ಶುಕ್ರವಾರ, ಸೆಪ್ಟೆಂಬರ್ 20, 2019
21 °C
ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರೇಟ್‌ಗೆ ಇನ್ನೂ ಬಾರದ ಆದೇಶ ಪ್ರತಿ

ಜಾರಿಯಾಗದ ಹೊಸ ಮೋಟಾರು ವಾಹನ ಕಾಯ್ದೆ

Published:
Updated:
Prajavani

ಹುಬ್ಬಳ್ಳಿ: ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರವು ಹೊಸ ಮೋಟಾರು ವಾಹನ ಕಾಯ್ದೆಯನ್ನು ಭಾನುವಾರ(ಸೆ.1)ದಿಂದ ಜಾರಿಗೆ ತಂದಿದೆ. ಆದರೆ, ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಈ ಕಾಯ್ದೆ ಜಾರಿಯಾಗಲು ಇನ್ನೂ ಎರಡರಿಂದ ಮೂರು ತಿಂಗಳು ಬೇಕಾಗಬಹುದು.

ನೂತನ ಕಾಯ್ದೆ ಜಾರಿಗೆ ಸರ್ಕಾರದಿಂದ ಈ ವರೆಗೂ ಅವಳಿ ನಗರದ ಪೊಲೀಸ್‌ ಆಯುಕ್ತರಿಗೆ ಯಾವುದೇ ಆದೇಶ ಬಂದಿಲ್ಲ. ಸರ್ಕಾರದ ಅಧಿಕೃತ ಆದೇಶವಿಲ್ಲದೆ ಸಾರ್ವಜನಿಕರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡಲು ಅವಕಾಶವಿಲ್ಲ. ಹೀಗಾಗಿ, ಅಲ್ಲಿವರೆಗೂ ಹಳೆಯ ಕಾನೂನೇ ಜಾರಿಯಲ್ಲಿರಲಿದೆ.

ಸೆ. 1 ಮತ್ತು ಸೆ. 2 ರಂದು ಸರ್ಕಾರಿ ರಜೆ ಕಾರಣ ಮುಂದಿನ ಒಂದೆರಡು ದಿನಗಳಲ್ಲಿ ಆದೇಶ ಪ್ರತಿ ಬರಬಹುದು ಎನ್ನುವ ನಿರೀಕ್ಷೆಯಲ್ಲಿ ಪೊಲೀಸ್‌ ಅಧಿಕಾರಿಗಳು ಇದ್ದಾರೆ. ಆದೇಶದ ಪ್ರತಿ ಬರುವವರೆಗೂ ಹಳೆಯ ದಂಡ ಶುಲ್ಕವನ್ನೇ ಹಾಕಲಿದ್ದಾರೆ. ಆದರೆ, ಕುಡಿದು ವಾಹನ ಚಲಾಯಿಸುವವರ ವಿರುದ್ಧ ಮಾತ್ರ ₹10 ಸಾವಿರ ದಂಡ ತುಂಬಿಸಿಕೊಳ್ಳಲು ಮುಂದಾಗಿದ್ದಾರೆ.

ಸರ್ಕಾರದಿಂದ ನೂತನ ಆದೇಶ ಬಂದರೂ ಸಹ, ಏಕಾಏಕಿ ಅದನ್ನು ಜಾರಿಗೆ ತರಲು ಸಾಧ್ಯವಾಗದು ಎಂದು ಸಂಚಾರ ಪೊಲೀಸರೇ ಹೇಳುತ್ತಾರೆ. ಕಾರಣ, ಈಗಾಗಲೇ ಬ್ಲಾಕ್‌ಬೆರಿ ಸಾಧನಗಳನ್ನು ಬಳಸಿ ದಂಡ ವಸೂಲಿ ಮಾಡಲಾಗುತ್ತಿದೆ. ಈ ಸಾಧನಗಳಲ್ಲಿ ಹಳೆಯ ಕಾನೂನಿನ ವಿವರಗಳೇ ಇರುವುದರಿಂದ, ಹೆಚ್ಚುವರಿ ದಂಡ ವಸೂಲಿ ಮಾಡಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಕೈಬರಹದ ರಶೀದಿ ನೀಡಿ ದಂಡ ಕಟ್ಟಿಸಿಕೊಳ್ಳಬೇಕೋ ಅಥವಾ ಪರ್ಯಾಯ ಮಾರ್ಗವೇನಾದರೂ ಇದೆಯೋ ಎನ್ನುವ ಚಿಂತನೆಯಲ್ಲಿದ್ದಾರೆ. ಯಾವುದಕ್ಕೂ ಆದೇಶದ ಪ್ರತಿಯಲ್ಲಿ ಏನಿದೆ ಎಂದು ಪರಿಶೀಲಿಸಿದ ನಂತರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

ಹುಬ್ಬಳ್ಳಿಯಲ್ಲಿ ಉತ್ತರ, ದಕ್ಷಿಣ ಹಾಗೂ ಪೂರ್ವ ಸಂಚಾರ ಪೊಲೀಸ್ ಠಾಣೆ ಮತ್ತು ಧಾರವಾಡದಲ್ಲಿ ಒಂದು ಸಂಚಾರ ಪೊಲೀಸ್‌ ಠಾಣೆ ಇದೆ. ಹುಬ್ಬಳ್ಳಿ ಮತ್ತು ಧಾರವಾಡ ನಗರದ ಸುಮಾರು 150ಕ್ಕೂ ಹೆಚ್ಚು ವೃತ್ತಗಳಲ್ಲಿ 200ಕ್ಕೂ ಹೆಚ್ಚು ಸಂಚಾರ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದು, ಬ್ಲಾಕ್‌ಬೆರಿ ಮೂಲಕ ದಂಡದ ಮೊತ್ತ ನಮೂದಿಸಿ, ವೈರ್‌ಲೆಸ್‌ ಪ್ರಿಂಟರ್‌ನಿಂದ ದಂಡದ ರಶೀದಿ ನೀಡುತ್ತಿದ್ದಾರೆ. ಇವುಗಳಿಗೆ ಹೊಸ ದಂಡದ ಸಾಪ್ಟ್‌ವೇರ್‌ ಅಳವಡಿಸಬೇಕಿರುವುದರಿಂದ, ಅದಕ್ಕೆ ಒಂದೆರಡು ತಿಂಗಳು ಕಾಲಾವಕಾಶ ಬೇಕಾಗಬೇಕಾಗುತ್ತದೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.

‘ಸಂಚಾರ ಪೊಲೀಸರಿಗೆ ಹೆಚ್ಚುವರಿ ದಂಡ ವಸೂಲಿ ಕುರಿತು ಈಗಾಗಲೇ ಮಾಹಿತಿ ನೀಡಲಾಗಿದೆ. ಒಮ್ಮಿಂದೊಮ್ಮೆಲೆ ಮೂರು, ನಾಲ್ಕು ಪಟ್ಟು ದಂಡ ಹೆಚ್ಚಳವಾಗಿರುವುದರಿಂದ ಸವಾರರು ತಗಾದೆ ತೆಗೆಯುವ ಸಾಧ್ಯತೆಯಿದೆ. ಆ ನಿಟ್ಟಿನಲ್ಲಿ ಸಿಬ್ಬಂದಿಗೆ ಕೆಲವು ಸೂಚನೆ ನೀಡುತ್ತೇವೆ. ಅಲ್ಲದೆ, ಮತ್ತಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ’ ಎಂದು ಪೊಲೀಸ್‌ ಆಯುಕ್ತ ಆರ್‌. ದಿಲೀಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.

Post Comments (+)