ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಲಪಂಥೀಯ ಆರ್ಥಿಕ ಸಂರಚನೆ ಪ್ರಬಲ’

Last Updated 3 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಪಂಚದಾದ್ಯಂತ ಬಲಪಂಥೀಯ ಆರ್ಥಿಕ ಸಂರಚನೆಗಳು ಪ್ರಬಲಗೊಳ್ಳುತ್ತಿವೆ. ಭಾರತದಲ್ಲೂ ಅವು ಮುನ್ನೆಲೆಗೆ ಬಂದಿವೆ ಎಂದು ಮಹದೇವಪುರ ವಿಧಾನಸಭಾ ಕ್ಷೇತ್ರದ 2ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕೋಟಿಗಾನಹಳ್ಳಿ ರಾಮಯ್ಯ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ ಮಹದೇವಪುರ ಕ್ಷೇತ್ರ ಘಟಕವು ಕಾಡುಗೋಡಿಯಲ್ಲಿ ಶನಿವಾರ ಆಯೋಜಿಸಿದ್ದ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಅಮೆರಿಕ, ರಷ್ಯಾ, ಫ್ರಾನ್ಸ್‌ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಬಲಪಂಥೀಯ ಆರ್ಥಿಕತೆ ಬಲಾಢ್ಯಗೊಳ್ಳುತ್ತಿದೆ. ಎಡಪಂಥೀಯ ಆರ್ಥಿಕತೆ ತೆರೆಯ ಹಿಂದೆ ಸರಿಯುತ್ತಿದೆ. 99 ಜನರ ವಿರುದ್ಧ ಒಬ್ಬ ಎನ್ನುವ ಪರಿಕಲ್ಪನೆ ಜಾಗತಿಕವಾಗಿ ಚಾಲ್ತಿಗೆ ಬರುತ್ತಿದೆ. ಕೆಲವೇ ವ್ಯಕ್ತಿಗಳ ಬಳಿ ಬಹುಪಾಲು ಸಂಪತ್ತು ಕ್ರೋಡೀಕರಣಗೊಳ್ಳುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

ಮಾಧ್ಯಮಗಳ ಭಾಷೆಯು ವಾಣಿಜ್ಯದ ಭಾಷೆಯಾಗುತ್ತಿದೆ. ಕ್ರೀಡೆ, ಕಲೆಯ ಬಗ್ಗೆ ವರದಿ ಮಾಡುವಾಗ ಯುದ್ಧದ ಭಾಷೆಯನ್ನು ಬಳಸಲಾಗುತ್ತಿದೆ ಎಂದು ದೂರಿದರು.

ರಾಜಕೀಯ ವ್ಯಕ್ತಿಗಳು ಆಕ್ರಮಣಕಾರಿ ಭಾಷೆ ಹಾಗೂ ಅರಣ್ಯದ ಪರಿಭಾಷೆಯನ್ನು ಬಳಸುತ್ತಿದ್ದಾರೆ. ಹುಲಿ, ಸಿಂಹಗಳಿಗೆ ಹೋಲಿಕೆ ಮಾಡುತ್ತಿದ್ದಾರೆ. ಪ್ರಾಣಿಗಳು ಕಾಡಿನಲ್ಲಿ ಇರಬೇಕು, ನಾಡಿನಲ್ಲಿ ಅಲ್ಲ. ಶತ್ರು ಸ್ವಾಹ ಮಾಡಬೇಕು ಎಂದು ಜನಪ್ರತಿನಿಧಿಯೊಬ್ಬರು ಸಮಾವೇಶವೊಂದರಲ್ಲಿ ಹೇಳಿಕೆ ನೀಡಿದ್ದರು. ಶತ್ರು ಸ್ವಾಹ ಎಂದರೆ ಏನರ್ಥ. ಇದು ಅಸಾಂವಿಧಾನಿಕ ಭಾಷೆ ಎಂದು ಹೇಳಿದರು.

ರಾಜಕೀಯವು ವ್ಯವಹಾರ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದರು. ಗುಜರಾತಿನವರ ರಕ್ತದಲ್ಲೇ ವ್ಯಾಪಾರ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದರು. ರಾಜಕೀಯ ಎಂದರೆ ವ್ಯಾಪಾರ ಎನ್ನುವಂತಾಗಿದೆ ಎಂದು ತಿಳಿಸಿದರು.

‘20 ವರ್ಷಗಳ ಹಿಂದೆ ಕಾಡುಗೋಡಿಯಲ್ಲಿ ಮಕ್ಕಳ ಮೇಳ ಮಾಡಿದ್ದೆ. 3,000ಕ್ಕೂ ಹೆಚ್ಚಿನ ಪ್ರೇಕ್ಷಕರು ನಾಟಕಗಳನ್ನು ವೀಕ್ಷಿಸಿದ್ದರು. ಇಲ್ಲಿನ ನೆನಪುಗಳೇ ಈ ಸಮ್ಮೇಳನಕ್ಕೆ ಬರಲು ಕಾರಣ’ ಎಂದರು.

ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ, ‘ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳು ರಾಜಕಾರಣ ಮಾಡದೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದರೆ ಇದಕ್ಕೆ ಶಾಶ್ವತ ಪರಿಹಾರ ಒದಗಿಸಬಹುದಿತ್ತು. ಒಕ್ಕೂಟ ರಾಷ್ಟ್ರದಲ್ಲಿ ರಾಜ್ಯಗಳ ಮಧ್ಯೆ ಭಿನ್ನಮತ ಬಂದರೆ ಅದನ್ನು ಬಗೆಹರಿಸಬೇಕಾದ ಜವಾಬ್ದಾರಿ ಪ್ರಧಾನಿ ಮೇಲಿದೆ. ಇನ್ನಾದರೂ ಮೋದಿ ಅವರು ಮೌನ ಮುರಿದು ಮಹದಾಯಿ ಸಮಸ್ಯೆ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು’ ಎಂದು ಒತ್ತಾಯಿಸಿದರು.

ಜಾಗೃತಿ ಮೆರವಣಿಗೆ: ಚನ್ನಸಂದ್ರ ಸರ್ಕಾರಿ ಶಾಲೆಯಿಂದ ಕಾಡುಗೋಡಿಯಲ್ಲಿದ್ದ ಕಾರ್ಯಕ್ರಮದ ವೇದಿಕೆವರೆಗೂ ಕನ್ನಡ ಜಾಗೃತಿ ಮೆರವಣಿಗೆ ನಡೆಸಲಾಯಿತು. ವಿವಿಧ ಜನಪದ ಕಲಾ ತಂಡಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು. ಕನ್ನಡ ಸಾಹಿತ್ಯ ಪರಿಷತ್‌ ಬೆಳ್ಳಂದೂರು ವಾರ್ಡ್ ಘಟಕವು ಸಿದ್ಧಪಡಿಸಿದ್ದ ಸಾಲುಮರದ ತಿಮ್ಮಕ್ಕ ಅವರ ಸ್ತಬ್ಧಚಿತ್ರ ಗಮನ ಸೆಳೆಯಿತು.

ಡಾ.ಮಹೇಶ್ ಜೋಷಿ ಅಧ್ಯಕ್ಷತೆಯಲ್ಲಿ ‘ಸ್ಮಾರ್ಟ್ ನಗರಿಗಳು ನಗರ ಗುರುತುಗಳು’ ಕುರಿತು ವಿಚಾರಗೋಷ್ಠಿ ನಡೆಯಿತು. ವಿಧಾನ ಪರಿಷತ್ ಸದಸ್ಯೆ ತಾರಾ ಅನೂರಾಧ ಮಾತನಾಡಿದರು. ಬಾನಂದೂರು ಕೆಂಪಯ್ಯ ಅವರ ಅಧ್ಯಕ್ಷತೆಯಲ್ಲಿ ಕಾವ್ಯ ವಾಚನ ಹಾಗೂ ಜನಪದ ಗಾಯನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT