ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ | ಇನ್ನಷ್ಟು ಸಾಧಿಸಬೇಕಿದೆ ಕಂಪ್ಯೂಟರ್ ಸಾಕ್ಷರತೆ

ಹುಬ್ಬಳ್ಳಿ–ಧಾರವಾಡ ಮೆಟ್ರೊ
ಅಕ್ಷರ ಗಾತ್ರ

ದತ್ತಾಂಶಗಳ ಶೇಖರಣೆ, ವಿಶ್ಲೇಷಣೆ, ಸಂಶೋಧನೆ, ಯೋಜನೆಗಳ ನಿರ್ವಹಣೆ, ಅಂತರ್ಜಾಲ ಬಳಕೆ, ಮಾಹಿತಿ ಶೋಧನೆ, ಮನರಂಜನೆ, ಆ್ಯಪ್‌ಗಳ ಬಳಕೆ, ವ್ಯವಹಾರ ನಿರ್ವಹಣೆಯಂಥ ಸಾಮಾನ್ಯ ಕಾರ್ಯಗಳಿಂದ ಅತ್ಯಾಧುನಿಕ ಶಸ್ತ್ರಚಿಕಿತ್ಸೆ, ಬೃಹತ್ ನಿರ್ಮಾಣ ಕಾರ್ಯ, ಬೃಹತ್ ಯಂತ್ರಗಳ ನಿರ್ವಹಣೆ, ಬಾಹ್ಯಾಕಾಶ ತಂತ್ರಜ್ಞಾನಗಳಲ್ಲಿ ಅತ್ಯುತ್ಕೃಷ್ಟ ಕಂಪ್ಯೂಟರ್‌ಗಳ ಬಳಕೆಯಾಗುತ್ತದೆ.

ಒಬ್ಬ ಸಾಮಾನ್ಯ ವ್ಯಕ್ತಿ ಕೂಡ ತನಗೆ ಅಗತ್ಯವಾದ ಆಧಾರ್ ಕಾರ್ಡ್‌, ಪಡಿತರ ಚೀಟಿ, ಮತದಾರರ ಗುರುತಿನಚೀಟಿ, ಬ್ಯಾಂಕ್ ಪಾಸ್‌ಬುಕ್, ಪಹಣಿ, ಆಸ್ತಿಪತ್ರ... ಮತ್ತಿತರ ದಾಖಲೆಗಳನ್ನು ಪಡೆಯಲು ಕಂಪ್ಯೂಟರ್ ತಂತ್ರಜ್ಞಾನದ ಮೂಲಕವೇ ತನ್ನ ಮಾಹಿತಿಯನ್ನು ದಾಖಲೀಕರಣ ಮಾಡಿಸಬೇಕಾದುದು ಅನಿವಾರ್ಯ.

ಈ ನಿಟ್ಟಿನಲ್ಲಿ ಆಯಾ ದೇಶದ ಪ್ರಗತಿಯಲ್ಲಿ ಅಲ್ಲಿನ ಜನರ ‘ಕಂಪ್ಯೂಟರ್ ಸಾಕ್ಷರತೆ’ ಮಹತ್ವದ ಪಾತ್ರವಹಿಸುತ್ತದೆ. ಇದೇ ಕಾರಣದಿಂದಾಗಿಯೇ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪ್ರತಿ ವರ್ಷ ಡಿ.2ರಂದು ‘ವಿಶ್ವ ಕಂಪ್ಯೂಟರ್ ಸಾಕ್ಷರತಾ ದಿನ’ ಆಚರಿಸಲಾಗುತ್ತದೆ. ಈ ದಿನಾಚರಣೆ ಆರಂಭವಾದುದು ಭಾರತದಲ್ಲಿಯೇ ಎಂಬುದು ವಿಶೇಷ. ಎನ್‌.ಐ.ಐ.ಟಿ. ಕಂಪ್ಯೂಟರ್ ತರಬೇತಿ ಸಂಸ್ಥೆ ತನ್ನ 20ನೇ ವಾರ್ಷಿಕೋತ್ಸವದ ಅಂಗವಾಗಿ 2001ರಲ್ಲಿ ‘ವಿಶ್ವ ಕಂಪ್ಯೂಟರ್ ಸಾಕ್ಷರತಾ ದಿನಾಚರಣೆ’ ಆರಂಭಿಸಿತು.

ಕಂಪ್ಯೂಟರ್ ಸಾಕ್ಷರತೆಯನ್ನು ನಾವು ಹಲವು ಆಯಾಮಗಳಲ್ಲಿ ಪರಿಗಣಿಸಬಹುದು. ಅದರಲ್ಲಿ ಶಾಲಾ ಹಂತ, ಸರ್ಕಾರಿ ನೌಕರರ ಹಂತ ಹಾಗೂ ಸಮುದಾಯ ಆಧಾರಿತ ಕಂಪ್ಯೂಟರ್ ಸಾಕ್ಷರತೆ ಪ್ರಮುಖವಾಗಿವೆ.

ಧಾರವಾಡ ಜಿಲ್ಲೆಯಲ್ಲಿ ಶಾಲಾ ಹಂತದಕಂಪ್ಯೂಟರ್ ಸಾಕ್ಷರತೆಯ ಜವಾಬ್ದಾರಿಯನ್ನು ಧಾರವಾಡದ ಡಯಟ್‌ ಹೊತ್ತುಕೊಂಡಿದೆ. ಮಾಹಿತಿ ಸಿಂಧು– ಟಿಎಎಲ್‌ಪಿ (ಟೆಕ್ನಾಲಜಿ ಅಸಿಸ್ಟೆಡ್‌ ಲರ್ನಿಂಗ್‌ ಪ್ರೊಗ್ರಾಂ- ತಂತ್ರಜ್ಞಾನ ಆಧಾರಿತ ಕಲಿಕೆ) ಯೋಜನೆಯಡಿ ಪ್ರೌಢಶಾಲಾ ಶಿಕ್ಷಕರಿಗೆ ವಿಷಯವಾರು– ಇಂಡಕ್ಷನ್–1, ರಿಫ್ರೆಷರ್‌–1 ಹಾಗೂ ಐಸಿಟಿ ಇ–ಕಂಟೆಂಟ್ ಸ್ಟೂಡೆಂಟ್ ಕೋರ್ಸ್‌ ಎಂಬ ಮೂರು ಹಂತದ ತರಬೇತಿ ನೀಡಲಾಗುತ್ತಿದೆ. ಈ ಹಂತದಲ್ಲಿ ಅವರಿಗೆ ಕಂಪ್ಯೂಟರ್‌ ಕುರಿತು ಮೂಲಜ್ಞಾನವನ್ನು ಒದಗಿಸುವ ಜತೆ ವಿಷಯವಾರು ಕಂಪ್ಯೂಟರ್‌ ಆಧಾರಿತ ಬೋಧನೆ ಮತ್ತು ಕಲಿಕೆಯ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ಮೊದಲ ಎರಡು ಹಂತದ ತರಬೇತಿ ಕೊನೆಗೊಂಡಿದ್ದು, 3ನೇ ಹಂತದ ತರಬೇತಿ ನಡೆದಿದೆ. ಕರ್ನಾಟಕ ಪಬ್ಲಿಕ್ ಸ್ಕೂಲ್ ಹಾಗೂ ಆದರ್ಶ ವಿದ್ಯಾಲಯಗಳ ಪ್ರಾಥಮಿಕ ಶಾಲಾ ಶಿಕ್ಷಕರಿಗೂ ಈ ತರಬೇತಿ ನೀಡಲಾಗುತ್ತಿದೆ.

ಟಿಎಎಲ್‌ಪಿ (ಟ್ಯಾಲ್ಪ್‌) ಯೋಜನೆಯ ಅನುಷ್ಠಾನಕ್ಕಾಗಿ ಜಿಲ್ಲೆಯಲ್ಲಿರುವ ಒಟ್ಟು 108 ಸರ್ಕಾರಿ ಪ್ರೌಢಶಾಲೆಗಳಿಗೆ ಹಂತಹಂತವಾಗಿ 2016–17ರಲ್ಲಿ 48, 2017–18ರಲ್ಲಿ 24, 2018–19ರಲ್ಲಿ 6 ಹಾಗೂ 2019–20ರಲ್ಲಿ 30 ಶಾಲೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ 11, 16 ಅಥವಾ 21 ಕಂಪ್ಯೂಟರ್, ಸರ್ವರ್, ಲ್ಯಾಪ್‌ಟಾಪ್, ವೆಬ್‌ ಕ್ಯಾಮೆರಾ ಹಾಗೂ ಪ್ರೊಜೆಕ್ಟರ್‌ಗಳನ್ನು ವಿತರಿಸಲಾಗಿದೆ. ಯುಪಿಎಸ್‌ ಹಾಗೂ ಅಂತರ್ಜಾಲ ಸಂಪರ್ಕ ಒದಗಿಸಲು ಕ್ರಮವಹಿಸಲಾಗಿದೆ.

ತಂತ್ರಜ್ಞಾನ ಆಧಾರಿತ ಕಲಿಕೆ ಯೋಜನೆಯಡಿ ಶಿಕ್ಷಕರು ದೀಕ್ಷಾ ಪೋರ್ಟಲ್‌, ಸ್ವಯಂ ಪೋರ್ಟಲ್‌, ಇ–ಪಾಠಶಾಲಾ ಮತ್ತಿತರ ಪೋರ್ಟಲ್‌ಗಳ ಮೂಲಕ ತಮ್ಮ ಸೃಜನಶೀಲ ಯೋಚನೆ ಮತ್ತು ಯೋಜನೆಗಳನ್ನು ರಾಷ್ಟ್ರಮಟ್ಟದಲ್ಲಿ ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಟಿಎಎಲ್‌ಪಿ ಯೋಜನೆ ಉಬುಂಟು-16.04 ಸಾಫ್ಟ್‌ವೇರ್‌ ಆಧರಿಸಿ ಕಾರ್ಯನಿರ್ವಹಿಸುತ್ತಿದೆ. ಪಠ್ಯಪುಸ್ತಕಗಳಲ್ಲಿ ಆಯಾ ಪಠ್ಯವಿಷಯಕ್ಕೆ ತಕ್ಕಂತೆ ಕ್ಯೂಆರ್‌ ಕೋಡ್‌ ಮುದ್ರಿಸಲಾಗುತ್ತಿದೆ. ಮೊಬೈಲ್‌ ಅಥವಾ ಕಂಪ್ಯೂಟರ್‌ ಸ್ಕ್ಯಾನರ್‌ ಮೂಲಕ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಆಯಾ ಪೋರ್ಟಲ್‌ ತೆರೆದು ವಿದ್ಯಾರ್ಥಿಗಳು ಸ್ವಯಂ ಕಲಿಯಬಹುದಾಗಿದೆ. ಶಿಕ್ಷಕರೂ ಬೋಧನೆ ಮಾಡಬಹುದಾಗಿದೆ.

ಟಿಎಎಲ್‌ಪಿ ಯೋಜನೆಯಡಿ ತರಬೇತಿ ಪಡೆದ ಶಿಕ್ಷಕರಿಗೆ ಹಾಗೂ 8ರಿಂದ 10ನೇ ತರಗತಿವರೆಗೆ ಕಲಿತ ಮಕ್ಕಳಿಗೆ ಡಿಎಸ್‌ಇಆರ್‌ಟಿ ಡಿಪ್ಲೊಮಾ ಪ್ರಮಾಣಪತ್ರ ನೀಡಿ ಪ್ರೋತ್ಸಾಹಿಸುತ್ತಿದೆ. ಇದಲ್ಲದೇ, ರಾಜ್ಯ ಸರ್ಕಾರದ ವಸತಿ ಶಿಕ್ಷಣ ಸಂಸ್ಥೆಯಡಿ ಕಾರ್ಯನಿರ್ವಹಿಸುವ ಮೊರಾರ್ಜಿ ಹಾಗೂ ರಾಣಿ ಚನ್ನಮ್ಮ ಶಾಲೆಗಳಲ್ಲಿ ಪ್ರಾಥಮಿಕ ಹಂತದಿಂದಲೇ ಗಣಕಯಂತ್ರ ಆಧಾರಿತ ಕಲಿಕಾ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಅನುದಾನಿತ ಪ್ರೌಢಶಾಲೆಗಳಲ್ಲಿ ಕಂಪ್ಯೂಟರ್ ಕಲಿಕೆಯನ್ನು ಕಡ್ಡಾಯಗೊಳಿಸಿದ್ದು, ಬಹುತೇಕ ಅನುದಾನರಹಿತ ಶಾಲೆಗಳೂ ಕಂಪ್ಯೂಟರ್ ಕಲಿಕೆಗೆ ಒತ್ತು ನೀಡಿವೆ.

ಇಷ್ಟೆಲ್ಲ ಸಾಧನೆಯ ನಡುವೆಯೂ ಜಿಲ್ಲೆಯ ತಾಲ್ಲೂಕು ಕೇಂದ್ರಗಳು ಹಾಗೂ ಗ್ರಾಮಗಳಲ್ಲಿ ಕಂಪ್ಯೂಟರ್ ಸಾಕ್ಷರತೆ ವ್ಯಾಪಕವಾಗಿ ವೃದ್ಧಿಸಬೇಕಿದೆ. ಸ್ವಸಹಾಯ ಸಂಘಗಳ ಸದಸ್ಯರು, ನಿರುದ್ಯೋಗಿ ಯುವಕ–ಯುವತಿಯರು, ಕಾಲೇಜು ವಿದ್ಯಾರ್ಥಿಗಳು, ರೈತರು, ವ್ಯಾಪಾರಿಗಳು, ಗೃಹಿಣಿಯರು ಇವರಿಗೆಲ್ಲ ಕಂಪ್ಯೂಟರ್‌ ಜ್ಞಾನವನ್ನು ಒದಗಿಸಬೇಕಿದೆ.

ಸರ್ಕಾರಿ ನೌಕರರಿಗೆ ಕಡ್ಡಾಯ:2012ರ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ಕಂಪ್ಯೂಟರ್ ಸಾಕ್ಷರತೆಯ ಆನ್‌ಲೈನ್ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ. ಕಿಯೋನಿಕ್ಸ್ ಸಂಸ್ಥೆಯ ಇ–ಆಡಳಿತ ಕೇಂದ್ರ ಈ ಪರೀಕ್ಷೆ ಆಯೋಜಿಸುತ್ತದೆ. ವಾಹನ ಚಾಲಕರು, ಪ್ರಾಥಮಿಕ ಶಾಲಾ ಶಿಕ್ಷಕರು, ಪೊಲೀಸ್‌ ಕಾನ್‌ಸ್ಟೆಬಲ್, ನರ್ಸ್, ಅರಣ್ಯರಕ್ಷಕರು ಹಾಗೂ ‘ಡಿ’ ಗುಂಪಿನ ನೌಕರರನ್ನು ಹೊರತುಪಡಿಸಿ, ಉಳಿದೆಲ್ಲ ನೌಕರರೂ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ. ಆದರೆ, ಮಾರ್ಚ್ 22, 2012ಕ್ಕೆ 50 ವರ್ಷ ಪೂರೈಸಿದ ಸರ್ಕಾರಿ ನೌಕರರಿಗೆ ಇದು ಅನ್ವಯವಾಗುವುದಿಲ್ಲ. ಜಿಲ್ಲೆಯ ಬಹುತೇಕ ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತೆಯ ಆನ್‌ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಸಾಮುದಾಯಿಕ ಸಾಕ್ಷರತೆ:2019ರಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಸಾಮುದಾಯಿಕ ಕಂಪ್ಯೂಟರ್‌ ಸಾಕ್ಷರತೆಗೆ ಹಲವು ಕ್ರಮ ಕೈಗೊಂಡಿವೆ. ಕೌಶಲ ಮತ್ತು ಉದ್ಯಮಶೀಲತಾ ಅಭಿವೃದ್ಧಿ ಇಲಾಖೆ 752 ನಿರುದ್ಯೋಗಿಗಳಿಗೆ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ 38 ನಿರುದ್ಯೋಗಿಗಳಿಗೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ 86 ನೌಕರರಿಗೆ ಕಂಪ್ಯೂಟರ್‌ ತರಬೇತಿ ನೀಡಿವೆ. ಇದಲ್ಲದೇ ಹಲವು ಖಾಸಗಿ ಕಂಪ್ಯೂಟರ್ ತರಬೇತಿ ಸಂಸ್ಥೆಗಳು, ಕಾರ್ಪೊರೇಟ್ ಕಂಪನಿಗಳು ಪ್ರಾಯೋಜಕತ್ವ ಹಾಗೂ ಸಿಎಸ್‌ಆರ್‌ ಯೋಜನೆಯಡಿ 100ಕ್ಕೂ ಹೆಚ್ಚು ಕಂಪ್ಯೂಟರ್‌ ತರಬೇತಿ ಶಿಬಿರಗಳನ್ನು ಏರ್ಪಡಿಸಿ ಸಾವಿರಾರು ನಿರುದ್ಯೋಗಿಗಳಿಗೆ ಕಂಪ್ಯೂಟರ್ ಬಳಕೆಯ ಜ್ಞಾನ ನೀಡಿವೆ.

ಧಾರವಾಡ ‘ಚಾಂಪಿಯನ್ ಜಿಲ್ಲೆ’:ಧಾರವಾಡ ಜಿಲ್ಲೆಯಲ್ಲಿ ‘ಕಂಪ್ಯೂಟರ್ ಸಾಕ್ಷರತೆ’ಯ ಪ್ರಮಾಣ ತೃಪ್ತಿಕರವಾಗಿದೆ. ವಿದ್ಯಾಕಾಶಿಯ ಹಿರಿಮೆ, ಧೀಮಂತ ಶಿಕ್ಷಣ ಮತ್ತು ತಂತ್ರಜ್ಞಾನ ಸಂಸ್ಥೆಗಳ ಗರಿಮೆ, ವಾಣಿಜ್ಯ–ವ್ಯವಹಾರ, ಮಾಧ್ಯಮ ಹಾಗೂ ಪುಸ್ತಕ ಪ್ರಕಾಶನ ಸಂಸ್ಥೆಗಳು, ಪ್ರತಿಯೊಬ್ಬರ ಕೈಗೂ ಎಟುಕಿರುವ ಮೊಬೈಲ್‌, ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಜ್ಞಾನ ಕಡ್ಡಾಯಗೊಳಿಸಿರುವುದು... ಹೀಗೆ ವಿವಿಧ ಕಾರಣಗಳಿಂದಾಗಿ ಧಾರವಾಡಿಗರಿಗೆ ಕಂಪ್ಯೂಟರ್ ಹತ್ತಿರವಾಗಿದೆ. ಅದರಲ್ಲೂ ಜಿಲ್ಲೆಯ ಬಹುತೇಕ ಯುವಜನರು ಕಂಪ್ಯೂಟರ್ ಬಳಕೆಯ ಮೂಲಜ್ಞಾನ ಹೊಂದಿದ್ದಾರೆ. ಜಿಲ್ಲೆಯಲ್ಲಿ ಕಂಪ್ಯೂಟರ್ ಬಳಕೆಯ ಪ್ರಮಾಣವನ್ನು ಆಧರಿಸಿ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯ, ಧಾರವಾಡ ಜಿಲ್ಲೆಯನ್ನು ‘ಕಂಪ್ಯೂಟರ್ ಸಾಕ್ಷರತೆಯ ಚಾಂಪಿಯನ್ ಜಿಲ್ಲೆ’ ಎಂದು ಘೋಷಿಸಿದೆ.

ಶಾಲಾ ಹಂತದಿಂದಲೇ ಕಲಿಕೆ:ಇಂದಿನ ಸ್ಥಿತಿಯಲ್ಲಿ ಅಕ್ಷರ ಕಲಿಯದವ ನಿಜವಾದ ಅನಕ್ಷರಸ್ಥ ಅಲ್ಲ. ಬದಲಿಗೆ ಕಂಪ್ಯೂಟರ್‌ ಕುರಿತು ಅರಿಯದವ ನಿಜವಾದ ಅನಕ್ಷರಸ್ಥ ಎಂಬ ಪರಿಸ್ಥಿತಿ ಇದೆ. ಮುಂಬರುವ ದಿನಗಳಲ್ಲಿ ಕಂಪ್ಯೂಟರ್ ತಂತ್ರಜ್ಞಾನ ತನ್ನ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲಿದ್ದು, ಪ್ರತಿಯೊಬ್ಬರೂ ಕಂಪ್ಯೂಟರ್ ಜ್ಞಾನ ಹೊಂದುವುದು ಕಡ್ಡಾಯ ಎಂಬ ನಿಯಮ ಜಾರಿಯಾದರೂ ಅಚ್ಚರಿಪಡಬೇಕಿಲ್ಲ. ಹೀಗಾಗಿಯೇ ಶಿಕ್ಷಣ ಇಲಾಖೆ ಶಾಲಾ ಹಂತದಿಂದಲೇ ಮಕ್ಕಳಿಗೆ ಕಂಪ್ಯೂಟರ್‌ ಮೂಲ ಜ್ಞಾನ ಒದಗಿಸುತ್ತಿದೆ ಮತ್ತು ಕಂಪ್ಯೂಟರ್‌ ತಂತ್ರಜ್ಞಾನ ಆಧಾರಿತ ಬೋಧನೆ ಮತ್ತು ಕಲಿಕೆಗೆ ಒತ್ತು ನೀಡಿದೆ ಎಂದು ಧಾರವಾಡದ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ (ಡಯಟ್)ಉಪನಿರ್ದೇಶಕ ಅಬ್ದುಲ್‌ ವಾಜಿದ್ ಖಾಜಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT