ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಗೇರಿ: ಮೂಲಭೂತ ಸೌಲಭ್ಯಕ್ಕಾಗಿ ಜನರ ಪರದಾಟ

ಕುಂದಗೋಳ ತಾಲ್ಲೂಕಿನ ಹರ್ಲಾಪುರ ಗ್ರಾಮ ಪಂಚಾಯ್ತಿ ಸ್ಥಿತಿಗತಿ
Last Updated 12 ಅಕ್ಟೋಬರ್ 2022, 4:56 IST
ಅಕ್ಷರ ಗಾತ್ರ

ಹರ್ಲಾಪೂರ (ಗುಡಗೇರಿ): ಜಾನಪದ ಸೊಗಡಿನ ಗ್ರಾಮವಾದ ಹರ್ಲಾಪೂರದಲ್ಲಿ ಮೂಲಸೌಲಭ್ಯಗಳು ತಕ್ಕಮಟ್ಟಿಗೆ ಇದ್ದು ಶೌಚಾಲಯ, ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಕಾರ್ಯ ನಿರ್ವಹಿಸದೇ ಇರುವುದರಿಂದ ಜನರು ಗ್ರಾಮ ಪಂಚಾಯ್ತಿಕಾರ್ಯವೈಖರಿ ಕುರಿತು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕುಂದಗೋಳ ತಾಲ್ಲೂಕಿನಲ್ಲಿಯೇ ವಿಶಿಷ್ಟ ಗ್ರಾಮವಾದ ಹರ್ಲಾಪುರದಲ್ಲಿ ಗ್ರಾಮ ಪಂಚಾಯ್ತಿ ಇದೆ. ಇದರಲ್ಲಿ ಹರ್ಲಾಪುರ ಹಾಗೂ ಸುಲ್ತಾನಪುರ ಗ್ರಾಮಗಳಿವೆ. ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಈ ಗ್ರಾಮದ ಕಲಾ ತಂಡಗಳು ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಪ್ರಚಾರ ಪಡಿಸಿ ಪ್ರಸಿದ್ಧವಾಗಿವೆ. ಹಿಂದಿನ ಅವಧಿಯಲ್ಲಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆಗಳು ಆಗಿವೆ.

ಆದರೆ ಮಳೆಗಾಲದಲ್ಲಿ ಊರಿನ ಚರಂಡಿ ತುಂಬಿ ಮನೆಗಳಿಗೆ ನೀರು ನುಗ್ಗುತ್ತಿವೆ. ಕಾಲಕಾಲಕ್ಕೆ ಚರಂಡಿ ಶುಚಿಗೊಳಿಸದ ಕಾರಣ, ಮಲಿನ ನೀರಿನಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದೆ. ಇದರಿಂದ ರೋಗರುಜಿನಗಳ ಸಂಖ್ಯೆಯೂ ಏರುಮುಖವಾಗಿದೆ.

ಇನ್ನು ಹೊಸ ಬಡಾವಣೆಗಳಲ್ಲಿ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಇಲ್ಲಿನ ಜನರು ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದು, ರಸ್ತೆ ಹಾಗೂ ಚರಂಡಿ ನಿರ್ಮಿಸಬೇಕೆಂದು ಅಲ್ಲಿನ ನಿವಾಸಿಗಳು ಆಗ್ರಹಿಸಿದರು.

‘ಗ್ರಾಮ ಪಂಚಾಯ್ತಿ ಹಳೇ ಕಟ್ಟಡದಲ್ಲಿ ಸಾರ್ವಜನಿಕ ಗ್ರಂಥಾಲಯವಿದ್ದು ಅದು ಈಗಲೋ ಆಗಲೋ ಬೀಳುವ ಹಂತದಲ್ಲಿದೆ. ಎಲ್ಲೆಡೆ ಹೈಟೆಕ್ ಗ್ರಂಥಾಲಯ ನಿರ್ಮಾಣಗೊಳ್ಳುತ್ತಿದ್ದರೂ, ಹರ್ಲಾಪುರದಲ್ಲಿ ಇರುವ ಗ್ರಂಥಾಲಯವೇ ಶೋಚನೀಯ ಸ್ಥಿತಿಯಲ್ಲಿದೆ’ ಎಂದು ಜಾನಪದ ಕಲಾವಿದ ಎಸ್.ಎಸ್.ಹಿರೇಮಠ ಹೇಳಿದರು.

‘ಸುಮಾರು 12 ಎಕರೆ ವಿಸ್ತೀರ್ಣದಲ್ಲಿರುವ ಊರ ಕೆರೆಯ ಸುತ್ತಲೂ ಅನೇಕರು ತಿಪ್ಪೆ, ಬಣಿವೆಗಳನ್ನು ಒಟ್ಟುತ್ತಿದ್ದಾರೆ. ಇದರಿಂದ ಕೆರೆಯ ನೀರು ಮಲೀನಗೊಳಿಸುತ್ತಿದೆ. ಕಳೆದ ತಿಂಗಳ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಕೆರೆಯು ಕೋಡಿ ಬಿದ್ದು ಸುತ್ತಮುತ್ತಲಿನ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಅನೇಕ ಕುಟುಂಬಗಳು ಪರದಾಡುವಂತಾಗಿದೆ. ಕೆರೆಯ ಸುತ್ತಲೂ ಸ್ವಚ್ಛಗೊಳಿಸಿ ತಂತಿ ಬೇಲಿ ಹಾಕಿ ಕೆರೆಯ ನೀರನ್ನು ಸಂರಕ್ಷಿಸಬೇಕು. ಕೋಡಿ ಬಿದ್ದ ನೀರು ಹರಿಯುವ ಮಾರ್ಗದಲ್ಲಿ ಹೂಳೆತ್ತಿ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮದ ಈಶ್ವರ ಅರಳಿ ಒತ್ತಾಯಿಸಿದರು.

‘ಇನ್ನು ಗ್ರಾಮದಲ್ಲಿ ಬಯಲು ಶೌಚ ನಿರ್ಮೂಲನೆ ಆಗಿಲ್ಲ. ಕುಂಬಾರ ಮನೆಯಿಂದ ಹೊನ್ನಮ್ಮನ ಗುಡಿಯವರೆಗಿನ ರಸ್ತೆಯಲ್ಲಿ ಸಾಗಬೇಕೆಂದರೆ ಮೂಗು ಮುಚ್ಚಿಕೊಂಡೇ ಸಾಗಬೇಕಾಗಿದೆ. ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಮಲ ವಿಸರ್ಜನೆ ಮಾಡಲಾಗುತ್ತಿದೆ. ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಜಾಗ ಇಲ್ಲದವರಿಗೆ ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯವಾದರೂ ನಿರ್ಮಿಸಬೇಕು’ ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.

‘ಗ್ರಾಮದಲ್ಲಿರುವ ಹಿರಿಯ ಪ್ರಾಥಮಿಕ ಶಾಲಯ ಹಳೆಯ ಕಟ್ಟಡವು ಸೋರುತ್ತಿದೆ. ಮೇಲ್ಭಾಗದ ಹೆಂಚುಗಳು ಪಡೆದು ಸೋರುತ್ತಿದೆ. ಇವುಗಳನ್ನು ಕೂಡಲೇ ದುರಸ್ತಿಗೊಳಿಸಬೇಕು’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ರೋಹಿತ್ ಪಾಟೀಲ ಹೇಳಿದರು.

ಗ್ರಾಮದಲ್ಲಿನ ಸಮಸ್ಯೆಗಳ ಕುರಿತು ಪ್ರತಿಕ್ರಿಯಿಸಿದ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮಿ ಅರುಣ ಹುಬ್ಬಳ್ಳಿ, ‘ಬಹಿರ್ದೆಸೆ ಮುಕ್ತ ಗ್ರಾಮವಾಗಿಸಲು ಈಗಾಗಲೇ 300 ಶೌಚಾಲಯಗಳ ನಿರ್ಮಾಣದ ಗುರಿ ಹೊಂದಲಾಗಿದೆ. ಕರೆಯ ಸಮರ್ಪಕ ನಿರ್ವಹಣೆಗೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT