ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್‌ ಶಾಲೆ ಆರಂಭಕ್ಕೆ ವಿರೋಧ

Last Updated 7 ಜನವರಿ 2019, 1:47 IST
ಅಕ್ಷರ ಗಾತ್ರ

ಅಂಬಿಕಾತನಯದತ್ತ ಪ್ರಧಾನ ವೇದಿಕೆ (ಧಾರವಾಡ): ಮುಂದಿನ ಶೈಕ್ಷಣಿಕ ವರ್ಷದಿಂದ 1,000 ಇಂಗ್ಲಿಷ್‌ ಮಾಧ್ಯಮದ ಸರ್ಕಾರಿ ಶಾಲೆಗಳನ್ನು ಆರಂಭಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು 84ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವಿರೋಧಿಸಿದೆ. ಪೂರ್ವ ಪ್ರಾಥಮಿಕ ಹಂತದಿಂದ ಏಳನೇ ತರಗತಿವರೆಗಿನ ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣ ಮಾಡುವಂತೆ ಸಮ್ಮೇಳನ ಆಗ್ರಹಿಸಿದೆ.

ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರರ ಉಪಸ್ಥಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ಅಧ್ಯಕ್ಷತೆಯಲ್ಲಿ ಭಾನುವಾರ ಸಂಜೆ ನಡೆದ ಬಹಿರಂಗ ಸಮಾವೇಶದಲ್ಲಿ ಈ ಎರಡೂ ವಿಷಯಗಳು ಸೇರಿದಂತೆ ಒಟ್ಟು ಐದು ನಿರ್ಣಯಗಳನ್ನು ಸರ್ವಾನುಮತದಿಂದ ಕೈಗೊಳ್ಳಲಾಯಿತು. ಪರಿಷತ್‌ನ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ ನಿರ್ಣಯಗಳನ್ನು ಮಂಡಿಸಿದರು. ಸಭಾಂಗಣದಲ್ಲಿ ನೆರೆದಿದ್ದ ಸಹಸ್ರಾರು ಮಂದಿ ಜೈಕಾರದೊಂದಿಗೆ ನಿರ್ಣಯಗಳನ್ನು ಬೆಂಬಲಿಸಿದರು.

ಸರ್ಕಾರದಿಂದಲೇ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಆರಂಭಿಸುವ ನಿರ್ಧಾರಕ್ಕೆ ಸಾಹಿತಿಗಳು ಮತ್ತು ಕನ್ನಡಪರ ಹೋರಾಟಗಾರರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಮೂರು ದಿನಗಳ ಕಾಲ ನಡೆದ ಸಾಹಿತ್ಯ ಸಮ್ಮೇಳನದಲ್ಲೂ ಈ ವಿಚಾರ ಪ್ರತಿಧ್ವನಿಸಿತ್ತು. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಎದುರಿನಲ್ಲೇ ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ವಿರೋಧ ವ್ಯಕ್ತಪಡಿಸಿದ್ದರು. ಮುಖ್ಯಮಂತ್ರಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದರು. ನಂತರೂ ವಾಗ್ಯುದ್ಧ ಮುಂದುವರಿದಿತ್ತು.

‘ಕರ್ನಾಟಕ ರಾಜ್ಯ ಸರ್ಕಾರವು ಬರುವ ಶೈಕ್ಷಣಿಕ ವರ್ಷದಿಂದ 1,000 ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಈ ನಿರ್ಣಯವನ್ನು ಅನುಷ್ಠಾನ ಮಾಡಬಾರದು’ ಎಂದು ಒತ್ತಾಯಿಸುವ ನಿರ್ಣಯವನ್ನು ಮಂಡಿಸಲಾಯಿತು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸೂಚಿಸಿದರೆ, ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಅನುಮೋದಿಸಿದರು.

ರಾಷ್ಟ್ರೀಕರಣಕ್ಕೆ ಆಗ್ರಹ: ಎಲ್‌ಕೆಜಿ, ಯುಕೆಜಿಸಹಿತ ಪೂರ್ವ ಪ್ರಾಥಮಿಕ ಹಂತದಿಂದ ಏಳನೇ ತರಗತಿವರೆಗಿನ ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸುವಂತೆ ನಿರ್ಣಯವನ್ನೂ ಸಮ್ಮೇಳನದಲ್ಲಿ ಕೈಗೊಳ್ಳಲಾಯಿತು. ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಸ್ವತಃ ಸೂಚಕರಾಗಿದ್ದು, ಹಿರಿಯ ಸಾಹಿತಿ ಡಾ.ಎಚ್‌.ಎಸ್‌.ಶಿವಪ್ರಕಾಶ್ ಈ ನಿರ್ಣಯವನ್ನು ಅನುಮೋದಿಸಿದರು.

ಕೇಂದ್ರ ಸರ್ಕಾರ ನಡೆಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ಬರೆಯಲು ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸುವ ನಿರ್ಣಯವನ್ನು ಈ ಸಮ್ಮೇಳನ ಕೈಗೊಂಡಿದೆ. ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ ಈ ನಿರ್ಣಯ ಮಂಡಿಸಿದರು. ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್‌ ಅನುಮೋದಿಸಿದರು. ಈ ನಿರ್ಣಯ ಮಂಡನೆಯಾಗುತ್ತಿದ್ದಂತೆ ಸಭಾಂಗಣದಲ್ಲಿ ನೆರೆದಿದ್ದ ಸಹಸ್ರಾರು ಯುವಕ, ಯುವತಿಯರು ಕಿವಿಗಡಚಿಕ್ಕುವಂತೆ ಜೈಕಾರ, ಶಿಳ್ಳೆ, ಕೇಕೆ ಹಾಕಿ ಬೆಂಬಲ ಸೂಚಿಸಿದರು.

2.30 ನಿಮಿಷ ನಿಗದಿಗೆ ಒತ್ತಾಯ: ರಾಷ್ಟ್ರಕವಿ ಕುವೆಂಪು ವಿರಚಿತ ರಾಷ್ಟ್ರಗೀತೆ ಹಾಡುವ ಅವಧಿಯನ್ನು ಗರಿಷ್ಠ 2 ನಿಮಿಷ 30 ಸೆಕೆಂಡ್‌ಗಳಿಗೆ ನಿಗದಿಗೊಳಿಸುವಂತೆ ಸಮ್ಮೇಳನ ಒತ್ತಾಯಿಸಿದೆ. ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ಈ ನಿರ್ಣಯವನ್ನು ಸೂಚಿಸಿದರೆ, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವೈ.ಡಿ.ರಾಜಣ್ಣ ಅನುಮೋದಿಸಿದರು.

ಇದೇ ವೇಳೆ 84ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗಾಗಿ ಸ್ವಾಗತ ಸಮಿತಿ ಮತ್ತು ಧಾರವಾಡದ ಜನರಿಗೆ ಕೃತಜ್ಞತೆ ಅರ್ಪಿಸುವ ನಿರ್ಣಯವನ್ನು ಮೊದಲಿಗೆ ಕೈಗೊಳ್ಳಲಾಯಿತು.

‘ಕಡಿಮೆ ಸಂಖ್ಯೆಯ ನಿರ್ಣಯಗಳನ್ನು ಕೈಗೊಳ್ಳುವಂತೆ ಚಂದ್ರಶೇಖರ ಕಂಬಾರ ಸೂಚಿಸಿದ್ದರು. ಸರ್ಕಾರದ ಮೇಲೆ ಒತ್ತಡ ಹೇರಲು ಮತ್ತು ಅನುಷ್ಠಾನಗೊಳಿಸಲು ಅನುಕೂಲವಾಗುವಂತೆ ಕಡಿಮೆ ನಿರ್ಣಯಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಮನು ಬಳಿಗಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT