ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯ ಯೋಜನೆ ಜತೆಗೆ ಜಿಲ್ಲೆಗೆ ಧಕ್ಕಿದ್ದು ₹5.25ಕೋಟಿ

ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್‌ಗೆ ಮಿಶ್ರ ಪ್ರತಿಕ್ರಿಯೆ
Last Updated 5 ಜುಲೈ 2018, 17:45 IST
ಅಕ್ಷರ ಗಾತ್ರ

ಧಾರವಾಡ: ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್‌ ಕುರಿತು ಜಿಲ್ಲೆಯ ಜನರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾಂಗ್ರೆಸ್‌ ನೇತೃತ್ವದ ಸರ್ಕಾರ ವಿವಿಧ ಯೋಜನೆಗಳಿಗೆ ಜಿಲ್ಲೆಗೆ ₹ 110ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಟ್ಟಿತ್ತು. ಸಮ್ಮಿಶ್ರ ಸರ್ಕಾರ ಕೃಷಿ ವಿವಿಗೆ ₹ 3 ಕೋಟಿ ಹಾಗೂ ಪಶು ಸಂಗೋಪನೆಗೆ ₹ 2.5ಕೋಟಿ ಹೊರತುಪಡಿಸಿದರೆ, ಯಾವುದೇ ಹೊಸ ಕೊಡುಗೆ ನೀಡದಿರುವುದು ಜನರಲ್ಲಿ ಬೇಸರ ಮೂಡಿಸಿದೆ.

ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ನಿರ್ವಾತ ತಂತ್ರಜ್ಞಾನವನ್ನು ರೈತರಿಗೆ ಪ್ರಚುರಪಡಿಸಲು ₹ 3ಕೋಟಿ ಅನುದಾನ, ಹಾಗೆಯೇ ಪಶುಸಂಗೋಪನೆ ವಿಭಾಗದಲ್ಲಿ ಘನಕೀಕೃತ ವೀರ್ಯನಳಿಕೆಗಳ ವಿತರಣಾ ಕೇಂದ್ರ ಸ್ಥಾಪನೆಗೆ ₹2.25ಕೋಟಿ ಮೀಸಲಿಟ್ಟಿದೆ. ಆದರೆ, ಈ ಘಟಕ ಈಗಾಗಲೇ ಕೃಷಿ ವಿವಿ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಮೂರು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ ಈ ಘಟಕವನ್ನು ಏಳೆಂಟು ವರ್ಷಗಳ ಹಿಂದೆ ಮೇಲ್ದರ್ಜೆಗೇರಿಸಲಾಗಿತ್ತು.

ಇದನ್ನು ಹೊರತುಪಡಿಸಿದರೆ ಜಿಲ್ಲೆಗೆ ಯಾವುದೇ ಕೊಡುಗೆ ಬಜೆಟ್‌ನಲ್ಲಿ ಘೋಷಣೆಯಾಗಿಲ್ಲ. ಹುಬ್ಬಳ್ಳಿ ಧಾರವಾಡ ಪಶ್ಚಿಮ ಮತಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ ಸರ್ಕಾರಿ ಶಾಲೆಗಳಲ್ಲಿ ಜಾರಿಗೆ ತಂದಿದ್ದ ಎಲ್‌ಕೆಜಿ ಹಾಗೂ ಯುಕೆಜಿಯನ್ನು ಹಂತ, ಹಂತವಾಗಿ ಇಡೀ ರಾಜ್ಯಕ್ಕೆ ವಿಸ್ತರಿಸುವ ಕುರಿತು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಘೋಷಿಸಿದ್ದು ಸಮಾಧಾನಕರ ಸಂಗತಿ.

ಈ ಕುರಿತಂತೆ ಪ್ರತಿಕ್ರಿಯಿಸಿದ ಶಾಸಕ ಅರವಿಂದ ಬೆಲ್ಲದ, ‘ಗುರುವಾರ ಮಂಡನೆಯಾದ ಬಜೆಟ್‌ ‘ರಾಮನಗರ ಟು ಹಾಸನ’ ಎಂಬಂತಿದೆ. ಈ ಭಾಗದಲ್ಲಿ ಜೆಡಿಎಸ್‌ ಶಾಸಕರು ಗೆಲ್ಲದ ಕಾರಣ ಕುಮಾರಸ್ವಾಮಿ ಉತ್ತರ ಕರ್ನಾಟಕದ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ. ಯಾವುದೇ ಹೊಸ ಘೋಷಣೆಗಳು ಇಲ್ಲ. ಹಿಂದಿನ ಸರ್ಕಾರ ಘೋಷಿಸಿದ್ದ ಯೋಜನೆಗಳ ಕುರಿತೂ ಸ್ಪಷ್ಟ ನಿಲುವು ಇಲ್ಲ. ಎಲ್‌ಕೆಜಿ, ಯುಕೆಜಿ ವಿಸ್ತರಿಸುವ ಘೋಷಣೆಯಾಗಿರುವುದರಿಂದ ನಮ್ಮದೊಂದು ಯೋಜನೆ ರಾಜ್ಯಮಟ್ಟಕ್ಕೆ ವಿಸ್ತರಣೆಗೊಂಡಿದೆ’ ಎಂದರು.

‘ರೈತರ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ, ಅದಕ್ಕೆ ಬೇಕಿರುವ ₹36ಸಾವಿರ ಕೋಟಿ ಹಣ ಸಂಗ್ರಹದ ಮೂಲ ಯಾವುದು ಎಂಬುದಕ್ಕೆ ಬಜೆಟ್‌ನಲ್ಲಿ ಸ್ಪಷ್ಟತೆ ಇಲ್ಲ. ಹೀಗಾಗಿ, ಇದು ಜನ ಹಾಗೂ ರೈತ ಸ್ನೇಹಿ ಬಜೆಟ್‌ ಕೂಡಾ ಅಲ್ಲ’ ಎಂದು ಬೆಲ್ಲದ ಟೀಕಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್‌.ವಿ.ಸಂಕನೂರು ಪ್ರತಿಕ್ರಿಯಿಸಿ, ‘ಈ ಭಾಗದ ನಿರುದ್ಯೋಗ ನೀಗಿಸಲು ಯಾವುದೇ ಹೊಸ ಕೈಗಾರಿಕೆ ಸ್ಥಾಪನೆ ಕುರಿತು ಯಾವುದೇ ಪ್ರಸ್ತಾಪವಿಲ್ಲ. 36 ಇಲಾಖೆಗಳಲ್ಲಿ ಖಾಲಿ ಇರುವ ಲಕ್ಷಗಟ್ಟಲೇ ಹುದ್ದೆಗಳ ನೇಮಕಾತಿ ಕುರಿತು ಏನನ್ನೂ ಹೇಳಿಲ್ಲ. ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವ ಬಗ್ಗೆಯೂ ಪ್ರಸ್ತಾಪವಿಲ್ಲ’ ಎಂದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೋಡಿಹಳ್ಳಿ ಚಂದ್ರಶೇಖರ ಬಣದ ಜಿಲ್ಲಾ ಘಟಕದ ಅಧ್ಯಕ್ಷ ಫಾರೂಕ್ ಕಿಲ್ಲೇದಾರ್ ಅವರು, ಬಜೆಟ್‌ ಅನ್ನು ಸ್ವಾಗತಿಸಿದ್ದಾರೆ. ‘ರೈತರ ಸಾಲ ಮನ್ನಾ ಉತ್ತಮ ನಿರ್ಧಾರ. ಆದರೆ, ಅದನ್ನು ಬಜೆಟ್‌ ಮಂಡನೆ ದಿನಾಂಕದವರೆಗೂ ವಿಸ್ತರಿಸಿದ್ದರೆ, ಇನ್ನೂ ಹೆಚ್ಚಿನ ರೈತರಿಗೆ ಪ್ರಯೋಜನವಾಗುತ್ತಿತ್ತು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್ ಮುಖಂಡ ಗುರುರಾಜ ಹುಣಸಿಮರದ ಪ್ರತಿಕ್ರಿಯಿಸಿ, ‘ರೈತರ ಸಾಲ ಮನ್ನಾ ಘೋಷಿಸಿರುವುದು ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಲಾಭವಾಗಲಿದೆ. ಬೆಳಗಾವಿ ಹಾಗೂ ಕಲಬುರ್ಗಿ ವಿಭಾಗದ ರೈತರ ಸಾಲ ಅಂದಾಜು ₹26ಸಾವಿರ ಕೋಟಿಯಷ್ಟಿದೆ. ಹೀಗಾಗಿ, ಇದು ಜನಪರ ಬಜೆಟ್‌. ಕುಮಾರಸ್ವಾಮಿ ನುಡಿದಂತೆ ನಡೆದಿದ್ದಾರೆ’ ಎಂದು ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT