ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನ: ಅಭಿವೃದ್ಧಿಗೆ ಸಿಗಬೇಕಿದೆ ಆದ್ಯತೆ

ಹೆಚ್ಚುತ್ತಲೇ ಇದೆ ಬೀದಿದೀಪಗಳ ನಿರ್ವಹಣೆ ವೆಚ್ಚ, ಬೇಕಿದೆ ಪರ್ಯಾಯ ಯೋಜನೆ
Last Updated 29 ಆಗಸ್ಟ್ 2021, 4:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಐದಾರು ಬಡಾವಣೆಗಳ ನಡುವೆ ನಗರದಲ್ಲಿ ಸರ್ಕಾರದ ‘ದಾಖಲೆ’ಯಲ್ಲಿ ಉದ್ಯಾನಗಳಿವೆ. ಕೆಲವು ಅಭಿವೃದ್ಧಿ ಮತ್ತು ಇನ್ನೂ ಕೆಲವು ನಿರ್ವಹಣೆಯ ಕೊರತೆಯಿಂದಾಗಿ ಸೊರಗಿಹೋಗಿವೆ.

ಇನ್ನು ಕೆಲವಡೆಯಂತೂ ಉದ್ಯಾನವಿದೆ ಎನ್ನುವುದು ನಾಮಫಲಕ ನೋಡಿಯೇ ತಿಳಿದುಕೊಳ್ಳಬೇಕಾಗಿದೆ. ಹಿರಿಯರ ವಾಯುವಿಹಾರಕ್ಕೆ, ಮಕ್ಕಳ ಮನರಂಜನೆಗೆ ಮತ್ತು ಎಲ್ಲ ವರ್ಗದ ಜನರಿಗೆ ಸಾಂಸ್ಕೃತಿಕ ತಾಣಗಳಾಗಬೇಕಿದ್ದ ಉದ್ಯಾನಗಳಲ್ಲಿ ಈಗ ತ್ಯಾಜ್ಯದ ರಾಶಿ ಕಂಡುಬರುತ್ತಿದೆ. ಸಂಜೆಯಾಗುತ್ತಿದ್ದಂತೆಯೇ ಅನ್ಯ ಚಟುವಟಿಕೆಗಳ ತಾಣವಾಗುತ್ತಿವೆ. ಕಸ, ಮದ್ಯ ಸೇವಿಸಿ ಬೀಸಾಡಿರುವ ಬಾಟಲಿಗಳು, ಗಾಜಿನ ಚೂರುಗಳು, ಪ್ಲಾಸ್ಟಿಕ್‌ ತ್ಯಾಜ್ಯ, ಬೀದಿ ನಾಯಿಗಳ ಹಾವಳಿ ಮಾತ್ರ ಉದ್ಯಾನಗಳಲ್ಲಿ ಎದ್ದು ಕಾಣುತ್ತಿದೆ.

ತೋಳನಕರೆಗೆ ಹೋಗುವ ರಸ್ತೆ, ಕಾಳಿದಾಸ ನಗರ, ಹೊಸೂರು ಸಮೀಪದ ಗಣೇಶ ಪಾರ್ಕ್‌ನಲ್ಲಿರುವ ಉದ್ಯಾನಗಳಲ್ಲಿ ಮುಳ್ಳುಕಂಟೆಗಳು ಬೆಳೆದಿವೆ. ಕೆಲವೆಡೆ ಉದ್ಯಾನಕ್ಕೆ ಮಾತ್ರ ಜಾಗ ಬಿಡಲಾಗಿದ್ದು, ಯಾವುದೇ ಅಭಿವೃದ್ಧಿ ಕಂಡಿಲ್ಲ. ಈ ಕೊರತೆಯ ನಡುವೆಯೂ ಓಪನ್‌ ಜಿಮ್‌ ಹೊಂದಿರುವ ಕುಂಭಕೋಣ ಪ್ಲಾಂಟ್‌, ಇಂದಿರಾ ಗಾಜಿನಮನೆ, ಅರ್ಜುನ ವಿಹಾರ, ನೃಪತುಂಗ ಬೆಟ್ಟದ ಉದ್ಯಾನ, ಉಣಕಲ್ ಕೆರೆ ಪಾರ್ಕ್‌, ಲಿಂಗರಾಜ ನಗರ ಹಾಗೂ ಲೋಹಿಯಾ ನಗರ ಹೀಗೆ ಹಲವು ಬಡಾವಣೆಗಳಲ್ಲಿ ಸುಂದರ ಉದ್ಯಾನಗಳಿವೆ.

ಕೋವಿಡ್‌ ಕಾಲವಾದ್ದರಿಂದ ಜನ ಮೊದಲಿಗಿಂತಲೂ ಹೆಚ್ಚು ಆರೋಗ್ಯ ಕಾಯ್ದುಕೊಳ್ಳಲು ಆದ್ಯತೆ ಕೊಡುತ್ತಿದ್ದಾರೆ. ಇದಕ್ಕಾಗಿ ತಮ್ಮ ಮನೆಯ ಸಮೀಪದ ಉದ್ಯಾನ, ಓಪನ್‌ ಜಿಮ್‌ಗಳತ್ತ ಗಮನ ಹರಿಸುತ್ತಿದ್ದಾರೆ. ಆದ್ದರಿಂದ ಉದ್ಯಾನಗಳ ಅಭಿವೃದ್ಧಿ, ನಿರ್ವಹಣೆ ಹಾಗೂ ಮೂಲ ಸೌಕರ್ಯ ಕಲ್ಪಿಸಲು ಒತ್ತು ಕೊಡಬೇಕಾಗಿದೆ.

ಹೆಚ್ಚಾಗುತ್ತಿದೆ ವೆಚ್ಚ: ಮೂಲ ಸೌಕರ್ಯಗಳಲ್ಲಿ ಒಂದಾದ ಬೀದಿ ದೀಪಗಳ ಅಳವಡಿಕೆ, ನಿರ್ವಹಣೆ ಹಾಗೂ ಪ್ರತಿ ತಿಂಗಳ ಬಿಲ್‌ ಪಾವತಿ ಸ್ಥಳೀಯ ಆಡಳಿತಕ್ಕೆ ದೊಡ್ಡ ಹೊರೆಯಾಗುತ್ತಿದೆ.

ಅವಳಿ ನಗರಗಳಲ್ಲಿ 64 ಸಾವಿರ ಬೀದಿ ದೀಪಗಳಿದ್ದು, ನಿರ್ವಹಣೆಗೆ ₹35 ಲಕ್ಷ ಖರ್ಚಾಗುತ್ತಿದೆ. ಮಾಸಿಕ ಸರಾಸರಿ ₹1.5 ಕೋಟಿ ವಿದ್ಯುತ್ ಬಿಲ್‌ ಪಾವತಿಸಬೇಕಾಗಿದ್ದು, ಪ್ರತಿ ವರ್ಷವೂ ಖರ್ಚು ಹೆಚ್ಚಾಗುತ್ತಲೇ ಇದೆ. ಎಲ್‌ಇಡಿ ಬೀದಿ ದೀಪಗಳ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಸೌರಶಕ್ತಿಯಿಂದ ಬೀದಿ ದೀಪಗಳಿಗೆ ವಿದ್ಯುತ್‌ ಸರಬರಾಜಾದರೆ ವೆಚ್ಚ ಕಡಿಮೆಯಾಗಲಿದೆ. ಪರ್ಯಾಯ ಯೋಜನೆಗಳತ್ತ ಗಮನ ಹರಿಸಬೇಕಾದ ಜರೂರಿದೆ.

ಉದ್ಯಾನ ಅಭಿವೃದ್ಧಿಗೆ ಬೇಕಾಗುವಷ್ಟು ಹಣ ಹೊಂದಿಸುವುದು ಬಡಾವಣೆ ನಿವಾಸಿಗಳಿಗೆ ಕಷ್ಟ. ಸರ್ಕಾರವೇ ಅಭಿವೃದ್ಧಿಪಡಿಸಿ ನಿರ್ವಹಣೆಯನ್ನು ಸ್ಥಳೀಯರಿಗೆ ಕೊಟ್ಟರೆ ಅನುಕೂಲ.
ಅಮಿತ್‌ ದಾಡಮೋಡೆ

- ಗಣೇಶ ಪಾರ್ಕ್‌ ನಿವಾಸಿ, ಹುಬ್ಬಳ್ಳಿ

ಬೀದಿ ದೀಪಗಳಿಗೆ ಸೌರಶಕ್ತಿ ಮೂಲಕ ವಿದ್ಯುತ್‌ ಪೂರೈಸಿದರೆ ಖರ್ಚು ಕಡಿಮೆಯಾಗುತ್ತದೆ. ವಿದ್ಯುತ್‌ ಬೆಲೆ ಪಾವತಿ ಹೊರೆಯೂ ತಗ್ಗುತ್ತದೆ. ಈ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ತುರ್ತಾಗಿ ಯೋಜನೆ ರೂಪಿಸಬೇಕಿದೆ.
ವಿನಾಯಕ ಜೋಗಿಶೆಟ್ಟರ್

- ಎಂಜಿನಿಯರಿಂಗ್‌ ವಿದ್ಯಾರ್ಥಿ, ಕೆಎಲ್‌ಇ ತಾಂತ್ರಿಕ ಕಾಲೇಜು, ಹುಬ್ಬಳ್ಳಿ

ಉದ್ಯಾನ ಅಭಿವೃದ್ಧಿಗೆ ಜನರ ಸಲಹೆಗಳೇನು?

* ಎಲ್ಲ ಉದ್ಯಾನಗಳಲ್ಲಿ ಸಮುದಾಯ ಭವನ ನಿರ್ಮಿಸಿ ಸಾಂಸ್ಕೃತಿಕ ಚಟುವಟಿಕೆಗಳ ಅವಕಾಶ ಸಿಗಲಿ

* ಓಪನ್‌ ಜಿಮ್‌ ನಿರ್ಮಿಸಿ, ಶುಲ್ಕ ವಿಧಿಸಿ ಆ ಹಣವನ್ನು ಉದ್ಯಾನಗಳ ನಿರ್ವಹಣೆಗೆ ಬಳಸಲಿ

* ಹೊಸ ಬಡಾವಣೆಗಳಲ್ಲಿ ಲೇ ಔಟ್‌ ಮಾಡುವವರಿಗೇ ಉದ್ಯಾನ ಅಭಿವೃದ್ಧಿ ಹೊಣೆ ಇರಲಿ

* ಕುಡುಕರ ಹಾಗೂ ಅನ್ಯ ಚಟುವಟಿಕೆಗಳ ಹಾವಳಿ ತಪ್ಪಿಸಲು ಸಿಸಿಟಿವಿ ಕ್ಯಾಮೆರಾ ಅಳವಡಿಸಿ

* ಉದ್ಯಾನ ಅಭಿವೃದ್ಧಿಗೆ ಅನುದಾನ ಹೆಚ್ಚಿಸಲಿ

ಪಾಲಿಕೆ ವ್ಯಾಪ್ತಿಯಲ್ಲಿರುವ ಉದ್ಯಾನಗಳ ಮಾಹಿತಿ: 312

ಒಟ್ಟು ಉದ್ಯಾನಗಳು: 62

ಅಭಿವೃದ್ಧಿ ಹೊಂದಿದ ಉದ್ಯಾನಗಳು: 8

ಪ್ರಗತಿಯಲ್ಲಿರುವ ಉದ್ಯಾನಗಳು:242

ಸಾಕಷ್ಟು ಅನುದಾನ ಬೇಕು: ಇಟ್ನಾಳ

ಉದ್ಯಾನಗಳ ಅಭಿವೃದ್ಧಿಗೆ ಸರ್ಕಾರದ ನೆರವಿನ ಜೊತೆಗೆ ಸಿಎಸ್‌ಆರ್‌ ಅನುದಾನ ಪಡೆಯಲಾಗುವುದು. ನಿರ್ವಹಣೆಗೆ ಸರ್ಕಾರದಿಂದ ಪ್ರತಿವರ್ಷ ಹಣ ಬರುತ್ತದೆ. 15ನೇ ಹಣಕಾಸು ಯೋಜನೆಯಲ್ಲಿ ₹5 ಕೋಟಿ ಮೀಸಲಿಡಲಾಗಿದೆ. ಬೀದಿದೀಪಗಳ ನಿರ್ವಹಣೆಗೆ ಎಲ್‌ಇಡಿ ಬಲ್ಪ್‌ಗಳನ್ನು ಅಳವಡಿಸಲಾಗುವುದು. ಶೇ 54ರಷ್ಟು ವಿದ್ಯುತ್‌ ಬಿಲ್‌ ಕಡಿಮೆ ಬರುತ್ತದೆ.

ಸುರೇಶ ಇಟ್ನಾಳ, ಮಹಾನಗರ ಪಾಲಿಕೆ ಆಯಕ್ತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT