ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿ ಇದ್ದರಷ್ಟೇ ಪ್ರಗತಿ: ಬೊಮ್ಮಾಯಿ

ಪೊಲೀಸ್ ಕಾನ್‌ಸ್ಟೇಬಲ್‌ಗಳ ನಿರ್ಗಮನ ಪಥ ಸಂಚಲನದ ಆಕರ್ಷಣೆ
Last Updated 29 ಸೆಪ್ಟೆಂಬರ್ 2019, 20:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ದೇಶದಲ್ಲಿ ಶಾಂತಿ ನೆಲೆಸಿದರೆ ಮಾತ್ರ ಪ್ರಗತಿ ಹೊಂದಲು ಸಾಧ್ಯ. ಆದ್ದರಿಂದ ಶಾಂತಿ ಕಾಪಾಡುವ ಕರ್ತವ್ಯ ಪೊಲೀಸರ ಮೇಲಿದೆ. ನಿಮ್ಮನ್ನು ನಂಬಿಕೊಂಡು ಬರುವ ಜನರಿಗೆ ನ್ಯಾಯ ದೊರಕಿಸಿಕೊಡುವ ಕೆಲಸವನ್ನು ಸಮರ್ಥವಾಗಿ ಮಾಡಬೇಕು ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಗೋಕುಲ ರಸ್ತೆಯ ಸಿಎಆರ್‌ ಕವಾಯತು ಮೈದಾನದಲ್ಲಿ ಭಾನುವಾರ 6ನೇ ತಂಡದ ನಾಗರಿಕ ಪೊಲೀಸ್‌ ಕಾನ್‌ಸ್ಟೇಬಲ್‌ಗಳ ನಿರ್ಗಮನದ ಪಥ ಸಂಚಲನದ ಗೌರವವಂದನೆ ಸ್ವೀಕರಿಸಿ ಅವರು ಮಾತನಾಡಿದರು.

’ರಾಜ್ಯದಲ್ಲಿ 12 ಪೊಲೀಸ್‌ ತರಬೇತಿ ಕೇಂದ್ರಗಳಿದ್ದು ಪ್ರತಿ ವರ್ಷ ಸಾವಿರಾರು ಸಿಬ್ಬಂದಿ ತರಬೇತಿ ಪಡೆಯುತ್ತಾರೆ. ದೇಶದ ಪೊಲೀಸ್‌ಗೆ ದೊಡ್ಡ ಇತಿಹಾಸವಿದೆ. ನೀವೆಲ್ಲರೂ ಆ ಪರಂಪರೆಯನ್ನು ಉಳಿಸಿಕೊಂಡು ಹೋಗಬೇಕು. ಖಾಸಗೀಕರಣ, ಉದಾರೀಕರಣದ ಭರದಲ್ಲಿ ಅಂತಃಕರಣ ಮಾಯವಾಗುತ್ತಿದೆ. ಇದರಿಂದ ಸಾಮಾಜಿಕ ಕ್ಷೋಭೆ ಹೆಚ್ಚಾಗುತ್ತಿದೆ. ಆದ್ದರಿಂದ ಪೊಲೀಸರು ಜನರೊಂದಿಗೆ ಸ್ನೇಹಮಯ ವಾತಾವರಣ ಇಟ್ಟುಕೊಳ್ಳಬೇಕು‘ ಎಂದರು. ಪೊಲೀಸ್ ಕಾನ್‌ಸ್ಟೇಬಲ್‌ಗಳ ಆಕರ್ಷಕ ಪಥಸಂಚಲನ ಗಮನ ಸೆಳೆಯಿತು.

ಹುಬ್ಬಳ್ಳಿ–ಧಾರವಾಡ ಪೊಲೀಷ್‌ ಕಮೀಷನರ್‌ ಆರ್‌. ದಿಲೀಪ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೊಲೀಸ್‌ ತರಬೇತಿ ಶಾಲೆಯ ಪ್ರಾಚಾರ್ಯ, ಡಿಸಿಪಿ ಡಿ.ಎಲ್‌. ನಾಗೇಶ ಪ್ರಶಿಕ್ಷಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ. ಅಮರಕುಮಾರ್ ಪಾಂಡೆ, ಉತ್ತರ ವಲಯ ಪೊಲೀಸ್ ಮಹಾನಿರೀಕ್ಷಕ ರಾಘವೇಂದ್ರ ಸುಹಾಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಡಿಸಿಪಿ ಡಾ.ಶಿವಕುಮಾರ್ ಇದ್ದರು.

ತರಬೇತಿ ಸಮಯದಲ್ಲಿ ಒಳಾಂಗಣ ಮತ್ತು ಹೊರಾಂಗಣ ವೃತ್ತಿ ಚಟುವಟಿಕೆಗಳಲ್ಲಿ ಉತ್ತಮ ಪ್ರದರ್ಶನ ತೋರಿದ ರಾಯಚೂರು ಜಿಲ್ಲೆಯ ಸುರೇಶನಾಯಕ ಅವರಿಗೆ ಸರ್ವೋತ್ತಮ ಪ್ರಶಸ್ತಿ ನೀಡಲಾಯಿತು. ಪ್ರಶಿಕ್ಷಣಾರ್ಥಿಗಳ ಪೋಷಕರು, ಕುಟುಂಬದವರು, ಮಾಜಿ ಪೊಲೀಸ್‌ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT