ಮತದಾನ: ಪ್ರಜೆಗಳ ಪಾಲ್ಗೊಳ್ಳುವಿಕೆ ಮುಖ್ಯ

ಮಂಗಳವಾರ, ಮಾರ್ಚ್ 26, 2019
26 °C
ಮತದಾರರಿಗೆ ಅರಿವು ಮೂಡಿಸುವ ಅಭಿಯಾನದಲ್ಲಿ ನ್ಯಾಯಾಧೀಶ ಕಿರಣ್ ಗಂಗಣ್ಣವರ

ಮತದಾನ: ಪ್ರಜೆಗಳ ಪಾಲ್ಗೊಳ್ಳುವಿಕೆ ಮುಖ್ಯ

Published:
Updated:
Prajavani

ಹುಬ್ಬಳ್ಳಿ: ‘ಮತದಾನ ಎಂಬುದು ಪ್ರತಿಯೊಬ್ಬರೂ ತಾಯ್ನಾಡಿಗೆ ಸಲ್ಲಿಸಬೇಕಾದ ಆದ್ಯ ಕರ್ತವ್ಯ. ಸಂವಿಧಾನದತ್ತವಾದ ಈ ಕರ್ತವ್ಯ ನೆನಪಿಸಲು ಇದೀಗ ಬೀದಿ ಬೀದಿಯಲ್ಲಿ ಅಭಿಯಾನ ನಡೆಸಿ, ನೆನಪಿಸಬೇಕಾದ ಸಂದರ್ಭ ಬಂದಿರುವುದು ವಿಷಾದನೀಯ’ ಎಂದು ಜಿಲ್ಲಾ ನ್ಯಾಯಾಧೀಶ ಕಿರಣ್ ಗಂಗಣ್ಣವರ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ನ್ಯಾಯಾಲಯ ಸಂಕೀರ್ಣದಲ್ಲಿ ಶನಿವಾರ, ವಿದ್ಯುನ್ಮಾನ ಮತಯಂತ್ರ(ಇವಿಎಂ) ಮತ್ತು ವಿವಿ ಪ್ಯಾಟ್ ಮೂಲಕ ಮತದಾರರಿಗೆ ಅರಿವು ಮೂಡಿಸುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಪಾಲ್ಗೊಳ್ಳುವಿಕೆ ತಗ್ಗುತ್ತಿರುವುದು ಕಳವಳಕಾರಿ’ ಎಂದರು.

‘ದೇಶದಲ್ಲಿ ಸಾರ್ವತ್ರಿಕ ಚುನಾವಣೆ ಆರಂಭವಾದಾಗಿನಿಂದಲೂ ಮತದಾನದ ಪ್ರಮಾಣ ಕಡಿಮೆಯಾಗುತ್ತಲೇ ಬಂದಿದೆ. ಹಾಗಾಗಿ, ಮತದಾನ ಬಗ್ಗೆ ಅರಿವು ಮೂಡಿಸಲು ಚುನಾವಣಾ ಆಯೋಗ ಜ. 25ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಣೆಗೆ ತಂದು, ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.

‘ನಮ್ಮಲ್ಲಿ ಮತದಾನಕ್ಕೆ ಯುವಜನ ಆಸಕ್ತಿ ತೋರದಿರುವುದು ಒಂದು ಕಡೆಯಾದರೆ, ಶಾಸನಸಭೆಗಳಿಗೆ ಯುವ ಪ್ರತಿನಿಧಿಗಳ ಆಯ್ಕೆ ಗಣನೀಯ ಇಳಿಕೆ ಕಂಡಿದೆ. ಪ್ರಜಾಪ್ರಭುತ್ವ ಸಬಲವಾಗಬೇಕಾದರೆ, ಯುವಜನರ ಪಾಲ್ಗೊಳ್ಳುವಿಕೆ ಅತೀ ಮುಖ್ಯ’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ‘ಚುನಾವಣೆ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆಯಲಿದೆ. ಮತದಾನಕ್ಕೆ ಬಳಸುವ ಇವಿಎಂ ಮತ್ತು ವಿವಿ ಪ್ಯಾಟ್ ಬಗ್ಗೆ ಇರುವ ಗೊಂದಲಗಳನ್ನು ಚುನಾವಣಾ ಆಯೋಗವು ನಿವಾರಿಸಿದೆ. ಚುನಾವಣೆ ಆರಂಭದಿಂದಿಡಿದು ಮತದಾನ ಹಾಗೂ ಮತ ಎಣಿಕೆ ಪ್ರಕ್ರಿಯೆಯನ್ನು ವಿಡಿಯೊ ಮಾಡಲಾಗುವುದು. ಅಲ್ಲದೆ, ಪ್ರತಿ ಹಂತವು ಚುನಾವಣಾಧಿಕಾರಿಗಳು ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಪಾಲ್ಗೊಳ್ಳುವಿಕೆ ಇರುತ್ತದೆ’ ಎಂದರು.

ನ್ಯಾಯಾಧೀಶರಾದ ಎ.ಕೆ. ನಾಗರಾಜಪ್ಪ, ಸುಮಂಗಲಾ ಬಸವಣ್ಣ, ಕೆ.ಎನ್. ಗಂಗಾಧರ, ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷ ಅಶೋಕ ವಿ. ಬಳಿಗಾರ, ತಹಶೀಲ್ದಾರ್‌ಗಳಾದ ಶಶಿಧರ ಮಾಡ್ಯಾಳ ಹಾಗೂ ಜಿ.ಎಫ್. ಹಿರೇಮಠ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !