ಸೋಮವಾರ, ಜೂನ್ 27, 2022
21 °C
ಕೋವಿಡ್ ನಿರ್ವಹಣೆ ಪರಿಶೀಲನೆ: ಅಧಿಕಾರಿಗಳ ಜೊತೆ ಸಭೆ

ಜಿಲ್ಲೆಯಲ್ಲಿ ಲಸಿಕೆ ಅಭಾವವಿಲ್ಲ: ಶೆಟ್ಟರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಜಿಲ್ಲೆಯಾದ್ಯಂತ ಆದ್ಯತಾ ವಲಯದ ಪ್ರತಿಯೊಬ್ಬರಿಗೂ ಕೋವಿಡ್ ನಿರೋಧಕ ಲಸಿಕೆ ನೀಡಲಾಗುತ್ತಿದೆ. ಲಸಿಕೆಯ ಅಭಾವವಿಲ್ಲ; ಈ ಸೌಲಭ್ಯದಿಂದ ಯಾರೂ ವಂಚಿತರಾಗಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ನಗರದಲ್ಲಿ ಶನಿವಾರ ನಡೆದ ಕೋವಿಡ್ ನಿರ್ವಹಣೆ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು ‘ಜಿಲ್ಲೆಯಲ್ಲಿ ಲಸಿಕೆಯ ಲಭ್ಯತೆಯಿದ್ದು, ಪೂರ್ಣಪ್ರಮಾಣದಲ್ಲಿ ಒದಗಿಸಲು ಕೊರತೆಯಿಲ್ಲ. ಗ್ರಾಮೀಣ ಪ್ರದೇಶದಲ್ಲಿ ನುರಿತ ವೈದ್ಯಕೀಯ ಸಿಬ್ಬಂದಿಯಿಂದ ಚಿಕಿತ್ಸೆ, ತಕ್ಷಣ ಪರಿಹಾರ ನೀಡುವ ವ್ಯವಸ್ಥೆ ಹೊಂದಲಾಗಿದೆ. ನಗರ ಪ್ರದೇಶದಲ್ಲಿಯೂ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ವ್ಯವಸ್ಥೆ ಮಾಡಲಾಗಿದೆ‘ ಎಂದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ ‘ಕೋವಿಡ್‌ ನಿರ್ವಹಣೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ಲೋಪವಾಗದಂತೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆದು ಕೋವಿಡ್‌ನಿಂದ ಆಗುವ ಅಪಾಯ ತಡೆಯಬೇಕು‘ ಎಂದರು.

’ಜಿಲ್ಲೆಯ ಎಲ್ಲರಿಗೂ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಜಿಲ್ಲೆಗೆ ಬೇಕಿರುವ ಸೌಲಭ್ಯಗಳ ಪ್ರಸ್ತಾವವನ್ನು ಜಿಲ್ಲಾಡಳಿತ ಸಲ್ಲಿಸಿದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ಸಾರ್ವಜನಿಕರು ಲಸಿಕೆ ಪಡೆಯಲು ಹಿಂಜರಿಯಬಾರದು. ಸುಳ್ಳು ಸುದ್ದಿಯನ್ನು ನಂಬಬಾರದು‘ ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ ‘ರಾಷ್ಟ್ರೀಯ ಆರೋಗ್ಯ ಅಭಿಯಾನ ನಿಗದಿಪಡಿಸಿದಂತೆ ವಿದೇಶಕ್ಕೆ ವಿದ್ಯಾಭ್ಯಾಸ ಹಾಗೂ ಉದ್ಯೋಗದ ಕಾರಣಕ್ಕೆ ತೆರಳುವ 18ರಿಂದ 44 ವರ್ಷದವರಿಗೆ ಆದ್ಯತೆ ಮೇರೆಗೆ ಅರ್ಹತಾ ಪ್ರಮಾಣಪತ್ರ ನೀಡಲಾಗುವುದು. ಮಂಚೂಣಿಯಲ್ಲಿದ್ದು ಕೆಲಸ ಮಾಡುವವರಿಗೂ ಆದ್ಯತೆ ಮೇರೆಗೆ ಲಸಿಕೆ ಹಾಕಲಾಗುವುದು‘ ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ. ಸುಶೀಲಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ, ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಆಯುಕ್ತ ಲಾಬೂರಾಮ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ್ ಮದ್ದೀನಕರ್‌, ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಇದ್ದರು.

 

‘ಫ್ಲೈ ಓವರ್‌ ರಸ್ತೆ ಕಾರ್ಯ ಚುರುಕುಗೊಳಿಸಿ’

ಹುಬ್ಬಳ್ಳಿ: ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಫ್ಲೈ ಓವರ್‌ ರಸ್ತೆ ಕಾಮಗಾರಿಗೆ ಸಂಬಂಧಿತ ಕಾರ್ಯಗಳನ್ನು ಚುರುಕುಗೊಳಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೂಚಿಸಿದರು.

ಈ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ‘ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೂಪಿಸಿದ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ಹಾಗೂ ನಗರದ ಫ್ಲೈಓವರ್ ರಸ್ತೆ ಕಾಮಗಾರಿಗಳನ್ನು ಅಡೆತಡೆಯಾಗದಂತೆ ನಿಗದಿಪಡಿಸಿದ ಅವಧಿಯಲ್ಲಿ ಪೂರ್ಣಗೊಳಿಸಬೇಕು‘ ಎಂದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿರ್ದೇಶಕ ಕೃಷ್ಣ ಬಾಜಪೇಯಿ, ಸ್ಮಾರ್ಟ್‌ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್, ಮಸ್ತಾಕ್ ಬಿಜಾಪೂರಿ, ವಾ.ಕ.ರ.ಸಾ.ಸಂ. ವಿಭಾಗೀಯ ನಿಯಂತ್ರಕ ವಿವೇಕಾನಂದ ವಿಶ್ವಜ್ಞ, ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ, ತಹಶೀಲ್ದಾರ್‌ಗಳಾದ ಶಶಿಧರ್ ಮಾಡ್ಯಾಳ, ಪ್ರಕಾಶ್ ನಾಶಿ ಪಾಲ್ಗೊಂಡಿದ್ದರು.

 

ಜಿಲ್ಲೆಯ ಹಣ್ಣು ಬೆಳೆಗಾರರಿಗೆ ₹1.08 ಕೋಟಿ, ತರಕಾರಿ ಬೆಳೆಗಾರರಿಗೆ ₹55,400 ಹಾಗೂ ಹೂ ಬೆಳೆಗಾರರಿಗೆ ₹10.73 ಲಕ್ಷ ಬಿಡುಗಡೆಯಾಗಿದೆ.
ನಿತೇಶ್ ಪಾಟೀಲ
ಜಿಲ್ಲಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.