ಬುಧವಾರ, ಜನವರಿ 29, 2020
29 °C
ಸಹೋದ್ಯೋಗಿಯ ಯೂಸರ್‌ ಐಡಿ ಬಳಸಿ 77 ಮಂದಿಗೆ ಪಿಂಚಣಿ ಸಂದಾಯ, ಪ್ರಕರಣ ದಾಖಲು

ಯಾರದೊ ಖಾತೆಗೆ ₹16.16 ಲಕ್ಷ ಪಿಂಚಣಿ!

ನಾಗರಾಜ್‌ ಬಿ.ಎನ್‌. Updated:

ಅಕ್ಷರ ಗಾತ್ರ : | |

prajavani

ಹುಬ್ಬಳ್ಳಿ: ಇಲ್ಲಿನ ನವನಗರದ ಕಾರ್ಮಿಕರ ಭವಿಷ್ಯನಿಧಿ ಕಚೇರಿಯ ಅಧಿಕಾರಿಯೊಬ್ಬರು ಸಹೋದ್ಯೋಗಿಯೊಬ್ಬರ ಯೂಸರ್‌ ಐಡಿ ಬಳಸಿ, ಪಿಂಚಣಿ ಬಾಕಿ ಪಡೆಯಲು ಅರ್ಹರಲ್ಲದ 77 ನಿವೃತ್ತ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ₹16.16 ಲಕ್ಷ ಸಂದಾಯ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಭವಿಷ್ಯನಿಧಿ ಇಲಾಖೆಯ ಹಿರಿಯ ಸಾಮಾಜಿಕ ಭದ್ರತಾ ಸಹಾಯಕರಾಗಿದ್ದ ಪಿ.ಮನೋಜಕುಮಾರ ವಿರುದ್ಧ ಇಲ್ಲಿನ ನವನಗರ ಪೊಲೀಸ್‌ ಠಾಣೆಯಲ್ಲಿ ಜ.3ರಂದು ದೂರು ದಾಖಲಿಸಲಾಗಿದೆ. 2014ರ ನವೆಂಬರ್‌ 19ರಂದು ಪ್ರಕರಣ ಬೆಳಕಿಗೆ ಬಂದಿತ್ತು. ಇಲಾಖಾ ವಿಚಾರಣೆ ನಂತರ ಮೇಲ್ನೋಟಕ್ಕೆ ಸಾಬೀತಾಗಿರುವ ಕಾರಣ ದೂರು ದಾಖಲಿಸಲಾಗಿದೆ.

ಮನೋಜಕುಮಾರ ಅವರು ಸಹೋದ್ಯೋಗಿ ರೇಖಾ ಕಾಮತ್ ಎಂಬುವರ ಯೂಸರ್‌ ಐಡಿ ಬಳಸಿ ಈ ಕೃತ್ಯ ಎಸಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಕವಚೂರಿನಲ್ಲಿರುವ ಕರ್ನಾಟಕ ರಾಜ್ಯ ವೀನರ್ಸ್‌ ಲಿ. ದಾಂಡೇಲಿ ಎಸ್ಟಾಬ್ಲಿಶ್‌ಮೆಂಟ್‌ನ ನಿವೃತ್ತ ಕಾರ್ಮಿಕರಿಗೆ ಪಿಂಚಣಿ ಬಾಕಿ ಸಂದಾಯ ಮಾಡಿದ್ದಾರೆ. 2014ರ ನವೆಂಬರ್‌ 19ರಿಂದ 2015ರ ಆಗಸ್ಟ್‌ 25ರವರೆಗೆ ಒಬ್ಬೊಬ್ಬರ ಖಾತೆಗೂ ₹21 ಸಾವಿರದಿಂದ ₹25 ಸಾವಿರದವರೆಗೆ ಹಾಕಲಾಗಿದೆ.

‘ಘಟನೆ ಬಳಿಕ, 2016ರಲ್ಲಿ ಆರೋಪಿ ಮನೋಜಕುಮಾರ ಅವರನ್ನು ಕಲಬುರ್ಗಿ ಭವಿಷ್ಯನಿಧಿ ಕಚೇರಿಗೆ ವರ್ಗಾಯಿಸಲಾಗಿತ್ತು. ಈಗಲೂ ಅವರು ಅಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಭವಿಷ್ಯನಿಧಿ ಸಹಾಯಕ ಆಯುಕ್ತ ಕೆ. ಚಕ್ರಪಾಣಿ, ‘ಪ್ರಕರಣ ಕುರಿತು ಇಲಾಖಾ ವಿಚಾರಣೆ ನಡೆಯುತ್ತಿದೆ. ಕಾರ್ಮಿಕರ ಖಾತೆಗೆ ವರ್ಗಾವಣೆಯಾಗಿದ್ದ ಹಣವನ್ನು ಮರಳಿ ಪಡೆಯಲಾಗಿದೆ’ ಎಂದರು.

ಒಳ ಒಪ್ಪಂದವಿತ್ತೇ?

‘ಅನರ್ಹರ ಖಾತೆಗೆ ಹಣ ಹೇಗೆ ವರ್ಗ ಆಯಿತು? ಕಾರ್ಮಿಕರ ಜೊತೆ ಮನೋಜಕುಮಾರ ಏನಾದರೂ ಒಳಒಪ್ಪಂದ ಮಾಡಿಕೊಂಡಿದ್ದರೆ? ಸಹೋದ್ಯೋಗಿಯ ಯೂಸರ್‌ ಐಡಿ ಏಕೆ ಬಳಸಿದರು ಎಂಬಿತ್ಯಾದಿ ಪ್ರಶ್ನೆಗಳು ಇದ್ದು, ಈ ಕುರಿತು ತನಿಖೆ ನಡೆಸಲಾಗುವುದು’ ಎಂದು ನವನಗರ ಪೊಲೀಸ್‌ ಇನ್‌ಸ್ಪೆಕ್ಟರ್‌ ಪ್ರಭು ಸೂರಿನ್‌ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು