ಸೋಮವಾರ, ಸೆಪ್ಟೆಂಬರ್ 20, 2021
22 °C
ಅಕಾಲಿಕ ಮಳೆಗೆ ಉದುರಿದ ಹೂವು, ಕಾಯಿ; ನಷ್ಟದ ಭೀತಿಯಲ್ಲಿ ರೈತ

ಮಾವು ಫಸಲಿಗೆ ಮಳೆ ಹೊಡೆತ: ನಷ್ಟದ ಭೀತಿಯಲ್ಲಿ ರೈತ

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಅಕಾಲಿಕವಾಗಿ ಸುರಿಯುತ್ತಿರುವ ಮಳೆಯು ಮಾವಿನ ಫಸಲಿಗೆ ಹೊಡೆತ ಕೊಟ್ಟಿದೆ. ಹೂವು ಹಾಗೂ ಸಣ್ಣ ಕಾಯಿಗಳು ಮಳೆ ಏಟಿಗೆ ನೆಲ ಕಚ್ಚಿವೆ. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಬೆಳೆಗಾರರು ಚಿಂತೆಗೀಡಾಗಿದ್ದಾರೆ.

ಧಾರವಾಡ ಜಿಲ್ಲೆ ಅಲ್ಫಾನ್ಸೊ ಮಾವು ಬೆಳೆಯುವ ಪ್ರಮುಖ ಪ್ರದೇಶ. ಉಳಿದಂತೆ ಬಾಗೇಪಲ್ಲಿ ಮತ್ತು ಮಲ್ಲಿಕಾ ತಳಿಯ ಮಾವುಗಳನ್ನು ಸಹ ಬೆಳೆಯುತ್ತಾರೆ. ಆದಾಯ ತರುವ ಈ ತೋಟಗಾರಿಕೆ ಬೆಳೆಯನ್ನು ನೆಚ್ಚಿಕೊಂಡಿರುವ ರೈತರು ಅಕಾಲಿಕ ಮಳೆಯಿಂದಾಗಿ, ಬೆಳೆ ನಷ್ಟ ಅನುಭವಿಸುವ ಆತಂಕದಲ್ಲಿದ್ದಾರೆ.

‘ಮಾವಿನ ಮರಗಳು ಹೂವುಗಳಿಂದ ಮೈದುಂಬಿದ್ದವು. ಕೆಲ ಮರಗಳಲ್ಲಿ ಹೀಚು ಕಾಯಿಗಳು ಕಾಣಿಸಿಕೊಂಡಿದ್ದವು. ಒಂದು ವಾರದಿಂದ ಆಗಾಗ ಸುರಿಯುತ್ತಿರುವ ಮಳೆಗೆ ಹೂವುಗಳು ಹಾಗೂ ಸಣ್ಣ ಕಾಯಿಗಳು ಬಹುತೇಕ ಉದುರಿವೆ’ ಎಂದು ಕುಂದಗೋಳ ತಾಲ್ಲೂಕಿನ ಕಳಸದ ರೈತ ಮೃತ್ಯುಂಜಯ ನಾಗಶೆಟ್ಟಿಕೊಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘12 ಎಕರೆಯಲ್ಲಿ ಮಾವು ಬೆಳೆದಿದ್ದೇವೆ. ಚೆನ್ನಾಗಿ ಹೂವು ಬಿಟ್ಟಿತ್ತು. ಉತ್ತಮ ಫಸಲು ಕೈ ಸೇರುವ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ, ಅಕಾಲಿಕ ಮಳೆಯು ಆಘಾತ ನೀಡಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಹಿಂಗಾರು ಬೆಳೆಯಾದ ಮಾವಿಗೆ ಮಾಡಿಸಿದ್ದ ಹವಾಮಾನ ಆಧಾರಿತ ವಿಮೆ ಎರಡು ವರ್ಷಗಳಿಂದ ಬಂದಿಲ್ಲ. ಹೆಕ್ಟೇರ್‌ಗೆ ₹4,800ರಂತೆ ಒಟ್ಟು ₹22 ಸಾವಿರ ಪಾವತಿಸಿದ್ದೆ. ಈ ಕುರಿತು ವಿಚಾರಿಸಲು ವಿಮಾ ಕಂಪನಿಯವರು ಕೈಗೆ ಸಿಗುವುದಿಲ್ಲ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ರೈತರಿಗೂ ಸರಿಯಾದ ಮಾಹಿತಿ ನೀಡುತ್ತಿಲ್ಲ’ ಎಂದರು.

ಕಳೆದ ವರ್ಷವೂ ನಷ್ಟ

‘ಕಳೆದ ವರ್ಷ ಉತ್ತಮ ಫಸಲು ಕೈ ಸೇರಿದ್ದರೂ, ಕೊರೊನಾದಿಂದಾಗಿ ಲಾಕ್‌ಡೌನ್ ಘೋಷಣೆಯಾಯಿತು. ಖರೀದಿದಾರರು ತೋಟಗಳತ್ತ ಮುಖ ಮಾಡಲಿಲ್ಲ. ಮಾರುಕಟ್ಟೆಗೆ ನಾವೇ ಮಾಲು ತೆಗೆದುಕೊಂಡು ಹೋಗಿ ಮಾರಾಟ ಮಾಡುವುದಕ್ಕೂ ಸಾಧ್ಯವಾಗಲಿಲ್ಲ. ಅರ್ಧದಷ್ಟು ಫಸಲು ಮನೆಯಲ್ಲೇ ಕೊಳೆತವು. ಹಾಕಿದ್ದ ಬಂಡವಾಳವೂ ಕೈ ಸೇರಿರಲಿಲ್ಲ. ಈ ಸಲ ಆರಂಭದಲ್ಲೇ ಮಳೆ ಬಂದು ಹೊಡೆತ ನೀಡಿದೆ’ ಎಂದು ನಾಲ್ಕು ಎಕರೆಯಲ್ಲಿ ಅಲ್ಫಾನ್ಸೊ ಬೆಳೆದಿರುವ ಹುಬ್ಬಳ್ಳಿ ತಾಲ್ಲೂಕಿನ ಕುಂಕೂರು ಗ್ರಾಮದ ರೈತ ಗಂಗಪ್ಪ ಹಿತ್ತಲಮನಿ ಅಳಲು ತೋಡಿಕೊಂಡರು.

‘ಮಳೆಗೆ ಮಾವಿನ ಫಸಲು ನೆಲ ಕಚ್ಚಿದ್ದರಿಂದ ರೈತರು ಮುಂದೇನು ಎಂಬ ಚಿಂತೆಯಲ್ಲಿದ್ದಾರೆ. ರೈತರ ಸಮಸ್ಯೆ ಆಲಿಸಬೇಕಾದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ತೋಟಗಳತ್ತ ಸುಳಿದಿಲ್ಲ. ಅಕಾಲಿಕ ಮಳೆಯಿಂದಾದ ನಷ್ಟವನ್ನು ಸಮೀಕ್ಷೆ ಮಾಡಿ, ಸೂಕ್ತ ಪರಿಹಾರ ನೀಡಬೇಕು’ ಎಂದು ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟಿಯ ರೈತ ಈಶ್ವರಪ್ಪ ಕಲಘಟಗಿ ಒತ್ತಾಯಿಸಿದರು.

ಶೇ 10ರಷ್ಟು ಬೆಳೆ ನಷ್ಟ: ಕಾಶೀನಾಥ

‘ಅಕಾಲಿಕ ಮಳೆಯಿಂದ ಆಗಿರುವ ಹಾನಿಯ ಬಗೆಗೆ ರೈತರ ತೋಟಗಳಿಗೆ ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ನಿತ್ಯ ಕೆಲ ಹೊತ್ತು ಸಾಧಾರಣ ಮಳೆ ಸುರಿಯುತ್ತಿರುವುದರಿಂದ ಶೇ 10ರಷ್ಟು ಬೆಳೆ ನಷ್ಟವಾಗಿರಬಹುದು’ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶ ಕಾಶೀನಾಥ ಭದ್ರಣ್ಣವರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಧಾರವಾಡ, ಕಲಘಟಗಿ, ಹುಬ್ಬಳ್ಳಿ ಹಾಗೂ ಕುಂದಗೋಳ ತಾಲ್ಲೂಕಿನ ಒಟ್ಟು 8,500 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಅಕಾಲಿಕ ಮಳೆಯಿಂದಾದ ಬೆಳೆ ನಷ್ಟಕ್ಕೆ ಇಲಾಖೆಯಿಂದ ಪರಿಹಾರ ಸಿಗುವುದಿಲ್ಲ. ಹವಾಮಾನ ಆಧಾರಿತ ಹಿಂಗಾರು ಬೆಳೆಯ ವಿಮೆ ಮಾಡಿಸಿದ್ದರೆ ಪರಿಹಾರ ಸಿಗಲಿದೆ. ತಾಂತ್ರಿಕ ಕಾರಣದಿಂದಾಗಿ ಕೆಲವರಿಗೆ ಪರಿಹಾರ ಸಿಗುವುದು ವಿಳಂಬವಾಗಲಿದೆ. ಅಂತಹವರು ಇಲಾಖೆ ಗಮನಕ್ಕೆ ತಂದರೆ ಸಮಸ್ಯೆ ಪರಿಹರಿಸಲಾಗುವುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು