ಸೋಮವಾರ, ಜೂನ್ 14, 2021
26 °C

ನವಪಲ್ಲವದ ಪಲ್ಲವಿಯುಗಾದಿ

ಡಾ.ಭಾಗ್ಯಜ್ಯೋತಿ ಕೋಟಿಮಠ Updated:

ಅಕ್ಷರ ಗಾತ್ರ : | |

Prajavani

ಪ್ರಕೃತಿಯ ಸೌಂದರ್ಯವನ್ನು ಕವಿಗಳು ಅವರದ್ದೇ ದೃಷ್ಟಿಯಲ್ಲಿ ವರ್ಣಿಸಿದ್ದಾರೆ. ಆದರೀಗ ಮನುಷ್ಯನ ಒತ್ತಡದ ಜೀವನದಲ್ಲಿ ಪ್ರಕೃತಿ ಮತ್ತು ಸೌಂದರ್ಯವರ್ದನೆಯನ್ನು ಮೆರೆತೇ ಬಿಟ್ಟಿದ್ದಾರೆನಿಸುತ್ತದೆ. ಆದರೆ ಪ್ರಕೃತಿ ಬಿಟ್ಟು ಮನುಷ್ಯನಿರಲು ಸಾಧ್ಯವೇ ಎಂಬುದು ನಮ್ಮೆಲ್ಲರ ಮುಂದಿರುವ ಪ್ರಶ್ನೆ.

ಶಿಲಾಯುಗದಿಂದ ಪ್ರಾರಂಭವಾಗಿ ಕೇವಲ ಅರ್ಧ ಶತಕಗಳ ಆಚೆವರೆಗೂ ಪ್ರಕೃತಿ ಪ್ರಕೃತಿಯಾಗಿಯೇ ಇತ್ತು. ಅದರಿಂದೀಚೆಗೆ ಪೃಥ್ವಿಯನ್ನೇ ತನ್ನ ತೆಕ್ಕೆಯಲ್ಲಿ ಹಾಕಿ ಅತೀ ಚಿಕ್ಕ ಜಗವನ್ನು ಮಾಡಿದವ ಮಾನವ. ಪ್ರಕೃತಿಯ ಪ್ರತಿಯೊಂದಕ್ಕೂ ಲಗ್ಗೆ ಇಟ್ಟು, ಹವಾಮಾನದ ಸ್ಥಿತ್ಯಂತರಗಳಿಗೆ ಕಾರಣವಾದ. ಅಂದರೆ ಪ್ರಕೃತಿಯ ಪ್ರತಿಯೊಂದಕ್ಕೂ ನನ್ನಲ್ಲಿ ಪರಿಹಾರವಿದೆಯೆಂಬ ಅಹಂವಿಕೆಯಲ್ಲಿ ಪ್ರಕೃತಿ ನಮ್ಮ ದಾಸ ಎಂದು ತಿಳಿದಿದ್ದೇವೆ. ಆದರೆ ಪ್ರಕೃತಿ ಮಾತೆ ಇದರಿಂದ ಕ್ರೋಧಿತಳಾಗಿ, ಅವಳೂ ನಮ್ಮಿಂದ ವಿಮುಖವಾಗುತ್ತಿದ್ದಾಳೇನೊ?

ಇದೇನಪ್ಪ ಯುಗಾದಿಯ ಶುಭ ಸಂದರ್ಭದಲ್ಲಿ ಈ ರೀತಿಯ ಮಾತುಗಳೇಕೆ ಎಂದೆನಿಸಬಹುದು. ಅದಕ್ಕೂ ಕಾರಣವಿದೆ. ಯುಗಾದಿ ಎಂದರೆ, ಯುಗದ ಆದಿ; ವಸಂತೋತ್ಸವದ ಪರ್ವದಿನ. ಹಳೆಯ ಎಲೆಗಳೆಲ್ಲ ಉದುರಿ ಹೋಗಿ ಹೊಸ ಚಿಗುರುಗಳನ್ನು ಮೈ ತುಂಬಿಕೊಳ್ಳುವ ಸುದಿನ. ಮಾವು–ಬೇವಿನ ನಡುವಿನಿಂದ ಕೋಗಿಲೆಯ ಕೂಹು ಕೇಳುವ ಸಮಯ. ಅಂದರೆ ವಸಂತನಾಗಮನದಿಂದ ಬೇವು, ಮಾವುಗಳ ಹೂಗಳ ಘಮ ಘಮ ಹೂವಿನ ನವಪಲ್ಲವ ಸೃಷ್ಟಿಯಾಗಿರುತ್ತದೆ. ಆದರೆ ಈ ವರ್ಷ ಈಗಾಗಲೇ ಮಾವಿನ ದೊಡ್ಡ ಕಾಯಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇದು ಹವಾಮಾನ ವೈಪರೀತ್ಯದ ಸಂಕೇತವೇ ಇರಬಹುದು. ಮಾನವ ಸಂಕುಲಕ್ಕೆ ಬಾಲ್ಯ, ಯೌವನ, ಮುಪ್ಪು ಇರುವಂತೆ, ಪ್ರಕೃತಿಗೂ ಏರಳಿತವಿರಬಹುದೆನೋ? 

ನಮ್ಮ ಪೂರ್ವಜರೆಲ್ಲ ಪ್ರಕೃತಿಯ ಆರಾಧಕರು. ಪ್ರಕೃತಿಯನ್ನೇ ಪ್ರೀತಿಸಿ ಅದರೊಡನೆ ಬಾಳಿದವರು. ಏಕೆಂದರೆ ಋಗ್ವೇದದಲ್ಲಿ ಈ ರೀತಿ ಹೇಳಲಾಗುತ್ತವೆ. ನಮಗೆ ಮಧುರವಾದ ಗಾಳಿ ಸಿಗುವಂತಾಗಲಿ. ರಸಪೂರ್ಣ ನದಿಗಳು ಹರಿಯಲಿ, ನಮ್ಮ ಸಸ್ಯ ಸಂಪತ್ತು ಸುಮಧುರವಾಗಲಿ ರಾತ್ರಿ ಮತ್ತು ಹಗಲು, ಪೃಥ್ವಿ ಮತ್ತು ಅಂತರಿಕ್ಷೆ ಇವೆಲ್ಲವೂ ನಮ್ಮನ್ನು ಸುಖಿಯಾಗಿಡುವಂತಾಗಲಿ. ಆದರೆ ಪ್ರಗತಿಯ ಮಾಯಾ ಕುದುರೆಯ ಯೋಚನೆಯಲ್ಲಿ ನಮಗೆಲ್ಲಿ ಇಂತಹ ಯೋಚನೆ ಬಂದಾವು?

ನಮ್ಮ ಆದಿಕವಿಗಳಿಗೆ ವಸಂತ ಋತುವೆಂದರೆ ಇನ್ನಿಲ್ಲದ ಪ್ರೀತಿ. ಅಷ್ಟೇ ಅಲ್ಲ; ಅವರ ಕಾವ್ಯದ ಪ್ರತಿಭಾಗದಲ್ಲೂ ಪ್ರಕೃತಿ ವರ್ಣನೆಯದೇ ಸಿಂಹಪಾಲು. ವಸಂತ ಋತು, ವಾಯುವೃಕ್ಷ ಪ್ರಕೃತಿಯನ್ನೇ ನರ್ತಿಸುತ್ತದಂತೆ. ಗಿರಿ-ಕೊಳ್ಳಗಳೆಲ್ಲಿಯ ಮತ್ತು ನದಿ ನಿನಾದಗಳು, ಭ್ರಮರದ ಝೇಂಕಾರ, ಕೋಗಿಲೆಯ ಕೂಹು, ನವಿಲಿನ ನರ್ತನ ಇವೆಲ್ಲಾ ವಸಂತನ ಆಗಮನಕ್ಕೆ ಓಂಕಾರ ಹಾಕುತ್ತವಂತೆ.

ಯುಗಾದಿಯಲ್ಲಿ ಪಂಚಾಂಗ ಶ್ರವಣ ಬಹುಮುಖ್ಯ. ಖಗೋಳಶಾಸ್ತ್ರದಿಂದ ಭೂಮಿ ಚಂದ್ರ ಸೂರ್ಯ ಚಲನೆಯನ್ನು ಕರಾರುವಕ್ಕಾಗಿ ತಿಳಿದು, ಅದರ ಕುರಿತು ಎಲ್ಲ ರಾಶಿಗಳ ಚಲನೆಯನ್ನು ತಿಳಿಸುತ್ತಿದ್ದರು. ಅಂದರೆ ನಮ್ಮೀ ಧಾವಂತದ ಓಟದಲ್ಲಿ ಪೂರ್ವಜರ ವಿಚಾರ ತಿಳಿಯುವ ಪ್ರಯತ್ನ ಮಾಡಬೇಕು. ನಮ್ಮ ಸಂಸ್ಕೃತಿ ಪ್ರಕೃತಿಯ ಮೇಳೈವಿಸುವಿಕೆ, ಅವರಿಂದ ನಾವು ಪಡುತ್ತಿದ್ದ ಸಂಭ್ರಮ ಮರಕಳಿಸಬೇಕು.

ಒಟ್ಟಾರೆಯಾಗಿ ಪ್ರಕೃತಿಯಲ್ಲಿ ಜನಿಸುವ ನಾವು ಅಂದರೆ ಕಾಯಿಯೊಳಗಿನ ಬೀಜ ವೃಕ್ಷವಾಗುವ ಮತ್ತು ಒಂದು ಅಣುವಿನಿಂದ ಮನುಷ್ಯ ಶಿಶುವಾದ ಬಗೆ ಎಲ್ಲವಕ್ಕೂ ಒಂದು ಕಾಲಮಿತಿ ಇದ್ದೇ ಇದೆ. ಅದನ್ನು ಬದಲಾಯಿಸಲು ಸಾಧ್ಯವಾಗಿಲ್ಲದ ನಾವೂ ಪ್ರಕೃತಿಗೆ ತಲೆ ಬಾಗೋಣ. ಮತ್ತೊಮ್ಮೆ ನಮ್ಮ ಬದುಕಿನಲ್ಲಿ ಭ್ರಮರ ಗಾನದ ಝೇಂಕಾರ ಮೇಳೈಸಿ ಹಾಡುವ ಕೋಗಿಲೆಯ ಮಾಧುರ್ಯಕ್ಕೆ ತಲೆದೂಗಿ ಸಂಭ್ರಮದಿಂದ ಆಚರಿಸೋಣ.

ಆಧುನಿಕತೆ ಬೆಳೆದಂತೆಲ್ಲಾ ಈ ಆಚರಣೆಗಳು ತಮ್ಮತನವನ್ನು ಕಳೆದುಕೊಳ್ಳುತ್ತಿವೆ. ಆದರೆ ಹಬ್ಬಗಳು ನಮ್ಮ ಜೀವನದಲ್ಲಿ ಒಂದು ಬದಲಾವಣೆ ತರುತ್ತವೆ. ಪ್ರಕೃತಿಯೇ ತನ್ನನ್ನು ಬದಲಾಯಿಸುವ ಈ ಸಮಯದಲ್ಲಿ ಮನುಷ್ಯನ ಜೀವನದಲ್ಲಿಯೂ ಬದಲಾವಣೆ ಖುಷಿಯ ವಾತಾವರಣ ತರುತ್ತವೆ. ಅದರಲ್ಲೂ ಮಹಿಳೆಯರು ಈ ಹಬ್ಬಗಳಲ್ಲಿ ಸಿಂಗರಿಸಿಕೊಂಡು ತಮ್ಮನ್ನು ತಾವು ಸಂಭ್ರಮಿಸುತ್ತಾರೆ.

ಬೇವಿನ ಕಹಿ ಸಿಹಿ ಅನುಭವ ನೀಡುವಂತೆ, ರಾತ್ರಿಯ ಅನುಭವ ಹಗಲಿನ ಖುಷಿ ನೀಡುವಂತೆ ಬೆಳಕಿನ ವರ್ಷಾರಂಭದ ಕಾಲಚಕ್ರದ ಆದಿಗೆ ನಮಿಸುತ್ತಾ ಪ್ರಕೃತಿಯ ಧನ್ಯತಾ ಭಾವದಿ ಹಬ್ಬ ಆಚರಿಸೋಣ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು