ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ವಾಪಸ್‌ ನೀಡದ ಕಲ್ಯಾಣ ಮಂಟಪಕ್ಕೆ ದಂಡ

Last Updated 19 ಮಾರ್ಚ್ 2022, 1:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿವಾಹಕ್ಕಾಗಿ ಸಭಾಭವನ ಮುಂಗಡ ಕಾಯ್ದಿರಿಸುವಾಗ ನೀಡಿದ ಹಣ ಪೂರ್ಣವಾಗಿ ವಾಪಸ್ ನೀಡದ ಪ್ರಕರಣ ವಿಚಾರಣೆ ನಡೆಸಿರುವ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಗೋಪನಕೊಪ್ಪದ ಕೆಪಿಟಿಸಿಎಲ್ ನೌಕರರ ಯೂನಿಯನ್ ಸೇವಾ ನ್ಯೂನತೆ ಎಸಗಿದೆ ಎಂದು ಗ್ರಾಹಕರಿಗೆ ₹5 ಸಾವಿರ ಪರಿಹಾರ ನೀಡಲು ಸೂಚಿಸಿದೆ.

ನವನಗರದ ರಾಚಪ್ಪ ಅವಾರಿ ಅವರು ಪುತ್ರನ ವಿವಾಹವನ್ನು 2021ರ ಮೇ 23ರಂದು ನಡೆಸುವ ಸಲುವಾಗಿ ಕೆಪಿಟಿಸಿಎಲ್ ನೌಕರರ ಸಭಾಭವನ ಕಾಯ್ದಿರಿಸಿದ್ದರು. ಕರಾರಿನಂತೆ ಮುಂಗಡವಾಗಿ ₹1.18 ಲಕ್ಷ ನೀಡಿದ್ದರು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಸಭಾಭವನದಲ್ಲಿ ಮದುವೆ ಸಮಾರಂಭವನ್ನು ಜಿಲ್ಲಾಡಳಿತ ನಿಷೇಧಿಸಿತ್ತು. ಹೀಗಾಗಿ ಮದುವೆ ನಡೆದಿರಲಿಲ್ಲ. ಹಣ ಮರಳಿಸುವಂತೆ ರಾಚಪ್ಪ ಯೂನಿಯನ್‌ಗೆ ವಿನಂತಿಸಿದಾಗ, ₹88,500 ಮರಳಿಸಿ ₹29,500 ಇಟ್ಟುಕೊಂಡಿದ್ದರು. ರಾಚಪ್ಪ ಗ್ರಾಹಕರ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ವಿಚಾರಣೆಗೆ ಯೂನಿಯನ್‌ ಹಾಜರಾಗಿರಲಿಲ್ಲ. ಪರಿಣಾಮ ಪ್ರಕರಣ ಕುರಿತು ಯೂನಿಯನ್‌ ಯಾವುದೇ ತಕರಾರು ಹೊಂದಿಲ್ಲ ಎಂದು ಪರಿಗಣಿಸಿ ತೀರ್ಪು ನೀಡಿದೆ.

ತೀರ್ಪಿನ ಪ್ರತಿ ತಲುಪಿದ 30 ದಿನಗಳ ಒಳಗೆ ಗ್ರಾಹಕರಿಗೆ ಬಾಕಿಮೊತ್ತಕ್ಕೆ 2021ರ ಅಕ್ಟೋಬರ್ 10ರಿಂದ ಹಣ ಸಂದಾಯ ಆಗುವವರೆಗೆ ಶೇ 6ರಷ್ಟು ಬಡ್ಡಿ ಸಮೇತ ಪಾವತಿಸಲು ಸೂಚಿಸಿದೆ. ಜೊತೆಗೆ ಮಾನಸಿಕ, ದೈಹಿಕ ಹಾನಿಗೆ ₹3ಸಾವಿರ ಮತ್ತು ಪ್ರಕರಣ ಖರ್ಚು ₹2 ಸಾವಿರ ನೀಡಲು ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT