ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾವಲಂಬಿ ಬದುಕು ಕಟ್ಟಿಕೊಡುವ ಜ್ಞಾನದೇಗುಲ

ಹುಬ್ಬಳ್ಳಿ–ಧಾರವಾಡ ಮೆಟ್ರೊ
Last Updated 21 ಜುಲೈ 2019, 19:45 IST
ಅಕ್ಷರ ಗಾತ್ರ

ಅಳ್ನಾವರದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ ಜೊತೆಗೆ ವೃತ್ತಿ ಕೌಶಲ ತರಬೇತಿ ನೀಡುವ ಮೂಲಕ ಕಲಿಕೆಯ ನಂತರ ಸ್ವಾವಲಂಬಿ ಬದುಕು ಕಟ್ಟಿಕೊಡಲು ಶ್ರಮಿಸುತ್ತಿದೆ. ಶಿಕ್ಷಣ, ಉದ್ಯೋಗ, ಸಂಸ್ಕಾರಕ್ಕೆ ಪ್ರೋತ್ಸಾಹ ನೀಡುತ್ತ ಸ್ವಾವಲಂಬಿ ಜೀವನದ ಮೂಲ ತತ್ವದ ತಳಹದಿಯನ್ನು ಗಟ್ಟಿಗೊಳಿಸುತ್ತ ಅನೇಕರ ಬದುಕು ಕಟ್ಟಿಕೊಟ್ಟ ಕೀರ್ತಿ ಈ ಶಾಲೆಗೆ ಸಲ್ಲುತ್ತದೆ.

ಅಕ್ಷರ ಕಲಿಕೆ ಜೊತೆಗೆ ವೃತ್ತಿ ಕೌಶಲದಲ್ಲಿ ಬರುವ ಹೊಲಿಗೆ, ಕಂಪ್ಯೂಟರ್ ಜ್ಞಾನ, ಉಲನ್‌ ವರ್ಕ್‌, ಸೀರೆ ಮೇಲೆ ಕಸೂತಿ, ಗೊಂಬೆ ತಯಾರಿಕೆ, ಬೈಂಡಿಗ್ ತರಬೇತಿ, ಬ್ಯೂಟಿಷಿಯನ್ ತರಬೇತಿ, ಗ್ಲಾಸ್ ಪೆಂಟಿಂಗ್, ಸಾಮಾರ್ಥ್ಯಭಿವೃದ್ಧಿ, ಕಂಪ್ಯೂಟರ್ ಜ್ಞಾನ, ಯೋಗ, ಕರಾಟೆ ತರಬೇತಿಯನ್ನೂ ನೀಡಲಾಗುತ್ತಿದೆ. ಈ ಎಲ್ಲ ಚಟುವಟಿಕೆಗಳಿಗೆ ಶಾಲಾ ದಿನದಲ್ಲಿ ಸಮಯ ಸಾಲದೆಂದು ಶನಿವಾರ ಮತ್ತು ಭಾನುವಾರ ವಿಶೇಷ ತರಗತಿ ತೆಗೆದುಕೊಂಡು ಬೋಧನೆ ಮಾಡಲಾಗುತ್ತಿದೆ.

ಅಷ್ಟೇ ಅಲ್ಲದೆ ಗೃಹವಿಜ್ಞಾನ ತರಬೇತಿಗಳಾದ ಹಪ್ಪಳ, ಶಾವಿಗೆ, ರೊಟ್ಟಿ, ಚಪಾತಿ, ಚಟ್ನಿ ತಯಾರಿಸುವುದನ್ನು ಕಲಿಸಲಾಗುತ್ತಿದೆ. ಇದರಿಂದ ಮಕ್ಕಳಿಗೆ ಸ್ವಯಂ ಉದ್ಯೋಗ ಪ್ರಜ್ಞೆ ಮೂಡುತ್ತದೆ. ಚಿತ್ರ ಕಲೆ, ಹಾಡು, ನೃತ್ಯ, ಭಜನೆ, ಕಲೆಗಳು ಮಕ್ಕಳಲ್ಲಿ ಕ್ರಿಯಾಶೀಲತೆ ಬೆಳಗಿಸುತ್ತಿವೆ. ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿದೆ.

ಶಾಲೆಯಿಂದ ಹೊರಗುಳಿದ ಪ್ರಾಥಮಿಕ ಶಾಲಾ ಹಂತದ ಹೆಣ್ಣುಮಕ್ಕಳು, ಬಾಲ ಕಾರ್ಮಿಕರು, ಮಕ್ಕಳ ಮಾರಾಟ ಸಾಗಾಣಿಕೆಯಿಂದ ರಕ್ಷಿಸಲ್ಪಟ್ಟ ಶಿಕ್ಷಣ ವಂಚಿತ ಹೆಣ್ಣು ಮಕ್ಕಳೇ ಈ ಶಾಲೆಯ ಫಲಾನುಭವಿಗಳು. ಇವರಿಗೆ ಎಲ್ಲ ಸೌಲಭ್ಯ ಉಚಿತವಾಗಿ ನೀಡಲಾಗುತ್ತಿದೆ. ಹೆಣ್ಣು ಮಕ್ಕಳ ರಕ್ಷಣೆ, ಸಬಲೀಕರಣ ಈ ಶಾಲೆಯ ಉದ್ದೇಶ.

ಗುಣಮಟ್ಟದ ಶಿಕ್ಷಣದ ಕಾಳಜಿಯಿಂದ ಖಾಸಗಿ ಶಾಲೆಗಳ ಪೈಪೋಟಿ ನಡುವೆ ಈ ಶಾಲೆ ಮಿಂಚುತ್ತಿದೆ. ಸದ್ಯ 6ರಿಂದ 8ನೇ ತರಗತಿಯ 100 ವಿದ್ಯಾರ್ಥಿನಿಯರು ಇಲ್ಲಿ ಕಲಿಯುತ್ತಿದ್ದಾರೆ. ಹೆಣ್ಣು ಮಕ್ಕಳಲ್ಲಿ ತಲೆದೂರಿರುವ ಸಮಸ್ಯೆಗಳಿಗೆ ಶಿಕ್ಷಕಿಯರು ವಿಶೇಷ ಕಾಳಜಿ ವಹಿಸುತ್ತಾರೆ. ಶೌಚಾಲಯ, ನೀರಿನ ಸೌಲಭ್ಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಪೌಷ್ಟಿಕ ಆಹಾರ, ಉತ್ತಮ ಕ್ಯಾಂಪಸ್, ಹಸಿರಿನ ವಾತಾವರಣದಿಂದ ಈ ಶಾಲೆ ಗಮನ ಸೆಳೆಯುತ್ತಿದೆ.

ಇಲ್ಲಿನ ಮಕ್ಕಳ ಶಿಸ್ತುಬದ್ಧತೆ ಸರ್ಕಾರಿ ಶಾಲೆಗಳ ಬಗ್ಗೆ ಮೂಗು ಮುರಿಯುವವರಿಗೆ ಸಮರ್ಥ ಪ್ರತ್ಯುತ್ತರ ನೀಡುತ್ತದೆ. ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ಜ್ಞಾನದೇಗುಲವಾಗಿ ಶಾಲೆ ಬೆಳೆದಿದೆ. ಎಲ್ಲ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಲಾಗುತ್ತಿದೆ.

ಪಠ್ಯಕ್ರಮದ ಜ್ಞಾನದ ಜೊತೆಗೆ ಮಹಾನ ಪುರುಷರ ಶ್ರೇಷ್ಠ ಚಿಂತನೆ, ಮೌಲ್ಯಗಳು ಮತ್ತು ಸಾಹಸ ಪ್ರವೃತ್ತಿಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲಾಗುತ್ತಿದೆ. ಶಿಕ್ಷಣದ ಎಲ್ಲ ವ್ಯವಸ್ಥೆಯನ್ನು ಇಲ್ಲಿ ಕೇಂದ್ರೀಕರಿಸಲಾಗಿದೆ. ಮೌಲ್ಯಯುತವಾದ ಗ್ರಂಥಾಲಯ, ಶುಚಿ ರುಚಿ ಸಮತೋಲನ ಊಟ, ತಿಂಡಿ, ಪಾನೀಯಗಳು ವಿಶೇಷತೆಗಳಿಂದ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪ್ರೇರಣೆ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT