ಬುಧವಾರ, ಸೆಪ್ಟೆಂಬರ್ 18, 2019
25 °C

ರೌಡಿಶೀಟರ್‌ಗಳ ಪರೇಡ್‌: ಶಾಂತಿ ಕದಡದಂತೆ ಎಚ್ಚರಿಕೆ

Published:
Updated:
Prajavani

ಹುಬ್ಬಳ್ಳಿ: ಇಲ್ಲಿನ ಬೆಂಡಿಗೇರಿ ಪೊಲೀಸ್‌ ಠಾಣೆ ಆವರಣದಲ್ಲಿ ಗಣೇಶ ಹಬ್ಬ ಹಾಗೂ ಮೊಹರಂ ನಿಮಿತ್ತ ಭಾನುವಾರ ಎಸಿಪಿ ಎಸ್.ಎಂ. ಸಂದಿಗವಾಡ ನೇತೃತ್ವದಲ್ಲಿ ದಕ್ಷಿಣ ವಿಭಾಗ ವ್ಯಾಪ್ತಿಯ ರೌಡಿಶೀಟರ್‌ಗಳ ಪರೇಡ್‌ ನಡೆಯಿತು.

‘ಹಬ್ಬದ ಸಂಭ್ರಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು. ಭಾವೈಕ್ಯದಿಂದ ಎಲ್ಲರೂ ಸೇರಿ ಹಬ್ಬ ಆಚರಿಸಬೇಕು. ಶಾಂತಿ ಕದಡುವ ಕೆಲಸಕ್ಕೆ ಯಾರಾದರೂ ಮುಂದಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಎಸಿಪಿ ಸಂದಿಗವಾಡ ಎಚ್ಚರಿಕೆ ನೀಡಿದರು.

ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಾದ ಡಾ. ಗಿರೀಶ ಭೋಜಣ್ಣವರ, ಮಹಾಂತೇಶ ಹೊಳಿ, ಮಾರುತಿ ಗುಳ್ಳಾರಿ, ಶ್ಯಾಂರಾವ್ ಸಜ್ಜನ್, ಡಿ. ಸಂತೋಷಕುಮಾರ್ ಇದ್ದರು.

ಹಲ್ಲೆ; ವಿಡಿಯೊ ವೈರಲ್‌:

ಚಲಿಸುತ್ತಿದ್ದ ಬಸ್ ಹತ್ತುತ್ತಿದ್ದ ಎಂಬ ಕಾರಣಕ್ಕೆ ಪ್ರಯಾಣಿಕನ ಮೇಲೆ ಬಸ್ ಚಾಲಕ ಮತ್ತು ನಿರ್ವಾಹಕ ಇಬ್ಬರೂ ಸೇರಿ ಭಾನುವಾರ ನಗರದ ಚನ್ನಮ್ಮ ವೃತ್ತದ ಬಳಿ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಹುಬ್ಬಳ್ಳಿಯಿಂದ ತಡಸಕ್ಕೆ ಹೋಗುತ್ತಿದ್ದ ಬಸ್‌ಗೆ ಕೈ ಮಾಡಿ ನಿಲ್ಲಿಸುವಂತೆ ಪ್ರಯಾಣಿಕ ಹೇಳಿದ್ದಾನೆ. ಬಸ್ ಚಾಲಕ ನಿಲ್ಲಿಸದೇ ಮುಂದೆ ಹೋದಾಗ ಬಾಗಿಲು ತೆರೆದು ಹತ್ತಲು ಮುಂದಾಗಿದ್ದ. ಇದರಿಂದ ಕೋಪಗೊಂಡ ಚಾಲಕ, ನಿರ್ವಾಹಕರು ಬಸ್ ನಿಲ್ಲಿಸಿ ಪೊಲೀಸರ ಎದುರಿಗೇ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದಾರೆ.

‘ಹಲ್ಲೆಗೊಳಗಾದ ಪ್ರಯಾಣಿಕ ಯಾರು ಎಂದು ತಿಳಿದು ಬಂದಿಲ್ಲ. ಉಪನಗರ ಪೊಲೀಸ್‌ ಠಾಣೆಯಲ್ಲೂ ದೂರು ದಾಖಲಾಗಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

Post Comments (+)