ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತ ಪಕ್ಷದಿಂದ ದಬ್ಬಾಳಿಕೆ: ಅಬ್ಬಯ್ಯ

ಚಿಕನ್ ವ್ಯಾಪಾರಸ್ಥರ ಸಂಘದ ವಾರ್ಷಿಕೋತ್ಸವ ಸಮಾರಂಭ
Last Updated 27 ಸೆಪ್ಟೆಂಬರ್ 2022, 14:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಇಂತಹದ್ದೇ ಆಹಾರ ತಿನ್ನಬೇಕು, ಇಂತಹದ್ದೇ ಬಟ್ಟೆ ಧರಿಸಬೇಕು ಎಂದು ಆಡಳಿತ ಪಕ್ಷದವರು ಇತ್ತೀಚೆಗೆ ಜನಸಾಮಾನ್ಯರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಸಂವಿಧಾನದತ್ತ ಸ್ವಾತಂತ್ರ್ಯವನ್ನು ಕಸಿಯಲು ಯತ್ನಿಸುತ್ತಿರುವುದು ಖಂಡನೀಯ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಆರ್‌.ಎನ್‌. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಹುಬ್ಬಳ್ಳಿ ಮಹಾನಗರ ಚಿಕನ್ ವ್ಯಾಪಾರಸ್ಥರ ಸಂಘ ಹಾಗೂ ಪೌಲ್ಟ್ರಿ ಡೀಲರ್ಸ್‌ ಅಸೋಸಿಯೇಷನ್ಸ್‌ನ 2ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಸ್ತುತ ದೇಶದಲ್ಲಿ ಆಡಳಿತ ಪಕ್ಷದ ಕೆಲವರು ಕುತಂತ್ರದಿಂದ ನಮ್ಮ ಆಹಾರಪದ್ಧತಿಯ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ರಮ್ಜಾನ್‌ ಸಂದರ್ಭದಲ್ಲಿ ವ್ಯತಿರಿಕ್ತ ಕಾಯ್ದೆಗಳನ್ನು ಜಾರಿಗೆ ತಂದು ಸರ್ವಾಧಿಕಾರದ ಆಡಳಿತ ನಡೆಸುತ್ತಿದ್ದಾರೆ. ಹೀಗೆಲ್ಲ ಯಾರು ದೊಡ್ಡದಾಗಿ ಹೇಳಿಕೆ ನೀಡುತ್ತಿದ್ದಾರೋ, ಅವರೇ ದನದ ಮಾಂಸವನ್ನು ವಿದೇಶಕ್ಕೆ ರಫ್ತು ಮಾಡುತ್ತಾರೆ. ತಾಕತ್ತು ಇದ್ದರೆ ಮೊದಲು ಅದನ್ನು ತಡೆಯಲಿ’ ಎಂದು ಸವಾಲು ಹಾಕಿದ ಅಬ್ಬಯ್ಯ, ‘ಅದನ್ನು ತಡೆಯಲು ಮುಂದಾದರೆ ಸರ್ಕಾರವೇ ಬಿದ್ದು ಹೋಗುತ್ತದೆ. ಅವರೇ ಹಣಕಾಸಿನ ನೆರವು ನೀಡುತ್ತಿರುವುದು’ ಎಂದು ವ್ಯಂಗ್ಯವಾಡಿದರು.

‘ಚಿಕನ್‌ ವ್ಯಾಪಾರಸ್ಥರ ಅನುಕೂಲಕ್ಕಾಗಿ ನಗರದ ಸೂಕ್ತ ಸ್ಥಳದಲ್ಲಿ ಚಿಕನ್ ಸೆಂಟರ್ ಕಾಂಪ್ಲೆಕ್ಸ್ ನಿರ್ಮಿಸಲಾಗುವುದು’ ಎಂದರು.

ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಬಿ., ‘ಚಿಕನ್ ವ್ಯಾಪಾರಸ್ಥರಲ್ಲಿ ಇರುವ ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ, ವ್ಯಾಪಾರಸ್ಥರಿಗೆ ಪಾಲಿಕೆಯಿಂದ ಪರವಾನಗಿ ನೀಡುವ ವ್ಯವಸ್ಥೆ ಮಾಡಲಾಯಿತು. ಚಿಕನ್ ಮಳಿಗೆಗಳಿಂದ ಉತ್ಪಾದನೆಯಾಗುವ ತಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದರಿಂದ, ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ ಎಂದು ಸಂಘದ ಪದಾಧಿಕಾರಿಗಳು, ಧಾರವಾಡ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಚಿಕನ್ ತ್ಯಾಜ್ಯ ಸಂಗ್ರಹ ಘಟಕ ಸ್ಥಾಪಿಸಿ, ತ್ಯಾಜ್ಯದಿಂದ ಪಶುಗಳ ಆಹಾರ ತಯಾರಿಕೆ ಯೋಜನೆ ರೂಪಿಸಿದ್ದು ಸ್ವಾಗತಾರ್ಹ’ ಎಂದರು.

ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಮುಲ್ಲಾ, ಪಾಲಿಕೆ ಆರೋಗ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ, ಜಾಫರ್‌ ಸ್ಟ್ರಾಕ್‌ ಸದ್ದಾಂ, ಆರೀಫ್‌ ಬಾವಾ, ಅಲ್ತಾಫ್ ಬೇಪಾರಿ, ನಾಗರಾಜ ಪಠಾಣ, ಜಾಫರ್ ತಡಸ ಇದ್ದರು. ಇದಕ್ಕೊ ಮೊದಲು ಶಾಸಕ ಜಗದೀಶ ಶೆಟ್ಟರ್‌ ಚಿಕನ್ ತ್ಯಾಜ್ಯ ಸಂಗ್ರಹ ವಾಹನಕ್ಕೆ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT