ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ಪರಿಹಾರ ಚುರುಕುಗೊಳಿಸಲು ಸೂಚನೆ

ಪ್ರಮುಖ ಅಧಿಕಾರಿಗಳ ಜೊತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗೌರವ್ ಗುಪ್ತ ಪ್ರಗತಿ ಪರಿಶೀಲನಾ ಸಭೆ
Last Updated 29 ನವೆಂಬರ್ 2019, 15:34 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನೆರೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಚುರುಕಾಗಿ ಸೌಲಭ್ಯಗಳನ್ನು ಕಲ್ಪಿಸಬೇಕು. ಜಿಲ್ಲಾಧಿಕಾರಿ ಈ ಕುರಿತು ಅಧಿಕಾರಿಗಳ ಜೊತೆ ನಿರಂತರವಾಗಿ ಸಭೆ ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗೌರವ್ ಗುಪ್ತ ಸೂಚಿಸಿದರು.

ನಗರದಲ್ಲಿ ಶುಕ್ರವಾರ ಜಿಲ್ಲೆಯ ಪ್ರಮುಖ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು. ಕೆಲ ಅಧಿಕಾರಿಗಳು ಸಭೆಗೆ ಗೈರಾಗಿದ್ದರಿಂದ ಅಸಮಾಧಾನ ವ್ಯಕ್ತಪಡಿಸಿದರು.

’ನೆರೆಯಿಂದ ಅನೇಕ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ತುರ್ತಾಗಿ ಪರಿಹಾರ ಒದಗಿಸುವುದು ನಮ್ಮ ಕರ್ತವ್ಯ. ಇವುಗಳನ್ನು ಪಂಚವಾರ್ಷಿಕ ಯೋಜನೆಗಳ ರೀತಿ ಮಾಡಬೇಡಿ. ಸರ್ಕಾರದ ಯೋಜನೆಗಳು ತ್ವರಿತವಾಗಿ ಜನರಿಗೆ ಮುಟ್ಟಲು ಅಧಿಕಾರಿಗಳು ವೇಗವಾಗಿ ಕೆಲಸ ಮಾಡಬೇಕು‘ ಎಂದರು.

’ಮಳೆಯಿಂದ ಹಾನಿಗೊಳಗಾದ ಶಾಲಾ ಕೊಠಡಿಗಳ ದುರಸ್ತಿ, ಮರುನಿರ್ಮಾಣಗಳ ಬಗ್ಗೆ ಇಲಾಖೆಯ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಸ್ತುವಾರಿ ವಹಿಸಬೇಕು. ಕೊಠಡಿ ಇಲ್ಲ ಎನ್ನುವ ದೂರು ಯಾರಿಂದಲೂ ಕೇಳಿ ಬರಬಾರದು. ಒಂದೂವರೆ ತಿಂಗಳಲ್ಲಿ ಉಳಿದ ಎಲ್ಲ ಕೆಲಸ ಮುಗಿಸಬೇಕು‘ ಎಂದರು.

ಜಂಟಿ ಕೃಷಿ ನಿರ್ದೇಶಕ ಅಬೀದ್‌ ‘ಮುಂಗಾರು ಹಂಗಾಮಿನಲ್ಲಿ ₹214 ಕೋಟಿ ಹಾಗೂ ಹಿಂಗಾರು ಹಂಗಾಮಿನಲ್ಲಿ ₹60 ಕೋಟಿ ಹಣವನ್ನು ಬೆಳೆನಷ್ಟ ಪರಿಹಾರದ ಅಡಿ ರೈತರ ಖಾತೆ ಜಮೆ ಮಾಡಲಾಗಿದೆ‘ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ದೀಪಾ ಚೋಳನ್‌ ‘ಜಿಲ್ಲೆಯಲ್ಲಿ ಒಟ್ಟು 3,40,370 ಪಡಿತರ ಚೀಟಿ ಹೊಂದಿರುವ ಕುಟುಂಬಗಳು ಇದ್ದು, ಅವರಿಗೆ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡುಗಳನ್ನು ನೀಡಲಾಗುತ್ತಿದೆ. ಸಂಚಾರಿ ಕೇಂದ್ರಗಳ ಮೂಲಕ ಗ್ರಾಮೀಣ ಭಾಗದಲ್ಲಿ ಕಾರ್ಡ್‌ಗಳನ್ನು ಕೊಡಲಾಗುತ್ತಿದೆ‘ ಎಂದು ಮಾಹಿತಿ ನೀಡಿದರು.

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಅಜಪ್ಪ ಸೊಗಲದ ‘ನೆರೆಯಿಂದ ಹಾನಿಗೊಳಗಾದ ಆರು ವಸತಿ ನಿಲಯಗಳ ದುರಸ್ತಿ ಮತ್ತು ಕೆಲ ಕಟ್ಟಡಗಳ ಮರು ನಿರ್ಮಾಣಕ್ಕೆ ₹78 ಲಕ್ಷ ವೆಚ್ಚ ಮಾಡಲಾಗುತ್ತಿದೆ‘ ಎಂದರು.

ಡಿ. 15ರೊಳಗೆ ಕಾಮಗಾರಿ ಪೂರ್ಣ:’ನೆರೆ ಪರಿಹಾರದ ಅಡಿ ಲೋಕೋಪಯೋಗಿ ಇಲಾಖೆಯಿಂದ 159 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ₹50 ಲಕ್ಷ ವೆಚ್ಚದ ನಾಲ್ಕು ಕಾಮಗಾರಿಗಳಿಗೆ ಟೆಂಡರ್‌ ನೀಡಲಾಗಿದೆ‘ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ವಿರೂಪಾಕ್ಷಪ್ಪಯಮಕನಮರಡಿ ಸಭೆಗೆ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗೌರವ ಗುಪ್ತ ’ಕಾಮಗಾರಿಗಳು ಗುಣಮಟ್ಟದಿಂದ ಇರಬೇಕು. ನಿಗದಿತ ಕಾಲಮಿತಿಯಲ್ಲಿಯೇ ಮುಗಿಯವಂತೆ ಎಚ್ಚರಿಕೆ ವಹಿಸಬೇಕು‘ ಎಂದರು.

ಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ಜಿಲ್ಲಾ ಪಂಚಾಯ್ತಿ ಜಿಲ್ಲಾ ಪಂಚಾಯ್ತಿ ಸಿಇಒ ಬಿ.ಸಿ. ಸತೀಶ ಸೇರಿದಂತೆ ಜಿಲ್ಲೆಯ ಪ್ರಮುಖ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT