ಮಂಗಳವಾರ, ಸೆಪ್ಟೆಂಬರ್ 29, 2020
27 °C

ಸರ್ಕಾರಕ್ಕೆ ನೋಟಿಸ್‌: ಹಿರೇಮಠ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರ ಒಪ್ಪಿಗೆಯಿಲ್ಲದಿದ್ದರೂ, ನಿವೃತ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಅವರನ್ನು ಉಪ ಲೋಕಾಯುಕ್ತರನ್ನಾಗಿ ನೇಮಕ ಮಾಡಿದ ರಾಜ್ಯದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ನೋಟಿಸ್‌ ಜಾರಿ ಮಾಡಿರುವುದು ಸ್ವಾಗತಾರ್ಹ ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್‌.ಆರ್‌. ಹಿರೇಮಠ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ನೇಮಕವನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೆ. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ನಾಲ್ಕು ವಾರಗಳ ಒಳಗೆ ಉತ್ತರ ನೀಡಬೇಕೆಂದು ಸರ್ಕಾರಕ್ಕೆ ಸೂಚಿಸಿದೆ. ಲೋಕಾಯುಕ್ತ ಸಂಸ್ಥೆಗೆ ಅನೇಕ ಪ್ರಾಮಾಣಿಕರು ಬಂದು, ಹೋಗಿದ್ದಾರೆ. ಅಲ್ಲಿ ಪ್ರಾಮಾಣಿಕರೇ ಇರಬೇಕು ಎನ್ನುವ ಆಶಯ ನಮ್ಮದು’ ಎಂದರು.

‘ಲೋಕನಾಯಕ ಜಯಪ್ರಕಾಶ ನಾರಾಯಣ ಅವರು ಪ್ರಜಾತಂತ್ರ ಉಳಿವಿಗಾಗಿ ಸಿಟಿಜನ್‌ ಫಾರ್‌ ಡೆಮಾಕ್ರಸಿ (ಸಿಎಫ್‌ಡಿ) ಸಂಘಟನೆ ಆರಂಭಿಸಿ, ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ ಯುವಜನರಲ್ಲಿ ಜಾಗೃತಿ ಮೂಡಿಸಿದರು. ಜೆಪಿ ಅವರ ಆಶಯ ಈಡೇರಿಸುವ ಉದ್ದೇಶದಿಂದ ಸಂಸ್ಥೆ ಈಗಲೂ ಕಾರ್ಯನಿರ್ವಹಿಸುತ್ತಿದೆ. ಇಂಥ ಶ್ರೇಷ್ಠ ಸಂಸ್ಥೆಯ ಹೆಸರನ್ನು ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆಗೆ ನೇಮಕವಾದ ಸತ್ಯಶೋಧನಾ ಸಮಿತಿ ದುರ್ಬಳಕೆ ಮಾಡಿಕೊಂಡಿದೆ’ ಎಂದು ಆರೋ‍ಪಿಸಿದರು.

ಸಿಎಫ್‌ಡಿ ಪ್ರಧಾನ ಕಾರ್ಯದರ್ಶಿ ವೆಂಕನಗೌಡ ಪಾಟೀಲ ಮಾತನಾಡಿ ‘ಆಜಾದಿಯಿಂದ ಸ್ವರಾಜ್‌ ತನಕ’ ಅಭಿಯಾನದ ಮುಂದುವರಿದ ಭಾಗವಾಗಿ ಅ. 2ರಿಂದ 11ರ ತನಕ ರಾಷ್ಟ್ರದಾದ್ಯಂತ ಪ್ರತಿಭಟನೆ ಮತ್ತು ರಾಷ್ಟ್ರೀಯ ಪ್ರಜ್ಞೆಯ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಜನಾಂದೋಲನಗಳ ಮಹಾಮೈತ್ರಿ, ಜನಸಂಗ್ರಾಮ ಪರಿಷತ್‌ ಮತ್ತು ಜನತಂತ್ರ ಪ್ರಯೋಗಶಾಲೆ ಸಹಯೋಗದಲ್ಲಿ ಆನ್‌ಲೈನ್‌ ಮತ್ತು ಆಫ್‌ಲೈನ್‌ನಲ್ಲಿ ಕಾರ್ಯಕ್ರಮಗಳು ಜರುಗಲಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು