ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೇ ಜನಾದೇಶ: ರಾಹುಲ್‌ ವಿಶ್ವಾಸ

ಮೂಲಭೂತ ವಿಷಯ ಪ್ರಸ್ತಾಪಿಸದ ಮೋದಿಯಿಂದ ವೈಯಕ್ತಿಕ ಟೀಕೆ– ಆರೋಪ
Last Updated 10 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರದುದ್ದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ ಮತ್ತು ನನ್ನ ಮೇಲೆ ವೈಯಕ್ತಿಕ ದಾಳಿ ಮಾಡಿದರು’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದರು.

ಕಾಂಗ್ರೆಸ್‌ನ ರಾಜ್ಯ ನಾಯಕರ ಜೊತೆ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ನಾವು ಅಭಿವೃದ್ಧಿ ವಿಷಯಗಳನ್ನು ಆಧಾರವಾಗಿಟ್ಟು ಪ್ರಚಾರ ಮಾಡಿದ್ದೇವೆ. ಆದರೆ, ಮೋದಿ ಮೂಲಭೂತ ವಿಷಯಗಳನ್ನು ಪ್ರಸ್ತಾಪಿಸುವ ಬದಲು ಆಧಾರರಹಿತ ಆರೋಪಗಳನ್ನು ಮಾಡಿದರು’ ಎಂದು ಟೀಕಿಸಿದರು.

‘ಅತಂತ್ರ ವಿಧಾನಸಭೆ ನಿರ್ಮಾಣವಾದರೆ ನಿಮ್ಮ ನಡೆ ಏನು’ ಎಂಬ ಪ್ರಶ್ನೆ ಎದುರಾದಾಗ, ‘ಗುಜರಾತ್‍ನಲ್ಲಿ ಕಾಂಗ್ರೆಸ್ 20ರಿಂದ 30 ಸ್ಥಾನವನ್ನೂ ಗೆಲ್ಲುವುದಿಲ್ಲ ಎಂದು ವಿಶ್ಲೇಷಿಸಲಾಗಿತ್ತು. ಆದರೆ, ‌ಅಲ್ಲಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಿ ಗೆಲುವಿನ ಹತ್ತಿರ ಬಂದಿದ್ದೆವು. ಇಲ್ಲಿ ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕರ್ನಾಟಕದ ಚುನಾವಣೆಯಲ್ಲಿ, ಉತ್ತಮ ಆಡಳಿತ ನೀಡಿದ ಸಿದ್ದರಾಮಯ್ಯ ಒಂದು ಕಡೆಯಾದರೆ, ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ಮತ್ತೊಂದು ಕಡೆ ಇದ್ದಾರೆ. ರಾಜ್ಯದ ಜನ ದಡ್ಡರಲ್ಲ. ವಿವೇಚನೆ ಮೂಲಕವೇ ಉತ್ತರ ನೀಡುತ್ತಾರೆ’ ಎಂದರು.

‘ದೇಶದ ಬಹುಸಂಸ್ಕೃತಿಯನ್ನು ಆರ್‌ಎಸ್‌ಎಸ್‌ ಗೌರವಿಸುವುದಿಲ್ಲ. ಅದಕ್ಕಾಗಿ ತನ್ನ ಸಿದ್ಧಾಂತವನ್ನು ಹೇರಲು ಪ್ರಯತ್ನಿಸುತ್ತಿದೆ. ಅದಕ್ಕೆ ನಾನು ಅವಕಾಶ ನೀಡುವುದಿಲ್ಲ. ಅಭಿವೃದ್ಧಿ ವಿಷಯದಲ್ಲಿ ನಾವು ಪ್ರಶ್ನೆ ಕೇಳಿದಾಗಲೆಲ್ಲಾ ಮೋದಿ ಹತಾಶರಾಗುತ್ತಾರೆ. ಜನರ ಗಮನ ಬೇರೆಡೆ ಸೆಳೆಯಲು ವೈಯಕ್ತಿಕ ದಾಳಿ ಮಾಡಿ ತಮ್ಮ ಸಿಟ್ಟು ಹೊರಹಾಕಿದ್ದಾರೆ’ ಎಂದರು.

‘ದೇಶದಲ್ಲಿ ದಲಿತರ ಮೇಲೆ ದೌರ್ಜನ್ಯ, ಹತ್ಯೆ ಹಾಗೂ ಅವಮಾನ ಮಾಡುತ್ತಿದ್ದರೂ ಮೋದಿ ಏನನ್ನೂ ಮಾತನಾಡುವುದಿಲ್ಲ. ದಲಿತರ ಹಕ್ಕು
ಗಳು ಹಾಗೂ ಅವರ ಮೇಲಿನ ದೌರ್ಜನ್ಯ ಕುರಿತು ಕಾಂಗ್ರೆಸ್ ಹೋರಾಟವನ್ನು ಮುಂದುವರಿಸಲಿದೆ. ಮಹಿಳೆಯರ ಮೇಲಿನ ದೌರ್ಜನ್ಯ ರಾಜಕೀಯ ಹಾಗೂ ರಾಷ್ಟ್ರೀಯ ವಿಚಾರ’ ಎಂದರು.

‘15 ವರ್ಷಗಳಿಂದ ನಾನು ದೇವಾಲಯಗಳು, ಮಸೀದಿಗಳು, ಗುರುದ್ವಾರ ಸೇರಿದಂತೆ ಹಲವು ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿದ್ದೇನೆ. ಆದರೆ, ಬಿಜೆಪಿಗೆ ಇದು ಇಷ್ಟವಾಗುತ್ತಿಲ್ಲ. ಹಿಂದೂ ಎಂಬುದರ ಅರ್ಥ ಅವರಿಗೆ ತಿಳಿದಿಲ್ಲ. ಹಿಂದೂ ಎಂದರೆ ಅದೊಂದು ದೃಷ್ಟಿಕೋನ. ಜೀವನದುದ್ದಕ್ಕೂ ಸಾಗುವ ವಿಚಾರ’ ಎಂದು ಅವರು ವಿಶ್ಲೇಷಿಸಿದರು.

ಒಗ್ಗಟ್ಟು ಪ್ರದರ್ಶನ: ರಾಹುಲ್‌ ಮಾಧ್ಯಮಗೋಷ್ಠಿ ಕಾಂಗ್ರೆಸ್‌ ನಾಯಕರ ಒಗ್ಗಟ್ಟು ಪ್ರದರ್ಶನಕ್ಕೂ ವೇದಿಕೆಯಾಯಿತು. ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆಯಲ್ಲಿನ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಹಿರಿಯ ನಾಯಕರಾದ ರೆಹಮಾನ್‌ ಖಾನ್‌, ಕೆ.ಎಚ್‌. ಮುನಿಯಪ್ಪ. ಬಿ.ಕೆ. ಹರಿಪ್ರಸಾದ್‌ ಇದ್ದರು.

‘ ನನ್ನ ತಾಯಿ ಹೆಚ್ಚು ಭಾರತೀಯಳು’

ಸೋನಿಯಾ ಗಾಂಧಿ ಅವರ ಇಟಲಿ ಮೂಲದ ಬಗ್ಗೆ ಬಿಜೆಪಿ ಪದೇ ಪದೇ ಪ್ರಸ್ತಾಪಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಹುಲ್‌, ‘ನನ್ನ ತಾಯಿ ಇಟಲಿಯವಳಾಗಿದ್ದರೂ ಅನೇಕ ಭಾರತೀಯರಿಗಿಂತ ಹೆಚ್ಚು ಭಾರತೀಯಳು’ ಎಂದರು.

‘ತನ್ನ ಜೀವನದ ಹೆಚ್ಚಿನ ಸಮಯವನ್ನು ಆಕೆ ಭಾರತದಲ್ಲೇ ಕಳೆದಿದ್ದಾಳೆ. ತ್ಯಾಗ ಮಾಡಿದ್ದಾಳೆ. ಈ ದೇಶಕ್ಕಾಗಿ ಕಷ್ಟ ಅನುಭವಿಸಿದ್ದಾಳೆ. ಪ್ರಧಾನಿ ಆಕೆಯ ಇಟಲಿ ಇತಿಹಾಸವನ್ನು ಕೆದಕಲು ಇಷ್ಟಪಡುವುದಾದರೆ ನನಗೆ ಸಂತೋಷವೇ’ ಎಂದರು.

* ನರೇಂದ್ರ ಮೋದಿ ಅವರ ಭಾಷಣಗಳಿಂದ ಪ್ರಧಾನಿ ಹುದ್ದೆಯ ಘನತೆ ಕಡಿಮೆಯಾಗಿದೆ. ಅದು ಕಾಮಿಡಿ ಷೋ ರೀತಿಯಲ್ಲಿದೆ

-ಸಿದ್ದರಾಮಯ್ಯ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT