ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಗಂಧದ ಮರಗಳಿಗೆ ಕಳ್ಳರ ಕೊಡಲಿ ಏಟು

ನೃಪತುಂಗಬೆಟ್ಟದಲ್ಲಿ ಬೆಲೆ ಬಾಳುವ ಮರಗಳ ಕಡಿದರೂ ಎಚ್ಚೆತ್ತುಕೊಳ್ಳದ ಅರಣ್ಯ ಇಲಾಖೆ
Last Updated 4 ಮೇ 2019, 1:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ನೃಪತುಂಗಬೆಟ್ಟದಲ್ಲಿ ಬೆಳೆದು ನಿಂತಿರುವ ಸಾವಿರಾರು ಶ್ರೀಗಂಧದ ಗಿಡಗಳ ಮೇಲೆ ಕಳ್ಳರ ಕಾಕದೃಷ್ಠಿ ಬಿದ್ದಿದೆ. ಬೆಲೆ ಬಾಳುವ ಮರಗಳು ಇನ್ನೂ ಬಲಿತು ಸುವಾಸನೆ ಬೀರುವ ಮೊದಲೇ ಕಳ್ಳರು ಅವುಗಳ ಬುಡಕ್ಕೆ ಕೊಡಲಿ ಇಟ್ಟಿದ್ದಾರೆ.

ಬೆಟ್ಟದ ತುತ್ತತುದಿಯಲ್ಲಿರುವ ಧ್ಯಾನ ಗೋಪರದ (ಷಣ್ಮುಖ ದೇವಸ್ಥಾನದ ಹಿಂಭಾಗ) ಆಸುಪಾಸು ನಾಲ್ಕೈದು ಮರಗಳನ್ನು ಮಷಿನ್‌ನಿಂದ ಕಡಿದು, ತೆಗೆದುಕೊಂಡು ಹೋಗಿದ್ದರೂ ಸಹ ಇಲ್ಲಿಯ ಸಿಬ್ಬಂದಿ ಏನೂ ನಡೆದಿಲ್ಲದವರಂತೆ ಸುಮ್ಮನಿದ್ದಾರೆ. ಪ್ರಕರಣವನ್ನು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೂ ತಾರದೇ ನಿರ್ಲಕ್ಷ್ಯ ವಹಿಸಿದ್ದಾರೆ.

ನೃಪತುಂಗಬೆಟ್ಟದ ಬುಡದಲ್ಲೇ ಇರುವ ಫಾರೆಸ್ಟ್‌ ಕಾಲೊನಿಯಲ್ಲಿ ಹುಬ್ಬಳ್ಳಿ ವಲಯ ಅರಣ್ಯ ಅಧಿಕಾರಿಗಳ ಕಚೇರಿ ಇದ್ದರೂ ಸಹ ಶ್ರೀಗಂಧದ ಚೋರರು ಮರಗಳನ್ನು ಧರೆಗುರುಳಿಸುವ ಧೈರ್ಯ ಮಾಡಿರುವುದು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸಂಶಯ ಮೂಡಿಸುವಂತಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನೃಪತುಂಗಬೆಟ್ಟದ ಕೆಲಸಗಾರ ಮಹಾಂತೇಶ ಹಡಪದ, ‘ಮೂರು ದಿನಗಳ ಹಿಂದೆ ರಾತ್ರಿ ವೇಳೆ ಕಳ್ಳರು ಶ್ರೀಗಂಧದ ಮರಗಳನ್ನು ಕಡಿದುಕೊಂಡು ಹೋಗಿದ್ದಾರೆ. ಈ ಬಗ್ಗೆ ನಮಗೆ ಹೆಚ್ಚು ಮಾಹಿತಿ ಇಲ್ಲ’ ಎನ್ನುತ್ತಾರೆ.

‘ಬೆಳಿಗ್ಗೆ 8.30 ರಿಂದ ರಾತ್ರಿ 8ರ ವರೆಗೆ ಬೆಟ್ಟದಲ್ಲಿ ನಾಲ್ಕು ಜನ ವಾಚ್‌ಮನ್‌ ಕಾವಲಿಗೆ ಇರುತ್ತಾರೆ. ಈ ಸಂದರ್ಭದಲ್ಲಿ ಯಾವುದೇ ಗಿಡ, ಮರಗಳಿಗೆ ಹಾನಿಯಾಗದಂತೆ, ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸುತ್ತಾರೆ ಮತ್ತು ಅಕ್ರಮ ಪ್ರವೇಶ ತಡೆಯುತ್ತಾರೆ. ಆದರೆ, ರಾತ್ರಿ ವೇಳೆ ಯಾರೂ ಇಲ್ಲದ ಸಂದರ್ಭದಲ್ಲಿ ಕಳ್ಳರು ಮರಗಳನ್ನು ಕಡಿದುಕೊಂಡು ಹೋಗಿದ್ದಾರೆ’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ನೃಪತುಂಗಬೆಟ್ಟದ ಸೂಪರ್‌ವೈಸರ್‌ ವಸಂತ ಅಕ್ಕಿ.

‘ಶ್ರೀಗಂಧ ಮರಗಳನ್ನು ಕಡಿದುಕೊಂಡು ಹೋಗಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದೇವೆ. ಯಾರೊಬ್ಬರೂ ಸ್ಥಳಕ್ಕೆ ಬಂದಿಲ್ಲ’ ಎಂದರು.

ಈ ಸಂಬಂಧ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅರಣ್ಯ ಇಲಾಖೆಯ ಗಾರ್ಡ್‌ ಸಂತೋಷ ಹೊಸಮನಿ, ನೃಪತುಂಗಬೆಟ್ಟದಲ್ಲಿ ಶ್ರೀಗಂಧದ ಮರಗಳನ್ನು ಕಡಿದುರುಳಿಸಿರುವ ಬಗ್ಗೆ ಯಾರೂ ನಮ್ಮ ಗಮನಕ್ಕೆ ತಂದಿಲ್ಲ. ದೂರು ನೀಡಿಲ್ಲ. ಬೆಟ್ಟದ ಸಿಬ್ಬಂದಿ ಸುಳ್ಳು ಹೇಳುತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸುತ್ತೇನೆ’ ಎಂದು ತಿಳಿಸಿದರು.

ವಲಯ ಅರಣ್ಯ ಅಧಿಕಾರಿ ಬಿ.ಆರ್‌. ಚಿಕ್ಕಮಠ ಅವರ ಮೊಬೈಲ್‌ಗೆ ಕರೆ ಮಾಡಿದರೂ ಪ್ರತಿಕ್ರಿಯೆಗೆ ಸಿಗಲಿಲ್ಲ.

ಬೇಲಿ, ಕಾಂಪೌಂಡ್‌ ಇಲ್ಲ:

ಬೆಟ್ಟದ ಮುಂಭಾಗದಲ್ಲಿ ಮಾತ್ರ ತಂತಿಬೇಲಿ, ಕಾಂಪೌಂಡ್‌ ಇದೆ. ಆದರೆ, ಇನ್ನುಳಿದಂತೆ ಸುತ್ತಲೂ ಹಾಕಿರುವ ತಂತಿ ಬೇಲಿ ಕಿತ್ತು ಹೋಗಿದೆ. ಜನ ಸುಲಭವಾಗಿ ಒಳಪ್ರವೇಶಿಸಲು ಅವಕಾಶ ಇದೆ. ಮಹಾನಗರ ಪಾಲಿಕೆ ಬೆಟ್ಟದ ರಕ್ಷಣೆಗೆ ಕಿಂಚಿತ್ತು ಆಸಕ್ತಿ ವಹಿಸುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.

ಗಿಡ, ಮರಗಳಿಗೆ ನೀರಿಲ್ಲ: ಬೆಟ್ಟದಲ್ಲಿರುವ ಚಿಕ್ಕಪುಟ್ಟ ಗಿಡಗಳಿಗೆ ಮತ್ತು ಹೂವಿನ ಗಿಡಗಳಿಗೆ ಬೇಸಿಗೆಯಲ್ಲಿ ನೀರು ಬಿಡುವವರಿಲ್ಲ. ಡಾ.ತಪಶೆಟ್ಟಿ ಸೇರಿದಂತೆ ಕೆಲ ವಾಯು ವಿಹಾರಿಗಳು ಗಿಡಗಳಿಗೆ ಸ್ವಯಂ ಪ್ರೇರಣೆಯಿಂದ ನೀರು ಬಿಡುತ್ತಾರೆ. ಇತ್ತೀಚೆಗೆ ಸುರಿದ ಮಳೆಯಿಂದ ಗಿಡಮರಗಳು ಒಂದಷ್ಟು ಹಸಿರಿನಿಂದ ಕಂಗೊಳಿಸುತ್ತಿವೆ. ಇವುಗಳ ರಕ್ಷಣೆಗೆ ಅರಣ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆ ಕಾಳಜಿ ವಹಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT