ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಅಂಗಳದಲ್ಲೇ ಕ್ರೀಡೆ, ಮಂದಿರ; ಗಾಂಧೀಜಿ ಹೆಸರಿದ್ದರೂ ಸ್ವಚ್ಛತೆಯಿಂದ ದೂರ

ಹುಬ್ಬಳ್ಳಿ–ಧಾರವಾಡ ಮೆಟ್ರೊ | ನಮ್‌ ಕೆರಿ ಕಥಿ–7
Last Updated 10 ಫೆಬ್ರುವರಿ 2020, 4:03 IST
ಅಕ್ಷರ ಗಾತ್ರ

ಧಾರವಾಡದ ಸಪ್ತಾಪುರ ಹಾಗೂ ಲಕಮನಹಳ್ಳಿಗಳು ವಸತಿ ಬಡಾವಣೆಗಳಾಗಲು ಬಹುತೇಕ ತಮ್ಮ ಉಸಿರನ್ನೇ ನೀಡಿವೆ. ಸಪ್ತಾಪುರ ಹಾಗೂ ಲಕಮನಹಳ್ಳಿಗಳು ಸರ್ಕಾರಿ ದಾಖಲೆಗಳಲ್ಲಿ ಮಾತ್ರ ಉಳಿದಿದ್ದು, ಅಲ್ಲಿನ ಬಡಾವಣೆಗಳೇ ಇಂದು ಪ್ರಚಲಿತ. ಹೀಗಾಗಿಯೇ, ಜಲಮೂಲಗಳು ಕುರುಹು ಇಲ್ಲದಂತೆ ನಶಿಸಿಹೋಗಿವೆ.

ಧಾರವಾಡದಲ್ಲಿನ ಸಪ್ತಾಪುರದಲ್ಲಿ ಆರು ಕೆರೆಗಳಿರುವ ದಾಖಲೆ ಇದೆ. ಆದರೆ ಸಪ್ತಾಪುರ ಕೆರೆ ಎಂದರೆ ಜಯನಗರದ ಕೆರೆ ಎಂಬುದಷ್ಟೇ ಜನಜನಿತ. ಉಳಿದ್ದವೆಲ್ಲ ಗೌಣ. ಸಪ್ತಾಪುರ ಕೊನೆಯ ಬಸ್‌ ನಿಲ್ದಾಣ ಹಳಿಯಾಳ ರಸ್ತೆಗೆ ಹೊಂದಿಕೊಂಡಂತಿದ್ದ ಅರ್ಧ ಎಕರೆಯಲ್ಲಿದ್ದ ಸಪ್ತಾಪುರ ಕುಂಟೆ– 1 ಇದೀಗ ಚನ್ನಬಸವೇಶ್ವ ನಗರ 1ನೇ ಅಡ್ಡರಸ್ತೆಯಲ್ಲಿರುವ ಧಾರ್ಮಿಕ ಕೇಂದ್ರದ ಕಟ್ಟಡವಾಗಿದೆ. ಇನ್ನೂ ನಿರ್ಮಾಣವೂ ಆಗುತ್ತಿದೆ. ಅರ್ಧ ಎಕರೆ ವ್ಯಾಪ್ತಿಯಲ್ಲಿದ್ದ ಸಪ್ತಾಪುರ ಕುಂಟೆ– 2 ಮಾಳಮಡ್ಡಿ ಶ್ರೀ ಸದಾಶಿವ ಒಡೆಯರ್‌ ರಸ್ತೆಯಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರವಾಗಿದೆ. ಹಳಿಯಾಳ ರಸ್ತೆಯಲ್ಲಿರುವ ಶ್ರೀನಗರದ ನಂತರ ಬಸವೇಶ್ವರನಗರ 2ನೇ ಭಾಗದಲ್ಲಿ ಹೆದ್ದಾರಿಗೆ ಹೊಂದಿಕೊಂಡಿದ್ದ 11 ಗುಂಟೆ ವ್ಯಾಪ್ತಿಯ ಸಪ್ತಾಪುರ ಕುಂಟೆ–3 ಇನ್ನೂ ಉಸಿರಾಡುತ್ತಿದೆ. ಆದರೆ, ಈ ಕೆರೆಗೆ ಕಟ್ಟಡ ತ್ಯಾಜ್ಯ ತಂದು ಸುರಿದು ಅದನ್ನು ಮುಚ್ಚುವ ಎಲ್ಲ ಪ್ರಯತ್ನಗಳೂ ನಡೆಯುತ್ತಿವೆ. ಸುತ್ತಲೂ ದೊಡ್ಡ ಕಟ್ಟಡಗಳಿರುವುದರಿಂದ ಈ ಜಲಮೂಲ ಕಾಣುವುದಿಲ್ಲ. ಇದಕ್ಕೆ ಬೇಲಿಹಾಕಿ, ವೃಕ್ಷವನ, ಮಳೆಕೊಯ್ಲು ಪ್ರದೇಶವಾಗಿ ಉಳಿಸಿಕೊಳ್ಳಬಹುದು.

ವಿಜಯಾನಂದ ನಗರದಲ್ಲಿರುವ ಸಪ್ತಾಪುರ ಕುಂಟೆ–4ರ ಬಳಿಗೆ ಹೋಗಲು ಸಾಧ್ಯವಿಲ್ಲದಷ್ಟು ದುರ್ನಾತ. ಹೊಸ ಬಡಾವಣೆ ಶ್ರೀಪಾದನಗರದ ಕೊನೆಯಭಾಗದಲ್ಲಿರುವ ಈ ಕೆರೆಯನ್ನು ಅಲ್ಲಿನ ನಿವಾಸಿಗಳು ಕೆರೆ ಪ್ರದೇಶವನ್ನು ತ್ಯಾಜ್ಯ ಎಸೆಯಲು ಮೀಸಲಿರಿಸಿಕೊಂಡಿದ್ದಾರೆ. ಒಳಚರಂಡಿ ನೀರು ಇದರೊಂದಿಗೆ ಸೇರಿಕೊಂಡು ಕೆರೆಗೆ ಅತಿಹೆಚ್ಚು ಮಾಲಿನ್ಯಗೊಂಡಿದೆ. 1 ಎಕರೆ 9 ಗುಂಟೆ ಪ್ರದೇಶದಲ್ಲಿರುವ ಈ ಕೆರೆಯ ಪ್ರದೇಶದಲ್ಲಿ ಶೇ 6ರಷ್ಟು ಈಗಾಗಲೇ ಒತ್ತುವರಿಯಾಗಿದೆ. ಈ ಕೆರೆ ಅಭಿವೃದ್ಧಿಗೊಳ್ಳುವ ಎಲ್ಲ ಅವಕಾಶವನ್ನೂ ಹೊಂದಿದೆ. ಕೆಲಗೇರಿ ಕೆರೆ ಎಲ್ಲರಿಗೂ ಗೊತ್ತು. ಆದರೆ, ಅದರ ಹಿಂಭಾಗದಲ್ಲಿ ಹರಿಯುವ ಕೊಳಚೆ ನೀರು ಸಪ್ತಾಪುರ ಕುಂಟೆ–5ರ ಪ್ರದೇಶವನ್ನು ಹಾಯ್ದುಬರುತ್ತದೆ. ಹಳಿಯಾಳ ರಸ್ತೆಯಲ್ಲಿರುವ ಶ್ರೀನಗರದ ಶಿವಾಲಯದ ಬಳಿಯ 1ನೇ ಮುಖ್ಯರಸ್ತೆಯಲ್ಲಿ ಒಳಹೋದರೆ, ಕೆಲಗೇರಿ ಕೆರೆ ಸಿಗುವ ಮುನ್ನ ಸಪ್ತಾಪುರ ಕುಂಟೆ–5 ಸಿಗುತ್ತದೆ. ಒಂದು ಎಕರೆ 17 ಗುಂಟೆ ಪ್ರದೇಶದಲ್ಲಿರುವ ಈ ಕೆರೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಖಾಲಿ ಪ್ರದೇಶವಾಗಿರುವ ಈ ಕೆರೆಯನ್ನು ಉಳಿಸಕೊಳ್ಳುವ ಎಲ್ಲ ಅವಕಾಶವೂ ಇದೆ.

ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ವಾಣಿಜ್ಯ ಸಂಕೀರ್ಣದ ಬಳಿ ಸಪ್ತಾಪುರದ ಕೆರೆ ಜಯನಗರದ ಕೆರೆ ಎಂಬ ಹೆಸರಿನಲ್ಲಿ ಸಮಾಧಾನಗೊಳ್ಳಬಹುದಾದ ರೀತಿಯಲ್ಲಿ ನಳನಳಿಸುತ್ತಿದೆ. ಸಾಕಷ್ಟು ಅಭಿವೃದ್ಧಿಯನ್ನು ಕಂಡಿದ್ದರೂ ಈ ಕೆರೆಯಲ್ಲಿ ಕಲ್ಮಶ ತೇಲುತ್ತಿದೆ. ಅಭಿವೃದ್ಧಿಯಿಂದ ಸಾಕಷ್ಟು ಹಸಿರು ಕಂಗೊಳಿಸುತ್ತದೆ. ಉದ್ಯಾನದಂತೆ ಹೊರಭಾಗಕ್ಕೆ ಕಾಣುವ ಕೆರೆ, ಒಳಭಾಗದಲ್ಲಿ ನೀರಿನ ಸಂಗ್ರಹವೊಂದಿದೆ. ಜಿಲ್ಲಾಡಳಿತ ಹಾಗೂ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಈ ಕೆರೆಯನ್ನು ಅಭಿವೃದ್ಧಿಗೊಳಿಸಿ, ಉದ್ಯಾನವನ್ನೂ ನಿರ್ಮಿಸಿ 2012ರ ಡಿಸೆಂಬರ್‌ 9ರಂದು ಉದ್ಘಾಟನೆಯನ್ನು ಮಾಡಲಾಗಿದೆ. ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಹೆಚ್ಚಾಗಿ ಬಂದು ಆಯಾಸ ನಿವಾರಿಸಿಕೊಳ್ಳುತ್ತಾರೆ. ಆದರೆ, ಕೆರೆ ನಿರ್ವಹಣೆಯಲ್ಲಿ ಸಾಕಷ್ಟು ನಿರಾಸಕ್ತಿ.

ಲಕಮನಹಳ್ಳಿಯ ದಾಖಲೆಯಲ್ಲಿ ಎಂಟು ಕೆರೆಗಳಿವೆ. ಆದರೆ, ಜೀವಂತವಾಗಿ ಉಳಿದಿರುವುದು ಎರಡು ಕೆರೆಗಳು ಮಾತ್ರ. ಅದೂ ಅವುಗಳನ್ನು ಒಳಚರಂಡಿ ನೀರು ಹಾಗೂ ತ್ಯಾಜ್ಯ ಸಂಗ್ರಹಕ್ಕಾಗಿ ಮಾತ್ರ ಉಳಿಸಿಕೊಳ್ಳಲಾಗಿದೆ. ಇನ್ನು ಕುಂಟೆ–4 ಒಂದು ಎಕರೆಯಲ್ಲಿದ್ದರೂ ಶೇ 85ರಷ್ಟು ಒತ್ತುವರಿಯಾಗಿ, ಉಳಿದದ್ದು ಹೊಲಸಿನ ಗುಂಡಿಯಾಗಿದೆ. ಲಕಮನಹಳ್ಳಿ ಕುಂಟೆ–1 ದಾಖಲೆಯಲ್ಲಿ 14 ಗುಂಟೆ ಇದ್ದು, ಧಾರವಾಡದ ವಿದ್ಯಾಗಿರಿ, ದಾನೇಶ್ವರಿ ನಗರದಲ್ಲಿ ಸಂಪೂರ್ಣ ಒತ್ತುವರಿಯಾಗಿದೆ. ಕುಂಟೆ–2 ಗಾಂಧಿನಗರ ರತ್ನಗಿರಿಯಲ್ಲಿ, ಕುಂಟೆ–3 ಗಾಂಧಿನಗರದ ಡ್ರೈವರ್ಸ್‌ ಕಾಲೊನಿ, ಕುಂಟೆ 4, 5 ಗಾಂಧಿನಗರದ ರಜತಗಿರಿಯಲ್ಲಿ, ಕುಂಟೆ–6 ವಿದ್ಯಾಗಿರಿಯಲ್ಲಿ ಒತ್ತುವರಿಯಾಗಿವೆ. 4 ಎಕರೆಗೂ ಹೆಚ್ಚಿನ ವ್ಯಾಪ್ತಿಯ ಕೆರೆ–1 ಈಗಿನ ವಿದ್ಯಾಗಿರಿಯಲ್ಲಿ ಕೃಷಿ ಪ್ರದೇಶ ಹಾಗೂ ಕಟ್ಟಡಗಳಿಂದ ಒತ್ತುವರಿಯಾಗಿದೆ. ಇನ್ನು, 6 ಎಕರೆಗೂ ಹೆಚ್ಚಿನ ವ್ಯಾಪ್ತಿಯ ದಾಖಲೆ ಹೊಂದಿರುವ ಕೆರೆ–2 ಗಾಂಧಿನಗರದಲ್ಲಿ ತ್ಯಾಜ್ಯದ ಗುಂಡಿಯಾಗಿದೆ. ಕಾಲೇಜಿಗೆ ಶೇ 35ರಷ್ಟು ಒತ್ತುವರಿಯಾಗಿರುವ ಕೆರೆ, ಹುಬ್ಬಳ್ಳಿ–ಧಾರವಾಡ ಹೆದ್ದಾರಿಗೆ ಹೊಂದಿಕೊಂಡಿದೆ.

ನೀರಿನ ಬಳಕೆ

ಜೀವಂತವಿರುವ 54 ಕೆರೆಗಳಲ್ಲಿ 44 ಕೆರೆಗಳಲ್ಲಿ ಎಲ್ಲ ಕಾಲದಲ್ಲೂ ನೀರು ಇರುತ್ತವೆ. ಇದನ್ನು ವಿವಿಧ ಉದ್ದೇಶಗಳಿಗಾಗಿ ಜನರು ಬಳಸುತ್ತಿದ್ದಾರೆ.

ಜಲಾನಯನ ಪ್ರದೇಶದ ಭೂ ಬಳಕೆ ಮತ್ತು ಭೂ ಕವಚದ ಆಧಾರದ ಮೇಲೆ, ವಿವಿಧ ಜಲಮೂಲಗಳಿಂದ ನೀರಿನ ಬಳಕೆಯು ಒಂದು ಜಲಮೂಲದಿಂದ ಇನ್ನೊಂದಕ್ಕೆ ಭಿನ್ನವಾಗಿರುವುದು ಕಂಡುಬರುತ್ತದೆ. ಮೀನುಗಾರಿಕೆ; ನೀರಾವರಿ; ಮನರಂಜನಾ ಚಟುವಟಿಕೆಗಳು; ಜಾನುವಾರುಗಳಿಗೆ ನೀರು/ ಮೇವು; ತೊಳೆಯುವ ಚಟುವಟಿಕೆಗಳು; ಧಾರ್ಮಿಕ ಚಟುವಟಿಕೆಗಳು, ಉದ್ಯಾನ ನಿರ್ವಹಣೆಯಂತಹ ಇತರೆ ಚಟುವಟಿಕೆಗಳಿಗೆ ನೀರನ್ನು ಬಳಸಲಾಗುತ್ತಿದೆ.

ಮೀನುಗಾರಿಕೆ

ಮಾನವನಿಗೆ ಮುಖ್ಯವಾದ ಪ್ರೋಟೀನ್‌ನನ್ನು ಕಡಿಮೆ ವೆಚ್ಚದಲ್ಲಿ ಒದಗಿಸುವ ಆಹಾರ ಮೀನು. ಧಾರವಾಡದ ಕೆಲಗೇರಿ ಕೆರೆ–2; ನವಲೂರು ಕೆರೆ–4; ರಾಯಾಪುರ ಮತ್ತು ಸಪ್ತಪುರ ಕೆರೆ ಹಾಗೂ ಹುಬ್ಬಳ್ಳಿಯ ಅಮರಗೋಳ ಕುಂಟೆ–4; ಉಣಕಲ್‌ ಕೆರೆ; ರಾಯನಾಳ ಕೆರೆಯಲ್ಲಿ ಮೀನುಗಾರಿಕೆ ನಡೆಸಲಾಗುತ್ತಿದೆ.

ನೀರಾವರಿ

ಮಳೆಗಾಲದಲ್ಲಿ ನೀರು ಸಂಗ್ರಹವಾಗುವ ಧಾರವಾಡದ ನವಲೂರು ಕೆರೆ–4 ಹಾಗೂ ಹುಬ್ಬಳ್ಳಿಯ ಅಮರಗೋಳ ಕುಂಟೆ–4; ಉಣಕಲ್‌ ಕೆರೆಗಳಿಂದ ನೀರನ್ನು ಪಂಪ್‌ ಮಾಡಿ ಕೃಷಿಗೆ ಬಳಸಲಾಗುತ್ತಿದೆ. ಕೆರೆ ತುಂಬಿದರೆ ಅಂತರ್ಜಲವೂ ಹೆಚ್ಚಾಗಿ, ಸುತ್ತಮುತ್ತಲಿನ ಬೋರ್‌ವೆಲ್‌ನಲ್ಲೂ ನೀರು ಹೆಚ್ಚಾಗುತ್ತದೆ.

ಮನರಂಜನಾ ಚಟುವಟಿಕೆಗಳು

ನಾಗರಿಕರಿಗೆ ಮನರಂಜನಾ ಚಟುವಟಿಕೆಗಳನ್ನು ನೀಡುವ ಉದ್ದೇಶದಿಂದ ಹುಬ್ಬಳ್ಳಿಯ ಉಣಕಲ್‌ ಕೆರೆಯಲ್ಲಿ ದೋಣಿ ವಿಹಾರದ ಅನುಕೂಲವಿದೆ. ಆದರೆ ಅದನ್ನು ಇದೀಗ ನಿಲ್ಲಿಸಲಾಗಿದೆ. ಧಾರವಾಡದ ದೊಡ್ಡನಾಯಕನಕೊಪ್ಪ ಕೆರೆ–1ರಲ್ಲೂ ಈ ವ್ಯವಸ್ಥೆ ಇತ್ತು.

ಜಾನುವಾರುಗಳಿಗೆ ನೀರು/ ಮೇವು

ಧಾರವಾಡದ 5 ಹಾಗೂ ಹುಬ್ಬಳ್ಳಿ 13 ಕೆರೆಗಳು ದನಕರುಗಳು, ಸಾಕು ಪ್ರಾಣಿಗಳು ಸೇರಿದಂತೆ ಅನೇಕ ಪ್ರಾಣಿಗಳ ದಾಹವನ್ನು ನೀಗಿಸುತ್ತಿವೆ. ನಿತ್ಯವೂ ಇಲ್ಲಿ ಜಾನುವರುಗಳನ್ನು ಈ ಕೆರೆಗಳಲ್ಲಿ ಕಾಣಬಹುದು. ಮೇವು ಕಡಿಮೆಯಾದ ಸಂದರ್ಭದಲ್ಲಿ ಕೆರೆಯಲ್ಲಿರುವ ಕಳೆಯೂ ಜಾನುವಾರುಗಳಿಗೆ ಅಸಾಂಪ್ರದಾಯಕ ಮೇವಾಗುತ್ತಿದೆ. ಧಾರ್ಮಿಕ ಚಟುವಟಿಕೆಗಳಾದ ಪೂಜೆ, ಅರ್ಪಣೆ ಮತ್ತು ವಿಗ್ರಹ ಮುಳುಗಿಸುವಿಕೆಗೆ ಅನೇಕ ಕೆರೆಗಳೇ ತಾಣವಾಗಿವೆ. ಇನ್ನು, ಧಾರವಾಡದ ದೊಡ್ಡನಾಯಕನಕೊಪ್ಪ ಕೆರೆ–1ದ ನೀರನ್ನು ಉದ್ಯಾನಗಳ ನಿರ್ವಹಣೆಗೆ ಬಳಸಲಾಗುತ್ತಿದೆ. ಹುಬ್ಬಳ್ಳಿಯ ಕೃಷ್ಣಪುರ ಕುಂಟೆ–2ರ (ಸಿದ್ಧಾರೂಢ ಮಠ) ನೀರಿನಿಂದ ದೇವಾಲಯದ ನಿರ್ವಹಣೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT