ಶುಕ್ರವಾರ, ಸೆಪ್ಟೆಂಬರ್ 20, 2019
29 °C

ಮ್ಯಾಜಿಸ್ಟ್ರೇಟ್ ಪ್ರಶ್ನೆಗಳಿಗೆ ಅಧಿಕಾರಿಗಳು ತಬ್ಬಿಬ್ಬು

Published:
Updated:
Prajavani

ಧಾರವಾಡ: ಕಟ್ಟಡಕ್ಕೆ ಭಾಗಶಃ ಪೂರ್ಣಗೊಂಡ ಪ್ರಮಾಣ ಪತ್ರ ನೀಡುವಾಗ ಗಮನಿಸುವ ಅಂಶಗಳೇನು? ಕಟ್ಟಡದ ಸದೃಢತೆ ಪರಿಶೀಲಿಸದೆ ಪೂರ್ಣಗೊಂಡ ಪತ್ರ ನೀಡುತ್ತೀರಾ? ಪ್ರಮಾಣ ಪತ್ರ ನೀಡುವ ಮೊದಲು ಸ್ಥಳ ಪರಿಶೀಲನೆಗೆ ಯಾರೆಲ್ಲಾ ಹೋಗಿದ್ದಿರಿ? ಹೀಗೆ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ದೀಪಾ ಚೋಳನ್ ಪ್ರಶ್ನೆಗೆ ಅಧಿಕಾರಿಗಳು ಉತ್ತರಿಸಲಾಗದೆ ಪರದಾಡಿದರು.

ಇಲ್ಲಿನ ಕುಮಾರೇಶ್ವರ ನಗರದಲ್ಲಿ ಮಾರ್ಚ್ 19ರಂದು ಕುಸಿದ ಕಟ್ಟಡದ ಮ್ಯಾಜಿಸ್ಟ್ರಿಯಲ್ ತನಿಖೆ ಕೈಗೊಂಡಿರುವ ಅವರು ಪಾಲಿಕೆ ನಗರ ಯೋಜನೆ ವಿಭಾಗದ ಸಹಾಯಕ ನಿರ್ದೇಶಕ ಅಶೋಕ ಗದಗ ಮತ್ತು ನಗರದ ಯೋಜಕ ಮುಕುಂದ ಜೋಶಿ ಅವರನ್ನು ಶುಕ್ರವಾರ ವಿಚಾರಣೆಗೆ ಒಳಪಡಿಸಿದರು.

‘2016ರಲ್ಲಿ ಆರಂಭವಾದ ಕಟ್ಟಡದ ನಿರ್ಮಾಣ ಕಾಮಗಾರಿ ಈಗಲೂ ಪೂರ್ಣಗೊಂಡಿಲ್ಲ. ಆದರೆ 2018ರ ಮಾರ್ಚ್ 31ರಂದು ಭಾಗಶಃ ಪೂರ್ಣಗೊಂಡ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಕೆಯಾಗುತ್ತದೆ. ಅದೇ ವರ್ಷ ಏ. 6ರಂದು ಪ್ರಮಾಣಪತ್ರ ನೀಡುತ್ತೀರಿ. ಇಷ್ಟು ತರಾತುರಿಯಲ್ಲಿ ಪ್ರಮಾಣಪತ್ರ ನೀಡುವ ಸಕಾರಣವಾದರೂ ಏನಿತ್ತು? ಎಲ್ಲಾ ಕಟ್ಟಡಗಳಿಗೂ ಇಷ್ಟೇ ತ್ವರಿತವಾಗಿ ನೀಡುತ್ತೀರಾ? ಕಟ್ಟಡದ ಸದೃಢತೆ ಪರೀಕ್ಷಿಸುವುದಿಲ್ಲವೇ?’ ಎಂದು ಮುಕುಂದ ಜೋಶಿ ಅವರನ್ನು ಜಿಲ್ಲಾಧಿಕಾರಿ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಜೋಶಿ, ‘ನಿವೇಶನದಲ್ಲಿ ನಿರ್ಮಾಣಗೊಂಡ ಕಟ್ಟಡದ ಸುತ್ತ ಸೂಚಿಸಿದಷ್ಟು ಜಾಗ ಬಿಡಲಾಗಿದೆಯೇ, ವಾಹನ ನಿಲುಗಡೆಗೆ ಜಾಗ ಬಿಟ್ಟಿದ್ದಾರೆಯೇ ಎಂಬುದಷ್ಟನ್ನೇ ನೋಡುತ್ತೇವೆ. ಉಳಿದದ್ದು ನೋಡುವುದಿಲ್ಲ. ಆದರೆ ಅವರು ಮೊದಲೇ ಅರ್ಜಿ ನೀಡಿದ್ದರು. ಕಟ್ಟಡ ಸದೃಢತೆ ಅದರ ಮಾಲೀಕರಿಗೆ ಬಿಟ್ಟ ವಿಷಯ’ ಎಂಬ ಮಾಹಿತಿ ನೀಡಿದರು.

ಇದಕ್ಕೆ ಕೆಂಡಾಮಂಡಲರಾದ ದೀಪಾ ಚೋಳನ್, ‘ಅವರು ಕೇಳಿದ ಅರ್ಜಿ, ನೀವು ಕೊಟ್ಟ ಪತ್ರ ಎರಡೂ ಇಲ್ಲೇ ಇದೆ. ಅದಕ್ಕೆ ನಿಮ್ಮದೇ ಸಹಿಯೂ ಇದೆ. ಹೀಗಿರುವಾಗಿ ಸುಳ್ಳು ಮಾಹಿತಿ ಮತ್ತು ತನಿಖೆಯ ಹಾದಿ ತಪ್ಪಿಸುವ ಕೆಲಸ ಮಾಡಬೇಡಿ. ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದ್ದೀರಿ. ಅದು ಹೇಗೆ ಕಟ್ಟಿದ್ದಾರೆ ಎಂದು ಪರೀಕ್ಷಿಸುವುದು ನಿಮ್ಮ ಜವಾಬ್ದಾರಿ ಅಲ್ಲವೇ? ಮಾಲೀಕರ ಜವಾಬ್ದಾರಿ ಎಂದರೆ ಅಲ್ಲಿ ಮೃತಪಟ್ಟ, ಗಾಯಗೊಂಡ ಅಮಾಯಕರ ಹೊಣೆ ಯಾರದ್ದು?’ ಎಂದು ಖಾರವಾಗಿ ಪ್ರಶ್ನಿಸಿದರು.

ಈ ಮಾತಿಗೆ ಮುಖದ ಭಾವ ಬದಲಿಸಿದ ಜೋಶಿ ನಡೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಚೋಳನ್, ‘ಇದನ್ನು ನಿಮ್ಮ ಕಚೇರಿಯಲ್ಲಿ ಇಟ್ಟುಕೊಳ್ಳಿ. ಮ್ಯಾಜಿಸ್ಟ್ರೇಟ್‌ ಎದುರು ಅಲ್ಲ. ಇಂಥ ವರ್ತನೆಗಳನ್ನು ಸಹಿಸಲು ಸಾಧ್ಯವಿಲ್ಲ. ಜತೆಗೆ ಕಟ್ಟಡ ಕುರಿತು ಇಲ್ಲಿಗೆ ತಂದಿರುವ ಎಲ್ಲಾ ದಾಖಲೆಗಳು ನಿಮಗೆ ಹೇಗೆ ಸಿಕ್ಕವು? ಇವುಗಳನ್ನು ಫೋಟೊಪ್ರತಿ ಮಾಡಿಸಲು ನಿಮಗೆ ಹೇಳಿದವರು ಯಾರು?’ ಎಂದು ವಿವರಣೆ ಕೇಳಿ ಎಚ್ಚರಿಕೆ ನೀಡಿದರು.

‘ನಂತರ ಅಶೋಕ ಗದಗ ಅವರನ್ನು ವಿಚಾರಣೆಗೆ ಒಳಪಡಿಸಿದ ಚೋಳನ್‌, ಕಟ್ಟಡದ ಸದೃಢತೆಯನ್ನು ಪರೀಕ್ಷಿಸದಿರುವುದಕ್ಕೆ ಮತ್ತು ಕಟ್ಟಡ ಕುಸಿತಕ್ಕೆ ಕಾರಣ ಕೇಳಿದರು’ ಎಂದೂ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಅಶೋಕ, ‘ಸದೃಢತೆ ಪರೀಕ್ಷಿಸುವುದು ಎಂಜಿನಿಯರ್ ಕೆಲಸ. ಆದರೆ ಮೂಲತಃ ನಾನು ಎಂಜಿನಿಯರ್‌ ಆಗಿರುವುದರಿಂದ ಕಟ್ಟಡ ಕುಸಿತ ಪಿಲ್ಲರ್‌ ಕಾಮಗಾರಿಯಿಂದಲೇ ಆಗಿದೆ’ ಎಂದರು.

ಪಿಲ್ಲರ್ ಸುತ್ತ ಅಗೆದಿರುವುದು ಮೊದಲೇ ತಿಳಿದಿತ್ತೇ ಎಂಬ ಮರು ಪ್ರಶ್ನೆಗೆ, ‘ಅದು ಗೊತ್ತಿಲ್ಲ. ಆದರೆ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿ ನೋಡಿ ಹೇಳಿದೆ’ ಎಂದರು. ಇದಕ್ಕೂ ಗರಂ ಆದ ಜಿಲ್ಲಾಧಿಕಾರಿ ಮುಂದಿನ ವಿಚಾರಣೆಗೆ ಬರಲು ಹೇಳಿದರು. 

Post Comments (+)