ಸೋಮವಾರ, ಆಗಸ್ಟ್ 19, 2019
28 °C
ಯರಿನಾರಾಯಣಪುರ: ಮಹಾಮಳೆಗೆ ನೆಲ ಕಚ್ಚಿದ ಹಳೇ ಮನೆ

ವೃದ್ಧ ದಂಪತಿಗೆ ಬಿಸಿಯೂಟವೇ ಆಸರೆ

Published:
Updated:
Prajavani

ಕುಂದಗೋಳ: ಆ ವೃದ್ಧ ದಂಪತಿಯ ಮಕ್ಕಳಿಬ್ಬರೂ ತಂದೆ–ತಾಯಿಯೊಂದಿಗೆ ಸಂಬಂಧವಿಲ್ಲದಂತೆ ಪ್ರತ್ಯೇಕವಾಗಿ ಬದುಕುತ್ತಿದ್ದಾರೆ. ಕೂಲಿ ಮಾಡಿ ಸಂಸಾರ ಸಲಹುತ್ತಿದ್ದ ವೃದ್ಧನ ಕಾಲುಗಳು ಇತ್ತೀಚೆಗೆ ಸ್ವಾಧೀನ ಕಳೆದುಕೊಂಡಿದ್ದು, ಓಡಾಡುವುದೇ ಕಷ್ಟವಾಗಿದೆ. ಇದೇ ಹೊತ್ತಲ್ಲಿ ಸುರಿದ ಭೀಕರ ಮಳೆ ಆ ದಂಪತಿಗಿದ್ದ ಸೂರನ್ನು ನೆಲಸಮಗೊಳಿಸಿದೆ. ಸದ್ಯ ಅವರಿಬ್ಬರ ಬದುಕಿಗೆ ಆಸರೆಯಾಗಿರುವುದು ಮನೆ ಎದುರಿಗಿರುವ ಶಾಲೆ ಹಾಗೂ ಅಲ್ಲಿಗೆ ಬರುವ ಬಿಸಿಯೂಟ!

ಕುಂದಗೋಳ ತಾಲ್ಲೂಕಿನ ಯರಿನಾರಾಯಣಪುರದ ಚನ್ನಬಸಪ್ಪ ಮಹದೇವಪ್ಪ ಕಳ್ಳಿಯಕ್ಕನವರ ದಂಪತಿಯ ದಯನೀಯ ಸ್ಥಿತಿ ಇದು.

ಮಳೆಯಿಂದ ನೆಲ ಕಚ್ಚಿರುವ ಮನೆಯ ಅರ್ಧಂಬರ್ಧ ಗೋಡೆಗೆ ಟಾರ್ಪಲಿನ್‌ ಕಟ್ಟಿಕೊಂಡು, ಅಳಿದುಳಿದ ಮನೆ ಸಾಮಾನುಗಳನ್ನು ಸಂಗ್ರಹಿಸಿರುವ ದಂಪತಿ ಸದ್ಯ ಶಾಲೆಯಲ್ಲೇ ಉಳಿದುಕೊಂಡಿದ್ದಾರೆ. ಗ್ರಾಮದ ಶಾಲೆಯ ವಿದ್ಯಾರ್ಥಿಗಳಿಗೆ ಪೂರೈಸುವ ಬಿಸಿಯೂಟದಲ್ಲಿ ಉಳಿದಿದ್ದನ್ನು ಶಾಲೆಯವರು ಈ ದಂಪತಿಗೆ ಕೊಟ್ಟು ಮಾನವೀಯತೆ ಮೆರೆಯುತ್ತಿದ್ದಾರೆ.

‘ನನ್ನ ಕಾಲುಗಳಿಗೆ ಹೆಚ್ಚು ಸ್ವಾಧೀನವಿಲ್ಲ. ಹಾಗಾಗಿ, ಕೆಲ ವರ್ಷಗಳಿಂದ ಓಡಾಡಲು ಆಗುವುದಿಲ್ಲ. ನಾನು ಮನೆಯ ಬಳಿ ಇದ್ದರೆ, ಪತ್ನಿ ಹೊಲದಲ್ಲಿ ಕೂಲಿ ಮಾಡುತ್ತಾಳೆ. ಅವಳ ದುಡಿಮೆಯಲ್ಲೇ ಸಂಸಾರ ಸಾಗಬೇಕು. ಆಕೆಗೂ ವಯೋಸಹಜ ಕಾಯಿಲೆಗಳಿವೆ. ಆದರೂ, ವಿಧಿ ಇಲ್ಲದೆ ದುಡಿಯಬೇಕಾದ ಅನಿವಾರ್ಯತೆ ಇದೆ’ ಎಂದು ಚನ್ನಬಸಪ್ಪ ಮಹದೇವಪ್ಪ ಕಳ್ಳಿಯಕ್ಕನವರ ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

‘ಮಕ್ಕಳಿಬ್ಬರಿಗೂ ಮದುವೆಯಾಗಿದೆ. ಅವರಾಯ್ತು, ಅವರ ಸಂಸಾರವಾಯ್ತು ಅಂತ ಪ್ರತ್ಯೇಕವಾಗಿ ಬದುಕುತ್ತಿದ್ದಾರೆ. ಮೂವತ್ತು ವರ್ಷದ ಹಿಂದೆ ಸ್ವತಃ ನನ್ನ ಕೈಯಾರೆ ಕಟ್ಟಿದ್ದ ಮನೆ ಭಾರೀ ಮಳೆಗೆ ಕಣ್ಣೇದುರಿಗೇ ಕುಸಿದಿದೆ. ಮೊದಲೇ ಕಷ್ಟದಲ್ಲಿ ಸಾಗುತ್ತಿದ್ದ ನಮ್ಮ ಬದುಕಿನ ಮೇಲೆ ದೇವರು ಮತ್ತೊಂದು ಬರೆ ಎಳೆದಿದ್ದಾನೆ. ಇಳಿ ವಯಸ್ಸಿನಲ್ಲಿ ಏನು ಮಾಡುವುದೆಂದು ತೋಚದಾಗಿದೆ’ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.

ಪರಿಹಾರದ ಭರವಸೆ:

‘ಕುಸಿದಿರುವ ಚನ್ನಬಸಪ್ಪ ಅವರ ಮನೆಯನ್ನು ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ, ಫೋಟೊ ತೆಗೆದುಕೊಂಡು ಹೋಗಿದ್ದಾರೆ. ಅವಶೇಷಗಳಡಿ ಸಿಲುಕಿದ್ದ ಮನೆಯ ಉತಾರ, ದಂಪತಿಯ ಆಧಾರ್‌ ಕಾರ್ಡ್‌ ಹಾಗೂ ಬ್ಯಾಂಕ್ ಪಾಸ್‌ಬುಕ್‌ ಹುಡುಕಿ ಸ್ಥಳೀಯ ಪಂಚಾಯ್ತಿಗೆ  ಪರಿಹಾರಕ್ಕಾಗಿ ಸಲ್ಲಿಸಲಾಗಿದೆ. ಅಧಿಕಾರಿಗಳು ಪರಿಹಾರದ ಭರವಸೆ ನೀಡಿದ್ದು, ಮಳೆ ನಿಲ್ಲುವವರೆಗೆ ಶಾಲೆಯಲ್ಲೇ ಆಶ್ರಯ ಪಡೆಯುವಂತೆ ಸಲಹೆ ನೀಡಿದ್ದಾರೆ’ ಎಂದು ಯರಿನಾರಾಯಣಪುರದ ಗ್ರಾಮ ಸಹಾಯಕ ಶರೀಫ ಯರನಾಳ ಹೇಳಿದರು.

‘ಜೀವ ಉಳಿದಿದ್ದೇ ಹೆಚ್ಚು’

‘ಮಳೆಗೆ ಕುಸಿಯತೊಡಗಿದ ಮನೆಯಲ್ಲಿ ಕುಟುಂಬದವರೆಲ್ಲ ಜೀವ ಉಳಿಸಿಕೊಂಡಿದ್ದೇ ಹೆಚ್ಚು. ಧಾರಾಕಾರ ಮಳೆಯಿಂದಾಗಿ ಮನೆಯೊಳಗಿಂದ ಸಾಮಾನುಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಶಾಲೆಯಲ್ಲಿ ಉಳಿದುಕೊಂಡಿರುವ ನಮಗೆ ಅಕ್ಕಪಕ್ಕದ ಮನೆಯವರು ಆಹಾರ ಮತ್ತು ಹೊದಿಕೆ ಕೊಟ್ಟು ಸಲಹುತ್ತಿದ್ದಾರೆ. ಜತೆಗೆ, ಶಾಲೆಗೆ ಬರುವ ಬಿಸಿಯೂಟವೂ ಆಸರೆಯಾಗಿದೆ. ಪಂಚಾಯ್ತಿಯವರು ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದಾರೆ. ಅದೇ ಧೈರ್ಯದಿಂದ ಬದುಕು ದೂಡುತ್ತಿದ್ದೇವೆ’ ಎಂದು ಪರಶುರಾಮ ಯಲ್ಲಪ್ಪ ನಾಯ್ಕರ ಹೇಳಿದರು.

Post Comments (+)