ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

14 ಕಂದಾಯ ಗ್ರಾಮಗಳಿಗೆ ಅಧಿಸೂಚನೆ

18 ಪ್ರಸ್ತಾವದಲ್ಲಿ 3 ಪ್ರಸ್ತಾವ ಕೈಬಿಟ್ಟ ಸರ್ಕಾರ; ಒಂದು ಪ್ರಸ್ತಾವಕ್ಕೆ ಅನುಮೋದನೆ ಬಾಕಿ
Published : 29 ಆಗಸ್ಟ್ 2024, 6:09 IST
Last Updated : 29 ಆಗಸ್ಟ್ 2024, 6:09 IST
ಫಾಲೋ ಮಾಡಿ
Comments

ಧಾರವಾಡ: ಜಿಲ್ಲೆಯಲ್ಲಿ 14 ದಾಖಲೆರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ಅಂತಿಮ ಅಧಿಸೂಚನೆ ಪ್ರಕಟಿಸಲಾಗಿದೆ. ಕಲಘಟಗಿ ತಾಲ್ಲೂಕಿನ ಆರು, ಧಾರವಾಡದ ನಾಲ್ಕು, ಅಳ್ನಾವರದ ಮೂರು ಹಾಗೂ ಹುಬ್ಬಳ್ಳಿಯ ಒಂದು ಪ್ರದೇಶ ಹೊಸ ಕಂದಾಯ ಗ್ರಾಮವಾಗಿವೆ.

ಕಂದಾಯ ಗ್ರಾಮವಾಗಿ ಪರಿವರ್ತಿಸಲು ಒಟ್ಟು 18 ದಾಖಲೆರಹಿತ ಜನವಸತಿ ಪ್ರದೇಶಗಳನ್ನು ಗುರುತಿಸಲಾಗಿತ್ತು. ಈ ಪೈಕಿ ಹುಬ್ಬಳ್ಳಿ ತಾಲ್ಲೂಕಿನ ಸಣ್ಣಕುಸುಗಲಕ್ಕೆ ಅನುಮೋದನೆ ನೀಡುವುದಷ್ಟೇ ಬಾಕಿ ಇದೆ. ವಿವಿಧ ಕಾರಣಗಳಿಂದ ಮೂರು ಪ್ರಸ್ತಾವಗಳನ್ನು ಕೈಬಿಡಲಾಗಿದೆ.

ಅಳ್ನಾವರ ತಾಲ್ಲೂಕಿನ ಶಿವನಗರವು ಅರಣ್ಯ ಜಮೀನಿನಲ್ಲಿದ್ದು, ಉಪವಿಭಾಗಾಧಿಕಾರಿಯ ಅರಣ್ಯ ಹಕ್ಕು ಸಮಿತಿಯಲ್ಲಿ ವಿಚಾರಣೆ ಬಾಕಿ ಇರುವ ಕಾರಣಕ್ಕೆ ಕೈಬಿಡಲಾಗಿದೆ. ಇದೇ ತಾಲ್ಲೂಕಿನ ಮಡಕಿಕೊಪ್ಪದಲ್ಲಿ 15 ಕುಟುಂಬಗಳಿದ್ದು, ಜನಸಂಖ್ಯೆ 98 ಇದೆ ಎಂದು ವರದಿ ನೀಡಿರುವುದರಿಂದ ಕೈಬಿಡಲಾಗಿದೆ.

ಹುಬ್ಬಳ್ಳಿ ತಾಲ್ಲೂಕಿನ ಹೊಸಬಂಡಿವಾಡ ಸಂಬಂಧ ಪ್ರಾಥಮಿಕ ಅಧಿಸೂಚನೆ ಪ್ರಕಟಿಸಲಾಗಿದೆ. ಆದರೆ, ಜಮೀನಿನ ಮಾಲೀಕರು ತಕಾರರು ಎತ್ತಿ, ನ್ಯಾಯಾಲಯದಲ್ಲಿ ದಾವೆ ಹೂಡಿರುವುದಕ್ಕೆ ಪ್ರಸ್ತಾವ ಕೈಬಿಡಲಾಗಿದೆ.

‘ಕನಿಷ್ಠ 50 ಮನೆಗಳು ಮತ್ತು 250 ಜನಸಂಖ್ಯೆ ಇರುವ ಹಾಗೂ ಈಗಾಗಲೇ ಅಸ್ತಿತ್ವದಲ್ಲಿರುವ ಊರಿನಿಂದ ಎರಡು ಕಿ.ಮೀ ದೂರ ಇರುವ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಲು ಅವಕಾಶವಿದೆ. ಗ್ರಾಮಕ್ಕೆ ಸೂಚಿಸಿದ್ದ ಹೆಸರನ್ನೇ ಪ‍್ರಸ್ತಾವದಲ್ಲಿ ಶಿಫಾರಸು ಮಾಡಿರುತ್ತೇವೆ. ಮಾನದಂಡ ಆಧರಿಸಿ ಸರ್ಕಾರದಿಂದ ಅನುಮೋದನೆ ಪಡೆಯಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ. ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಮೀನಿನಲ್ಲಿ ಮನೆ ನಿರ್ಮಿಸಿ ಹಲವು ವರ್ಷ ಕಳೆದಿದ್ದರೂ ಅವುಗಳಿಗೆ ನಂಬರ್‌ ಆಗಿರಲ್ಲ. ಕಂದಾಯ ಗ್ರಾಮವಾಗಿ ಪರಿವರ್ತಿಸಿದ ಮನೆಗಳಿಗೆ ನಂಬರ್‌ ನೀಡಲಾಗುತ್ತದೆ. ಜನರಿಗೆ ಸೌಲಭ್ಯಗಳು ಸಿಗುತ್ತವೆ. ಜನರ ಬಹುದಿನಗಳ ಬೇಡಿಕೆ ಈಡೇರಿದೆ’ ಎಂದು ತಿಳಿಸಿದರು.

ಕಂದಾಯ ಗ್ರಾಮಗಳ 1,001 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಸಿದ್ದಾಪುರದ 64 ಫಲಾನುವಭವಿಗಳಿಗೆ ಹಕ್ಕುವಿತರಣೆ ಬಾಕಿ ಇದೆ.

‘ಕಳಸಿನಕೊಪ್ಪವನ್ನು ಕಂದಾಯ ಗ್ರಾಮವಾಗಿ ಘೋಷಿಸಬೇಕು ಎಂಬುದು ಬಹಳ ವರ್ಷಗಳ ಬೇಡಿಕೆ. ಅದಕ್ಕಾಗಿ 25 ವರ್ಷ ಹೋರಾಟ ಮಾಡಿದ್ದೇವೆ. ಕಂದಾಯ ಗ್ರಾಮವಾದರೆ ದಾಖಲೆ, ಸವಲತ್ತುಗಳಿಗಾಗಿ ಬೇರೆ ಊರಿಗೆ ಹೋಗಬೇಕಾಗಿಲ್ಲ. ಹಕ್ಕುಪತ್ರ ಸಿಗುವುದರಿಂದ ಅನುಕೂಲವಾಗಲಿದೆ’ ಎನ್ನುತ್ತಾರೆ ಕಲಘಟಗಿ ತಾಲ್ಲೂಕಿನ ಕಳಸಿನಕೊಪ್ಪದ ಚಂದ್ರಮನಿ ದಾದಗೌಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT