ಶುಕ್ರವಾರ, ಜುಲೈ 1, 2022
23 °C
ಕೋವಿಡ್‌ ಪರಿಣಾಮ: ಮನೆಯಂಗಳದಲ್ಲೇ ಸಸಿ ನೆಟ್ಟು ಪರಿಸರ ದಿನಾಚರಣೆ

ಮರ ಬೆಳೆಸಲು ‘ಆಕ್ಸಿಜನ್‌ ಚಾಲೆಂಜ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೋವಿಡ್‌ ಲಾಕ್‌ಡೌನ್‌ ಪರಿಣಾಮದಿಂದಾಗಿ ಶನಿವಾರ ವಿವಿಧೆಡೆ ಪರಿಸರ ದಿನವನ್ನು ಸರಳವಾಗಿ ಆಚರಿಸಲಾಯಿತು. ಅನೇಕರು ತಮ್ಮ ಮನೆಯಂಗಳದಲ್ಲಿ ಸಸಿ ನೆಟ್ಟು ಖುಷಿ ಪಟ್ಟರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಹುಬ್ಬಳ್ಳಿ ಘಟಕ ಮತ್ತು ಎಸ್ಎಫ್‌ಡಿ  ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ತಲಾ ಐದು ಸಸಿಗಳನ್ನು ನೆಡುವ ಹ್ಯಾಷ್‌ ಟ್ಯಾಗ್‌ ‘ಆಕ್ಸಿಜನ್‌ ಚಾಲೆಂಜ್‌‘ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಪರಿಸರ ದಿನದಂದು ಐದು ಸಸಿಗಳನ್ನು ನೆಡುವುದು, ಐದು ದಿನಗಳ ಕಾಲ ಈ ಅಭಿಯಾನ ನಡೆಸುವುದು ಮತ್ತು ಐದು ಜನ ಸ್ನೇಹಿತರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಸಿ ನೆಡುವ ಸವಾಲು ಹಾಕುವುದು ಅಭಿಯಾನದ ಉದ್ದೇಶವಾಗಿದೆ. ರಾಜ್ಯದಾದ್ಯಂತ ಒಟ್ಟು ಐದು ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ನಗರದ ಪಿ.ಸಿ. ಜಾಬಿನ್‌ ಕಾಲೇಜಿನಲ್ಲಿ ಎಬಿವಿಪಿ ರಾಜ್ಯ ಘಟಕದ ಅಧ್ಯಕ್ಷ ಡಾ. ವೀರೇಶ್ ಬಾಳೆಕಾಯಿ, ಜಿಲ್ಲಾ ಘಟಕದ ಪ್ರಮುಖರಾದ ಅಶೋಕ್, ವಾಘ್ಮೋಡೆ, ಗಂಗಾಧರ್, ರಮೇಶ್, ಶಂಕರ ಕುಂದಗೋಳ ಸಸಿ ನೆಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಮೊದಲ ದಿನ 200 ಸಸಿಗಳನ್ನು ನೆಡಲಾಯಿತು. 

ಮಕ್ಕಳಿಗೆ ಸ್ಪರ್ಧೆ: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕವು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಪರಿಸರ ಜಾಗೃತಿ ಅಭಿಯಾನ ಹಮ್ಮಿಕೊಂಡಿತ್ತು. ಜೊತೆಗೆ ಚಿತ್ರಕಲೆ, ಕ್ಲೈ ಮಾಡೆಲಿಂಗ್‌ ಸ್ಪರ್ಧೆಗಳನ್ನು ಆಯೋಜಿಸಿತ್ತು.

ಆನ್‌ಲೈನ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಸಿ.ಎಂ. ಅಶೋಕ್‌ ಮಾತನಾಡಿ ’ಹಸಿರು ನಮ್ಮ ಉಸಿರು, ಪ್ರಕೃತಿಯೇ ನಮ್ಮ ಜೀವನದ ಹೆಬ್ಬಾಗಿಲು, ಹಸಿರು ಬೆಳೆದರೆ ನಾವೆಲ್ಲ ಬೆಳೆದಂತೆ. ಹಸಿರು ನಮ್ಮ ಜೀವನಾಡಿ, ಪ್ರತಿಯೊಬ್ಬರೂ ಮನೆಗೊಂದು ಸಸಿ ನೆಡುವ ಸಂಕಲ್ಪ ಮಾಡಬೇಕು. ಮಕ್ಕಳಿಗೆ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಬೇಕು‘ ಎಂದು ಕರೆ ನೀಡಿದರು.

ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ ಧುಮ್ಮಕ್ಕನಾಳ, ಕಾರ್ಯಾಧ್ಯಕ್ಷ ಪ್ರಕಾಶ ಹೂಗಾರ,
ರಂಜನಾ ಪಾಂಚಾಳ, ಮಕ್ಕಳ ಸಾಹಿತ್ಯ ಪರಿಷತ್‌ ಧಾರವಾಡ ತಾಲ್ಲೂಕು ಅಧ್ಯಕ್ಷ ವಿಜಯಕುಮಾರ ಕರಿಕಟ್ಟಿ, ಮಂಜುಳಾ ಕಾಮಧೇನು, ವಂದನಾ ಕರಾಳೆ ಪಾಲ್ಗೊಂಡಿದ್ದರು.

ಸಿ.ಎಚ್. ಜಗಾಪೂರ, ಶ್ರೀನಿವಾಸ ಅಮಾತೆನ್ನವರ, ಸುಧಾ ಕಬ್ಬೂರ ನಿರ್ಣಾಯಕರಾಗಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.