ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನಿತ ಶಾಲೆಗಳ ನಿರ್ಲಕ್ಷ್ಯ: ಹೊರಟ್ಟಿ

ಮಾಧ್ಯಮಿಕ ಶಾಲಾ ನೌಕರರ ಸಂಘದಿಂದ ಸನ್ಮಾನ
Last Updated 19 ಜುಲೈ 2021, 3:32 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಹಿಂದಿನಿಂದಲೂ ಸರ್ಕಾರ ಅನುದಾನಿತ ಶಾಲೆಗಳನ್ನು ನಿರ್ಲಕ್ಷ್ಯ ಮಾಡುತ್ತ ಬಂದಿದ್ದು, ಮುಂಬರುವ ದಿನಗಳಲ್ಲಿ ಶಾಲೆ ನಡೆಸುವುದು ಕಷ್ಟವಾಗಬಹುದು. ಶಾಲೆಯ ಆಡಳಿತ ಮಂಡಳಿ ಈಗಿರುವ ಸ್ಥಿತಿಯನ್ನಾದರೂ ಮುಂದುವರಿಸಿಕೊಂಡು ಹೋಗಲು ಪ್ರಯತ್ನಿಸಬೇಕಿದೆ’ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ವಿಧಾನ ಪರಿಷತ್‌ ಸದಸ್ಯರಾಗಿ 41 ವರ್ಷ ಪೂರೈಸಿದ ಹಿನ್ನೆಲೆಯಲ್ಲಿಅವರಿಗೆ ನಗರದ ಲ್ಯಾಮಿಂಗ್ಟನ್‌ ಶಾಲೆಯಲ್ಲಿ ಮಾಧ್ಯಮಿಕ ಶಾಲಾ ನೌಕರರ ಸಂಘ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

‘ಐದಾರು ವರ್ಷಗಳಿಂದ ಅನುದಾನಿತ ಶಾಲೆಗಳಿಗೆ ಶಿಕ್ಷಕರ ನೇಮಕವಾಗುತ್ತಿಲ್ಲ. ಅಧಿಕಾರಿಗಳು ಒಂದಿಲ್ಲೊಂದು ತಾಂತ್ರಿಕ ಕಾರಣ ಹೇಳಿ ನೇಮಕಾತಿಗೆ ತಡೆಯೊಡ್ಡುತ್ತಿದ್ದಾರೆ. ಕಷ್ಟದ ದಿನಗಳು ಎದುರಾಗುತ್ತಿದ್ದು, ಸಮಸ್ಯೆಗಳ ಪರಿಹಾರಕ್ಕೆ ಸಚಿವರ ಜೊತೆ ಚರ್ಚಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಸಂಘಕ್ಕೆ ಉಣಕಲ್‌ನಲ್ಲಿ 20 ಗುಂಟೆ ಜಾಗ ಮಂಜೂರಾಗಿದ್ದು, ದಾಖಲೆಗಳು ಸಿದ್ಧವಾಗಿದೆ. ಕಟ್ಟಡ ಹೇಗಿರಬೇಕು ಎನ್ನುವ ಕುರಿತು ಪದಾಧಿಕಾರಿಗಳು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಕಾಮಗಾರಿಗೆ ಹಣಕಾಸಿನ ತೊಂದರೆ ಸಹ ಇದ್ದು, ಸಂಘದ ಎಲ್ಲ ಸದಸ್ಯರ ಕೊಡುಗೆಯೂ ಇರಬೇಕು’ ಎಂದು ತಿಳಿಸಿದರು.

ಮೈಸೂರು ಪೇಟ ತೊಡಿಸಿ, ಕೇಕ್‌ ಕತ್ತರಿಸಿ ಹೊರಟ್ಟಿ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಆರ್. ಭಟ್ ಹಾಗೂ ಪದಾಧಿಕಾರಿಗಳಾದ ಶಾಮ ಮಲ್ಲನಗೌಡರ, ಸಂಗಮೇಶ, ಟಿ.ಎಸ್. ಚೌಗಲ, ಎಂ.ಎನ್. ಸಾವಜ್ಜಿ, ಎಸ್‌.ಎಂ. ಅಂಗಡಿ, ವಿ.ಎಸ್. ಹುದ್ದಾರ, ಎಚ್.ಬಿ. ಬಣಕಾರ ಇದ್ದರು.

ಹಿರೇಮಠ ವರ್ಗಾವಣೆಗೆ ಆಗ್ರಹ: ಸಂಘದ ಪದಾಧಿಕಾರಿ ಪ್ರಕಾಶ ನಾಯಕ, ‘ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ ಅವರು ಶಿಕ್ಷಕರ ನೇಮಕಾತಿ ವಿಷಯದಲ್ಲಿ ಅನ್ಯಾಯ ಮಾಡುತ್ತಿದ್ದಾರೆ. ನೇಮಕಾತಿ ಕುರಿತು ರಾಜ್ಯಮಟ್ಟದ ಪತ್ರಿಕೆಯಲ್ಲಿ ನೀಡಿದ ಜಾಹೀರಾತು ಸ್ಥಳೀಯವಾಗಿ ಬಂದಿದೆ ಎಂದು, ನೇಮಕಾತಿಗೆ ಅಡ್ಡಿಪಡಿಸುತ್ತಿದ್ದಾರೆ. ಅವರನ್ನು ವರ್ಗಾವಣೆ ಮಾಡಬೇಕು’ ಎಂದು ಆಗ್ರಹಿಸಿದರು. ಅದಕ್ಕೆ ಮತ್ತೊಬ್ಬ ಪದಾಧಿಕಾರಿ ಬಸವರಾಜ ಧಾರವಾಡ ಸಹ ಧ್ವನಿಗೂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಹೊರಟ್ಟಿ, ‘ಈ ವಿಷಯ ನನ್ನ ಗಮನಕ್ಕೂ ಬಂದಿದ್ದು, ಅವರು 45 ಕಡತಗಳನ್ನು ತಿರಸ್ಕರಿಸಿದ್ದಾರೆ. ಆ ಕುರಿತು ಅವರಲ್ಲಿ ಪ್ರಶ್ನಿಸಿ ಆಕ್ಷೇಪ ವ್ಯಕ್ತಪಡಿಸಿದ್ದೇನೆ. ಹುಬ್ಬಳ್ಳಿ–ಧಾರವಾಡದಲ್ಲಿ ಅವರ ಸೇವೆ ಐದಾರು ವರ್ಷ ಆಗುತ್ತ ಬಂದಿದೆ, ಸಾಕು. ಅವರಾಗೇ ಇಲ್ಲಿಂದ ವರ್ಗಾವಣೆಯಾಗಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT