ಪಂ. ಮಣಿಪ್ರಸಾದರಿಗೆ 89ರ ಸಂಭ್ರಮ

7

ಪಂ. ಮಣಿಪ್ರಸಾದರಿಗೆ 89ರ ಸಂಭ್ರಮ

Published:
Updated:
Deccan Herald

ಹುಬ್ಬಳ್ಳಿಯ ಡಾ.ಗಂಗೂಬಾಯಿ ಹಾನಗಲ್ಲ ಗುರುಕುಲದಲ್ಲಿ ಕಿರಾನಾ ಘರಾಣೆ ವಿಭಾಗದ ಮುಖ್ಯಸ್ಥರಾಗಿರುವ ನವದೆಹಲಿಯ ವಿದ್ವತ್‌ಪೂರ್ಣ ಗಾಯಕ ಪಂ. ಮಣಿಪ್ರಸಾದ್ ಅವರಿಗೀಗ 89ರ ಹರೆಯ. ಇದರ ಅಂಗವಾಗಿ ಪಂ. ಮಣಿಪ್ರಸಾದರ ಶಿಷ್ಯಪರಿವಾರವು ಇದೇ 15ರಂದು ಸಂಜೆ 5ಕ್ಕೆ ಹುಟ್ಟುಹಬ್ಬ ಕಾರ್ಯಕ್ರಮವನ್ನು ಗುರುಕುಲದ ಆವರಣದಲ್ಲಿ ಹಮ್ಮಿಕೊಂಡಿದೆ.

ಅದು 2012ರ ಸಮಯ. ಅದು ಧಾರವಾಡದ ಸಜ್ಜನ ಗಾಯಕ ಪಂ. ಚಂದ್ರಶೇಖರ ಪುರಾಣಿಕಮಠ ಅವರ ಸ್ಮೃತಿಯಲ್ಲಿ ಹಮ್ಮಿಕೊಂಡ ಸಂಗೀತ ಕಾರ್ಯಾಗಾರ. ಬೆಳಿಗ್ಗೆ 11 ಗಂಟೆಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ರಾತ್ರಿಯವರೆಗೆ ಧ್ವನಿಸಂಸ್ಕಾರ-ರಾಗವಿಸ್ತಾರ ಎಂಬ ವಿಷಯದ ಕುರಿತಾಗಿ ಪ್ರಾತ್ಯಕ್ಷಿಕೆ-ಸಂವಾದ-ಗಾಯನದ ತರಂಗಗಳು ಹೊರಹೊಮ್ಮಿದವು. ನಂತರ ಮೂಡಿಬಂದ ಗಾಯನವು ಶಿಬಿರಾರ್ಥಿಗಳಲ್ಲಿದ್ದ ಪ್ರಶ್ನೆಗಳು-ಗೊಂದಲಗಳಿಗೆ ಉತ್ತರ ದೊರಕಿತ್ತು.

ಅಂದು ಸಂಜೆ ಕಂಚಿನ ಕಂಠದಿಂದ ಮೂಡಿಬಂದ ಸ್ವರವಿಸ್ತಾರ, ವಿಲಂಬಿತ ಲಯದ ನಿರಾತಂಕ ಅವಕಾಶದಲ್ಲಿ ನಡೆಯುವ ಸ್ವರಮಾಧುರ್ಯತೆ, ವೈವಿಧ್ಯಮಯ ತಾನ್‌ಗಳ ಮೆರವಣಿಗೆ, ಸ್ವಯಂರಚಿತ ವಿವಿಧ ಬಂದಿಶ್‌ಗಳ ಮನಮೋಹಕ ಪ್ರಸ್ತುತಪಡಿಸಿದ್ದು ಅತ್ಯಂತ ಕರ್ಣಮನೋಹರ. ಕಛೇರಿ ಮುಗಿದ ನಂತರ ನೆರೆದ ಶ್ರೋತೃಗಳು ಕಲಾವಿದರತ್ತ್ತ ಧಾವಿಸಿ, ’ಗುರೂಜಿ ನಿಮ್ಮ ದೇಹಕ್ಕೆ ವಯಸ್ಸಾಯಿತೇ ವಿನಃ ನಿಮ್ಮ ಅಮೋಘ ಕಂಠಸಿರಿಗೆ ವಯಸ್ಸಾಗೇ ಇಲ್ಲ’ ಎನ್ನುತ್ತ ಅಭಿನಂದನೆಗಳನ್ನು ಸಲ್ಲಿಸಿದರು. ಈ ಕಲಾವಿದರು ಬೇರಾರೂ ಅಲ್ಲ; ಹುಬ್ಬಳ್ಳಿಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಗುರುಕುಲದ ಕಿರಾನಾ ಘರಾಣೆ ವಿಭಾಗದ ಮುಖ್ಯಸ್ಥರು ಹಾಗೂ ಸುವಿಖ್ಯಾತ ಗಾಯಕರಾದ ನವದೆಹಲಿಯ ಪಂ.ಮಣಿಪ್ರಸಾದ ಅವರು. ಕಿರಾನಾ ಘರಾಣೆಯ ಹಿರಿಯ ಕಲಾವಿದರಿಗೆ ಈಗ 89ರ ಹರೆಯ.

ಕಿರಾನಾ ಘರಾಣೆಯ ವಿದ್ವತ್‌ಪೂರ್ಣ ಗಾಯಕ ಪಂ.ಮಣಿಪ್ರಸಾದ ಅವರು ಜನಿಸಿದ್ದು ಮಹಾರಾಷ್ಟ್ರದ ವಾರ್ಧಾದಲ್ಲಿ 1930ರ ನವೆಂಬರ್ 4 ರಂದು. ಮೂಲತಃ ರಾಜಸ್ಥಾನದ ಬಿಕಾನೇರದವರಾದ ಇವರದು ಸಂಗೀತಗಾರರ ಮನೆತನದ ಹಿನ್ನೆಲೆ. ಪಂ.ಶಕ್ತಿಲಾಲ್, ಪಂ.ಬಸ್ಸಿರಾಮ್, ಪಂ.ಮಂಗತ್‌ರಾಮ್, ಪಂ.ಶಂಕರಲಾಲ್ ಹಾಗೂ ತಂದೆ ಪಂ.ಸುಖದೇವ್ ಪ್ರಸಾದ ಹೀಗೆ ಇವರದು ಸಂಗೀತಕ್ಷೇತ್ರದಲ್ಲಿ ಅತ್ಯಂತ ಹೆಸರುವಾಸಿ ಮನೆತನ. ತಂದೆ ಸುಖದೇವ ಪ್ರಸಾದ ಅವರು ಕಿರಾನಾ ಘರಾಣೆಯ ಉ.ಅಬ್ದುಲ್ ವಹೀದ ಖಾನ್ ಹಾಗೂ ಉ.ಅಬ್ದುಲ್ ಕರೀಮ್ ಖಾನರ ನೇರ ಶಿಷ್ಯರು. ಹೀಗಾಗಿ ಮಣಿಪ್ರಸಾದ ಅವರ ಮನೆಯಲ್ಲಿ ಸಹಜವಾಗಿ ಸಂಗೀತಮಯ ವಾತಾವರಣವಿದ್ದುದರಿಂದ ಅವರ ಚಿತ್ತ ಸಂಗೀತದತ್ತ ವಾಲಿತು. ತಂದೆ ಸುಖದೇವ ಪ್ರಸಾದ ಹಾಗೂ ಅವರ ದೊಡ್ಡಪ್ಪನವರ ಪದತಲದಲ್ಲಿ ಕುಳಿತು ಅನೇಕ ವರ್ಷಗಳವರೆಗೆ ತಾಲೀಮನ್ನು ಪಡೆದ ಪಂ.ಮಣಿಪ್ರಸಾದ ಅವರು ಪ್ರಬುದ್ಧ ಗಾಯಕರಾಗಿ ಹೊರಹೊಮ್ಮಿದರು.

ಪಂ. ಮಣಿಪ್ರಸಾದ ಅವರ ಗಾಯಕಿ ಎಂದರೆ ವಿದ್ವತ್ತತೆಯೊಂದಿಗೆ ರಂಜಕತೆ, ಮಾದಕತೆಯಿಂದ ಕೂಡಿದ್ದು. ಸಾಗರದ ಅಲೆಗಳ ವೈವಿಧ್ಯತೆಯುಳ್ಳದ್ದು.ರಾಗಕ್ಕೆ ಸತ್ವ ಭಾವ ತುಂಬುವ ಸಂಗೀತ. ತಮ್ಮ ಕಂಚಿನ ಕಂಠದಿಂದ ಹೃದಯ ತುಂಬಿ ಹಾಡಲಾರಂಭಿದರೆ ನೆರೆದ ಶ್ರೋತೃಗಳಿಗೆ ರೋಮಾಂಚನ. ಕಿರಾನಾ ಘರಾಣೆಯ ವೈಶಿಷ್ಟ್ಯತೆಗಳು ಅವರ ಗಾಯಕಿಯಲ್ಲಿ ಮೇಳೈಸಿವೆ. ಪಂ.ಮಣಿಪ್ರಸಾದ ಅವರು ಧ್ಯಾನಕಲ್ಯಾಣ, ರಾಗ ಧ್ಯಾನಿತೋಡಿ, ರಾಗ ವಿಹಂಗಿಣಿ, ರಾಗ ಶಿವಕೌಂಸ್, ರಾಗ ಅಹಿರಿ ತೋಡಿ, ರಾಗ ಭೂಪೇಶ್ವರಿ ಹೀಗೆ ಹತ್ತು ಹಲವಾರು ರಾಗಗಳನ್ನು ರಚಿಸಿದವರು ಪಂ. ಮಣಿಪ್ರಸಾದ ಅವರು.

ಆಕಾಶವಾಣಿಯ ’ಎ’ ಅಗ್ರಶ್ರೇಣಿಯ ಗಾಯಕರಾಗಿರುವ ಅವರು ಕೇವಲ ಸಂಗೀತಗಾರರಷ್ಟೇ ಅಲ್ಲ ಒಬ್ಬ ಉತ್ತಮ ಸಾಹಿತಿಯೂ ಹೌದು. ’ಧ್ಯಾನರಂಗಪಿಯಾ’ ಎಂಬ ಕಾವ್ಯನಾಮದೊಂದಿಗೆ ಅನೇಕ ಬಂದಿಶ್‌ಗಳನ್ನು ರಚಿಸಿದ್ದಾರೆ. ದೇಶ-ವಿದೇಶಗಳಲ್ಲಿ ತಮ್ಮ ಸಂಗೀತಧಾರೆಯನ್ನು ಹರಿಸಿರುವ ಇವರಿಗೆ ರಾಜಸ್ಥಾನ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಸುರಮಣಿ ಪುರಸ್ಕಾರ, ರಸೇಶ್ವರ ಪ್ರಶಸ್ತಿ, ಬಾಬಾ ಅಲ್ಲಾವುದ್ದೀನ್ ಖಾನ್ ಪ್ರಶಸ್ತಿ, ಡಾ.ಗಂಗೂಬಾಯಿ ಹಾನಗಲ್ ಪುರಸ್ಕಾರ, ಸ್ವರಸಾಧನಾ ರತ್ನ, ಸಂಗೀತ ಮಾರ್ತಾಂಡ, ಸಂಗೀತ ಕಲಾರತ್ನ ಪಂ.ಮಲ್ಲಿಕಾರ್ಜುನ ಮನ್ಸೂರ ರಾಷ್ಟ್ರೀಯ ಪುರಸ್ಕಾರ ಹೀಗೆ ಅನೇಕ ಸನ್ಮಾನ ಪುರಸ್ಕಾರಗಳಿಗೆ ಭಾಜನರಾಗಿರುವ ಪಂ.ಮಣಿಪ್ರಸಾದ ಅವರಿಗೆ ಈಗ 89ರ ಹರೆಯದ ಸಂಭ್ರಮ.‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !