಸರ್ವೆಯನ್ನು ದ್ರೋಣ್‌ನಲ್ಲಿ ಮಾಡಿಸಲಾಗುತ್ತದೆ. ಇನ್ನು, ನೀರು ಕಾಲುವೆಗಳ ಒತ್ತುವರಿ ಬಗ್ಗೆ ಸಾಕಷ್ಟು ಗುರುತಿಸಲಾಗಿದೆ. ಅದನ್ನು ತೆರವುಗೊಳಿಸಬೇಕಿದೆ. ಅಲ್ಲಿರುವವರಿಗೆ ಪುನರ್ವಸತಿ ಕಲ್ಪಿಸಲು ಸ್ಥಳ ಗುರುತಿಸಿ, ಅಲ್ಲಿ ಅವರನ್ನು ಸ್ಥಳಾಂತರಿಸಿದ ನಂತರ ನಾಲಾ ಒತ್ತುವರಿ ತೆರವು ಮಾಡಲಾಗುತ್ತದೆ. ಕೆರೆಗಳ ಅಭಿವೃದ್ಧಿಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗದಂತೆ ನೋಡಿಕೊಳ್ಳಲಾಗುತ್ತದೆ.

-ಸುರೇಶ್‌ ಇಟ್ನಾಳ, ಆಯುಕ್ತ, ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT