ಮೆಕಾಲೆ ಶಿಕ್ಷಣ ಪದ್ಧತಿಯಿಂದ ಅಕ್ಷರಸ್ಥರೇ ಹೊರತು ಜ್ಞಾನವಂತರಲ್ಲ: ಪ್ರಹ್ಲಾದ ಜೋಶಿ

7
ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸದ ಪ್ರಹ್ಲಾದ ಜೋಶಿ ಬೇಸರ

ಮೆಕಾಲೆ ಶಿಕ್ಷಣ ಪದ್ಧತಿಯಿಂದ ಅಕ್ಷರಸ್ಥರೇ ಹೊರತು ಜ್ಞಾನವಂತರಲ್ಲ: ಪ್ರಹ್ಲಾದ ಜೋಶಿ

Published:
Updated:
Deccan Herald

ಧಾರವಾಡ: ‘ಮೆಕಾಲೆ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಂಡ ನಂತರ ಭಾರತದಲ್ಲಿ ಅಕ್ಷರಸ್ಥರನ್ನು ಹೊರತರುತ್ತಿದ್ದೇವೆಯೇ ಹೊರತು, ಜ್ಞಾನವಂತರನಲ್ಲ. ಇದರಿಂದಾಗಿ ಇಂದಿನ ಸುಶಿಕ್ಷಿತರಲ್ಲಿ ಮೌಲ್ಯ ಹಾಗೂ ಪ್ರಾಮಾಣಿಕತೆ ಕೊರತೆ ಎದ್ದು ಕಾಣುತ್ತಿದೆ’ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.

ಧಾರವಾಡ ತಾಲ್ಲೂಕು ಮಟ್ಟದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವತಿಯಿಂದ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಬುಧವಾರ ಪಾಲ್ಗೊಂಡು ಮಾತನಾಡಿದ ಅವರು, ‘ಅಕ್ಷರ ಕಲಿಯದೇ ದುಡಿಯುತ್ತಿರುವ ರೈತರು ಹಾಗೂ ಕೂಲಿ ಕಾರ್ಮಿಕರು ತಮ್ಮ ಬದುಕನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಡೆಸುತ್ತಿದ್ದಾರೆ. ಆದರೆ ಸುಕ್ಷಿತರು ಎಂದುಕೊಂಡವರೇ ಹಣಗಳಿಕೆ ಹಿಂದೆ ಬಿದ್ದು, ನೈಸರ್ಗಿಕ ಸಂಪನ್ಮೂಲಗಳನ್ನು ನಾಶ ಮಾಡುತ್ತಿದ್ದಾರೆ. ಶಿಕ್ಷಣದೊಂದಿಗೆ ಮೌಲ್ಯಗಳನ್ನು ಕಲಿಸಿದಲ್ಲಿ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದರು.

‘ದೇಶದಲ್ಲಿ ಬದಲಾವಣೆ ತರುವುದಿದ್ದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಆದರೆ ಶಿಕ್ಷಣದಲ್ಲಿ ಭಾರತೀಯ ಪುರಾಣ ಹಾಗೂ ಇತಿಹಾಸದ ಮೌಲ್ಯಯುತ ಕಥೆಗಳನ್ನು ಹೇಳುವುದೂ ಇಂದು ಕಷ್ಟವಾಗಿದೆ. ಶ್ರೀರಾಮನ ಕುರಿತು ಹೇಳಿದರೆ ಜಾತಿವಾದಿಗಳಾಗುತ್ತಾರೆ. ಜಾತ್ಯಾತೀತವೂ ಇಂದು ಕೆಟ್ಟ ಸ್ಥಿತಿಗೆ ಬಂದು ತಲುಪಿದೆ’ ಎಂದರು.

‘ಉತ್ತರ ಪ್ರದೇಶದ ಹಿಂದಿನ ಸರ್ಕಾರವು ಅಲ್ಲಿನ ಅಕ್ಷರ ಮಾಲೆಯನ್ನು ಬದಲಿಸಿದೆ. ‘ಗ’ ಎಂದರೆ ಗಣಪತಿ ಎಂದು ಇದ್ದದ್ದನ್ನು ಬದಲಿಸಿ, ‘ಗ’ ಎಂದರೆ ಗಧಾ (ಕತ್ತೆ) ಎಂದು ಮಾಡಿದೆ. ಮಕ್ಕಳಿಗೆ ಯಾವುದನ್ನು ಕಲಿಸಿದರೆ ಉತ್ತಮ ಎಂಬ ಕಲ್ಪನೆಯೂ ಇಲ್ಲದ ಸರ್ಕಾರಗಳಿಂದ ಇಂಥ ಅವಘಡಗಳು ಸಂಭವಿಸುದೇ ಹೆಚ್ಚು’ ಎಂದು ಜೋಶಿ ಹೇಳಿದರು.

‘ಶಿಕ್ಷಕರಿಗೆ ತಮ್ಮ ವೃತ್ತಿ ಕುರಿತು ಅಭಿಮಾನ ಇರಬೇಕು. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅದನ್ನು ಪೋಷಿಸಬೇಕು. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಕರು ಶ್ರಮಿಸಬೇಕು. ಅದೇ ರೀತಿ ಸರ್ಕಾರವೂ ಶಿಕ್ಷಕರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಶಿಕ್ಷಕರೂ ಧರಣಿ ನಡೆಸುವ ಮಟ್ಟಿಗೆ ಹೋಗಬಾರದು’ ಎಂದರು.

ಸಾನ್ನಿಧ್ಯ ವಹಿಸಿದ್ದ ಅಮ್ಮಿನಭಾವಿಯ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಕಿರಿಯ ಸ್ವಾಮೀಜಿ ಮಾತನಾಡಿ, ‘ಶಿಕ್ಷಕ, ಸೈನಿಕ ಹಾಗೂ ಕೃಷಿಕ ತಮ್ಮ ಕಾಯಕವನ್ನು ಸರಿಯಾಗಿ ಮಾಡಿದಲ್ಲಿ ಸಮಾಜ ಸರಿದಾರಿಯಲ್ಲೇ ಸಾಗಲಿದೆ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕರಾಗುವುದರ ಜತೆಗೆ ಗುರುವಾಗಿದ್ದರು. ಪಠ್ಯದಲ್ಲಿರುವುದನ್ನು ವಿದ್ಯಾರ್ಥಿಗಳಿಗೆ ಹೇಳಿಹೋಗುವುದಕ್ಕಿಂತ, ಒಬ್ಬ ವಿದ್ಯಾರ್ಥಿಯನ್ನು ಶ್ರೇಷ್ಠ ವ್ಯಕ್ತಿಯನ್ನಾಗಿ ಮಾಡುವ ಗುರುವಾಗುವತ್ತ ಎಲ್ಲಾ ಶಿಕ್ಷಕರೂ ಶ್ರಮಿಸಿ ಸಾರ್ಥಕರಾಗಬೇಕು’ ಎಂದರು.

ಶಾಸಕ ಅಮೃತ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಜಿಲ್ಲಾ ಪಂಚಾಯ್ತಿ ಶಿಕ್ಷಣ ಸ್ಥಾಯಿ ಸಮಿತಿ ಮುಖ್ಯಸ್ಥ ಕಲ್ಲಪ್ಪ ಪುಡಕಲಕಟ್ಟಿ, ಪ್ರೊಬೇಷನರಿ ಉಪವಿಭಾಗಾಧಿಕಾರಿ ಪಾರ್ವತಿ ರೆಡ್ಡಿ, ತಹಶೀಲ್ದಾರ್ ಪ್ರಕಾಶ ಕುದರಿ ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !