ಉಪ್ಪಿನಬೆಟಗೇರಿ: ಗಾಂಧೀಜಿಯರ ಕನಸನ್ನು ಸಾಕಾರಗೊಳಿಸಲು ಸಾರ್ವಜನಿಕರು ಗ್ರಾಮದ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಗರಗದ ಎಸ್.ಜಿ.ಎಂ. ಟ್ರಸ್ಟನ್ ಅಧ್ಯಕ್ಷ ಮಡಿವಾಳಗೌಡ ಪಾಟೀಲ ಹೇಳಿದರು.
ಬೇಲೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನೀರಲಕಟ್ಟಿ ಗ್ರಾಮದಲ್ಲಿ ಸೋಮವಾರ ಏಳು ದಿನಗಳ ಎನ್.ಎಸ್.ಎಸ್ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಗರಗ ಎಸ್.ಜಿ.ಎಂ. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಆನಂದ ತೋಟಗಿ ಮಾತನಾಡಿ, ‘ನೆರೆ ಸಂತ್ರಸ್ತರಿಗೆ ನೆರವು, ಶೌಚಾಲಯ ನಿರ್ಮಾಣ, ಶೌಚಾಲಯದ ಗುಂಡಿ ತೊಡುವುದು, ಊರಿನ ಗಟಾರ ಪುನರ ನಿರ್ಮಾಣ ಹಾಗೂ ಸ್ವಚ್ಛತೆ, ಧಾರ್ಮಿಕ ಸ್ಥಳಗಳನ್ನು ಸ್ವಚ್ಛಗೊಳಿಸುವುದು, ಪ್ರಾಥಮಿಕ ಶಾಲಾ ಆವರಣ ಸ್ವಚ್ಛತೆ, ಗ್ರಾಮದ ಕೆರೆ ಸ್ವಚ್ಛತೆ, ಮೂಢನಂಬಿಕೆಯನ್ನು ತೊಡೆದು ಹಾಕುವುದು, ವೈಜ್ಞಾನಿಕ ಮನೋಭಾವ ಬೆಳೆಸುವುದು, ನೀರಿನ ಸದ್ಬಳಕೆ ಬಗ್ಗೆ ಏಳು ದಿನಗಳ ಶಿಬಿರದಲ್ಲಿ ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಗುವುದು’ ಎಂದರು.
ಅ.21 ರಂದು ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿವೆ ಎಂದರು.
ಗರಗದ ಎಸ್.ಜಿ.ಎಂ ಪದವಿಪೂರ್ವ ಕಾಲೇಜಿನ 50 ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡು, ನೀರಲಕಟ್ಟಿ ಗ್ರಾಮದ ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲಾ ಆವರಣ ಮತ್ತು ರಸ್ತೆ ಬದಿಯನ್ನು ಸ್ವಚ್ಛಗೊಳಿಸಿದರು.
ಬೇಲೂರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸಪ್ಪ ಸಂದೂರಿ, ಎಸ್‌ಡಿಎಂಸಿ ಅಧ್ಯಕ್ಷ ಶಿವಪ್ಪ ಪೂಜಾರ, ಸೋಮನಗೌಡ ಪಾಟೀಲ, ಸಂತೋಷಗೌಡ ಪಾಟೀಲ, ಬಸವನಗೌಡ ಪಾಟೀಲ ಹಾಗೂ ಗ್ರಾಮಸ್ಥರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.